ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Channapatna Bypoll | ಜೆಡಿಎಸ್‌ ಜತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ: ವಿಜಯೇಂದ್ರ

Published 21 ಜೂನ್ 2024, 6:14 IST
Last Updated 21 ಜೂನ್ 2024, 6:14 IST
ಅಕ್ಷರ ಗಾತ್ರ

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರು ಆಗಬೇಕು ಎಂಬುದನ್ನು ಜೆಡಿಎಸ್‌ ನಾಯಕ ಜತೆ ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಪಕ್ಷದ ಕಚೇರಿ ಆವರಣದಲ್ಲಿ ಯೋಗ ದಿನಾಚರಣೆ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಗಾಗಲೇ ಶಾಸಕರೂ ಆಗಿದ್ದಾರೆ. ಆದರೂ ಚನ್ನಪಟ್ಟಣದಿಂದ ಸ್ಪರ್ಧಿಸಲು ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅದು ಅವರ ಪಕ್ಷದ ತೀರ್ಮಾನ. ಆದರೆ, ಜನರ ಮನಸ್ಸಿನಲ್ಲಿ ಏನಿದೆ ಎನ್ನುವುದು ಇನ್ನೂ ನಿಗೂಢ. ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮನ್ನು ಸೋಲಿಸುವವರೇ ಇಲ್ಲ ಅಂತ ಅಂದುಕೊಂಡಿದ್ದರು. ಜನರ ತೀರ್ಪು ಏನು ಅನ್ನುವುದು ಎಲ್ಲರೂ ನೋಡಿದ್ದಾರೆ ಎಂದು ಅವರು ತಿಳಿಸಿದರು.

ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕಾರಣ ಎಂಬ ಶಾಸಕ ಬಿ.ಪಿ.ಹರೀಶ್‌ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಹಿರಂಗವಾಗಿ ಹೇಳಿಕೆ ಕೊಡುವುದರಿಂದ  ಸಮಸ್ಯೆ ಬಗೆಹರಿಯುತ್ತದೆ ಎನ್ನುವುದಾದರೆ ಹೇಳಲಿ, ನಮ್ಮ ತಕರಾರಿಲ್ಲ. ಒಂದು ವಿಚಾರ ತಿಳಿದುಕೊಳ್ಳಬೇಕು ಈ ರೀತಿ ಹೇಳಿಕೆಗಳನ್ನು ಕೊಡುವುದರಿಂದ ಪಕ್ಷಕ್ಕೂ ಲಾಭ ಆಗುವುದಿಲ್ಲ. ಸಂಘಟನೆಗೂ ಲಾಭ ಆಗುತ್ತಿಲ್ಲ ಎಂದರು.

ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಾಳೆ 19 ಸಂಸದರಿಗೆ ಸನ್ಮಾನ:

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಗೆದ್ದ 19 ಸಂಸದರನ್ನು ಶನಿವಾರ ಅರಮನೆ ಮೈದಾನದಲ್ಲಿ ಸನ್ಮಾನ ಮತ್ತು ಕೇಂದ್ರ ಸಚಿವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯೇಂದ್ರ ಹೇಳಿದರು.

ಮೇಲುಸ್ತುವಾರಿಗೆ ವಿದೇಶಿ ಕಂಪನಿ:

‘ರಾಜ್ಯದಲ್ಲಿ ಹೆಚ್ಚು ಹಣ ಸಂಗ್ರಹಿಸುವ ಉದ್ದೇಶದಿಂದ ವಿದೇಶಿ ಮೂಲದ ಸಲಹಾ ಕಂಪನಿಯನ್ನು ನೇಮಕ ಮಾಡಿಕೊಂಡಿರುವುದು ಅಚ್ಚರಿಯ ಸಂಗತಿ. ಮುಖ್ಯಮಂತ್ರಿಯವರ ಸುತ್ತಮುತ್ತ ತಜ್ಞ ಅಧಿಕಾರಿಗಳು ಮತ್ತು ಸಲಹೆಗಾರರೇ ತುಂಬಿಕೊಂಡಿರುವಾಗ ವಿದೇಶಿ ಕಂಪನಿಯನ್ನು ಆಯ್ಕೆ ಮಾಡುವ ಅಗತ್ಯ ಏನಿತ್ತು? ಕಳೆದ ಒಂದು ವರ್ಷದಲ್ಲಿ ಸಿದ್ದರಾಮಯ್ಯ ಎಲ್ಲ ರಂಗಗಳಲ್ಲೂ ವಿಫಲರಾಗಿರುವುದೇ ಇದಕ್ಕೆ ನಿದರ್ಶನ. ರಾಜ್ಯದ ಅಭಿವೃದ್ಧಿಯೂ ಆಗುತ್ತಿಲ್ಲ. ಹೂಡಿಕೆಯೂ ಬರುತ್ತಿಲ್ಲ’ ಎಂದು ಅವರು ಹೇಳಿದರು.

‘ನಮ್ಮ ರಾಜ್ಯದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಆದರೆ, ಸೂಕ್ತ ವ್ಯಕ್ತಿಗಳನ್ನು ಏಕೆ ಗುರುತಿಸಲಿಲ್ಲ? ಹಲವು ಹಿರಿಯ ಐಎಎಸ್ ಅಧಿಕಾರಿಗಳು ಇದ್ದಾರೆ. ಯಡಿಯೂರಪ್ಪ, ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಎಲ್ಲಾ ರಂಗಗಳಲ್ಲೂ ಮುಂದಿತ್ತು’ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT