ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶ: ಗೆದ್ದ ಪ್ರಜಾತಂತ್ರ, ಮೈತ್ರಿಯೇ ಮಂತ್ರ

ಫಲಿತಾಂಶದಲ್ಲಿ ಎಲ್ಲರಿಗೂ ಪಾಠ l ಎನ್‌ಡಿಎಗೆ ಗೆಲುವಿನಲ್ಲೂ ಸೋಲಿನ ಭಾವ l ಸೋಲಿನಲ್ಲೂ ಗೆಲುವು ಕಂಡ ‘ಇಂಡಿಯಾ’
Published 5 ಜೂನ್ 2024, 0:10 IST
Last Updated 5 ಜೂನ್ 2024, 0:10 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ 370 ಕ್ಷೇತ್ರಗಳಲ್ಲಿ ಗೆಲ್ಲುವ ಕನಸು ಬಿತ್ತಿದ್ದ ‘ಹಿಂದೂಗಳ ಹೃದಯ ಸಾಮ್ರಾಟ’ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರ ರಚನೆಗೆ ಅಗತ್ಯವಿರುವ 272 ಸ್ಥಾನಗಳ ಗಡಿಗೆ ಬಿಜೆಪಿಯನ್ನು ತಲುಪಿಸುವಲ್ಲಿ ಯಶ ಕಂಡಿಲ್ಲ. ‘ಇಂಡಿಯಾ’ ಮೈತ್ರಿಕೂಟದ ಪ್ರಬಲ ಪೈಪೋಟಿಯ ನಡುವೆಯೂ ಎನ್‌ಡಿಎ ಮೈತ್ರಿಕೂಟ ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳನ್ನು ಗಳಿಸಿದೆ ಅಥವಾ ಅಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ದೇಶದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚನೆಗೆ ಎನ್‌ಡಿಎ ಮೈತ್ರಿಕೂಟ ಸಜ್ಜಾಗಿದೆ. 

543 ಲೋಕಸಭಾ ಸೀಟುಗಳ ಪೈಕಿ 291ರಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಇದರಲ್ಲಿ ಬಿಜೆಪಿ ಮುನ್ನಡೆ ಗಳಿಸಿರುವ ಸ್ಥಾನಗಳ ಸಂಖ್ಯೆ 240. ಸರ್ಕಾರದಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಬಿಜೆಪಿಯ ಹಲವು ಪ್ರಮುಖ ನಾಯಕರು ಸೋತು ಸುಣ್ಣವಾಗಿದ್ದಾರೆ. ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ನೂರಕ್ಕೂ ಅಧಿಕ ಸಂಸದರಿಗೆ ಟಿಕೆಟ್‌ ನಿರಾಕರಿಸಿ ಹೊಸ ಮುಖಗಳಿಗೆ ಮಣೆ ಹಾಕಿದರೂ ‘ಮ್ಯಾಜಿಕ್‌’ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಈ ಸಲ ಬಿಜೆಪಿ ಮತ ಗಳಿಕೆ ಪ್ರಮಾಣ ಭಾರಿ ಕಡಿಮೆಯೇನೂ ಆಗಿಲ್ಲ. ಆದರೆ, ಸೀಟುಗಳ ಸಂಖ್ಯೆಯಲ್ಲಿ ದೊಡ್ಡ ಕುಸಿತ ಆಗಿದೆ.  ಲೋಕಸಭಾ ಚುನಾವಣಾ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಯು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ. ‘ಇಂಡಿಯಾ’ ಮೈತ್ರಿಕೂಟದ ಆಧಾರಸ್ತಂಭವಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರನ್ನು ಸೆಳೆದುಕೊಂಡಿದ್ದು ಕೇಸರಿ ಪಾಳಯದ ಚಾಣಾಕ್ಷ ನಡೆ. ಆಂಧ್ರ ಪ್ರದೇಶದಲ್ಲಿ ಟಿಡಿಪಿ–ಜನಸೇನಾ ಪಕ್ಷದ ಜತೆಗಿನ ದೋಸ್ತಿಯಿಂದ ಬಿಜೆಪಿಗೆ ಭಾರಿ ಲಾಭವಾಗಿದೆ.

ಕರ್ನಾಟಕದಲ್ಲಿ ಜಾತ್ಯತೀತ ಜನತಾದಳವನ್ನು (ಜೆಡಿಎಸ್‌) ಮೈತ್ರಿಕೂಟದ ತೆಕ್ಕೆಗೆ ಸೆಳೆದುಕೊಂಡಿ ದ್ದರಿಂದ ಪಕ್ಷದ ಮಾನ ಉಳಿದಿದೆ. ಕೇಸರಿ ಪಾಳಯವು ಪ್ರಚಂಡ ಸಾಧನೆ ಮಾಡಿದ್ದು ಒಡಿಶಾದಲ್ಲಿ. ರಾಜ್ಯದ 21 ಕ್ಷೇತ್ರಗಳ ಪೈಕಿ 19ರಲ್ಲಿ ಗೆದ್ದು ಬೀಗಿದೆ. ಕೇರಳದಲ್ಲಿ ಪಕ್ಷ ಖಾತೆ ತೆರೆದಿದೆ. ತಮಿಳುನಾಡಿನಲ್ಲಿ ಮತ ಪ್ರಮಾಣ ಹಿಗ್ಗಿದೆ. ತೆಲಂಗಾಣದಲ್ಲಿ ಕಳೆದ ಬಾರಿಗಿಂತ ದುಪ್ಪಟ್ಟು ಸ್ಥಾನಗಳನ್ನು ಗಳಿಸಿದೆ.

ಮೋದಿ–ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಯು ‘ಭಾರತ’ವನ್ನು ಗೆಲ್ಲಲು ಅಭಿವೃದ್ಧಿ, ಕಲ್ಯಾಣ ಯೋಜನೆಗಳು, ಹಿಂದೂ–ಮುಸ್ಲಿಂ ಧ್ರುವೀಕರಣ, ಹಿಂದುಳಿದ ಜಾತಿಗಳ ರಾಜಕಾರಣ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದು‍ಪಡಿ ಕಾಯ್ದೆ ಜಾರಿ, ಶ್ರೀರಾಮ ಮಂದಿರ ಸಾಕಾರದಂತಹ ರಣತಂತ್ರಗಳನ್ನು ಪ್ರಯೋಗಿಸಿತು. ಸುವ್ಯವಸ್ಥಿತವಾದ ಅಬ್ಬರದ ಪ್ರಚಾರ ನಡೆಸಿತು. ಈ ತಂತ್ರಕ್ಕೆ ಈ ಸಲ ಭಾರಿ ಯಶಸ್ಸೇನೂ ಸಿಕ್ಕಿಲ್ಲ.  

‘ವಿಕಸಿತ ಭಾರತ’, ‘ಅಮೃತ ಕಾಲ’ದ ಕಲ್ಪನೆಗಳನ್ನು ಬಿತ್ತಿ ಹಾಗೂ ಕೋಮು ಧ್ರುವೀಕರಣದ  ಮಾತುಗಳ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಇನ್ನಿಲ್ಲದಂತೆ ಹುರಿದುಂಬಿಸಿದ ಬಳಿಕವೂ ಮೋದಿ ಅವರು ಬಿಜೆಪಿಯನ್ನು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿಗೆ ತರುವಲ್ಲಿ ವಿಫಲರಾಗಿದ್ದಾರೆ. ಒಂದರ್ಥದಲ್ಲಿ ಈ ಚುನಾವಣೆಯಲ್ಲಿ ಮೋದಿ ಅವರಿಗೆ ಸೋಲಾಗಿದೆ. ಮಿತ್ರ ಪಕ್ಷಗಳ ಮರ್ಜಿ ಇಲ್ಲದೆ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಿದ್ದ ಐತಿಹಾಸಿಕ ಗೆಲುವನ್ನು 2014 ಹಾಗೂ 2019ರಲ್ಲಿ ಬಿಜೆಪಿ ಸಂಪಾದಿಸಿತ್ತು. ಈ ಸಲ ಚುನಾವಣಾ ಪೂರ್ವ ಮಿತ್ರ ಪಕ್ಷಗಳನ್ನು ಜತೆಗಿಟ್ಟುಕೊಂಡು ಅವುಗಳ ಆಣತಿಗೆ ತಕ್ಕಂತೆ ಸರ್ಕಾರವನ್ನು ಮುನ್ನಡೆಸಬೇಕಾದ ಸ್ಥಿತಿ ಕಮಲ ಪಾಳಯಕ್ಕೆ ಎದುರಾಗಿದೆ. ಮಿತ್ರರನ್ನು ಮೋದಿ ಅವರು ಹೇಗೆ ಸಂಭಾಳಿಸುತ್ತಾರೆ ಎಂಬುದು ಕುತೂಹಲಕಾರಿ.

ಬಿಜೆಪಿ ಧರ್ಮಾಧಾರಿತ ಹಾಗೂ ಕಾಂಗ್ರೆಸ್‌ ಪಕ್ಷವು ಜಾತಿ ಆಧಾರಿತ ವಿಷಯಗಳನ್ನು ಎತ್ತಿಕೊಂಡು ಮತ ಧ್ರುವೀಕರಣಕ್ಕೆ ಪ್ರಯತ್ನ ನಡೆಸಿದ್ದವು. ಬಿಜೆಪಿ ರೂಪಿಸಿದ ರಾಷ್ಟ್ರೀಯ ಸಂಕಥನಕ್ಕೆ ಎದುರಾಗಿ ಪ್ರಾದೇಶಿಕ ಪಕ್ಷಗಳು ಸ್ಥಳೀಯ ವಿಚಾರಗಳ ಸಂಕಥನ ರೂಪಿಸಿದ್ದವು. ಮೋದಿ ಅವರ ಅಬ್ಬರದ ಪ್ರಚಾರ ತಂತ್ರಗಳನ್ನು ಸಮರ್ಥವಾಗಿ ಎದುರಿಸಿದ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಡಿಎಂಕೆ, ಶಿವಸೇನಾ (ಉದ್ಧವ್‌ ಠಾಕ್ರೆ ಬಣ), ಎನ್‌ಸಿಪಿ (ಶರದ್‌ ಪವಾರ್ ಬಣ) ಸಾಧನೆ ಅಪೂರ್ವವಾದದ್ದು.  

ಕೈಕೊಟ್ಟ ‘ಉತ್ತರ’: ದೇಶದ ಬಹುದೊಡ್ಡ ರಾಜಕೀಯ ರಂಗಭೂಮಿಯಾದ ಉತ್ತರ ಪ್ರದೇಶದಲ್ಲೇ ಕಮಲ ಪಾಳಯವು ಭಾರಿ ಮುಖಭಂಗ ಅನುಭವಿಸಿದೆ. ಲೋಕಸಭೆಯ 80 ಸ್ಥಾನಗಳಿಗೆ ಪ್ರತಿನಿಧಿಗಳನ್ನು ಕಳುಹಿಸಿಕೊಡುವ ವಿಶಾಲ ಪ್ರದೇಶವಿದು. 2014 ಹಾಗೂ 2019ರ ಚುನಾವಣೆಗಳಲ್ಲಿ ಮೋದಿ ಹಾಗೂ ಅಮಿತ್‌ ಶಾ ಜೋಡಿಯ ಪ್ರಚಂಡ ನಾಯಕತ್ವದಲ್ಲಿ ಬಿಜೆಪಿಯು ರಾಜ್ಯದಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದು ಕೇಂದ್ರ ಸರ್ಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಸಿಕ್ಕಿರುವುದು 33 ಸ್ಥಾನಗಳಷ್ಟೇ. ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ‘ಬಹುಜನ’ ಮತದಾರರು ಬಹುಪರಾಕ್ ಎಂದಿದ್ದಾರೆ. ದಲಿತ, ಮುಸ್ಲಿಂ, ಯಾದವ ಹಾಗೂ ಇತರ ಹಿಂದುಳಿದ ವರ್ಗಗಳ ಸಮೀಕರಣದಿಂದ ಮೈತ್ರಿಕೂಟವು 44 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. 2019ರ ಚುನಾವಣೆಯಲ್ಲಿ ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟವು 15 ಸ್ಥಾನಗಳನ್ನು ಜಯಿಸಿದ್ದವು. ಎಸ್‌ಪಿ ಐದು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಈ ಸಲ ಎಸ್‌ಪಿಯ ಸಂಖ್ಯೆ 37ಕ್ಕೆ ಜಿಗಿದಿದೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಪ್ರಭಾವಳಿಯಿಂದಾಗಿ ರಾಜ್ಯದ ಎಲ್ಲ 80 ಸ್ಥಾನಗಳನ್ನೂ ಗೆದ್ದುಕೊಂಡು ಸಾರ್ವಕಾಲಿಕ ಸಾಧನೆಯ ದಾಖಲೆ ಮಾಡುತ್ತೇವೆ ಎಂದು ಕೇಸರಿ ಪಾಳಯದ ನಾಯಕರು ಪ್ರಚಾರ ಮಾಡಿದ್ದರು. ಆದರೆ, ಅಯೋಧ್ಯೆ ಇರುವ ಫೈಜಾಬಾದ್‌ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಭಾರಿ ಅಂತರದಿಂದ ಸೋತಿದ್ದಾರೆ. 

ದೊಡ್ಡ ರಾಜ್ಯಗಳಲ್ಲಿ ಹಿನ್ನಡೆ: ದೆಹಲಿ ಗದ್ದುಗೆಗೆ ಲಗ್ಗೆ ಹಾಕುವ ರಹದಾರಿ ಎನಿಸಿರುವ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಈ ಮೂರು ರಾಜ್ಯಗಳಲ್ಲಿ ಕಮಲ ಪಾಳಯವು ಕಳೆದ ಬಾರಿ ಗೆದ್ದಿದ್ದ 52 ಸ್ಥಾನಗಳನ್ನು ಕಳೆದುಕೊಂಡಿದೆ. 2019ರಲ್ಲಿ ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ರಾಜಸ್ಥಾನದಲ್ಲಿ 11 ಹಾಗೂ ಹರಿಯಾಣದಲ್ಲಿ 5 ಕ್ಷೇತ್ರಗಳು ನಷ್ಟವಾಗಿವೆ. ಕರ್ನಾಟಕದಲ್ಲೂ ಎಂಟು ಸ್ಥಾನಗಳು ಕಡಿಮೆಯಾಗಿವೆ. 

ಭಾರಿ ಬೆಲೆ ಏರಿಕೆ, ನಿರುದ್ಯೋಗ, ರೈತರ ಹೋರಾಟ, ಅಗ್ನಿವೀರ ಯೋಜನೆ ವಿರುದ್ಧ ಸಿಡಿದ ಜನಾಕ್ರೋಶವು ಬಿಜೆಪಿಗೆ ಭಾರಿ ಹೊಡೆತ ನೀಡಿದೆ. ಉತ್ತರ ಭಾರತದ ಪ್ರಭಾವಿ ಸಮುದಾಯಗಳಾದ ಜಾಟರು, ರಜಪೂತರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. 

ಹಿಂದಿ ಸೀಮೆ ಬಲ: ಹಿಂದಿ ಸೀಮೆಯ ರಾಜ್ಯಗಳಾದ ಮಧ್ಯಪ್ರದೇಶ, ಗುಜರಾತ್‌, ಛತ್ತೀಸಗಢ, ದೆಹಲಿ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಮಲ ಪಾಳಯ ಮತ್ತೆ ಪಾರಮ್ಯ ಮೆರೆದಿದೆ. ಈ ರಾಜ್ಯಗಳ 82 ಕ್ಷೇತ್ರಗಳ ಪೈಕಿ 80ರಲ್ಲಿ ಕೇಸರಿ ಪಡೆ ಗೆದ್ದಿದೆ. ಮಧ್ಯಪ್ರದೇಶ, ದೆಹಲಿ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಪಕ್ಷ ಕ್ಲೀನ್‌ ಸ್ವೀಪ್‌ ಮಾಡಿದೆ. ಗುಜರಾತ್‌ ಹಾಗೂ ಛತ್ತೀಸಗಢದಲ್ಲಿ ಎರಡು ಕ್ಷೇತ್ರಗಳನ್ನಷ್ಟೇ ವಿಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ಇದು ಜನರ ಗೆಲುವು. ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ದಾಖಲೆ ಬರೆದಿದ್ದರು. ಅವರ ನಂತರ ಅಂತಹುದೇ ವಿಕ್ರಮವನ್ನು ನಾನು ಸಾಧಿಸಿರುವೆ
ನರೇಂದ್ರ ಮೋದಿ, ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಅಧಿಕಾರದಲ್ಲಿ ಮುಂದುವರಿಯುವುದು ತನಗೆ ಇಷ್ಟವಿಲ್ಲ ಎಂದು ಮತದಾರ ಹೇಳಿದ್ದಾನೆ. ‘ನೀವು ನಮಗೆ ಬೇಕಿಲ್ಲ’ ಎಂದು ಇಡೀ ದೇಶ ಸಾರಿ ಹೇಳಿದೆ
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ನಾಯ್ಡು, ನಿತೀಶ್‌ ಕಿಂಗ್‌ಮೇಕರ್‌ಗಳು
ಮಹಾ ಸಮರದಲ್ಲಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಕಿಂಗ್‌ ಮೇಕರ್‌ಗಳಾಗಿ ಹೊರಹೊಮ್ಮಿದ್ದಾರೆ. ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ಮಾಡುವಲ್ಲಿ ನಾಯ್ಡು ಮಹತ್ವದ ಪಾತ್ರ ವಹಿಸಿದ್ದರು. ಮೋದಿ ಆಡಳಿತ ವೈಖರಿ ಬಗ್ಗೆ ಅಸಮಾಧಾನಗೊಂಡು 2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ನಾಯ್ಡು ಅವರು ಎನ್‌ಡಿಎ ಮೈತ್ರಿಕೂಟವನ್ನು ತೊರೆದಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಸೋತು ಹೋಗಿತ್ತು.ಇದೀಗ ಅವರು ರಾಜಕೀಯ ಮರು ಜನ್ಮ ಪಡೆದಿದ್ದಾರೆ. ಅವರ ಪಕ್ಷ 16 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದೇ ರೀತಿ, ನಿತೀಶ್‌ ಕುಮಾರ್ ಅವರ ಪಕ್ಷವು 12ರಲ್ಲಿ ವಿಜಯ ಸಾಧಿಸಿದೆ. ಇವರಿಬ್ಬರೂ ‘ಜಿಗಿತ ವೀರ’ರೆಂದೇ ಪ್ರಖ್ಯಾತರು. ಮೈತ್ರಿಕೂಟ ಬದಲಿಸುವುದರಲ್ಲಿ ನಿಸ್ಸೀಮರು.
ಮಣ್ಣು ಮುಕ್ಕಿದ ಪಕ್ಷಗಳು
ಎನ್‌ಡಿಎ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಮೇಲಾಟದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷಗಳು ಮಣ್ಣು ಮುಕ್ಕಿವೆ. ಒಡಿಶಾದ ಬಿಜು ಜನತಾದಳ, ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ, ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ತೆಲಂಗಾಣದ ಬಿಆರ್‌ಎಸ್‌ ಯಾವುದೇ ಮೈತ್ರಿಕೂಟಕ್ಕೆ ಸೇರದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಬಿಎಸ್‌ಪಿ, ಬಿಆರ್‌ಎಸ್‌ ಖಾತೆಯನ್ನೇ ತೆರೆದಿಲ್ಲ. ಬಿಜೆಡಿ, ವೈಎಸ್‌ಆರ್‌ಸಿಪಿ ಸಹ ಪರಾಭವ ಕಂಡಿವೆ.
‘ಕೈ’ ಪುನಶ್ಚೇತನ
ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಗಳಿಸಲು ಬೇಕಿರುವ ಸ್ಥಾನಗಳು 54. ಈ ಸಂಖ್ಯೆ ಕೂಡ ಬಿಸಿಲುಗುದುರೆ ಎನಿಸುವ ಹೀನಾಯ ಸೋಲನ್ನು ಕಾಂಗ್ರೆಸ್‌ ಈ ಹಿಂದಿನ ಎರಡು ಚುನಾವಣೆಗಳಲ್ಲಿ ಅನುಭವಿಸಿತ್ತು. ಸತತ ಸೋಲಿನ ಸರಮಾಲೆಯಿಂದ ಅವನತಿಯ ಅಂಚು ತಲುಪಿದ್ದ ಕಾಂಗ್ರೆಸ್ ಪಕ್ಷ ಹಠಾತ್ತನೆ ಪುನಶ್ಚೇತನದ ಹಳಿಗೆ ಬಂದಿದೆ. ದೂಳಿನಿಂದ ಮೇಲೆದ್ದಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡೆಸಿದ ‘ಭಾರತ್‌ ಜೋಡೋ ಯಾತ್ರೆ’ಗಳು ಪಕ್ಷಕ್ಕೆ ಫಲವನ್ನು ಕೊಟ್ಟಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ– ರಾಹುಲ್‌ ಗಾಂಧಿ ನೇತೃತ್ವದಲ್ಲಿ ವ್ಯವಸ್ಥಿತ ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್‌ ಪಾಳಯವು ನೂರರ ಗಡಿಗೆ ಬಂದು ನಿಂತಿದೆ. ಚುನಾವಣೆ ಘೋಷಣೆಯಾಗುವವರೆಗೆ ನಿಸ್ತೇಜವಾಗಿದ್ದ ‘ಇಂಡಿಯಾ’ ಮೈತ್ರಿಕೂಟವು ಒಗ್ಗಟ್ಟಿನಿಂದ ಹೋರಾಡಿ ಎನ್‌ಡಿಎಗೆ ಪ್ರಬಲ ಪೈಪೋಟಿ ನೀಡಿದೆ. ಸೀಟು ಹಂಚಿಕೆ ಸಂದರ್ಭದಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಕೊಡು ಕೊಳ್ಳುವಿಕೆಯಲ್ಲಿ ಬಹಳ ಉದಾರಿಗಳಾಗಿದ್ದರು. ಕಾಂಗ್ರೆಸ್‌ ಪಕ್ಷವು ಇತಿಹಾಸದಲ್ಲೇ ಮೊದಲ ಬಾರಿಗೆ ಕನಿಷ್ಠ ಸ್ಥಾನಗಳಲ್ಲಿ (338 ಕ್ಷೇತ್ರಗಳಲ್ಲಿ) ಸ್ಪರ್ಧಿಸಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಸ್ಥಾನ ಬಿಟ್ಟುಕೊಟ್ಟಿತು. ಜತೆಗೆ, ವ್ಯವಸ್ಥಿತ ಪ್ರಚಾರ ತಂತ್ರ ಅನುಸರಿಸಿತು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಿದೆ ಹಾಗೂ ಮೀಸಲಾತಿ ಕಿತ್ತುಕೊಳ್ಳಲಿದೆ ಎಂದು ಪ್ರಚಾರ ನಡೆಸಿತು. ಈ ಪ್ರಚಾರ ತಂತ್ರವು ಪಕ್ಷಕ್ಕೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT