ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ ಮರೆಮಾಚಲು ಜಾತಿಗಣತಿ: ಕುಮಾರಸ್ವಾಮಿ

Published : 7 ಅಕ್ಟೋಬರ್ 2024, 15:19 IST
Last Updated : 7 ಅಕ್ಟೋಬರ್ 2024, 15:19 IST
ಫಾಲೋ ಮಾಡಿ
Comments

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದ ಗಮನವನ್ನು ಬೇರೆಡೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದು ನಾಟಕ ಮಾಡುತ್ತಿದ್ದಾರೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಾಗಲೆಲ್ಲ ಜನರ ಗಮನ ಬೇರೆಡೆಗೆ ಹೊರಳಿಸಲು ಇಂತಹದೇ ತಂತ್ರಗಾರಿಕೆ ಮಾಡುತ್ತಾರೆ. ಎಲ್ಲರನ್ನೂ ದಾರಿ ತಪ್ಪಿಸುತ್ತಾರೆ ಎಂದು ದೂರಿದರು.

‘ಕಾಂತರಾಜು ಆಯೋಗ ರಚನೆ ಮಾಡಿದ್ದು 10 ವರ್ಷಗಳ ಹಿಂದೆ. ಒಂದು ದಶಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಜಾತಿಗಣತಿಯಿಂದ ಯಾವ ಸಮುದಾಯಕ್ಕೂ ಅನುಕೂಲ ಆಗುವುದಿಲ್ಲ. ಇಷ್ಟು ವರ್ಷಗಳು ಏಕೆ ಸುಮ್ಮನಿದ್ದರು. ಲೋಕಸಭಾ ಚುನಾವಣೆಗೂ ಮೊದಲೇ ವರದಿ ಸ್ವೀಕರಿಸಲಾಗಿತ್ತು. ಆಗ ಏಕೆ ಕ್ರಮಕೈಗೊಳ್ಳಲಿಲ್ಲ’ ಎಂದು ಪ್ರಶ್ನಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲಿಲ್ಲ ಎಂದು ಕಾಂಗ್ರೆಸ್‌ ನಾಯಕರು ಆರೋಪ  ಮಾಡುತ್ತಾರೆ. ಜಾತಿಗಣತಿ ವರದಿ ಜಾರಿ ಮಾಡದಂತೆ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡವರು ಯಾರು? ಇಷ್ಟು ದಿನ ಸುಮ್ಮನಿದ್ದು, ಈಗ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ, ಜಾತಿ ಗಣತಿ ಇಟ್ಟುಕೊಂಡು ಚುನಾವಣೆ ಎದುರಿಸಲಿ’ ಎಂದು ಸವಾಲು ಹಾಕಿದರು.

ಜಾತಿಗಣತಿ ಕುರಿತು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ದೆಹಲಿಯಲ್ಲಿ ಒಂದು ಹೇಳುತ್ತಾರೆ. ಇಲ್ಲಿ ಇವರದೇ ಪಕ್ಷದ ನಾಯಕರು ಇನ್ನೊಂದು ಹೇಳುತ್ತಾರೆ. ರಾಜ್ಯದ ಅಭಿವೃದ್ಧಿ ಕುರಿತು ಒಬ್ಬರೂ ಮಾತನಾಡುವುದಿಲ್ಲ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT