ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತ ಯುವಕನಿಗೆ B.Tech ಕೋರ್ಸ್‌: ದಾಖಲಿಸಿಕೊಳ್ಳಲು IIT ಧನಬಾದ್‌ಗೆ SC ನಿರ್ದೇಶನ

Published : 30 ಸೆಪ್ಟೆಂಬರ್ 2024, 15:03 IST
Last Updated : 30 ಸೆಪ್ಟೆಂಬರ್ 2024, 15:03 IST
ಫಾಲೋ ಮಾಡಿ
Comments

ನವದೆಹಲಿ: ಕಾಲಮಿತಿಯೊಳಗೆ ಶುಲ್ಕ ಕಟ್ಟಲು ವಿಫಲನಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದ ಯುವಕನಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಬಿ.ಟೆಕ್. ಪದವಿಗೆ ದಾಖಲಿಸಿಕೊಳ್ಳುವಂತೆ ಐಐಟಿ ಧನಬಾಗ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಮುಝಫರ್‌ನಗರದ ಖತೌಲಿ ಗ್ರಾಮದ ಅತುಲ್ ಕುಮಾರ್ ಎಂಬುವವರಿಗೆ ಐಐಟಿ ಧನಬಾದ್‌ನಲ್ಲಿ ಬಿ.ಟೆಕ್. ಕೋರ್ಸ್‌ಗೆ ಸೀಟು ಲಭ್ಯವಾಗಿತ್ತು. ಆದರೆ ಹಣದ ಅಭಾವದಿಂದ ಅವರಿಗೆ ಕಾಲಮಿತಿಯೊಳಗೆ ಕಾಲೇಜಿಗೆ ಶುಲ್ಕ ಭರಿಸಲು ಸಾಧ್ಯವಾಗಿರಲಿಲ್ಲ. ಕೊನೆಯ ದಿನವಾದ ಜೂನ್ 24ರಂದು ಸಂಜೆ 4.45ರ ಹೊತ್ತಿಗೆ ಗ್ರಾಮಸ್ಥರಿಂದ ₹17,500 ಸಂಗ್ರಹಿಸಿದ್ದರು. ಆದರೆ ಸಂಜೆ 5ರೊಳಗೆ ಆನ್‌ಲೈನ್ ಮೂಲಕ ಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ಇವರ ಪರ ವಕೀಲ ಅತುಲ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು.

ಪರಿಶಿಷ್ಟ ಜಾತಿ ಕೋಟಾದಲ್ಲಿ ವಿದ್ಯಾರ್ಥಿಯು ಜೆಇಇ ಪರೀಕ್ಷೆಯನ್ನು 1,455 ರ್‍ಯಾಂಕ್‌ನೊಂದಿಗೆ ಪಾಸು ಮಾಡಿದ್ದ. ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಯುವಕನಿಗೆ ಧನಬಾದ್‌ನ ಐಐಟಿಯಲ್ಲಿ ಸೀಟು ಕೂಡ ದೊರಕಿತ್ತು.

ಸೀಟು ದೊರಕಿಸಿಕೊಡುವಂತೆ ಪೋಷಕರು ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗವನ್ನು, ಜಾರ್ಖಂಡ್‌ ಕಾನೂನು ಸೇವಾ ಪ್ರಾಧಿಕಾರವನ್ನು ಹಾಗೂ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲನ್ನೂ ಹತ್ತಿದ್ದರು. ಜೆಇಇ ಪರೀಕ್ಷೆಯನ್ನು ಅತುಲ್‌ ಜಾರ್ಖಂಡ್‌ನಲ್ಲಿ ಬರೆದಿದ್ದ. ಈ ಪರೀಕ್ಷೆಯನ್ನು ಐಐಟಿ ಮದ್ರಾಸ್‌ ನಡೆಸಿತ್ತು. ಆದ್ದರಿಂದಲೇ ಪೋಷಕರು ಮದ್ರಾಸ್‌ ಮೆಟ್ಟಿಲೇರಿದ್ದರು. ಆದರೆ, ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗವು, ‘ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ’ ಎಂದಿತು. ನಂತರ, ಸುಪ್ರೀಂ ಕೋರ್ಟ್‌ ಮೊರೆ ಹೋಗುವಂತೆ ಮದ್ರಾಸ್‌ ಹೈಕೋರ್ಟ್ ಸೂಚಿಸಿತ್ತು.

ಆಕಾಂಕ್ಷಿಯ ಆರ್ಥಿಕ ಮತ್ತು ಸಾಮಾಜಿಕ ಪರಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅರ್ಜಿದಾರರ ಹಿರಿಯ ಸೋದರ ಐಐಟಿ ಖರಗ್‌ಪುರ ಹಾಗೂ ಎನ್‌ಐಟಿ ಹಮೀರ್‌ಪುರದ ವಿದ್ಯಾರ್ಥಿ ಎಂಬುದನ್ನೂ ಗಮನಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿತು. ಜತೆಗೆ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ತನ್ನ 2ನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಉತ್ತಮ ಅಂಕ ಗಳಿಸಿರುವುದನ್ನೂ ನ್ಯಾಯಾಲಯ ಪರಿಗಣಿಸಿತು. 

ಅಂತಿಮವಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಸಂವಿಧಾನದ 142ನೇ ವಿಧಿ ಅಡಿಯಲ್ಲಿ ವಿಶೇಷಾಧಿಕಾರ ಬಳಸಿ, ಅರ್ಜಿದಾರರಿಗೆ ಶುಲ್ಕ ಭರಿಸಲು ಅವಕಾಶ ನೀಡಿ ಕೋರ್ಸ್‌ಗೆ ಸೇರಿಸಿಕೊಳ್ಳುವಂತೆ ಐಐಟಿ ಧನಬಾಗ್‌ಗೆ ನಿರ್ದೇಶಿಸಿತು. 

ಚೆನ್ನಾಗಿ ಓದು: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌

ಅರ್ಜಿ ಸಂಬಂಧ ಆದೇಶ ನೀಡಿದ ಬಳಿಕ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಯುವಕ ಅತುಲ್‌ನನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಆತನೊಂದಿಗೆ ಮಾತುಕತೆ ನಡೆಸಿದರು. ಬಳಿಕ ‘ಆಲ್‌ ದಿ ಬೆಸ್ಟ್‌ ಚೆನ್ನಾಗಿ ಓದು’ ಎಂದು ಹೇಳಿದರು.

‘ವಕೀಲರ ಸಂಘವು ಯುವಕನ ಕಾಲೇಜು ಶುಲ್ಕವನ್ನು ಭರಿಸಲು ಸಿದ್ಧವಿದೆ ಎಂದು ತಿಳಿಸಿದೆ. ಹಿರಿಯ ವಕೀಲ ಆನಂದ್‌ ಪದ್ಮನಾಭನ್‌ ಹಾಗೂ ಸಂಘದ ಇತರ ಹಿರಿಯ ಸದಸ್ಯರೂ ಶುಲ್ಕ ಭರಿಸುವುದಾಗಿ ಹೇಳಿದ್ದಾರೆ’ ಎಂದು ವಾದ ಮಂಡಿಸುವ ವೇಳೆ ಯುವಕನ ತಂದೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಯಾವುದದು ವಿಶೇಷಾಧಿಕಾರ?

ತನ್ನ ಮುಂದಿರುವ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನ್ಯಾಯ ಒದಗಿಸಲು  ಸಂವಿಧಾನದ 142ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ ಯಾವುದೇ ತೀರ್ಪು ಹಾಗೂ ಆದೇಶವನ್ನೂ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT