ಊಹಾಪೋಹಗಳಿಗೆ ನಾಯ್ಡು ತೆರೆ
ತೆಲುಗು ದೇಶಂ ಪಕ್ಷವು (ಟಿಡಿಪಿ) ಎನ್‌ಡಿಎ ಮೈತ್ರಿಕೂಟದಲ್ಲೇ ಇರಲಿದೆ ಎಂದು ಸ್ಪಷ್ಟಪಡಿಸುವ ಮೂಲಕ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ನಾಯ್ಡು ಅವರು ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರಲಿದ್ದಾರೆ ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾವು ಎನ್‌ಡಿಎಯಲ್ಲಿ ಇದ್ದೇವೆ. ಕಾಲಾನಂತರದಲ್ಲಿ, ಏನಾದರೂ ಇದ್ದರೆ ನಿಮಗೆ ತಿಳಿಸುತ್ತೇವೆ. ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ಏರಿಳಿತಗಳು ಇರುತ್ತವೆ’ ಎಂದು ಮಾರ್ಮಿಕವಾಗಿ ನುಡಿದರು. ‘ದೇಶ ಶಾಶ್ವತ. ಪ್ರಜಾಪ್ರಭುತ್ವ ಶಾಶ್ವತ. ರಾಜಕೀಯ ಪಕ್ಷಗಳು ಶಾಶ್ವತ. ಆದರೆ, ಅಧಿಕಾರ ಶಾಶ್ವತವಲ್ಲ’ ಎಂದರು. ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಗಳಿಗೆ ನೀಡಬೇಕು ಎಂದು ಮೈತ್ರಿಕೂಟದ ನಾಯಕರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ, ಬಿಜೆಪಿ ನಾಯಕತ್ವ ಇಕ್ಕಟ್ಟಿಗೆ ಸಿಲುಕಿದೆ.
ಎನ್‌ಡಿಎ 2.0 ಸರ್ಕಾರದ ಅವಧಿಯಲ್ಲಿ ಪ್ರಮುಖ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಂಡಿತ್ತು. ಕಮಲ ಪಾಳಯಕ್ಕೆ ಸರ್ಕಾರ ರಚನೆಗೆ ಬೇಕಿರುವ ‘ಮ್ಯಾಜಿಕ್’ ಸಂಖ್ಯೆ ದೊರಕದ ಕಾರಣ ಮಿತ್ರ ಪಕ್ಷಗಳಿಗೆ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಬೇಕಿದೆ. ಈ ಸಂಬಂಧ ಮೈತ್ರಿ ಕೂಟದ ನಾಯಕರು ಬಿಜೆಪಿ ಕೇಂದ್ರ ನಾಯಕತ್ವದ ಜತೆಗೆ ಈಗಾಗಲೇ ಚೌಕಾಸಿ ಆರಂಭಿಸಿದ್ದಾರೆ.
ತೆಲುಗು ದೇಶಂ ಪಕ್ಷವು 16 ಸ್ಥಾನಗಳನ್ನು ಹಾಗೂ ಜೆಡಿಯು 12 ಸ್ಥಾನಗಳನ್ನು ಗೆದ್ದು ಕಿಂಗ್ ಮೇಕರ್‌ಗಳಾಗಿ ಹೊರಹೊಮ್ಮಿವೆ. ಲೋಕಸಭಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ನೀಡಬೇಕು ಎಂದು ನಾಯ್ಡು ಹಾಗೂ ನಿತೀಶ್ ಅವರು ಹಟ ಹಿಡಿದಿದ್ದಾರೆ. ಆದರೆ, ಈ ಬೇಡಿಕೆಗೆ ಬಿಜೆಪಿ ನಾಯಕತ್ವ ಒಪ್ಪುವ ಸಾಧ್ಯತೆ ಕಡಿಮೆ ಎಂದು ಗೊತ್ತಾಗಿದೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಲೋಕಸಭಾಧ್ಯಕ್ಷ ಸ್ಥಾನವನ್ನು ಟಿಡಿಪಿಗೆ ಬಿಟ್ಟುಕೊಡಲಾಗಿತ್ತು.