ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಕ್ಷೇಪಾರ್ಹ ಹೇಳಿಕೆ | ನ್ಯಾ. ಶ್ರೀಶಾನಂದ ವಿಚಾರಣೆ ಮುಕ್ತಾಯಗೊಳಿಸಿದ SC

Published : 25 ಸೆಪ್ಟೆಂಬರ್ 2024, 7:14 IST
Last Updated : 25 ಸೆಪ್ಟೆಂಬರ್ 2024, 7:14 IST
ಫಾಲೋ ಮಾಡಿ
Comments

ನವದೆಹಲಿ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ.

ವಿ.ಶ್ರೀಶಾನಂದ ಅವರು ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದಾರೆ ಎಂಬ ಅಂಶ ಗಮನಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ಚದ ಐವರು ನ್ಯಾಯಮೂರ್ತಿಗಳ ಪೀಠವು ಈ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತು.

ನ್ಯಾಯಮೂರ್ತಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ವಕೀಲರು ಹಾಗೂ ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಪೂರ್ವಾಗ್ರಹಗಳನ್ನು ವಿಚಾರಣೆ ಸಂದರ್ಭದಲ್ಲಿ ತೋರ್ಪಡಿಸಬಾರದು. ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಇಂತಹ ಹೇಳಿಕೆಗಳು ವೇಗವಾಗಿ ಹರಡುತ್ತವೆ’ ಎಂದು ಹೇಳಿತು.

ಏನಿದು ಪ್ರಕರಣ?: ನ್ಯಾಯಮೂರ್ತಿ ಶ್ರೀಶಾನಂದ ಅವರು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ, ‘ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನ ದಂತಿದೆ’ ಎಂದು ಬಣ್ಣಿಸಿದ್ದರು. ವಕೀಲೆಯೊಬ್ಬರಿಗೆ, ‘ನಿಮ್ಮ ಪ್ರತಿವಾದಿ ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂಬುದನ್ನೂ ನೀವು ಹೇಳಬಲ್ಲಷ್ಟು ಅವರನ್ನು ಅರಿತಿದ್ದೀರಿ’ ಎಂದು ವ್ಯಂಗ್ಯವಾಡಿದ್ದರು.

ಈ ಮೌಖಿಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ವಿಡಿಯೊ ತುಣುಕನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ‘ಈ ನ್ಯಾಯಮೂರ್ತಿಗೆ ಲಿಂಗ ಸಂವೇದನಾ ತರಬೇತಿ ನೀಡುವ ಅಗತ್ಯವಿದೆ’ ಎಂದಿದ್ದರು.

ನ್ಯಾ. ಶ್ರೀಶಾನಂದ ವಿಷಾದ

ಬೆಂಗಳೂರು: ‘ನನ್ನ ಆಕ್ಷೇಪಾರ್ಹ ಹೇಳಿಕೆಗಳು ಯಾರಿಗಾದರೂ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದ್ದರು.

ಹೈಕೋರ್ಟ್‌ನ 23ನೇ ಕೋರ್ಟ್‌ ಹಾಲ್‌ನಲ್ಲಿ ಶನಿವಾರ ಮಧ್ಯಾಹ್ನ 2.30ಕ್ಕೆ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರ ಎದುರು ಮುಕ್ತ ನ್ಯಾಯಾಲಯದಲ್ಲಿ ಈ ಕುರಿತಂತೆ ವಿವರಿಸಿದ ಅವರು ವಿಷಾದ ವ್ಯಕ್ತಪಡಿಸಿದ್ದರು.

ಈ ವೇಳೆ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಎಂ.ಟಿ.ಹರೀಶ್‌ ಮತ್ತು ಹೈಕೋರ್ಟ್‌ ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹಾಗೂ ವಕೀಲರು ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT