ರಾಜ್ಯದ ಉತ್ತರ ತುದಿಯನ್ನು ದಕ್ಷಿಣ ತುದಿಯೊಂದಿಗೆ ಬೆಸೆಯುವ ಬೃಹತ್ ರೈಲ್ವೆ ಯೋಜನೆಯನ್ನು (ಕೆ–ರೈಲ್) ಕೇರಳ ಸರ್ಕಾರ ಪ್ರಸ್ತಾಪಿಸಿದೆ. ರಾಜ್ಯವನ್ನು ವಿಭಾಗಿಸಿದಂತೆ ಕಾಣಿಸುವ ಈ ರೈಲು ಮಾರ್ಗಕ್ಕೆ ಪರಿಸರವಾದಿಗಳು, ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಆದರೆ, ಅಭಿವೃದ್ಧಿಗೆ ಇದು ಅತ್ಯಗತ್ಯ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.

‘ಸಿಲ್ವರ್ ಲೈನ್ ರೈಲ್ ಪ್ರಾಜೆಕ್ಟ್’ ಹೆಸರಿನ ‘ಸೆಮಿ ಹೈಸ್ಪೀಡ್’ ರೈಲುಗಳನ್ನು ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಓಡಿಸುವ ಕಲ್ಪನೆಯನ್ನು ಸರ್ಕಾರ ಬಿಚ್ಚಿಟ್ಟಿದೆ. ಆಧುನಿಕ ತಂತ್ರಜ್ಞಾನದ ಈ ರೈಲ್ವೆಯು ಪ್ರತ್ಯೇಕ ಮಾರ್ಗ ಹೊಂದಲಿದ್ದು, ಇಂಗಾಲ ಉಗುಳುವಿಕೆ ಕಡಿಮೆ ಮಟ್ಟದಲ್ಲಿರಲಿದೆ. ಈ ಯೋಜನೆಯಿಂದ ಉತ್ತರ ಭಾಗದ ಕಾಸರಗೋಡು ಹಾಗೂ ದಕ್ಷಿಣ ಭಾಗದ ತಿರುವನಂತಪುರ ನಡುವಣ ಪ್ರಯಾಣಕ್ಕೆ ಕೇವಲ 4 ಗಂಟೆ ಸಾಕು (ಈಗ 12 ಗಂಟೆ ಹಿಡಿಯುತ್ತದೆ) . ಈ ಮಾರ್ಗದಲ್ಲಿ 11 ನಿಲ್ದಾಣಗಳು, ವಿಮಾನ ನಿಲ್ದಾಣಗಳ ಸಂಪರ್ಕ ಸಾಧ್ಯವಾಗಲಿದ್ದು, ಆರ್ಥಿಕ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ.ಪ್ರಾದೇಶಿಕ ಅಭಿವೃದ್ಧಿಗೂ ನೆರವಾಗುತ್ತದೆ ಎಂದು ಸರ್ಕಾರ ಪ್ರತಿಪಾದಿಸಿದೆಯಾದರೂ, ಭಾರಿ ಮಟ್ಟದ ಪ್ರತಿರೋಧ ಎದುರಾಗಿದೆ.

ವಿಪರೀತ ವೆಚ್ಚದ ಹೊರೆ

ವಿಪರೀತ ವೆಚ್ಚದಾಯಕ ಹಾಗೂ ದೀರ್ಘಕಾಲದ ಯೋಜನೆ ಎಂಬ ಕಾರಣಕ್ಕೆ ಯೋಜನೆಯು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಪ್ರತಿಭಟನಕಾರರು ವಾದಿಸಿದ್ದಾರೆ. ಈ ಯೋಜನೆಯ ವೆಚ್ಚ ₹63,940 ಕೋಟಿ. ಆದರೆ, ಯೋಜನೆ ಮುಗಿಯುವ ಹೊತ್ತಿಗೆ ಈ ವೆಚ್ಚವು ₹1,26,000 ಕೋಟಿಗೆ ತಲುಪಬಹುದು ಎಂದು ನೀತಿ ಆಯೋಗ ಎಚ್ಚರಿಕೆ ನೀಡಿದೆ. ಈ ಒಂದು ಯೋಜನೆಗೆ ಮಾಡುವ ವೆಚ್ಚದಿಂದ ರಾಜ್ಯದ ಹತ್ತಾರು ಸಾರಿಗೆ ಮೂಲಸೌಕರ್ಯ ಯೋಜನೆಗಳು ಹಣ ಸಿಗದೇ ಬಡವಾಗುತ್ತವೆ ಎಂಬ ವಾದವೂ ಇದೆ.

ಈ ಯೋಜನೆಗಾಗಿ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಂತಹ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತರುವ ಸಾಲ ಹಾಗೂ ಮರುಪಾವತಿಯಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ವಿರೋಧಿಗಳು ಎಚ್ಚರಿಸಿದ್ದಾರೆ. ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರದ ಸಾಲದ ಪ್ರಮಾಣವು ₹3.2 ಲಕ್ಷ ಕೋಟಿಯಿಂದ ₹3.9 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು2021ರ ಕೇರಳ ಸರ್ಕಾರದ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಪರಿಣಾಮ

ಯಾವುದೇ ಬೃಹತ್ ಯೋಜನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟ ಜನರ ಪುನರ್ವಸತಿ ಎಂಬುದು ದೊಡ್ಡ ಸಮಸ್ಯೆ. ಉದಾಹರಣೆಗೆ, ವಲ್ಲಾರ್‌ಪಾಡಂ ಟ್ರಾನ್‌ಶಿಪ್‌ಮೆಂಟ್ ಟರ್ಮಿನಲ್ ಯೋಜನೆಗಾಗಿ ಜಾಗ ನೀಡಿ ತೊಂದರೆ ಅನುಭವಿಸಿದ್ದ ಕೊಚ್ಚಿಯ ಮೂಲಂಬಳ್ಳಿಜನರ ಕಹಿನೆನಪು ಇನ್ನೂ ಮಾಸಿಲ್ಲ.ಸಿಲ್ವರ್‌ಲೈನ್ ಯೋಜನೆಗೂ ಜಮೀನು ಸ್ವಾಧೀನವಾಗಬೇಕಿದೆ.

ಕಾನೂನಿನ ಪ್ರಕಾರವೇ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ ಭೂಸ್ವಾಧೀನಕ್ಕೆ ವ್ಯವಸ್ಥಿತ ಯೋಜನೆಯನ್ನು ಸರ್ಕಾರ ರೂಪಿಸಿಲ್ಲ ಎಂಬುದು ಪ್ರತಿಭಟನಕಾರರ ಆರೋಪ. ಸರ್ಕಾರ ಅಥವಾ ಸರ್ಕಾರದ ಹೆಸರಿನಲ್ಲಿ ಖಾಸಗಿಯವರು ಒತ್ತಾಯಪೂರ್ವಕವಾಗಿ ಒಕ್ಕಲೆಬ್ಬಿಸುವ ಸಾಧ್ಯತೆಯ ಬಗ್ಗೆ ತೀವ್ರ ಕಳವಳವಿದೆ. ಇಂತಹ ಯೋಜನೆಗಳಲ್ಲಿ ಸ್ಥಳೀಯ ಸಮುದಾಯಗಳ ದನಿಯನ್ನು ನಿರ್ಲಕ್ಷಿಸಲಾಗುತ್ತದೆ ಎಂಬ ಆರೋಪವೂ ಇದೆ.

ಪರಿಸರ ಕಾಳಜಿ

ಪಶ್ಚಿಮ ಘಟ್ಟದಂತಹ ಅಮೂಲ್ಯ ಸಂಪತ್ತನ್ನು ಹೊಂದಿರುವ ಕೇರಳ ರಾಜ್ಯವು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಹಲವು ಅವಘಡಗಳಿಗೆ ಸಾಕ್ಷಿಯಾಗಿದೆ. ಮಳೆ ಸುರಿಯುವಿಕೆಯಲ್ಲಿ ಆಗಿರುವ ಬದಲಾವಣೆ, ಭೂಕುಸಿತ ವಿದ್ಯಮಾನಗಳು ಪ್ರತಿವರ್ಷ
ಸಾಮಾನ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೃಹತ್ಅಭಿವೃದ್ಧಿ ಯೋಜನೆಗಳೇ ಪರಿಸರದಲ್ಲಿ ಅಸಮತೋಲನಕ್ಕೆ ಕಾರಣ ಎಂದು ಪರಿಸರವಾದಿಗಳು ಆಕ್ಷೇಪಿಸಿದ್ದಾರೆ. ಪರಿಸರದ ಮೇಲೆ ಪರಿಣಾಮ ಉಂಟಾಗದೇ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂಬುದು ನಿಜ.

ಆದರೆ, ದೀರ್ಘಕಾಲೀನ ಪರಿಸರ ಪರಿಣಾಮಗಳನ್ನು ನಿರ್ಲಕ್ಷಿಸಿ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ವಿನ್ಯಾಸಗೊಳಿಸುವುದು ಅಪಾಯವನ್ನು ಆಹ್ವಾನಿಸಿದಂತೆ. ಫಲವತ್ತಾದ ಭೂಮಿಯ ನಾಶ, ಕೃಷಿ ಉತ್ಪಾದನೆಯಲ್ಲಿ ಕುಸಿತ, ಸ್ಥಳೀಯ ಭೂ ವಿನ್ಯಾಸದಲ್ಲಿ ಆಗುವ ಬದಲಾವಣೆ – ಇವೆಲ್ಲವೂ ಪರಿಸರದ ಮೇಲೆ ಶಾಶ್ವತ ಪರಿಣಾಮ ಉಂಟುಮಾಡುತ್ತವೆ ಎಂದು ಕ್ಷಿಪ್ರ ಪರಿಸರ ಪರಿಣಾಮ ಮೌಲ್ಯಮಾಪನ (ಎಐಎ) ವರದಿ ತಿಳಿಸಿದೆ.

ಹೋರಾಟದ ಕಿಚ್ಚು

ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಸೆಮಿ ಹೈಸ್ಪೀಡ್ ರೈಲು ಯೋಜನೆ ವಿರೋಧಿ ಒಕ್ಕೂಟವೊಂದು ರಚನೆಯಾಗಿದ್ದು, ಸಂತ್ರಸ್ತರು, ಸಾಮಾಜಿಕ ಹೋರಾಟಗಾರರು, ರಾಜಕೀಯ ನಾಯಕರು, ಸರ್ಕಾರೇತರ ಸಂಘಟನೆಗಳನ್ನು ಯೋಜನೆ ವಿರುದ್ಧ ಒಟ್ಟುಗೂಡಿಸುತ್ತಿದೆ. ಬಿಜೆಪಿ, ಕಾಂಗ್ರೆಸ್ ಮೊದಲಾದ ರಾಜಕೀಯ ಪಕ್ಷಗಳು ಯೋಜನೆ ವಿರೋಧಿಸಿದ್ದು, ಹೋರಾಟಕ್ಕೆ ಕೈಜೋಡಿಸಿವೆ. ಅಭಿವೃದ್ಧಿಯತ್ತ ಸಾಗಬೇಕು, ಜನರ ಅಮೂಲ್ಯ ಸಮಯವನ್ನು ಉಳಿಸಬೇಕು ಎಂಬ ಅಂಶಗಳು ನಿಜ. ಆದರೆ ಬೃಹತ್ ಮೂಲಸೌಕರ್ಯ ಯೋಜನೆಗಳಿಂದಲೇ ಇದು ಸಾಧ್ಯ ಎಂಬ ಹುಸಿ ಕಲ್ಪನೆಯನ್ನು ತ್ಯಜಿಸಬೇಕಿದೆ. ಹೊಸ ಕೇರಳ ಕಟ್ಟಲು ಅನ್ಯ ಮಾರ್ಗಗಳನ್ನೂ ಸರ್ಕಾರ ಶೋಧಿಸಬೇಕಿದೆ. ಬೊಕ್ಕಸಕ್ಕೆ ಹೊರೆಯಾಗದ, ಪರಿಸರವನ್ನು ಹೆಚ್ಚು ಘಾಸಿಗೊಳಿಸದ, ಸಾಮಾಜಿಕವಾಗಿ ದೊಡ್ಡ ಪರಿಣಾಮಗಳನ್ನು ಉಂಟುಮಾಡದ ಯೋಜನೆಗಳ ಕುರಿತು ಸರ್ಕಾರ ಚಿಂತಿಸಲಿ ಎಂಬುದು ಕೇರಳಿಗರ ಕೂಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.