ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ವ ಪ್ರಾಥಮಿಕಕ್ಕೆ ಒತ್ತು; ಅಂಗನವಾಡಿಗೆ ಕುತ್ತು?

ಸರ್ಕಾರದ ನಿರ್ಧಾರದಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆ
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ, ಯುಕೆಜಿ) ಆರಂಭಿಸಿದ ನಂತರ ಆ ಭಾಗದ ಬಹುತೇಕ ಅಂಗನವಾಡಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವರ್ಷ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಪ್ರಸ್ತುತ ರಾಜ್ಯದಲ್ಲಿನ ಪೂರ್ವ ಪ್ರಾಥಮಿಕ ಶಾಲೆಗಳ ಸಂಖ್ಯೆ ಎರಡು ಸಾವಿರ ದಾಟಿದೆ.  

ಸರ್ಕಾರದ ನಿರ್ಧಾರ ಅಂಗನವಾಡಿಗಳ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ರಾಷ್ಟ್ರೀಯ ಮಕ್ಕಳ ಶಿಕ್ಷಣ ನೀತಿ–1975ರ ಭಾಗವಾಗಿ ಜಾರಿಗೊಳಿಸಲಾಗಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ಆರು ವರ್ಷದ ಒಳಗಿನ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕ ಆಹಾರ ನೀಡುವ ಜತೆಗೆ, ಪೂರ್ವ ಪ್ರಾಥಮಿಕ ಶಿಕ್ಷಣದ ಖಾತ್ರಿಯನ್ನೂ ದಶಕಗಳ ಕಾಲ ಒದಗಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಕಡಿಮೆ ಗೌರವ ಸಂಭಾವನೆ ಪಡೆದರೂ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಪ್ರಾಥಮಿಕ ಶಾಲೆಗಳಲ್ಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು 2016ರಲ್ಲೇ ಯೋಜನೆ ರೂಪಿಸಲಾಗಿತ್ತು. ಪ್ರತಿ ವರ್ಷ ಆಯ್ದ 20–25 ಶಾಲೆಗಳಿಗೆ ಅವಕಾಶ ನೀಡುತ್ತಾ ಬರಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಲು ರಚಿಸಲಾಗಿದ್ದ ಸಮಿತಿಯು ನೀಡಿದ್ದ ವರದಿಯಂತೆ 2023ರ ಮಾರ್ಚ್‌ವರೆಗೆ ರಾಜ್ಯದಲ್ಲಿ 908 ಪೂರ್ವ ಪ್ರಾಥಮಿಕ ಶಾಲೆಗಳಿದ್ದವು. 14,737 ಮಕ್ಕಳು ದಾಖಲಾಗಿದ್ದರು. 

ಯಾವ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಶಿಕ್ಷಣ ತರಗತಿಗಳನ್ನು ಆರಂಭಿಸಲಾಗಿದೆಯೋ ಆ ಭಾಗಗಳಲ್ಲಿನ ಅಂಗನವಾಡಿಗಳ ಮಕ್ಕಳ ಸಂಖ್ಯೆ 10ರ ಒಳಗಿರುವುದನ್ನೂ ಎನ್‌ಇಪಿ ಸಮಿತಿ ಬಹಿರಂಗಪಡಿಸಿತ್ತು. ಅಂಗನವಾಡಿಗಳನ್ನೂ ಒಳಗೊಂಡು ಎರಡನೇ ತರಗತಿಯವರೆಗಿನ ಶಿಕ್ಷಣವನ್ನು ಬುನಾದಿ ಶಿಕ್ಷಣ ಎಂದು ಪುನರ್‌ ವಿಭಜಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ತರಬೇತಿ ನೀಡಿ, ಶಿಕ್ಷಕಿಯರ ಸ್ಥಾನ ನೀಡಲು ಶಿಫಾರಸು ಮಾಡಲಾಗಿತ್ತು. 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರಿಗೆ ಮೊದಲ ಹಂತದ ತರಬೇತಿಯನ್ನೂ ನೀಡಲಾಗಿತ್ತು. ಈಗ ಎನ್‌ಇಪಿ ಜತೆಗೆ ಶಿಫಾರಸುಗಳೂ ನನೆಗುದಿಗೆ ಬಿದ್ದಿವೆ.  

‘ಪದವಿ, ಸ್ನಾತಕೋತ್ತರ ಪದವಿ ಪಡೆದ 23,263 ಕಾರ್ಯಕರ್ತೆಯರು ಅಂಗನವಾಡಿಗಳಲ್ಲಿ ಇದ್ದಾರೆ. ಅವರಿಗೆ ಅಗತ್ಯ ತರಬೇತಿ ನೀಡಬೇಕು. ಶಿಕ್ಷಕಿಯರ ಸ್ಥಾನ ನೀಡಿ, ಗೌರವಧನ ಹೆಚ್ಚಿಸಬೇಕು.  ಅಂಗನವಾಡಿಗಳನ್ನು ಖಾಸಗಿ ಎಲ್‌ಕೆಜಿ, ಯುಕೆಜಿ ಮಾದರಿಯಲ್ಲಿ ಬಲಪಡಿಸಬೇಕು. ಪ್ರತಿ ವರ್ಷ ಶೀಶು ಅಭಿವೃದ್ಧಿ ಯೋಜನೆಗೆ ನೀಡುತ್ತಿರುವ ₹4,500 ಕೋಟಿ ಹಣ ಬುನಾದಿ ಶಿಕ್ಷಣ ಬಲಪಡಿಸಲು ಬಳಸಿಕೊಳ್ಳಬೇಕು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ.  

ಕಲ್ಯಾಣ ಕರ್ನಾಟಕದಲ್ಲಿ ಸಾವಿರ ಶಾಲೆ

2024–25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1,008 ಶಾಲೆಗಳಿಗೆ ಅನುಮತಿ ನೀಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ₹7.56 ಕೋಟಿ ಅನುದಾನ ಬಳಿಸಿಕೊಂಡು ಅಗತ್ಯ ಪರಿಕರ, ಮೂಲಸೌಕರ್ಯ ಕಲ್ಪಿಸಬೇಕು. ಶಾಲೆಯ ಒಂದು ಕೊಠಡಿ ಮೀಸಲಿಡಬೇಕು. ಆಗಸ್ಟ್‌ 1ರಿಂದ ತರಗತಿಗಳನ್ನು ಆರಂಭಿಸಬೇಕು ಎಂದು ಸೂಚಿಸಿದೆ.

ಪಿಯುಸಿ, ಪೂರ್ವ ಪ್ರಾಥಮಿಕ ತರಬೇತಿ, ಡಿ.ಇಡಿ ಕೋರ್ಸ್‌ ಪೂರೈಸಿದ ವರನ್ನು ಅತಿಥಿ ಶಿಕ್ಷಕರನ್ನಾಗಿ 10 ತಿಂಗಳಿಗೆ ನೇಮಕ ಮಾಡಿಕೊಳ್ಳಬೇಕು. ಅವರಿಗೆ ತಿಂಗಳಿಗೆ ₹10 ಸಾವಿರ ಗೌರವಧನ ನಿಗದಿ ಮಾಡಲಾಗಿದೆ.

ವರ್ಷ ಕಳೆದರೂ ಬಾರದ ಗೌರವಧನ

2023–24ನೇ ಶೈಕ್ಷಣಿಕ ಸಾಲಿನಲ್ಲಿ 262 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು ಆದೇಶ ಹೊರಡಿಸಿದ್ದರು. ಅಗತ್ಯವಿರುವ ಶಿಕ್ಷಕರನ್ನು ಆಯಾ ಶಾಲಾ ಮಟ್ಟದಲ್ಲೇ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿತ್ತು. ಶಿಕ್ಷಕರಿಗೆ ₹7,500 ಹಾಗೂ ಸಹಾಯಕಿಯರಿಗೆ ₹5 ಸಾವಿರ ಗೌರವಧನ ನಿಗದಿ ಮಾಡಲಾಗಿತ್ತು. ವರ್ಷ ಕಳೆದರೂ ಒಂದು ತಿಂಗಳ ಹಣವನ್ನೂ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT