ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಕಿಡಿ

ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದರೆ ಏನರ್ಥ?
Published : 21 ಸೆಪ್ಟೆಂಬರ್ 2024, 0:19 IST
Last Updated : 21 ಸೆಪ್ಟೆಂಬರ್ 2024, 0:19 IST
ಫಾಲೋ ಮಾಡಿ
Comments

ಬೆಂಗಳೂರು: ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೀಡಿದ್ದ ಹೇಳಿಕೆಗೆ ಹೈಕೋರ್ಟ್‌ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

‘ನನ್ನ ವಿರುದ್ಧ ಸಚಿವ ದಿನೇಶ್‌ ಗುಂಡೂರಾವ್‌ ಪತ್ನಿ ತಬಸ್ಸುಮ್‌ ದಿನೇಶ್‌ ರಾವ್‌ ದಾಖಲಿಸಿರುವ ಮಾನಹಾನಿ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ‘ನಿರ್ದಿಷ್ಟ ಸಮುದಾಯವನ್ನು ಈ ರೀತಿ ವ್ಯಾಖ್ಯಾನಿಸಲಾಗದು. ಈ ರೀತಿ ಮಾಡುವುದಿಂದ ನಿಮಗೇನು ಸಿಗುತ್ತದೆ’ ಎಂದು ಯತ್ನಾಳ್‌ ಅವರನ್ನು ಖಾರವಾಗಿ ಪ್ರಶ್ನಿಸಿದೆ.

ವಿಚಾರಣೆ ವೇಳೆ ನ್ಯಾಯಪೀಠ, ‘ನಿಮಗೆ (ಯತ್ನಾಳ್) ಇದೆಲ್ಲಾ ಯಾಕೆ ಬೇಕು? ನಿಮ್ಮ ತಲೆಗೆ ತೋಚಿದ್ದನ್ನೆಲ್ಲಾ ಮಾತನಾಡುತ್ತೀರಲ್ಲ. ಅರ್ಧ ಪಾಕಿಸ್ತಾನ ಎಂದರೆ ಏನರ್ಥ? ನೀವೇಕೆ ಈ ರೀತಿ ಹೇಳಿದ್ದೀರಿ? ಪ್ರತಿ ಬಾರಿಯೂ ಪ್ರತಿ ಪ್ರಕರಣದಲ್ಲೂ ನಾನು ಹೇಳುತ್ತಲೇ ಇದ್ದೇನೆ. ಈ ರೀತಿ ಪರಸ್ಪರ ಕೆಸರು ಎರಚುವುದು ನಿಲ್ಲಬೇಕು’ ಎಂದು ಯತ್ನಾಳ್ ಪರ ವಕೀಲ ವೆಂಕಟೇಶ್ ಪಿ.ದಳವಾಯಿ ಅವರಿಗೆ ತಾಕೀತು ಮಾಡಿತು.

‘ಯಾರದೋ ಪತ್ನಿ ಮುಸ್ಲಿಂ ಎಂದ ಮಾತ್ರಕ್ಕೆ ಅದನ್ನು ಅರ್ಧ ಪಾಕಿಸ್ತಾನ ಎನ್ನಬಹುದೇ? ಏನದು? ಇದು ಮಾತನಾಡುವ ರೀತಿಯಲ್ಲ.ಯಾಕೆ ನೀವು ಇಂತಹ ವೈಯಕ್ತಿಕ ಹೇಳಿಕೆ ನೀಡುತ್ತೀರಿ? ನಾನು ಈ ಪ್ರಕರಣಕ್ಕೆ ತಡೆ ನೀಡುವುದಿಲ್ಲ’ ಎಂದು‌ ನ್ಯಾಯಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.

ತಬಸ್ಸುಮ್‌ ದಿನೇಶ್‌ ರಾವ್‌ ಪರ ಹಾಜರಿದ್ದ ವಕೀಲರಾದ ಎಸ್‌.ಎ.ಅಹಮದ್‌ ಹಾಗೂ ಸೂರ್ಯ ಮುಕುಂದರಾಜ್ ಅವರು, ‘ನಮ್ಮ ಕಕ್ಷಿದಾರರು ರಾಜಕೀಯದಲ್ಲಿ ಇಲ್ಲ. ಆದರೂ, ಈ ರೀತಿಯ ಹೇಳಿಕೆ ನೀಡಲಾಗಿದೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ವೆಂಕಟೇಶ್‌ ಪಿ.ದಳವಾಯಿ, ’ದಿನೇಶ್‌ ಗುಂಡೂರಾವ್ ಅವರ ಹೇಳಿಕೆಗೆ ಯತ್ನಾಳ್‌ ಪ್ರತಿಕ್ರಿಯಿಸಿದ್ದಾರೆ ಅಷ್ಟೇ. ಮರುದಿನವೇ ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಅಂತಹ ಹೇಳಿಕೆ ನೀಡಿಲ್ಲ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ನ್ಯಾಯಪೀಠ, ‘ಪ್ರಕರಣಕ್ಕೆ ತಡೆ ನೀಡುವುದಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 200ರ ಅಡಿ ಯಾವುದೇ ಆರೋಪ ಪರಿಗಣನಾರ್ಹ ಅಪರಾಧ ಎಂಬ ತೀರ್ಮಾನಕ್ಕೆ ಬರುವ ಮುನ್ನ ಆರೋಪಿಯ ಹೇಳಿಕೆಯನ್ನೂ ಕೇಳಬೇಕು. ಈ ಕಾನೂನು ಅಂಶದ ಪ್ರಕ್ರಿಯಾ ಲೋಪ ಇಲ್ಲಿ ಕಾಣುತ್ತಿದೆ. ಆದ್ದರಿಂದ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೇ ಮರಳಿಸಲಾಗುವುದು’ ಎಂದು ಸೂಚಿಸಿ ವಿಚಾರಣೆ ಮುಂದೂಡಿತು. ಇದೇ ವೇಳೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಅಹ್ಮದ್‌ ಅವರಿಗೆ ನಿರ್ದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT