ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಾಂಗವು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು: ಮಮತಾ ಬ್ಯಾನರ್ಜಿ

Published 29 ಜೂನ್ 2024, 10:04 IST
Last Updated 29 ಜೂನ್ 2024, 10:04 IST
ಅಕ್ಷರ ಗಾತ್ರ

ಕೋಲ್ಕತ್ತ: ನ್ಯಾಯಾಂಗ ವ್ಯವಸ್ಥೆಯು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೇ, ಸಂಪೂರ್ಣವಾಗಿ ಪ್ರಾಮಾಣಿಕತೆ ಮತ್ತು ಪರಿಶುದ್ಧತೆಯಿಂದ ಕೂಡಿರಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನರ ಹಿತಾಸಕ್ತಿಗಳನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಾಂಗವು ದೇಶದ ಆಧಾರಸ್ತಂಭವಾಗಿದೆ ಎಂದು ಹೇಳಿದ್ದಾರೆ.

ನ್ಯಾಯಾಂಗವು ಜನರ ಪಾಲಿಗೆ ದೇವಾಲಯವಾಗಿದೆ. ನ್ಯಾಯವನ್ನು ನೀಡುವ ಸರ್ವೋಚ್ಛ ಅಧಿಕಾರವಾಗಿದೆ. ನ್ಯಾಯಾಲಯವು ಮಂದಿರ, ಮಸೀದಿ, ಗುರುದ್ವಾರ ಮತ್ತು ಚರ್ಚ್ ಇದ್ದಂತೆ. ನ್ಯಾಯವನ್ನು ಪಡೆಯುವ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಪ್ರಮುಖ ಸ್ತಂಭವಾಗಿದೆ ಎಂದು ಮಮತಾ ತಿಳಿಸಿದ್ದಾರೆ.

ನ್ಯಾಯಾಲಯಗಳಲ್ಲಿ ಡಿಜಿಟಲೀಕರಣ ಮತ್ತು ಇ-ಕಾನೂನುಗಳನ್ನು ಪ್ರಾರಂಭಿಸಿದ್ದಕ್ಕಾಗಿ ಸಿಜೆಐ ಚಂದ್ರಚೂಡ್ ಅವರನ್ನು ಶ್ಲಾಘಿಸಿದ ಬ್ಯಾನರ್ಜಿ, ಪಶ್ಚಿಮ ಬಂಗಾಳವು ಇ-ಆಡಳಿತದಲ್ಲಿ ಎಲ್ಲಾ ರಾಜ್ಯಗಳಿಗಿಂತ ಮೊದಲ ಸ್ಥಾನದಲ್ಲಿದೆ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ 88 ತ್ವರಿತ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸಲು ಕೇಂದ್ರ ಸರ್ಕಾರವು ಈ ಹಿಂದೆ ನೆರವು ನೀಡಿತ್ತು, ಆದರೆ ಕಳೆದ ಏಳೆಂಟು ವರ್ಷಗಳಿಂದ ಯಾವುದೇ ಸೌಲಭ್ಯಗಳನ್ನು ಒದಗಿಸಲುತ್ತಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.

88 ‌ತ್ವರಿತ ನ್ಯಾಯಾಲಯಗಳಲ್ಲಿ 55 ನ್ಯಾಯಾಲಯಗಳು ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಮತ್ತು ಆರು ಪೋಕ್ಸೊ ನ್ಯಾಯಾಲಯಗಳೂ ಕಾರ್ಯನಿರ್ವಹಿಸುತ್ತಿದೆ ಎಂದು ಮಮತಾ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಕೋಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಶಿವಜ್ಞಾನಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT