ನ್ಯಾಕ್ 30ನೇ ವರ್ಷಾಚರಣೆ ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿ ಭಾಷೆಯಲ್ಲಿ ನಡೆಸಿಕೊಡಲಾಯಿತು. ನ್ಯಾಕ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಅವರು ಹಿಂದಿಯಲ್ಲೇ ಭಾಷಣ ಮಾಡಿದರು. ಅವರ ನಂತರ ಅತಿಥಿ ಭಾಷಣ ಮಾಡಿದ ಎಸ್–ವ್ಯಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎಚ್.ಆರ್.ನಾಗೇಂದ್ರ ಗುರೂಜಿ ಸಹ ಹಿಂದಿಯಲ್ಲೇ ಮಾತನಾಡಿದರು. ನ್ಯಾಕ್‌ನಲ್ಲಿ 25 ವರ್ಷಕ್ಕಿಂತ ಹೆಚ್ಚು ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ನೌಕರರನ್ನು ಸನ್ಮಾನಿಸುವ ವೇಳೆಯೂ ಹಿಂದಿಯಲ್ಲೇ ಅವರ ಪರಿಚಯ ಮಾಡಿಕೊಡಲಾಯಿತು. ಆದರೆ ಅತಿಥಿ ಎಂ.ಕೆ.ಶ್ರೀಧರ್ ಅವರು ಕನ್ನಡದಲ್ಲಿ ಮಾತು ಆರಂಭಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನ್ಯಾಕ್‌ನ ನೌಕರರು ತಕ್ಷಣವೇ ಜೋರಾಗಿ ಚಪ್ಪಾಳೆ ತಟ್ಟಿ ಶ್ರೀಧರ್ ಅವರನ್ನು ಅಭಿನಂದಿಸಿದರು.