ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಖ್ಖರು, ಮೀಸಲಾತಿ ಕುರಿತಾದ ಹೇಳಿಕೆ: ಕರ್ನಾಟಕದಲ್ಲಿ ರಾಹುಲ್ ವಿರುದ್ಧ ಎಫ್‌ಐಆರ್

Published : 21 ಸೆಪ್ಟೆಂಬರ್ 2024, 9:08 IST
Last Updated : 21 ಸೆಪ್ಟೆಂಬರ್ 2024, 9:08 IST
ಫಾಲೋ ಮಾಡಿ
Comments

ಬೆಂಗಳೂರು: ಇತ್ತೀಚಿನ ಅಮೆರಿಕ ಪ್ರವಾಸದ ವೇಳೆ ತಮ್ಮ ಹೇಳಿಕೆ ಮೂಲಕ ಸಿಖ್ ಸಮುದಾಯಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಮತ್ತು ಮೀಸಲಾತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಡಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕರ್ನಾಟಕದ ಬಿಜೆಪಿ ನಾಯಕರು ದೂರು ದಾಖಲಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿರುವ ಬಗ್ಗೆ ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಹುಲ್ ಅವರು ಸಿಖ್ ಸಮುದಾಯವನ್ನು ನಿಂದಿಸಿದ್ದಕ್ಕಾಗಿ ಮತ್ತು ದೇಶದಲ್ಲಿ ಮುಂಬರುವ ದಿನಗಳಲ್ಲಿ ನಾವು ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳುವ ಮೂಲಕ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಸಿಖ್ ಸಮುದಾಯಗಳನ್ನು ವಿಭಜಿಸುವಂತಹ ಹೇಳಿಕೆಗಳನ್ನು ನೀಡಿರುವುದು ಸೂಕ್ತವಲ್ಲ’ ಎಂದು ಅಮಿತ್ ಮಾಳವೀಯ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೀಸಲಾತಿ ಕುರಿತು ರಾಹುಲ್ ಗಾಂಧಿ ಹೇಳಿದ್ದೇನು?

ಈಚೆಗೆ ಅಮೆರಿಕ ಪ್ರವಾಸದ ಅವಧಿಯಲ್ಲಿ ರಾಹುಲ್‌ ಗಾಂಧಿ ಅವರು, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ರದ್ದತಿ ಕುರಿತು ಕಾಂಗ್ರೆಸ್‌ ಪಕ್ಷ ಚಿಂತಿಸಲಿದೆ’ ಎಂದು ಹೇಳಿದ್ದಾಗಿ ವರದಿಯಾಗಿತ್ತು. ನಂತರ ಮಾಧ್ಯಮ ಸಂವಾದದಲ್ಲಿ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ 50 ಮೀರಿ ವಿಸ್ತರಿಸಲಿದ್ದೇವೆ’ ಎಂದು ಹೇಳಿದ್ದರು.

ಸಿಖ್ಖರ ಬಗ್ಗೆ ರಾಹುಲ್ ಹೇಳಿದ್ದೇನು?

ಭಾರತದಲ್ಲಿ ಗುರುದ್ವಾರಗಳಿಗೆ ತೆರಳುವಾಗ ಸಿಖ್ಖರು ಟರ್ಬನ್ ಧರಿಸಲು ಅವಕಾಶ ನೀಡಲಾಗುತ್ತದೆಯೇ ಎಂದು ರಾಹುಲ್ ಪ್ರಶ್ನಿಸಿದ್ದರು. ರಾಹುಲ್ ಹೇಳಿಕೆಯು ಭಾರತದ ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ನಾಯಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಛತ್ತೀಸಗಢದಲ್ಲಿ ರಾಹುಲ್ ವಿರುದ್ಧ 3 ಎಫ್‌ಐಆರ್ ದಾಖಲಾಗಿವೆ.

‘ಇಡೀ ಜಗತ್ತಿನಲ್ಲಿ, ಭಾರತದಲ್ಲೂ ಸಿಖ್ಖರು ಗುರುದ್ವಾರಕ್ಕೆ ತೆರಳುವಾಗ ಟರ್ಬನ್ ಧರಿಸಿರುತ್ತಾರೆ. ಅವರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಪ್ರಧಾನಿ ಸಹ ಗುರುದ್ವಾರಕ್ಕೆ ತೆರಳುವಾಗ ಟರ್ಬನ್ ಧರಿಸುತ್ತಾರೆ. ರಾಹುಲ್ ಗಾಂಧಿಯವರ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ದುರುದ್ದೇಶದಿಂದ ಕೂಡಿದೆ’ ಎಂದು ಬಿಜೆಪಿ ವಕ್ತಾರ ಅಮರಜಿತ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT