ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ

ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲೇ ಹೇಯ ಕೃತ್ಯ * ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ
Published : 10 ಆಗಸ್ಟ್ 2024, 10:52 IST
Last Updated : 10 ಆಗಸ್ಟ್ 2024, 10:52 IST
ಫಾಲೋ ಮಾಡಿ
Comments

ಕೋಲ್ಕತ್ತ: ತರಬೇತಿನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ಇಲ್ಲಿನ ಆರ್‌.ಜಿ. ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿಯೇ ಲೈಂಗಿಕ ದೌರ್ಜನ್ಯವೆಸಗಿ, ಕೊಲೆ ಮಾಡಿರುವ ಕೃತ್ಯ ನಡೆದಿದ್ದು, ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಕೃತ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ‘ಈತ ಹೊರಗಿನವನು. ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಮುಕ್ತವಾಗಿ ತೆರಳುತ್ತಿದ್ದ. ಆತನ ಚಲನವಲನ ಶಂಕಾಸ್ಪದವಾಗಿದೆ. ಕೃತ್ಯದಲ್ಲಿ ಆತನ ನೇರ ಪಾತ್ರವಿರುವಂತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎದೆರೋಗ ವಿಭಾಗದ 2ನೇ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಶವವು ಅರೆನಗ್ನಾವಸ್ಥೆಯಲ್ಲಿ ಆಸ್ಪತ್ರೆ ಸೆಮಿನಾರ್‌ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು. ದೇಹದಲ್ಲಿ ಗಾಯದ ಗುರುತುಗಳಿದ್ದವು. ಈ ವಿದ್ಯಾರ್ಥಿನಿಯು ಗುರುವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದರು.

‘ಬಂಧಿತನಿಂದ ಬ್ಲೂಟೂತ್‌ನ ಕಿತ್ತುಹೋಗಿದ್ದ ಭಾಗ ವಶಕ್ಕೆ ಪಡೆಯಲಾಗಿದೆ. ಇದರ ಸುಳಿವು ಆಧರಿಸಿಯೇ ಆತನನ್ನು ಬಂಧಿಸಲಾಗಿದೆ. ಆಸ್ಪತ್ರೆಯ ಇತರೆ ತರಬೇತಿನಿರತ ವೈದ್ಯರೂ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ನೋಡಿ ಶಂಕಿತನನ್ನು ಗುರುತಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ‘ವಿದ್ಯಾರ್ಥಿನಿಯ ಕೊಲೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿದಂತೆ ಆ ದಿನ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ತರಬೇತಿನಿರತ ವೈದ್ಯರನ್ನು ಪೊಲೀಸರು ಪ್ರಶ್ನೆಗೊಳಪಡಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯ ವೇಳೆ ಬಂಧಿತ ಆರೋಪಿ ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು, ಆತನ ಜತೆಗೆ ಮತ್ತೊಬ್ಬ ಇರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ನಡೆದಿದೆ. ಅಗತ್ಯವಿದ್ದರೆ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತ್ವರಿತಗತಿ ವಿಚಾರಣೆ ಕಠಿಣ ಶಿಕ್ಷೆಗೆ ಕ್ರಮ:ಮಮತಾ ಬ್ಯಾನರ್ಜಿ

ಕೋಲ್ಕತ್ತ: ‘ಆರೋಪಿಗೆ ಮರಣದಂಡನೆ ಶಿಕ್ಷೆ ಆಗಬೇಕು. ಸರ್ಕಾರ ಆ ನಿಟ್ಟಿನಲ್ಲಿ ಕ್ರಮವಹಿಸಲಿದೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ತರಬೇತಿನಿರತ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಕೊಲೆ ಕೃತ್ಯದ ವಿಚಾರಣೆಯು ತ್ವರಿತ ನ್ಯಾಯಾಲಯಲ್ಲಿ ನಡೆಯುವಂತೆ ಕ್ರಮಕೈಗೊಳ್ಳಲಾಗುವುದು‘ ಎಂದು ಭರವಸೆ ನೀಡಿದ್ದಾರೆ. ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಸಮರ್ಥನೀಯವಾದುದು ಎಂದು ಹೇಳಿದ್ದಾರೆ.

‘ವಿದ್ಯಾರ್ಥಿಗಳ ಬೇಡಿಕೆಯನ್ನು ನಾನೂ ಅನುಮೋದಿಸುತ್ತೇನೆ. ಬೇಡಿಕೆ ಎದುರಾದರೆ ಸಿಬಿಐ ಸೇರಿದಂತೆ ಈ ಪ್ರಕರಣದ ತನಿಖೆಯನ್ನು ಯಾವುದೇ ಸಂಸ್ಥೆಗೆ ಒಪ್ಪಿಸಲು ಸರ್ಕಾರದ ಆಕ್ಷೇಪವಿರುವುದಿಲ್ಲ’ ಎಂದು ಹೇಳಿದ್ದಾರೆ.

‘ಇದೊಂದು ಭೀಕರ ಮತ್ತು ಹೀನಕೃತ್ಯ. ನನ್ನ ಕುಟುಂಬದ ಸದಸ್ಯರೊಬ್ಬರನ್ನೇ ಕಳೆದುಕೊಂಡಂತಾಗಿದೆ. ಪ್ರತಿಭಟನನಿರತರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಒದಗಿಸಲು ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ವೈದ್ಯರ ಮೇಲಿನ ಹಲ್ಲೆ ತಡೆಯಲು ಪ್ರತಿ ಆಸ್ಪತ್ರೆಯಲ್ಲಿಯೂ ಪೊಲೀಸ್ ಕ್ಯಾಂಪ್‌ ಸ್ಥಾಪಿಸಲಾಗುವುದು. ವೈದ್ಯರು ಸೇರಿ ಆಸ್ಪತ್ರೆಯ ಸಿಬ್ಬಂದಿಗೆ ರಕ್ಷಣೆ ಒದಗಿಸುವುದು ಆಯಾ ಆಸ್ಪತ್ರೆಗಳ ಮುಖ್ಯಾಧಿಕಾರಿಗಳು ಪ್ರಾಂಶುಪಾಲರ ಹೊಣೆಗಾರಿಕೆಯಾಗಿದೆ’ ಎಂದು ಹೇಳಿದ್ದಾರೆ.

ವೈದ್ಯ ವಿದ್ಯಾರ್ಥಿಗಳ ಆಕ್ರೋಶ ಪ್ರತಿಭಟನೆ

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿಯ ಕೊಲೆ ಕೃತ್ಯಕ್ಕೆ ವಿದ್ಯಾರ್ಥಿ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ಗುರಿಪಡಿಸಬೇಕೆಂದು ಆಗ್ರಹಪಡಿಸಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು. 

ಕಿರಿಯ ವೈದ್ಯರು ತರಬೇತಿ ನಿರತ ವೈದ್ಯರು ಸ್ನಾತಕೋತ್ತರ ವಿದ್ಯಾರ್ಥಿನಿಯರು ವೈದ್ಯೇತರ ಸಿಬ್ಬಂದಿಯು ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ನ್ಯಾಷನಲ್‌ ವೈದ್ಯಕೀಯ ಕಾಲೇಜು ಸೇರಿ ವಿವಿಧೆಡೆ ಪ್ರತಿಭಟಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ನಡೆದಿವೆ.

ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಕರ್ತವ್ಯದಲ್ಲಿರುವ ವೈದ್ಯರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರ

ತಿಭಟನೆ ನಡೆದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಸೇವೆಯು ಎಂದಿನಂತೆ ಇತ್ತು. ಎಸ್‌ಎಫ್‌ಐ ಡಿವೈಎಫ್‌ಐ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿದ್ದುರಾಜ್ಯದ ವಿವಿಧೆಡೆ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT