ಈ ಪ್ರಶ್ನೆ ಎಲ್ಲರ ಮನದಲ್ಲಿಯೂ ಬಹಳ ದೊಡ್ಡದಾಗಿಯೇ ಇದೆ. ಎರಡನೇ ಅವಧಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂದು ಬಯಸುವವರು ಮತ್ತು ಮತ್ತೆ ಅಧಿಕಾರಕ್ಕೆ ಬರುವುದು ಬೇಡ ಎನ್ನುವವರು– ಎರಡು ಗುಂಪುಗಳಲ್ಲಿಯೂ ಇದೇ ಪ್ರಶ್ನೆ ಇದೆ. 2019ರ ಚುನಾವಣೆ ಮೋದಿ ಪರವಾಗಿ ನಿರ್ಧಾರವಾಗಿ ಹೋಗಿರುವ ವಿಚಾರ ಎಂಬುದರಲ್ಲಿ ಒಂದು ವರ್ಷ ಹಿಂದಿನವರೆಗೆ ಈ ಎರಡು ಗುಂಪುಗಳಲ್ಲಿ ಯಾವ ಗುಂಪಿನವರಿಗೂ ಅನುಮಾನ ಇರಲಿಲ್ಲ.

ಆದರೆ, ವರ್ಷದಿಂದ ಈಚೆಗೆ ಆಗಿರುವ ಬದಲಾವಣೆ ಹಲವು. ರಾಜಕಾರಣದಲ್ಲಿ ಹೊಸ ಸಮೀಕರಣಗಳು ಹೊರ ಹೊಮ್ಮಿವೆ. ಮೋದಿ ತಮ್ಮ ಹೊಳಪು ಕಳೆದುಕೊಂಡಿದ್ದಾರೆ, ಬಿಜೆಪಿಯ ಆತ್ಮವಿಶ್ವಾಸ ಕುಗ್ಗಿದೆ ಮತ್ತು ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಆ ಪಕ್ಷ ಸೋತಿದೆ. ಪಕ್ಷವನ್ನು ಏಕಾಂಗಿಯಾಗಿ ಅಧಿಕಾರಕ್ಕೆ ಏರಿಸಬಲ್ಲ ಸಾಮರ್ಥ್ಯ ತಮಗೆ ಇದೆ ಎಂದು ಯಾರೂ ಭಾವಿಸಬಾರದು ಎಂದು ಸ್ವತಃ ಮೋದಿ ಅವರೇ ಕಾರ್ಯಕರ್ತರಿಗೆ ಹೇಳಿಬಿಟ್ಟಿದ್ದಾರೆ.

ದೇಶದ ಮನಸ್ಥಿತಿ ಬದಲಾಗಿದೆ. ದೇಶದಾದ್ಯಂತ ಇರುವ ‘ಪ್ರಜಾವಾಣಿ’ ವರದಿಗಾರರು ಈ ಮನಸ್ಥಿತಿಯ ವಿಶ್ಲೇಷಣೆ ಮಾಡಿದ್ದಾರೆ. ಈ ವಿಶ್ಲೇಷಣೆಯು ದೊಡ್ಡ ಮಟ್ಟದ ಜನಮತ ಗಣನೆ ಅಥವಾ ಸಮೀಕ್ಷೆಯನ್ನು ಆಧರಿಸಿದ್ದಲ್ಲ. ಇನ್ನು ಮೂರು ತಿಂಗಳ ಬಳಿಕವೂ ಇದೇ ವಿಶ್ಲೇಷಣೆ ನಿಖರವಾಗಿ ಅನ್ವಯವಾಗಲಿದೆ ಎಂದು ನಾವು ಹೇಳುವುದೂ ಇಲ್ಲ. ನಿಜ ಹೇಳಬೇಕೆಂದರೆ, ಜನರಿಗೆ ಮೋಡಿ ಮಾಡಬಲ್ಲ ಸಾಮರ್ಥ್ಯ ಮೋದಿ ಅವರಲ್ಲಿ ಈಗಲೂ ಇದೆ.

ಇತ್ತೀಚಿನ ಘೋಷಣೆಗಳು, ರಾಜಕೀಯ ನಡೆಗಳು ಅದರ ಸೂಚನೆಗಳು. ವಿಸ್ತಾರ ಮತ್ತು ಗಟ್ಟಿಯಾದ ಪಕ್ಷ ಸಂಘಟನೆಯ ಶಕ್ತಿಯೂ ಅವರ ಬೆನ್ನಿಗಿದೆ. ವರದಿಗಾರರ ಒಳನೋಟಗಳು, ತಳಮಟ್ಟದಲ್ಲಿ ಕಂಡ ಸತ್ಯಗಳು ಮತ್ತು ದೇಶದಾದ್ಯಂತ ಇರುವ ರಾಜಕೀಯ ಮುಖಂಡರು ಮತ್ತು ವಿಶ್ಲೇಷಕರ ಜತೆ ನಡೆಸಿದ ಅನೌಪಚಾರಿಕ ಮಾತುಕತೆಗಳು ‘ಈಗ ಏನಿದೆ ಸ್ಥಿತಿ’ ಎಂಬ ವಿಶ್ಲೇಷಣೆಗೆ ಆಧಾರವಾಗಿವೆ.

ಯಾರಿಗೂ ಸಿಗದು ಬಹುಮತ... ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸರಳ ಬಹುಮತ ದೊರೆಯುವ ಸಾಧ್ಯತೆ ಇಲ್ಲ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು 180–200 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಗುಂಪಾಗಿ ಮೂಡಿ ಬರಬಹುದು.

2014ರ ಚುನಾವಣೆಯಲ್ಲಿ ಬಿಜೆಪಿಯೊಂದಕ್ಕೇ ಸರಳ ಬಹುಮತ ಬಂದಿತ್ತು. ಎನ್ಡಿಎ ಬಲ ಕಳೆದ ಬಾರಿ 336ರಷ್ಟಿತ್ತು. ಈ ಬಾರಿ ಅದು ಅರ್ಧಕ್ಕೆ ಅಂದರೆ 175ಕ್ಕೆ ಕುಸಿಯಬಹುದು. ಹಾಗಾಗಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಸೋಲು ಒಪ್ಪಿಕೊಳ್ಳಬೇಕಾದೀತು. ಸರ್ಕಾರ ರಚನೆಯಲ್ಲಿ ‘ಇತರರ’ ಗುಂಪೇ ನಿರ್ಣಾಯಕವಾಗಬಹುದು.

ಉತ್ತರಪ್ರದೇಶ: ಮಹಾಮೈತ್ರಿಯೇ ಬಿಜೆಪಿಗೆ ಮಹಾ ಸವಾಲು

2014ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ 80 ಕ್ಷೇತ್ರಗಳ ಪೈಕಿ 73ರಲ್ಲಿ ಎನ್ಡಿಎ ಜಯಭೇರಿ ಬಾರಿಸಿತ್ತು. ಆದರೆ, ಬದ್ಧ ಪ್ರತಿಸ್ಪರ್ಧಿಗಳು ಎಂದು ಪರಿಗಣಿಸಲಾಗುವ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯಿಂದಾಗಿ ಈ ಬಾರಿಯ ಚುನಾವಣೆ ಬಿಜೆಪಿಗೆ ಸುಲಭವಲ್ಲ.

2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಅಲೆ ತೀವ್ರವಾಗಿತ್ತು. ಆಗಲೂ ಎಸ್ಪಿ ಮತ್ತು ಬಿಎಸ್ಪಿ ಗಳಿಸಿದ್ದ ಮತಗಳನ್ನು ಒಟ್ಟುಗೂಡಿಸಿದರೆ ಅದು 41 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಿದ ಮತಕ್ಕಿಂತ ಹೆಚ್ಚಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಮತಪ್ರಮಾಣ ಶೇ 42ರಷ್ಟಾದರೆ, ಎಸ್ಪಿ ಮತ್ತು ಬಿಎಸ್ಪಿ ಒಟ್ಟಾಗಿ ಶೇ 41ಕ್ಕಿಂತ ಸ್ವಲ್ಪ ಹೆಚ್ಚು ಮತ ಗಳಿಸಿದ್ದವು.

2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರಿದಿತ್ತು (402 ಕ್ಷೇತ್ರಗಳ ಪೈಕಿ 325ರಲ್ಲಿ ಗೆಲುವು). ಆದರೆ, 47 ಲೋಕಸಭಾ ಕ್ಷೇತ್ರಗಳಲ್ಲಿ ಎಸ್ಪಿ ಮತ್ತು ಬಿಎಸ್ಪಿಯ ಮತ ಪ್ರಮಾಣ ಬಿಜೆಪಿಗಿಂತ ಹೆಚ್ಚು.

ಆರ್ಎಲ್ಡಿ, ಪೀಸ್ ಪಾರ್ಟಿ, ನಿಷಾದ್ ಪಾರ್ಟಿಯಂತಹ ಜಾತಿ ಆಧರಿತ ಪಕ್ಷಗಳು ಕೂಡ ಎಸ್ಪಿ–ಬಿಎಸ್ಪಿ ಮೈತ್ರಿಕೂಟ ಸೇರಲು ನಿರ್ಧರಿಸಿರುವುದು ಬಿಜೆಪಿಯ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ನಿರ್ಧಾರ ನೆರವಾಗಬಹುದು ಎಂಬ ಭರವಸೆಯಲ್ಲಿ ಬಿಜೆಪಿ ಇದೆ. ಹಾಗೆಯೇ, ಮೈತ್ರಿಕೂಟದಿಂದ ಕಾಂಗ್ರೆಸ್ ಹೊರಗೆ ಇರುವುದರಿಂದ ‘ಜಾತ್ಯತೀತ ಮತ’ಗಳ ವಿಭಜನೆಯೂ ತನಗೆ ಅನುಕೂಲಕರ ಎಂದು ನಂಬಿದೆ.

–ಸಂಜಯ ಪಾಂಡೆ

ಪಶ್ಚಿಮ ಬಂಗಾಳ: ಮಮತಾಗೆ ಎದುರಾಳಿಗಳೇ ಇಲ್ಲ

ಪಶ್ಚಿಮ ಬಂಗಾಳದಲ್ಲಿ ಹಿಂದುತ್ವದ ಬಿಸಿ ಏರಿಸಲು ಬಿಜೆಪಿ ತನ್ನಿಂದಾಗುವ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ಆದರೆ, ಸೀಟುಗಳ ಲೆಕ್ಕದಲ್ಲಿ ಇದು ಹೆಚ್ಚಿನ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇಲ್ಲ. ಯಾಕೆಂದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆ ಈಗಲೂ ಅಚ್ಚಳಿಯದೆ ಉಳಿದಿದೆ.

ಮುಂಬರುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು 42 ಕ್ಷೇತ್ರಗಳ ಪೈಕಿ 30–38 ಸ್ಥಾನಗಳನ್ನು ಗೆಲ್ಲಬಹುದು (ಕಳೆದ ಚುನಾವಣೆಯಲ್ಲಿ 32 ಕ್ಷೇತ್ರಗಳಲ್ಲಿ ಗೆದ್ದಿತ್ತು). ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೆ ಬರುವ ನಿರೀಕ್ಷೆ ಇದೆ. 2–3 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯೂ ಇದೆ.

34 ವರ್ಷ ಪಶ್ಚಿಮ ಬಂಗಾಳವನ್ನು ಆಳಿದ್ದ ಸಿಪಿಎಂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚಿನ ಸಾಧನೆ ದಾಖಲಿಸುವುದು ಕಷ್ಟ. ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆ ಇದಕ್ಕೊಂದು ದಿಕ್ಸೂಚಿ. ಅಲ್ಲಿ ಎರಡನೇ ಸ್ಥಾನ ಪಡೆದ ಬಿಜೆಪಿ, ಸಿಪಿಎಂ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. ಹಾಗಿದ್ದರೂ ಸಿಪಿಎಂಗೆ 2–3 ಸ್ಥಾನಗಳು ದೊರೆಯಬಹುದು.

ಕಾಂಗ್ರೆಸ್ನ ಗಳಿಕೆ ಎರಡು ಸ್ಥಾನಗಳಿಗೆ ಕುಸಿಯಬಹುದು (2014ರಲ್ಲಿ ನಾಲ್ಕು ಇತ್ತು). ಈ ಪಕ್ಷ ಮುರ್ಷಿದಾಬಾದ್ ಮತ್ತು ಮಾಲ್ಡಾಕ್ಕ ಜಿಲ್ಲೆಗಳಿಗಷ್ಟೇ ಸೀಮಿತ.

–ಸೌಮ್ಯ ದಾಸ್

ಬಿಹಾರ: ಬಿಜೆಪಿಗೆ ಕಷ್ಟ ಕಾಲ

2014ರ ಲೋಕಸಭಾ ಚುನಾವಣೆ ಯಲ್ಲಿ ಎನ್ಡಿಎ ಅಸಾಧಾರಣ ಸಾಧನೆ ದಾಖಲಿಸಿತ್ತು. 40 ಕ್ಷೇತ್ರಗಳ ಪೈಕಿ 31ರಲ್ಲಿ ಗೆದ್ದಿತ್ತು. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ದವು– ಮೊದಲನೆಯದಾಗಿ, ಮೋದಿ ಅಲೆ, ಎರಡನೆಯದಾಗಿ, ತ್ರಿಕೋನ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗಿತ್ತು. ಬಿಜೆಪಿ ನೇತೃತ್ವದ ಎನ್ಡಿಎ, ಜೆಡಿಯು–ಎಡಪಕ್ಷಗಳು ಮತ್ತು ಆರ್ಜೆಡಿ–ಕಾಂಗ್ರೆಸ್ ಮೈತ್ರಿಕೂಟ ಕಣದಲ್ಲಿದ್ದವು. ಆದರೆ, 2019ರ ಚಿತ್ರಣ ಸಂಪೂರ್ಣ ಭಿನ್ನ.

ರಾಜಕೀಯ ಲೆಕ್ಕಾಚಾರವೇ ಬದಲಾಗಿದೆ. ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಆರ್ಜೆಡಿ ನೇತೃತ್ವದ ಮಹಾಮೈತ್ರಿ ನಡುವೆ ನೇರ ಸ್ಪರ್ಧೆ ಇದೆ.

ಆರ್ಜೆಡಿ ಮತ್ತು ಕಾಂಗ್ರೆಸ್ ಭೇದಿಸಲಾಗದ ಮೈತ್ರಿಕೂಟವನ್ನು ಕಟ್ಟಿ, ಸಕಾಲದಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದರೆ ಬಿಹಾರದಲ್ಲಿ 15 ಕ್ಷೇತ್ರಗಳಲ್ಲಿ ಗೆಲ್ಲುವುದು ಕೂಡ ಎನ್ಡಿಎಗೆ ಕಷ್ಟವಾಗಬಹುದು. ಚುನಾವಣೆಗೆ ಮೊದಲೇ ಮಹಾಮೈತ್ರಿ ಮುರಿದಬಿದ್ದರೆ ಚಿತ್ರಣ ಬೇರೆಯೇ ಆಗಬಹುದು.

–ಅಭಯ ಕುಮಾರ್

ಕರ್ನಾಟಕ: ಮೈತ್ರಿ ಬಲದ ಮುಂದೆ ಬಿಜೆಪಿ ಪೇಲವ

ಕಳೆದ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. 224 ಕ್ಷೇತ್ರಗಳ ಪೈಕಿ 104ರಲ್ಲಿ ಗೆದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು. ಆದರೆ, ಸರ್ಕಾರ ರಚನೆಗೆ ಬೇಕಾದ 113 ಸದಸ್ಯರ ಬೆಂಬಲ ಗಳಿಸಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ.

ಫಲಿತಾಂಶ ಪ್ರಕಟವಾದ ಕೆಲವೇ ತಾಸುಗಳೊಳಗೆ ಕಾಂಗ್ರೆಸ್ (80 ಸದಸ್ಯರು) ಮತ್ತು ಜೆಡಿಎಸ್ (37 ಸದಸ್ಯರು) ಮೈತ್ರಿ ಮಾಡಿಕೊಂಡವು. ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕಾಗಿ ಎಲ್ಲ ತಂತ್ರಗಳನ್ನು ಬಿಜೆಪಿ ಮಾಡುತ್ತಿದೆ. ರಾಜ್ಯವು ಒಟ್ಟು 28 ಲೋಕಸಭಾಕ್ಷೇತ್ರಗಳನ್ನು ಹೊಂದಿದೆ.

ಲೋಕಸಭೆ ಚುನಾವಣೆವರೆಗೆ ಮೈತ್ರಿ ಮುಂದುವರಿಯಬೇಕು ಎಂಬ ಇಚ್ಛೆ ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಇದೆ. ಆದರೆ, ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ. 12 ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇರಿಸಿದೆ. ಆದರೆ, ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡಲು ಮಾತ್ರ ಕಾಂಗ್ರೆಸ್ ಸಿದ್ಧವಾಗಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಆರು ಕ್ಷೇತ್ರಗಳಲ್ಲಿ ಈ ಎರಡು ಪಕ್ಷಗಳು ಪಡೆದ ಮತ ಪ್ರಮಾಣ ಹೆಚ್ಚು. ಉತ್ತರದ ಮೂರು ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ನರೇಂದ್ರ ಮೋದಿ ಸರ್ಕಾರವು ನೀಡಿದ ಭರವಸೆಗಳಲ್ಲಿ ಯಾವು ದನ್ನೂ ಈಡೇರಿಸಿಲ್ಲ ಎಂದು ಘಂಟಾ ಘೋಷವಾಗಿ ಹೇಳುತ್ತಿದೆ. ಈ ಬಾರಿ, ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಬಹುದು.

–ವಿಜೇಶ್ ಕಾಮತ್

ಗುಜರಾತ್: ಪುಟಿದೆದ್ದ ‘ಕೈ’ –ಕಮಲಕ್ಕೆ ಎದುರಾಗಿದೆ ಭಾರಿ ಪೈಪೋಟಿ

2014ರ ಲೋಕಸಭಾ ಚುನಾವಣೆ ಯಲ್ಲಿ ಗುಜರಾತ್ನ ಎಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಅದೇ ಸಾಧನೆ ಪುನರಾವರ್ತಿಸಲು ಆಪಕ್ಷ ಹೆಣಗಾ ಡುತ್ತಿದೆ. ಆದರೆ, 2017ರ ವಿಧಾನಸಭಾ ಚುನಾವಣೆಯಲ್ಲಿ 77 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿಯನ್ನು 99 ಕ್ಷೇತ್ರಗಳಿಗೆ ಕಟ್ಟಿ ಹಾಕಿದ ಕಾಂಗ್ರೆಸ್ ಪುನಶ್ಚೇತನಗೊಂಡಿದೆ.

ಹಾಗಾಗಿ ಕಠಿಣ ಸ್ಪರ್ಧೆ ಖಚಿತ. ಈ ಬಾರಿಯೂ ಎಲ್ಲ 26 ಕ್ಷೇತ್ರಗಳ ಗೆಲುವು ಖಾತರಿಪಡಿಸಬೇಕು ಎಂದು ಆ ರಾಜ್ಯದ ಬಿಜೆಪಿ ಚುನಾವಣಾ ಉಸ್ತುವಾರಿ ಓಂ ಪ್ರಕಾಶ್ ಮಾಥುರ್ ಕಾರ್ಯಕರ್ತರಿಗೆ ಹೇಳಿದ್ದಾರೆ.

2017ರ ಚುನಾವಣೆಯಲ್ಲಿ ಜಾತಿ ಧ್ರುವೀಕರಣದಿಂದಾಗಿ ಬಿಜೆಪಿಗೆ ಹಲವು ಕ್ಷೇತ್ರಗಳು ನಷ್ಟವಾಗಿದ್ದವು. ಪಾಟೀದಾರ್ ಸಮುದಾಯದವರು ಮತ್ತು ದಲಿತರು ಬಿಜೆಪಿಯಿಂದ ದೂರ ಸರಿದಿದ್ದರು. ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾ ತಿಯ ತೀರ್ಮಾನದಿಂದಾಗಿ ಪಾಟೀದಾರ್ ಸಮುದಾಯದ ಮತಗಳು ಬಿಜೆಪಿಗೆ ಮರಳಬಹುದು.

ಕೇಂದ್ರದ ನಿರ್ಧಾರವನ್ನು ಜಾರಿ ಮಾಡುವುದಾಗಿ ಗುಜರಾತ್ ಸರ್ಕಾರ ಈಗಾಗಲೇ ಘೋಷಿಸಿದೆ. ಹಿಂದುತ್ವದ ನೆಲೆ ಯಲ್ಲಿ ಸಿಕ್ಕಿರುವ ವೋಟ್ ಬ್ಯಾಂಕ್ ಅನ್ನು ಹಾಗೆಯೇ ಉಳಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಕೋಟ್ನಲ್ಲಿ ಸಂತರು ಮತ್ತು ಆರ್ಎಸ್ಎಸ್ ಮುಖ್ಯಸ್ಥರನ್ನು ಇತ್ತೀಚೆಗೆ ಭೇಟಿಯಾಗಿ ರಾಮ ಮಂದಿರ ವಿಚಾರ ಚರ್ಚಿಸಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಭರವಸೆಯನ್ನು ಶಾ ಕೊಟ್ಟಿದ್ದಾರೆ ಎನ್ನಲಾಗಿದೆ.

–ತಬೀನಾ ಅಂಜುಮ್

ಆಂಧ್ರ ಪ್ರದೇಶ:ಯಾರಿಗೂ ದಕ್ಕದು ಸುಲಭ ಗೆಲುವು

2014ರ ಲೋಕಸಭಾ ಚುನಾವಣೆ ಅವಿಭಜಿತ ಆಂಧ್ರ ಪ್ರದೇಶದಲ್ಲಿ ನಡೆದಿತ್ತು. ರಾಜ್ಯ ವಿಭಜನೆಯನ್ನು ವಿರೋಧಿಸುತ್ತಿದ್ದ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ರಾಜ್ಯ ವಿಭಜನೆಯ ಹೋರಾಟದ ಮುಂದಾಳುತ್ವ ವಹಿಸಿದ್ದ ಚಂದ್ರಶೇಖರ ರಾವ್ ಅವರ ಟಿಆರ್ಎಸ್ ನಡುವೆ ನೇರ ಸ್ಪರ್ಧೆ ಇತ್ತು. ಟಿಡಿಪಿ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು.

ಟಿಡಿಪಿಗೆ 16 ಮತ್ತು ಟಿಆರ್ಎಸ್ಗೆ 11 ಸ್ಥಾನಗಳು ಸಿಕ್ಕಿದ್ದವು. ಜಗನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ಗೆ 9 ಕ್ಷೇತ್ರಗಳಲ್ಲಿ ಗೆಲುವು ದಕ್ಕಿತ್ತು. ಅಸಾದುದ್ದೀನ್ ಒವೈಸಿಯ ಎಐಎಂಐಎಂ, ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ 1,2, ಮತ್ತು 3 ಕ್ಷೇತ್ರಗಳಲ್ಲಿ ಗೆದ್ದವು.

2019ರಲ್ಲಿ, ಆಂಧ್ರ ಪ್ರದೇಶದಲ್ಲಿ 25 ಮತ್ತು ತೆಲಂಗಾಣದಲ್ಲಿ 17 ಲೋಕಸಭಾ ಕ್ಷೇತ್ರಗಳಿವೆ. ಬಿಜೆಪಿಯ ಮೈತ್ರಿ ಕಡಿದುಕೊಂಡ ಟಿಡಿಪಿ, ಎನ್ಡಿಎಯಿಂದ ಹೊರನಡೆದಿದೆ. ರಾಜ್ಯದಲ್ಲಿ ಟಿಡಿಪಿಗೆ ಪ್ರಮುಖ ಪ್ರತಿಸ್ಪರ್ಧಿ ವೈಎಸ್ಆರ್ ಕಾಂಗ್ರೆಸ್.

ನಾಯ್ಡು ಅವರು ಆಡಳಿತ ವಿರೋಧಿ ಅಲೆ ಎದುರಿಸಬೇಕಿದೆ. ಅದರ ಜತೆಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಜತೆ ಮಾಡಿಕೊಂಡ ಮೈತ್ರಿ ತಿರುಗು ಬಾಣವಾಯಿತು. ಈ ಅನುಭವದಿಂದ ಎಚ್ಚೆತ್ತಿರುವ ನಾಯ್ಡು ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಪವನ್ ಕಲ್ಯಾಣ್ ನೇತೃತ್ವದ ‘ಜನ ಸೇನಾ’ ಕಾಪು ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಪ್ರಭಾವಿಯಾಗಿದೆ. ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಆರ್ಎಸ್ ಮೈತ್ರಿ ಯಾವ ರೂಪ ಪಡೆದುಕೊಳ್ಳುತ್ತದೆ ಮತ್ತು ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನಷ್ಟೇ ನೋಡಬೇಕಿದೆ.

–ಜೆ.ಬಿ.ಎಸ್. ಉಮಾನಾದ್

ರಾಜಸ್ಥಾನ:ಕಾಂಗ್ರೆಸ್ ಪಕ್ಷದ ಮುಂದೆ ದೊಡ್ಡ ಅವಕಾಶ

ಡಿಸೆಂಬರ್ನಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಯಾಸದಿಂದ ಗೆದ್ದಿದೆ. 199 ಕ್ಷೇತ್ರಗಳ ಪೈಕಿ 99ರಲ್ಲಿ ಜಯ ಪಡೆದಿದೆ. ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದೆ. ಹಾಗಿದ್ದರೂ 2013ರ ಚುನಾವಣೆಯಲ್ಲಿ 21 ಸ್ಥಾನಗಳಿಗೆ ಸೀಮಿತವಾಗಿದ್ದ ಪಕ್ಷವನ್ನು ಯುವ ನಾಯಕ ಸಚಿನ್ ಪೈಲಟ್ ಈ ಮಟ್ಟಕ್ಕೆ ಬೆಳೆಸಿರುವುದು ಸಣ್ಣ ಕೆಲಸವಲ್ಲ.

ವಿಧಾನಸಭೆಯಲ್ಲಿ 163 ಸದಸ್ಯರನ್ನು ಹೊಂದಿದ್ದ ಬಿಜೆಪಿ 73ಕ್ಕೆ ಕುಸಿದಿದೆ. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಒಂದು ವಿಚಾರ ಇದೆ– ರಾಜಸ್ಥಾನದ ಜನರ ಸಿಟ್ಟು ಇದ್ದುದು ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಮೇಲೆಯೇ ಹೊರತು ಮೋದಿಯ ಮೇಲಲ್ಲ.

2014ರಲ್ಲಿ ಇದ್ದ ಮೋದಿ ಅಲೆ ಈ ಬಾರಿ ಇಲ್ಲ. ಹಾಗಾಗಿ, ಬಿಜೆಪಿಗೆ ಭಾರಿ ಏಟು ಕೊಡಲು ರೈತರ ಆಕ್ರೋಶವೊಂದೇ ಸಾಕು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 23 ಮತ್ತು ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದವು.

ಈ ಬಾರಿ ದೊಡ್ಡ ಗೆಲುವು ದಾಖಲಿಸಲು ಕಾಂಗ್ರೆಸ್ಗೆ ಅವಕಾಶ ಇದೆ. ಆದರೆ, ಅದಕ್ಕಾಗಿ ಎರಡು ವಿಚಾರಗಳಲ್ಲಿ ಆ ಪಕ್ಷ ಎಚ್ಚರವಾಗಿರಬೇಕು: ಮೊದಲನೆಯದಾಗಿ, ಒಳಜಗಳವನ್ನು ತಕ್ಷಣವೇ ನಿಲ್ಲಿಸಿ, ಸರಿಯಾದ ರೀತಿಯಲ್ಲಿ ಟಿಕೆಟ್ ಹಂಚಿಕೆ ಮಾಡಬೇಕು. ಎರಡನೆಯದಾಗಿ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ರೈತರ ಸಾಲ ಮನ್ನಾ ಮತ್ತು ನಿರುದ್ಯೋಗಿಗಳಿಗೆ ಭತ್ಯೆ ಭರವಸೆಯನ್ನು ತ್ವರಿತವಾಗಿ ಈಡೇರಿಸಬೇಕು. ಹಾಗೆ ಮಾಡಿದರೆ ಪಕ್ಷದ ಬಗ್ಗೆ ಜನರಿಗೆ ಭಾರಿ ವಿಶ್ವಾಸ ಮೂಡಬಹುದು. ಹಾಗೆ ಆದರೆ, ಬಿಜೆಪಿ ಹೊಂದಿರುವ ಅರ್ಧದಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಜಯ ದೊರೆಯಬಹುದು.

–ತಬೀನಾ ಅಂಜುಮ್

ಒಡಿಶಾ: ಪಟ್ನಾಯಕ್ ಮುಂದೆ ಬೇರೆ ನಾಯಕರೇ ಇಲ್ಲ

ಒಡಿಶಾದಲ್ಲಿ 21 ಲೋಕಸಭಾ ಕ್ಷೇತ್ರಗಳಿವೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಅಧಿಕಾರದ ಮೇಲೆ ಬಿಗಿ ಹಿಡಿತ ಹೊಂದಿದೆ.

ಲೋಕಸಭೆ ಚುನಾವಣೆಯ ಜತೆಗೆ ಇಲ್ಲಿ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿ ಐದನೇ ಅವಧಿಗೆ ಜನರ ಆಶೀರ್ವಾದ ಕೋರಲಿದ್ದಾರೆ. ಬಿಜೆಡಿಯ ಹಲವು ಮುಖಂಡರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದರೂ ಅಧಿಕಾರದಲ್ಲಿದ್ದ 19 ವರ್ಷಗಳಲ್ಲಿಯೂ ಪಟ್ನಾಯಕ್ ಅವರು ಸ್ವಚ್ಛ ರಾಜಕಾರಣಿ ಎಂಬ ಹಿರಿಮೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಇಲ್ಲಿನ ರಾಜಕೀಯದ ಅಂಚಿನ ಆಟಗಾರರು ಮಾತ್ರ. 2014ರ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಮೋದಿ ಅಲೆ ಇದ್ದಾಗಲೂ ಇಲ್ಲಿನ 20 ಕ್ಷೇತ್ರಗಳಲ್ಲಿ ಬಿಜೆಡಿ ಗೆದ್ದಿತ್ತು. ಬಿಜೆಪಿಗೆ ಒಂದು ಕ್ಷೇತ್ರ ದಕ್ಕಿದರೆ ಕಾಂಗ್ರೆಸ್ನದ್ದು ಶೂನ್ಯ ಸಾಧನೆ. ವಿಧಾನಸಭೆಯ 147 ಕ್ಷೇತ್ರಗಳ ಪೈಕಿ ಬಿಜೆಡಿ 114ರಲ್ಲಿ ಜಯಭೇರಿ ಬಾರಿಸಿತ್ತು.

2019ರಲ್ಲಿಯೂ ಇದೇ ಸಾಧನೆಯನ್ನು ಪುನರಾವರ್ತಿಸುವುದು ಪಟ್ನಾಯಕ್ಗೆ ಸುಲಭವಲ್ಲ. ಸ್ವಲ್ಪ ಬಲ ಕುಂದಿದರೂ ರಾಜ್ಯದ ಪ್ರಶ್ನಾತೀತ ನಾಯಕರಾಗಿ ಪಟ್ನಾಯಕ್ ಅವರೇ ಮುಂದುವರಿಯಲಿದ್ದಾರೆ.

ಇಲ್ಲಿನ ಪುರಿ ಲೋಕಸಭಾ ಕ್ಷೇತ್ರದಿಂದ ನರೇಂದ್ರ ಮೋದಿ ಸ್ಪರ್ಧಿಸಿದರೂ ಅದರ ಪರಿಣಾಮ ದೊಡ್ಡದೇನೂ ಆಗದು. ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸಮಾನ ದೂರ ಎಂಬುದು ಬಿಜೆಡಿಯ ಸೂತ್ರ. ಅಗತ್ಯ ಬಿದ್ದರೆ ಪಟ್ನಾಯಕ್ ಅವರು ಬಿಜೆಪಿ ಕಡೆಗೆ ವಾಲುವ ಸಾಧ್ಯತೆ ಹೆಚ್ಚು.

–ಸಾಗರ್ ಕುಲಕರ್ಣಿ

ಕೇರಳ: ಶಬರಿಮಲೆ ಮತ ತಾರದು

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶದ ವಿಚಾರ ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರೂ ಲೋಕಸಭೆಯ ಒಂದೆರಡು ಕ್ಷೇತ್ರಗಳಿಂದಾಚೆಗೆ ಅದರ ಪ್ರಭಾವ ಇರದು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ 12 ಸ್ಥಾನಗಳು ಸಿಕ್ಕಿದ್ದರೆ ಈಗಿರುವ ಸಿಪಿಎಂ ನೇತೃತ್ವದ ಎಲ್ಡಿಎಫ್ಗೆ 8 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿತ್ತು.

ಮತ ಗಳಿಕೆ ಪ್ರಮಾಣದಲ್ಲಿ ಎರಡೂ ಗುಂಪುಗಳ ನಡುವೆ ಅಂತಹ ವ್ಯತ್ಯಾಸ ಏನೂ ಇರಲಿಲ್ಲ– ಯುಡಿಎಫ್ಗೆ ಶೇ 42 ಮತ್ತು ಎಲ್ಡಿಎಫ್ಗೆ ಶೇ 41ರಷ್ಟು ಮತ ಸಿಕ್ಕಿತ್ತು. ಬಿಜೆಪಿಗೆ ಒಂದು ಕ್ಷೇತ್ರವೂ ಸಿಕ್ಕಿರಲಿಲ್ಲ. ಶಬರಿಮಲೆ ವಿವಾದವು ಮತದಾರರ ಮೇಲೆ ಪ್ರಭಾವ ಬೀರಿದರೆ ತಿರುವನಂತಪುರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿರೀಕ್ಷಿಸಬಹುದು. ಭಾರಿ ಪ್ರವಾಹದ ನಂತರ ನಡೆದ ಪುನರ್ವಸತಿ ವಿಚಾರಗಳು ಮುನ್ನೆಲೆಗೆ ಬಂದರೆ ಎಲ್ಡಿಎಫ್ಗೆ ಒಂದೆರಡು ಸ್ಥಾನಗಳು ನಷ್ಟವಾದರೂ ಅಚ್ಚರಿ ಇಲ್ಲ.

–ಅರ್ಜುನ್ ರಘುನಾಥ್

ತೆಲಂಗಾಣ: ಟಿಆರ್ಎಸ್ ಆಡುಂಬೊಲ

ರಾಜ್ಯದ ಮೇಲೆ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ಹಿಡಿತ ಬಿಗಿಯಾಗಿದೆ. ಹಾಗಾಗಿ, ಕಾಂಗ್ರೆಸ್ ಸೇರಿ ಬೇರೆ ಯಾವ ಪಕ್ಷಕ್ಕೂ ಇಲ್ಲಿ ಅವಕಾಶವೇ ಇಲ್ಲ. ಬಿಜೆಪಿಯ ಮಟ್ಟಿಗೆ ಹೈದರಾಬಾದ್ ‘ಭಾಗ್ಯನಗರ’ವಾಗುವ ಸಾಧ್ಯತೆ ಇಲ್ಲವೇ ಇಲ್ಲ.

2014ರಲ್ಲಿ ಮೋದಿ ಅಲೆಯ ಅಬ್ಬರದ ನಡುವೆಯೂ ಇಲ್ಲಿನ 17 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದದ್ದು ಒಂದರಲ್ಲಿ ಮಾತ್ರ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 119 ಕ್ಷೇತ್ರಗಳ ಪೈಕಿ 118ರಲ್ಲಿ ಬಿಜೆಪಿ ಸ್ಪರ್ಧಿಸಿತ್ತು. 103 ಕಡೆ ಠೇವಣಿ ಕಳೆದುಕೊಂಡಿತು. ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಮೋದಿ ಅಲೆ ಮರೆಯಾಗಿರುವುದು ಮತ್ತು ಮತ ಸೆಳೆಯಬಲ್ಲ ಭಾವನಾತ್ಮಕ ವಿಚಾರಗಳು ಯಾವುವೂ ಇಲ್ಲದಿರುವುದರಿಂದ ಬಿಜೆಪಿಯ ಸ್ಥಿತಿ ಉತ್ತಮಗೊಳ್ಳಲು ಸಾಧ್ಯವಿಲ್ಲ.

ಟಿಆರ್ಎಸ್ಗೆ 12–15, ಎಐಎಂಐಎಂಗೆ 1 ಕ್ಷೇತ್ರಗಳು ಸಿಕ್ಕರೆ ಬಿಜೆಪಿ ಇರುವ ಒಂದು ಕ್ಷೇತ್ರವನ್ನು ಉಳಿಸಿಕೊಳ್ಳಬಹುದು. ಟಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಒಕ್ಕೂಟ ರಂಗ ರೂಪಿಸಲು ಓಡಾಡುತ್ತಿದ್ದಾರೆ. ಹಾಗಾಗಿ ಆದಷ್ಟು ಹೆಚ್ಚು ಕ್ಷೇತ್ರಗಳಲ್ಲಿ ಅವರು ಗೆಲ್ಲಬೇಕು. ಒಂದು ವೇಳೆ, ಒಕ್ಕೂಟ ರಂಗದ ಯೋಜನೆ ಜಾರಿಗೆ ಬಾರದಿದ್ದರೆ ಟಿಆರ್ಎಸ್ನ ಎಲ್ಲ ಸಂಸದರು ಬಿಜೆಪಿಯನ್ನು ಬೆಂಬಲಿಸುವುದು ನಿಚ್ಚಳ.

–ಜೆ.ಬಿ.ಎಸ್. ಉಮಾನಾದ್

ಈಶಾನ್ಯ ಭಾರತ: ಬಿಜೆಪಿಗೆ ಬಲ ಹೆಚ್ಚಳಕ್ಕೆ ಅವಕಾಶ

ಮಿಜೋರಾಂ ಬಿಟ್ಟರೆ ಈಶಾನ್ಯ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಒಂದೋ ಮೈತ್ರಿಕೂಟದ ನೇತೃತ್ವ ವಹಿಸಿದೆ ಅಥವಾ ಅದರ ಭಾಗವಾಗಿದೆ. ಕ್ರೈಸ್ತ ಸಮುದಾಯವೇ ಪ್ರಬಲವಾಗಿರುವ ಈ ಪ್ರದೇಶದಲ್ಲಿ 2014ರ ಬಳಿಕ ಬಿಜೆಪಿಯ ಬಲವರ್ಧನೆ ನಿಜಕ್ಕೂ ಅಚ್ಚರಿದಾಯಕ. ಪೌರತ್ವ (ತಿದ್ದುಪಡಿ) ಮಸೂದೆಗೆ ಈ ಭಾಗದಲ್ಲಿ ವ್ಯಕ್ತವಾಗಿರುವ ವಿರೋಧ ಬಿಜೆಪಿ ದಾಪುಗಾಲಿಗೆ ಅಡ್ಡಿಯಾಗಬಹುದು.

2014ರಲ್ಲಿ ಅಸ್ಸಾಂನ 14 ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಗೆದ್ದಿತ್ತು. ಈ ರಾಜ್ಯದಲ್ಲಿ ಬಂಗಾಳಿ ಹಿಂದೂಗಳ ಜನಸಂಖ್ಯೆ ಪ್ರಮಾಣ ಶೇ 20ರಷ್ಟಿದೆ. ಈ ವರ್ಗವನ್ನು ಸೆಳೆಯುವ ಮೂಲಕ ರಾಜ್ಯದ ಹಿಂದೂ ಮತಗಳ ಮೇಲಿನ ಹಿಡಿತವನ್ನು ಗಟ್ಟಿಗೊಳಿಸುವುದು ಬಿಜೆಪಿಯ ಗುರಿ. ಕಾಂಗ್ರೆಸ್ಗೆ ಇಲ್ಲಿ ಜನಪ್ರಿಯ ನಾಯಕರು ಇಲ್ಲ. ಅದಲ್ಲದೆ, ಶೇ 30ರಷ್ಟಿರುವ ಮುಸ್ಲಿಂ ಮತಗಳು ಅಸ್ಸಾಂ ಗಣ ಪರಿಷತ್, ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ನಡುವೆ ಹಂಚಿ ಹೋಗುತ್ತದೆ. ಇದರಿಂದ ಬಿಜೆಪಿಗೆ ಲಾಭವಾಗಬಹುದು. ಕಾಂಗ್ರೆಸ್ ಮತ್ತು ಎಐಯುಡಿಎಫ್ನ ಸ್ವಲ್ಪ ಮತಗಳನ್ನು ಬಿಜೆಪಿ ಕಸಿಯುವ ಸಾಧ್ಯತೆ ಇದೆ. ಹಾಗಾದರೆ, ಬಿಜೆಪಿ ಸ್ಥಾನಗಳ ಸಂಖ್ಯೆ 10ಕ್ಕೆ ಏರಬಹುದು.

ತ್ರಿಪುರ ಮತ್ತು ಮಣಿಪುರ ರಾಜ್ಯಗಳಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಷ್ಟೇ ಆಯಿತು. ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿಲ್ಲ. ಇದು ಬಿಜೆಪಿಯ ಗೆಲುವಿನ ಅವಕಾಶವನ್ನು ಉತ್ತಮಪಡಿಸಿದೆ. ಈ ಎರಡು ರಾಜ್ಯಗಳಲ್ಲಿ ನಾಲ್ಕು ಮತ್ತು ಅರುಣಾಚಲ ಪ್ರದೇಶದಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು. ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ಗಳಲ್ಲಿ ಬಿಜೆಪಿಯ ಪ್ರಾದೇಶಿಕ ಮಿತ್ರ ಪಕ್ಷಗಳು ಪ್ರಬಲವಾಗಿವೆ. ಇಲ್ಲಿನ ನಾಲ್ಕರಲ್ಲಿ ಮೂರು ಕ್ಷೇತ್ರಗಳು ಎನ್ಡಿಎಗೆ ದಕ್ಕಬಹುದು. ಇಲ್ಲೆಲ್ಲೂ ಕಾಂಗ್ರೆಸ್ಗೆ ಪ್ರಬಲ ನಾಯಕತ್ವ ಇಲ್ಲ.

–ಸುಮೀರ್ ಕರ್ಮಾಕರ್

ಉತ್ತರಾಖಂಡ: ಬಿಜೆಪಿಗೆ ಗಟ್ಟಿ ಅಡಿಪಾಯ

ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದ ಪಕ್ಷಾಂತರಗಳು ನಡೆದ ಬಳಿಕ ಎರಡು ವರ್ಷಗಳ ಹಿಂದೆ ಬಿಜೆಪಿ ಉತ್ತರಾಖಂಡದಲ್ಲಿ ಅಧಿಕಾರ ಹಿಡಿಯಿತು.

2014ರಲ್ಲಿ ಎಲ್ಲ ಐದೂ ಕ್ಷೇತ್ರಗಳನ್ನು ಕಬಳಿಸಿದ ಬಿಜೆಪಿ, 2017ರ ವಿಧಾನಸಭಾ ಚುನಾವಣೆಯಲ್ಲಿ 70ರ ಪೈಕಿ 57 ಕ್ಷೇತ್ರಗಳಲ್ಲಿ ಜಯ ಗಳಿಸಿತು. ಕಳೆದ ವರ್ಷಾರಂಭದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಏಳರ ಪೈಕಿ ಐದನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಕಾಂಗ್ರೆಸ್ಗೆ ಸಿಕ್ಕಿದು ಕೇವಲ ಎರಡು.

ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಸೇರಿದಂತೆ ಘಟಾನುಘಟಿ ಕಾಂಗ್ರೆಸ್ ನಾಯಕರು ಬಿಜೆಪಿ ಎದುರು ಮಂಡಿಯೂರಿದ್ದರು.ಎಸ್ಪಿ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿ ರುವ ಹರಿದ್ವಾರ ಕ್ಷೇತ್ರವನ್ನು ಹೊರತುಪಡಿಸಿದರೆ, ಉಳಿದ ಕಡೆ ಬಿಜೆಪಿ ಕೈ ಮೇಲಾಗುವ ಸಾಧ್ಯತೆಯಿದೆ.

–ಸಂಜಯ್ ಪಾಂಡೆ

ಹಿಮಾಚಲ ಪ್ರದೇಶ: ಬಿಜೆಪಿಗೆ ಅನುಕೂಲಕರ ಅಂಶಗಳೇ ಹೆಚ್ಚು

2014ರಲ್ಲಿ ಎಲ್ಲ ನಾಲ್ಕೂ ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿದ ಬಳಿಕ ಬಿಜೆಪಿಯ ಕೈ ಮೇಲಾಗಿದೆ. ಅಲ್ಲದೆ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಅಧಿಕಾರವನ್ನು ಕಿತ್ತುಕೊಂಡಿದೆ.

ಬಿಜೆಪಿಗೆ ಅನುಕೂಲಕರ ಅಂಶಗಳೇ ಇಲ್ಲಿ ಹೆಚ್ಚು. ತನ್ನ ಆಂತರಿಕ ಸಂಘರ್ಷಕ್ಕೆ ಕಾಂಗ್ರೆಸ್ ಬೆಲೆ ತೆರುತ್ತಲೇ ಇದೆ. ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸುಖವಿಂದರ್ ಸುಖು ನಡುವಿನ ವೈಮನಸ್ಯದಿಂದ ಪಕ್ಷ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಈ ವಿಚಾರದಲ್ಲಿ ಬಿಜೆಪಿ ಮೇಲು. ಕಳೆದೊಂದು ವರ್ಷದ ಬೆಳವಣಿಗೆಗಳನ್ನು ಗಮನಿಸಿದರೆ, ಬಿಜೆಪಿ ಮುನ್ನಡೆಗೆ ಯಾವುದೇ ಅಡ್ಡಿಗಳಿಲ್ಲ.

ಕಾಂಗ್ರೆಸ್ ತನ್ನ ಮನೆಯಲ್ಲಿ ಶಿಸ್ತು ತಂದಲ್ಲಿ, ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ಹೋರಾಡಬಹುದು.

–ಗೌತಮ್ ಧೀರ್

ಜಮ್ಮು ಮತ್ತು ಕಾಶ್ಮೀರ: ಪಿಡಿಪಿಯ ನಷ್ಟವೇ ಎನ್ಸಿಯ ಲಾಭ!

2014ರ ಸಾರ್ವತ್ರಿಕ ಚುನಾವಣೆ ಯಲ್ಲಿ ಕಾಶ್ಮೀರ ಕಣಿವೆಯ ಮೂರು ಸ್ಥಾನಗಳನ್ನು ಪಿಡಿಪಿ ಗೆದ್ದಿತ್ತು. ಜಮ್ಮುವಿನ ಎರಡು ಹಾಗೂ ಲಡಾಕ್ನ ಒಂದು ಸ್ಥಾನ ಬಿಜೆಪಿ ಪಾಲಾಗಿತ್ತು. ಆದರೆ 2019ರ ಚುನಾವಣೆಯು ಉಭಯ ಪಕ್ಷಗಳಿಗೆ ವಿಭಿನ್ನ ಫಲಿತಾಂಶ ನೀಡುವ ಸಾಧ್ಯತೆಯಿದೆ.

ಬಿಜೆಪಿ–ಪಿಡಿಪಿ ಮೈತ್ರಿ ಸರ್ಕಾರವು ಜಮ್ಮು–ಕಾಶ್ಮೀರದಲ್ಲಿ ಆಳ್ವಿಕೆ ನಡೆಸಿ ದ್ದರೂ ಅಷ್ಟೇನೂ ಹೆಸರು ಗಳಿಸಿಲ್ಲ. ಇದು ಪರೋಕ್ಷವಾಗಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷಗಳಿಗೆ ಲಾಭ ತಂದುಕೊಡುವ ಸಾಧ್ಯತೆಯಿದೆ.

ಈ ಬಾರಿ ಕಣಿವೆಯ ಮೂರೂ ಕ್ಷೇತ್ರಗಳನ್ನು ಪಿಡಿಪಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಲಡಾಕ್ ಹಾಗೂ ಜಮ್ಮುವಿನ ಒಂದು ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಿತ್ತು ಕೊಳ್ಳುವ ಸಾಧ್ಯತೆಗಳಿವೆ. ಬಿಜೆಪಿಯ ಗೆಲುವಿನ ಸಾಧ್ಯತೆ ಕ್ಷೀಣಿಸಿದ್ದು, ಜಮ್ಮುವಿನ ಒಂದು ಕ್ಷೇತ್ರವನ್ನು ಉಳಿಸಿಕೊಳ್ಳಬಹುದು.

–ಜುಲ್ಫೀಕರ್ ಮಜೀದ್

ಗೋವಾ,ದಮನ್ ಮತ್ತು ದಿಯು: ಬಿಜೆಪಿ ಪ್ರಾಬಲ್ಯಕ್ಕಿಲ್ಲ ತಡೆ

ಗೋವಾ ರಾಜ್ಯದ ಎರಡು ಲೋಕಸಭಾ ಕ್ಷೇತ್ರಗಳು ಸದ್ಯ ಬಿಜೆಪಿ ತೆಕ್ಕೆಯಲ್ಲಿವೆ. ಈ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ದಕ್ಷಿಣ ಗೋವಾದಲ್ಲಿ ಬಿಜೆಪಿ ಮತ ಗಳಿಕೆ ಶೇ 48, ಉತ್ತರದಲ್ಲಿ ಶೇ 58ರಷ್ಟಿದೆ. ಬಿಜೆಪಿಯ ಪ್ರಮುಖ ನಾಯಕ, ಮುಖ್ಯಮಂತ್ರಿ ಮನೋಹರ ಪರ್ರೀಕರ್ ಅವರ ಅನಾರೋಗ್ಯ ಪಕ್ಷಕ್ಕೆ ಪ್ರಮುಖ ಸಮಸ್ಯೆಯಾಗಿದೆ.

ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಒಂದು ಕ್ಷೇತ್ರವೂ ಬಿಜೆಪಿ ವಶದಲ್ಲಿದ್ದು, ಈ ಬಾರಿಯೂ ಅಲ್ಲಿ ಬಿಜೆಪಿ ಗೆಲ್ಲಬಹುದು. ಸಂಸದ ಲಾಲುಭಾಯಿ ಪಟೇಲ್ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದಾರೆ.

–ಮೃತ್ಯುಂಜಯ ಬೋಸ್

ಚಂಡೀಗಡ: ಗುಂಪುಗಾರಿಕೆಯೇ ಸಮಸ್ಯೆ

ಕೇಂದ್ರಾಡಳಿತ ಪ್ರದೇಶ ವಾಗಿರುವ ಚಂಡಿಗಡ ಲೋಕಸಭೆ ಕ್ಷೇತ್ರ ವನ್ನು ಬಿಜೆಪಿ ಅಭ್ಯರ್ಥಿ, ಚಿತ್ರನಟಿ ಕಿರಣ್ ಖೇರ್ ಪ್ರತಿನಿಧಿಸುತ್ತಿದ್ದಾರೆ. ನಗರ ಕ್ಷೇತ್ರವಾಗಿರುವ ಇಲ್ಲಿ, ಕಾಂಗ್ರೆಸ್ ಸಹ ಉತ್ತಮ ಬೆಂಬಲ ಹೊಂದಿದೆ. ನಾಗರಿಕ ಸಮಸ್ಯೆಗಳು ಮತದಾರರ ಪ್ರಾಶಸ್ತ್ಯ ನಿರ್ಧರಿಸಲಿವೆ.

ಬಿಜೆಪಿಯನ್ನು ಕಾಡುತ್ತಿರುವ ಗುಂಪುಗಾರಿಕೆ ದುಬಾರಿಯಾಗಬಹುದು. ಬಿಜೆಪಿ ಸಾಧನೆ ಬಗ್ಗೆ ಮತದಾರರು ತೃಪ್ತಿ ಹೊಂದಿಲ್ಲ. ನಗರ ಕ್ಷೇತ್ರವಾಗಿದ್ದರೂ, ಜಿಎಸ್ಟಿ ಹಾಗೂ ನೋಟು ರದ್ದತಿ ಪ್ರಭಾವ ಮತಗಳ ಮೇಲೆ ಪರಿಣಾಮ ಬೀರಲಿವೆ.

–ಗೌತಮ್ ಧೀರ್

ಸಿಕ್ಕಿಂ:ಚಾಮ್ಲಿಂಗ್ ಪ್ರಾಬಲ್ಯ

ಸಿಕ್ಕಿಂ ರಾಜ್ಯದ ಒಂದು ಲೋಕಸಭೆ ಕ್ಷೇತ್ರದಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗುವ ಲಕ್ಷಣ
ಗಳಿಲ್ಲ. ಆಡಳಿತಾರೂಢ ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್ (ಎಸ್ಡಿಎಫ್) ಮತ್ತೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಬಿಜೆಪಿ ಕಾಲೂರಲು ಬಿಡುವುದಿಲ್ಲ ಎಂದು ಎಸ್ಡಿಎಫ್ ಮುಖ್ಯಸ್ಥ ಹಾಗೂ ದೇಶದಲ್ಲಿಯೇ ಅತಿ ಹೆಚ್ಚು ವರ್ಷಗಳವರೆಗೆ ಮುಖ್ಯಮಂತ್ರಿಯಾಗಿರುವ ಪವನ್ ಚಾಮ್ಲಿಂಗ್ ಹೇಳಿದ್ದಾರೆ.

–ಗೌತಮ್ ಧೀರ್

ಜಾರ್ಖಂಡ್: ಬಿಜೆಪಿ ಮೂರಕ್ಕಿಳಿಯಬಹುದು

ಬಿಹಾರ ರಾಜ್ಯದಲ್ಲಿದ್ದಾಗಲೂ ಹಾಗೂ 2000ದಲ್ಲಿ ವಿಭಜನೆಯಾದ ನಂತರವೂ ಜಾರ್ಖಂಡ್ ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ಒಟ್ಟು 14 ಕ್ಷೇತ್ರಗಳ ಪೈಕಿ 2014ರಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಪ್ರಾದೇಶಿಕ ಪಕ್ಷವಾದ ಜೆಎಂಎಂ ಎರಡು ಸ್ಥಾನ ಪಡೆದಿತ್ತು. ಆ ಸಂದರ್ಭದಲ್ಲಿ ಮೋದಿ ಅಲೆಗಿಂತ, ವಿರೋಧ ಪಕ್ಷಗಳ ಮತಗಳು ಹರಿದು ಹಂಚಿಹೋಗಿದ್ದರಿಂದ ಬಿಜೆಪಿ ಗೆಲುವು ಸುಲಭವಾಗಿತ್ತು.

ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜೆಎಂಎಂ, ಆರ್ಜೆಡಿ, ಕಾಂಗ್ರೆಸ್ ಮತ್ತು ಜೆವಿಎಂ ಮಹಾಮೈತ್ರಿ ಮಾಡಿಕೊಂಡು, ನೇರ ಸ್ಪರ್ಧೆ ಒಡ್ಡಿವೆ. ಹೀಗಾಗಿ ಬಿಜೆಪಿ ಕೇವಲ 3 ಸ್ಥಾನ ಪಡೆದರೂ ಅಚ್ಚರಿ ಪಡಬೇಕಿಲ್ಲ.

–ಅಭಯ್ ಕುಮಾರ್

ತಮಿಳುನಾಡು: ಡಿಎಂಕೆ ಪರ ಪ್ರಬಲ ಅಲೆ

ಮೊದಲಿನಿಂದಲೂ ಪ್ರಾದೇಶೀಕ ಪಕ್ಷಗಳ ಪ್ರಾಬಲ್ಯವಿರುವ ತಮಿಳುನಾಡು ಮತ್ತು ಪುದುಚೇರಿಯಲ್ಲಿ ರಾಜಕೀಯ ಪಕ್ಷಗಳ ಮೈತ್ರಿ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ದೊರೆಯುತ್ತಿಲ್ಲ.

ಸದ್ಯದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಡಿಎಂಕೆ–ಕಾಂಗ್ರೆಸ್–ಎಡ ಪಕ್ಷಗಳ ಮೈತ್ರಿಗೆ ರಾಜ್ಯದಲ್ಲಿ ಪೂರಕ ವಾತಾವರಣ ಕಂಡುಬರುತ್ತಿದೆ.

ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ಆಡಳಿತ ವಿರೋಧಿ ಅಲೆ ಮತ್ತು ಕೇಂದ್ರದಲ್ಲಿ ಮೋದಿ ವಿರೋಧಿ ಅಲೆಯು ಡಿಎಂಕೆ ಮತ್ತು ಮಿತ್ರಪಕ್ಷಗಳ ಹಾದಿ ಸುಗಮಗೊಳಿಸಲಿದೆ.

ಒಂದು ವೇಳೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡರೂ ಡಿಎಂಕೆ–ಕಾಂಗ್ರೆಸ್–ಎಡ ಪಕ್ಷಗಳ ಮೈತ್ರಿಕೂಟವನ್ನು ಸರಿಗಟ್ಟಲಾಗದು. ಯಾವ ರೀತಿ ಲೆಕ್ಕ ಹಾಕಿದರೂ ಡಿಎಂಕೆ ಬಲಶಾಲಿಯಾಗಿ ಕಾಣುತ್ತಿದೆ. ರಾಜ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ.

ಜಯಲಲಿತಾ ನಿಧನದ ನಂತರ ಎಐಎಡಿಎಂಕೆಗೆ ಮತಗಳನ್ನು ತಂದು ಕೊಡುವ ಮತ್ತು ಜನಸಮುದಾಯವನ್ನು ಸೆಳೆಯಬಲ್ಲ ವರ್ಚಸ್ವಿ ನಾಯಕರು ಯಾರೂ ಇಲ್ಲ. ಎಐಎಡಿಎಂಕೆ ಸರ್ಕಾರದ ಜನಪ್ರಿಯತೆ ಕುಗ್ಗಿದೆ. ಮತ್ತೊಂದೆಡೆ ಡಿಎಂಕೆಗೆ ಎಂ.ಕೆ. ಸ್ಟಾಲಿನ್ ಅವರಂತಹ ಜನಪ್ರಿಯ ನಾಯಕನ ಸಾರಥ್ಯ ದೊರೆಕಿದೆ. ಡಿಎಂಕೆ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ.

2014ರ ಚುನಾವಣೆಯಲ್ಲಿ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಲ್ಲಿ ಎಐಎಡಿಎಂಕೆ 37 ಸ್ಥಾನ ಗಳಿಸಿತ್ತು. ಬಿಜೆಪಿ ಮತ್ತು ಪಿಎಂಕೆ ತಲಾ ಒಂದು ಸ್ಥಾನಗಳಿಸಿದ್ದವು. ಪುದುಚೇರಿಯ ಏಕೈಕ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಮಿತ್ರಪಕ್ಷ ಎನ್ಆರ್ ಕಾಂಗ್ರೆಸ್ ಬುಟ್ಟಿಗೆ ಹಾಕಿಕೊಂಡಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಈ ಚಿತ್ರಣ ಅದಲು, ಬದಲಾಗುವ ಸಾಧ್ಯತೆ ಇದೆ. ಡಿಎಂಕೆ ಮೈತ್ರಿಕೂಟ 35–39 ಕ್ಷೇತ್ರಗಳಲ್ಲಿ ಜಯಗಳಿಸಬಹುದು, ಎಐಎಡಿಎಂಕೆ 4 ಸ್ಥಾನಗಳಿಗೆ ಕುಸಿಯಬಹುದು. ಪುದುಚೇರಿಯ ಒಂದು ಕ್ಷೇತ್ರ ಕೂಡ ಡಿಎಂಕೆ ಪಾಲಾಗುವ ಸಾಧ್ಯತೆ ಇದೆ.

-ಈ.ಟಿ.ಬಿ. ಶಿವಪ್ರಿಯನ್

ಪಂಜಾಬ್: ಕ್ಯಾಪ್ಟನ್ ಕಮಾಲ್ನಲ್ಲಿ ಇತರರು ಮಂಕು

ಕಾಂಗ್ರೆಸ್ ತನ್ನ ಎದುರಾಳಿಗಳಾದ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಹಾಗೂ ಬಿಜೆಪಿ ಮೈತ್ರಿಕೂಟ ಮತ್ತು ಆಮ್ ಆದ್ಮಿ ಪಕ್ಷಕ್ಕಿಂತ (ಎಎಪಿ) ಒಂದು ಹೆಜ್ಜೆ ಮುಂದಿದೆ. 2014ರಲ್ಲಿ ಮೋದಿ ಅಲೆ ಇದ್ದರೂ, ಕಾಂಗ್ರೆಸ್ 3, ಎಎಪಿ 4 ಹಾಗೂ ಬಿಜೆಪಿ 6 ಸ್ಥಾನಗಳಲ್ಲಿ ಗೆದ್ದಿದ್ದವು. 2017ರಲ್ಲಿ ನಡೆದ ಗುರದಾಸಪುರ್ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಅದೇ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಭರ್ಜರಿ ಜಯಗಳಿಸಿ, ಅಧಿಕಾರವನ್ನು ಮರಳಿ ಪಡೆದಿತ್ತು. ಅನೇಕ ಲೋಕಸಭೆ ಕ್ಷೇತ್ರಗಳಲ್ಲಿ ಮತಗಳಿಕೆ ಪ್ರಮಾಣವನ್ನು ಸಹ ಕಾಂಗ್ರೆಸ್ ಹೆಚ್ಚಿಸಿಕೊಂಡಿದೆ.

ಇತ್ತೀಚೆಗೆ ನಡೆದ ಪಂಚಾಯಿತಿಗಳ ಚುನಾವಣೆ ಯಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ತೋರಿದೆ. ರಾಜ್ಯದಲ್ಲಿ ಎಎಪಿ ಪ್ರಭಾವ ಕಡಿಮೆಯಾಗುತ್ತಿದ್ದರೆ, ಎಸ್ಎಡಿ ತನ್ನ ಹಿರಿಯ ನಾಯಕರನ್ನು ಕಳೆದುಕೊಳ್ಳುತ್ತಿದೆ.

ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಗ್ರಾಮೀಣ ಮತ್ತು ಧಾರ್ಮಿಕ ವಲಯದಲ್ಲಿ ಛಾಪು ಮೂಡಿಸಿದ್ದು, ದೊಡ್ಡ ಮತ ಬ್ಯಾಂಕ್ ಹೊಂದಿದ್ದಾರೆ. ರೈತರ ಸಾಲ ಮನ್ನಾ ಹಾಗೂ ಮಾದಕದ್ರವ್ಯಗಳ ವಿರುದ್ಧದ ಹೋರಾಟ ಕಾಂಗ್ರೆಸ್ಗೆ ಲಾಭವಾಗಲಿದೆ. 13 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 8 ರಿಂದ 9 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.

–ಗೌತಮ್ ಧೀರ್

ಛತ್ತೀಸಗಡ: ಚಿತ್ರಣ ಅದಲು–ಬದಲು

ಕಳೆದ ಡಿಸೆಂಬರ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ಸಾಧ್ಯತೆ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 11 ಕ್ಷೇತ್ರಗಳಲ್ಲಿ ಕೇವಲ 1 ಸ್ಥಾನ ಪಡೆದಿದ್ದ ಕಾಂಗ್ರೆಸ್, ಈ ಬಾರಿ 6 ರಿಂದ 7 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.

ವಿಧಾನಸಭೆ ಚುನಾವಣೆಯಲ್ಲಿ 7 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗಿಂತಕಾಂಗ್ರೆಸ್ ಹೆಚ್ಚಿನ ಮತ ಪಡೆದಿತ್ತು. ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲೂ ಉತ್ತಮ ಸಾಧನೆ ಮಾಡಿತ್ತು. ನಗರ ಪ್ರದೇಶದಲ್ಲೂ ಉತ್ತಮ ಪ್ರದರ್ಶನ ತೋರುವ ಸಾಧ್ಯತೆ ಇದೆ.

–ರಾಕೇಶ್ ದೀಕ್ಷಿತ್

ಹರಿಯಾಣ: ಕಾಂಗ್ರೆಸ್ಗೆ ಲಾಭ

2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 1 ಹಾಗೂ ಐಎನ್ಎಲ್ಡಿ 2 ಸ್ಥಾನಗಳನ್ನು ಪಡೆದಿದ್ದವು. 1 ತಿಂಗಳ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲೂ ಗೆದ್ದು ಬೀಗಿದ್ದ ಬಿಜೆಪಿಯ ಆಡಳಿತ ಈಗ ಕುಸಿಯುತ್ತ ಸಾಗಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ.

ರಾಜ್ಯದಲ್ಲಿ ಪ್ರಾಬಲ್ಯ ಹೊಂದಿರುವ ಜಾಟ್ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ, ಜಾಟ್ ಸಮುದಾಯಕ್ಕೆ ಸೇರದ ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೂ ಸಚಿವರು ಹಾಗೂ ಪಕ್ಷದ ಸಂಸದರು ವಿರೋಧ ವ್ಯಕ್ತಪಡಿಸಿದ್ದರು.2016ರ ಜಾಟ್ ಆಂದೋಲನ ಸಂದರ್ಭದಲ್ಲಿ ಹಿಂಸಾಚಾರ ನಡೆಸಿದ ಆರೋಪಿಗಳ ವಿರುದ್ಧ ಕ್ರಮ ಕೈಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದ್ದಕ್ಕೆ ಇತರೆ ಸಮುದಾಯದವರು ಅತೃಪ್ತಗೊಂಡಿದ್ದಾರೆ.

ರಾಜ್ಯದಲ್ಲಿ ಅನೇಕ ಬಾರಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರೂ, ಬಿಜೆಪಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ವಿರೋಧ ಪಕ್ಷಗಳ ಸಾಧನೆ ಅಷ್ಟೇನೂ ಇಲ್ಲ. ಚೌಟಾಲಾ ನೇತೃತ್ವದ ಐಎನ್ಎಲ್ಡಿ ಪಕ್ಷ ಹೋಳಾಗಿದ್ದು, ಜಾಟ್ ಮತಗಳು ವಿಭಜನೆಯಾಗಲಿವೆ. ಕಾಂಗ್ರೆಸ್ ಆಂತರಿಕ ಕಲಹ ಎದುರಿಸುತ್ತಿದೆ. ಆದರೂ ಕಾಂಗ್ರೆಸ್ 4 ರಿಂದ 6 ಸ್ಥಾನಗಳನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.

–ಗೌತಮ್ ಧೀರ್

ದೆಹಲಿ:ಮೈತ್ರಿಯಾದರೆ ‘ಕಮಲ’ಕ್ಕೆ ಕಷ್ಟ

2014ರ ಲೋಕಸಭೆ ಚುನಾವಣೆಯಲ್ಲಿ ಶೇ 46.63 ರಷ್ಟು ಮತಗಳನ್ನು ಪಡೆಯುವ ಮೂಲಕ ದೆಹಲಿಯ 7 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಆದರೆ, ಮೋದಿ ಅಲೆ ಈ ಬಾರಿ ಇಲ್ಲ, ಹೀಗಿದ್ದರೂ ಬಿಜೆಪಿ ತನ್ನ ಫಲಿತಾಂಶವನ್ನು ಪುನರಾವರ್ತಿಸಬಹುದೇ? ಬಿಜೆಪಿಗೆ ಈ ಬಗ್ಗೆ ವಿಶ್ವಾಸವಿಲ್ಲ. ಆದರೆ,ತುಂಬಾ ಕೆಟ್ಟ ಸ್ಥಿತಿಯೇನೂ ಬರುವುದಿಲ್ಲ ಎಂಬ ಆಶಾಭಾವ ಹೊಂದಿದೆ.

ತನ್ನ ನಾಲ್ವರು ಸಂಸದರ ಜನಪ್ರಿಯತೆ ಉಳಿದಿಲ್ಲ ಎಂಬುದು ಬಿಜೆಪಿಗೆ ಆಂತರಿಕ ಸಮೀಕ್ಷೆಯಿಂದ ಗೊತ್ತಾಗಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಕಾಂಗ್ರೆಸ್ ಕೈಜೋಡಿಸಿದರೆಬಿಜೆಪಿಯನ್ನು ಸೋಲಿಸುವುದು ಸುಲಭ ಎಂಬುದು ಉಭಯ ಪಕ್ಷಗಳ ಹಿರಿಯ ನಾಯಕರಿಗೆ ಗೊತ್ತಿದೆ. ಆದರೆ, ಸ್ಥಳೀಯ ನಾಯಕರಿಗೆ ಮೈತ್ರಿ ಬೇಕಿಲ್ಲ. ಹಾಗಾಗಿ, ಎರಡೂ ಪಕ್ಷಗಳು ಬಿಜೆಪಿ ವಿರುದ್ಧ ಪ್ರತ್ಯೇಕವಾಗಿ ಸೆಣಸಬೇಕಿವೆ.

ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಲಾಭವಾಗುತ್ತದೆ. ಮೋದಿ ವಿರೋಧಿ ಮತಗಳು ವಿಭಜನೆಯಾಗುತ್ತವೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 2014ರಲ್ಲಿ ಶೇ 33.08 ರಷ್ಟು ಮತ ಪಡೆದಿದ್ದ ಎಎಪಿ, ಕನಿಷ್ಠ ಐದು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದೆ. ಆದರೆ, ಕಾಂಗ್ರೆಸ್ (2014ರಲ್ಲಿ ಶೇ 15.22 ಮತಗಳು ಪಡೆದಿತ್ತು) ಶೀಲಾ ದೀಕ್ಷಿತ್ ಅವರು ಮರಳಿದ ನಂತರವೂ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಿದೆ.

–ಶೆಮಿನ್ ಜಾಯ್

ಮಹಾರಾಷ್ಟ್ರ: ಎನ್ಡಿಎಗೂ–ಯುಪಿಎಗೂ ಸಮಪಾಲು

ಬಿಜೆಪಿ ಜತೆ ಮುನಿಸಿಕೊಂಡಿರುವ ಶಿವಸೇನಾ ಈ ಬಾರಿ ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸಲಿದ್ದು, ಕಾಂಗ್ರೆಸ್–ಎನ್ಸಿಪಿ ಮತ್ತೆ ಜತೆಯಾಗಿಯೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜತೆಯಾಗಿ ಕಣಕ್ಕಿಳಿದಿದ್ದ ಶಿವಸೇನಾ–ಬಿಜೆಪಿ ಮೈತ್ರಿಕೂಟ 40 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. 22 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 18 ಕ್ಷೇತ್ರಗಳಲ್ಲಿ ಶಿವಸೇನಾ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಕಾಂಗ್ರೆಸ್–ಎನ್ಸಿಪಿ ಮೈತ್ರಿಕೂಟ ಕೇವಲ 7 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು.

ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿ–ಶಿವಸೇನಾ ಮೈತ್ರಿ ಮುರಿದು ಬಿದ್ದಿತ್ತು. ಏಕಾಂಗಿಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಿದರೂ ಬಿಜೆಪಿ ಉತ್ತಮ ಸಾಧನೆ ತೋರಿದೆ.

ಬರಗಾಲ, ರೈತರಲ್ಲಿ ಮಡುಗಟ್ಟಿದ ಆಕ್ರೋಶ, ಬೆಲೆ ಹೆಚ್ಚಳ, ಉದ್ಯೋಗ ನಷ್ಟ ಈ ಬಾರಿ ಮಹಾರಾಷ್ಟ್ರದಲ್ಲಿ ಪ್ರಮುಖ ಚುನಾವಣಾ ವಿಷಯಗಳಾಗಲಿವೆ. ಇದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣ ವೀಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅಡಳಿತ ವಿರೋಧಿ ಅಲೆ ಈ ಬಾರಿ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಬಹುದು.

ಅಯೋಧ್ಯೆಯ ರಾಮಮಂದಿರ ವಿವಾದ ರಾಜ್ಯದಲ್ಲಿ ಪ್ರಭಾವ ಬೀರುವ ಸಾಧ್ಯತೆ ಕಡಿಮೆ. ಮೇಲ್ಜಾತಿ ಬಡವರಿಗೆ ಶೇ 10ರಷ್ಟು ಮೀಸಲಾತಿ ನೀಡುವ ನಿರ್ಧಾರ ಬಿಜೆಪಿಯ ನೆರವಿಗೆ ಬರಲಿದೆ. ಮರಾಠರಿಗೆ ಮೀಸಲಾತಿ ನೀಡಿದ ಮಹಾರಾಷ್ಟ್ರ ಸರ್ಕಾರದ ನಿರ್ಧಾರದಿಂದ ಮರಾಠ ಸಮುದಾಯ ಬಿಜೆಪಿ ಪರ ಒಲವು ಹೊಂದಿದೆ.

-ಮೃತ್ಯುಂಜಯ ಬೋಸ್

ಮಧ್ಯ ಪ್ರದೇಶ: ಕಾಂಗ್ರೆಸ್ ಮಧುಚಂದ್ರ ಮುಗಿದಿಲ್ಲ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ತೇಲಿ ದೆಹಲಿ ಗದ್ದುಗೆ ಏರಿದ್ದ ಬಿಜೆಪಿ ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಉಳಿದ ಎರಡು ಸ್ಥಾನ ಕಾಂಗ್ರೆಸ್ ಪಾಲಾಗಿದ್ದವು. ಬಿಜೆಪಿ ಶೇ 54ರಷ್ಟು ಮತಗಳಿಸಿದರೆ, ಕಾಂಗ್ರೆಸ್ ಶೇ 34ರಷ್ಟು ಮತಗಳಿಸಿತ್ತು.

ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸಿದೆ. 18 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. 11 ಕ್ಷೇತ್ರಗಳಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಪಕ್ಷದ ಜತೆ ಮತದಾರರ ರಾಜಕೀಯ ಮಧುಚಂದ್ರ ಲೋಕಸಭಾ ಚುನಾವಣೆವರೆಗೂ ಮುಂದುವರಿಯುವ ಬಗ್ಗೆ ಯಾವುದೇ ಅನುಮಾನ ಉಳಿದಿಲ್ಲ. ಕಾಂಗ್ರೆಸ್ 18–22 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ 7–11 ಸ್ಥಾನಗಳಿಗೆ ಸೀಮಿತವಾಗಲಿದೆ.

-ರಾಕೇಶ್ ದೀಕ್ಷಿತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.