ಆಯೋಗದ ಶಿಫಾರಸಿಗೆ ಕಾಂಗ್ರೆಸ್ ಆಕ್ಷೇಪ
ದೇಶದ್ರೋಹ ಕಾನೂನನ್ನು ಉಳಿಸಿಕೊಳ್ಳುವ ಜೊತೆಗೆ ಅದನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂಬ ಕಾನೂನು ಆಯೋಗದ ಶಿಫಾರಸಿಗೆ ಕಾಂಗ್ರೆಸ್ ಪಕ್ಷ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದೆ. ‘ಇದು ಭಯಂಕರ ದುಃಖಕರ ಹಾಗೂ ವಿಶ್ವಾಸಘಾತಕ ಬೆಳವಣಿಗೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಮುಖಂಡರನ್ನು ಗುರಿಯಾಗಿಸಿ ಹಾಗೂ ಭಯ ಉಂಟು ಮಾಡುವ ಉದ್ದೇಶದಿಂದ ಇಂಥ ಶಿಫಾರಸು ಮಾಡಲಾಗಿದೆ’ ಎಂದು ಟೀಕಿಸಿದೆ. ‘ಆಡಳಿತಾರೂಢ ಬಿಜೆಪಿ ದೇಶದ್ರೋಹ ಕಾನೂನನ್ನು ಒಂದು ಅಸ್ತ್ರವನ್ನಾಗಿ ಬಳಸಲು ಮುಂದಾಗಿರುವುದು ಸ್ಪಷ್ಟವಾಗಿದೆ. ಸಂವಿಧಾನದ ತತ್ವಗಳನ್ನು ಬುಡಮೇಲು ಮಾಡಲು ಭಿನ್ನಾಭಿಪ್ರಾಯಗಳನ್ನು ದಮನ ಮಾಡುವುದಕ್ಕಾಗಿ ಈ ಕಾನೂನನ್ನು ಬಳಸಿಕೊಳ್ಳಲಿದೆ’ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ‘ಈ ಕಾನೂನನ್ನು ವಸಾಹತುಶಾಹಿ ಕಾಲದಲ್ಲಿದ್ದ ಇದ್ದುದಕ್ಕಿಂತ ಹೆಚ್ಚು ಕಠೋರವನ್ನಾಗಿ ಮಾಡಲು ಬಿಜೆಪಿ ಯೋಜಿಸಿದೆ. ಇಂಥ ಶಿಫಾರಸುಗಳ ಮೂಲಕ ವಿರೋಧ ಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ’ ಎಂದೂ ಅವರು ಟೀಕಿಸಿದ್ದಾರೆ.