ಹೊಸಕೋಟೆ ಅವಿಮುಕ್ತೇಶ್ವರ ದೇವಸ್ಥಾನದ ರಥೋತ್ಸವ ಸಮಿತಿಗೆ ಅನ್ಯಧರ್ಮೀಯ ಸದಸ್ಯನನ್ನು ನೇಮಕ ಮಾಡಿದ ಕುರಿತು ತಾನು ಹೇಳಿದ ಸುಳ್ಳನ್ನು ಅಳಿಸಿ ಹಾಕುವುದೆಂದರೆ ತಾನು ವಾಂತಿ ಮಾಡಿ, ಅದನ್ನು ಮಾಡಿದವರೇ ತಿಂದ ಹಾಗೆ. ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ರಾಜ್ಯ @ಬಿಜೆಪಿ ಕರ್ನಾಟಕ ನಾವು ಸತ್ಯ ಬಿಚ್ಚಿಟ್ಟ ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿದ್ದ ತನ್ನ ಸುಳ್ಳು ಆರೋಪದ ಹೇಳಿಕೆ ಅಳಿಸಿ ಹಾಕಿದೆ. ಆದರೆ, ಜನರ ಕ್ಷಮೆ ಕೇಳಿಲ್ಲ. ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಏಕೆ ಬಡಿಸಿಕೊಳ್ಳುತ್ತೀರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ
-ಸಿದ್ದರಾಮಯ್ಯ, ಮುಖ್ಯಮಂತ್ರಿ
ರಥೋತ್ಸವ ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರ ನೇಮಕ ಮಾಡುವುದು ದೇವಾಲಯದ ಸಂಪ್ರದಾಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಹ ಅಂದು ಸಚಿವರಾಗಿದ್ದ ಎಂ.ಟಿ.ಬಿ ನಾಗರಾಜ 2022ರಲ್ಲಿ ಅಪ್ಸರ್ ಎಂಬುವವರನ್ನು ಸಮಿತಿಗೆ ನೇಮಕ ಮಾಡಿದ್ದು ನಮ್ಮ ಕಣ್ಣ ಮುಂದಿದೆ. ಅಲ್ಲದೆ 2021ರಲ್ಲಿ ಇದೇ ಬಿಜೆಪಿ ಇಮ್ತಿಯಾಜ್ ಪಾಷಾ ಎಂಬುವವರು ಸದಸ್ಯರನ್ನಾಗಿ ಮಾಡಿದ್ದನ್ನು ಮರೆತಂತಿದೆ. ಹಿಂದಿನ ಅವಧಿಯ ಎಲ್ಲ ಪಟ್ಟಿ ಬಿಜೆಪಿ ತೆರೆದು ನೋಡಿ ಸ್ವಲ್ಪ ವಿವೇಕದಿಂದ ವರ್ತಿಸಿದರೆ ಉತ್ತಮ.
-ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ
ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಹೊಸಕೋಟೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಥೋತ್ಸವಕ್ಕೆ ಹಿಂದೂಯೇತರ ವ್ಯಕ್ತಿಯನ್ನು ನೇಮಿಸಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೂ ಜನರ ನಡುವೆ ಕೋಮು ವಿಷದ ಬೀಜ ಬಿತ್ತುವುದು. ಜನರ ನೆಮ್ಮದಿ ಹಾಳುಗೆಡವುವುದು ಬಿಜೆಪಿ ಪ್ರಮುಖ ಗುರಿ. 2015, 2020, 2022ರಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಶಿಫಾರಸು ಮಾಡಿದ್ದು ಬಿಜೆಪಿ ಶಾಸಕ ಎಂ.ಟಿ.ಬಿ ನಾಗರಾಜ. ಸುಳ್ಳಿನ ಮೇಲೆ ಸುಳ್ಳು ಹೇಳುವ ಬಿಜೆಪಿಗೆ ಆವಿಮುಕ್ತೇಶ್ವರ ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.