ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

NEET | ಕೆಲವು ಅಕ್ರಮಗಳು ಬೆಳಕಿಗೆ ಬಂದಿವೆ: ಧರ್ಮೇಂದ್ರ ಪ್ರಧಾನ್

Published 16 ಜೂನ್ 2024, 12:09 IST
Last Updated 16 ಜೂನ್ 2024, 12:09 IST
ಅಕ್ಷರ ಗಾತ್ರ

ನವದೆಹಲಿ: ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ ಹೇಳಿದ್ದಾರೆ.

ಸುದ್ದಿಸಂಸ್ಥೆ 'ಎಎನ್‌ಐ ಜೊತೆ ಮಾತನಾಡಿದ ಅವರು, 'ಸುಪ್ರೀಂ ಕೋರ್ಟ್‌ನ ಶಿಫಾರಸಿನ ಮೇರೆಗೆ 1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಆದೇಶ ನೀಡಲಾಗಿದೆ. ಎರಡು ಸ್ಥಳಗಳಲ್ಲಿ ಕೆಲವು ಅಕ್ರಮಗಳು ಬೆಳಕಿಗೆ ಬಂದಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ' ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಭರವಸೆ ನೀಡಿದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್‌ಟಿಎ) ಸುಧಾರಣೆಯ ಅಗತ್ಯವಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ್‌ ಎಚ್ಚರಿಕೆ ನೀಡಿದರು.

ಪ್ರಕರಣದ ಹಿನ್ನೆಲೆ:

ಮೇ 5ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್‌ ಪರೀಕ್ಷೆ ನಡೆದಿತ್ತು. ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್‌ 14ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇತ್ತು. ಆದರೆ ಎನ್‌ಟಿಎ ಜೂನ್‌ 4ರಂದೇ ಫಲಿತಾಂಶ ಪ್ರಕಟಿಸಿತ್ತು.

ಹರಿಯಾಣದ ಫರೀದಾಬಾದ್‌ನ ಕೇಂದ್ರದ ಆರು ಮಂದಿ ಸೇರಿ, ದೇಶದಾದ್ಯಂತ 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದು ಅಗ್ರ ಸ್ಥಾನ ಹಂಚಿಕೊಂಡಿದ್ದರು. ಕೆಲ ಅಭ್ಯರ್ಥಿಗಳಿಗೆ ಕೃಪಾಂಕವನ್ನು ಎನ್‌ಟಿಎ ನೀಡಿದ್ದು ಮತ್ತು ಒಂದೇ ಕೇಂದ್ರದ ಕೆಲವರು ಗರಿಷ್ಠ ಅಂಕಗಳನ್ನು ಗಳಿಸಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT