ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆ ನಷ್ಟಕ್ಕೀಡಾದವರಿಗೆ ‘ಬದುಕು ಖಾತ್ರಿ’

ಬಳ್ಳಾರಿ ಜಿಲ್ಲಾ ಪಂಚಾಯಿತಿಯಿಂದ ರೈತರಿಗೆ ನೆಮ್ಮದಿ ಮೂಡಿಸುವ ಕ್ರಮ
Published : 31 ಡಿಸೆಂಬರ್ 2018, 20:13 IST
ಫಾಲೋ ಮಾಡಿ
Comments

ಬಳ್ಳಾರಿ: ಸತತ ಬರಗಾಲದಿಂದ ಬಸವಳಿದಿರುವ ಜಿಲ್ಲೆಯ ಸಾವಿರಾರು ರೈತರು, ‘ಬದುಕು ಖಾತ್ರಿ’ಯಿಂದ ನೆಮ್ಮದಿಯ ದಾರಿಯತ್ತ ನಡೆದಿದ್ದಾರೆ.

ಜಿಲ್ಲೆಯ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬೆಳೆ ನಷ್ಟಕ್ಕೀಡಾದ ರೈತರನ್ನು ಗುರುತಿಸಿದ ಜಿಲ್ಲಾ ಪಂಚಾಯಿತಿ, ಉದ್ಯೋಗ ಖಾತ್ರಿ ಅಡಿ ವೈಯಕ್ತಿಕ ಕಾಮಗಾರಿ ಮೂಲಕ ಬರಗಾಲ ಎದುರಿಸುವ ದಾರಿ ತೋರಿಸಿದೆ. ಅದಕ್ಕಾಗಿ ‘ಉದ್ಯೋಗ ಖಾತ್ರಿ– ಬದುಕು ಖಾತ್ರಿ’ ಅಭಿಯಾನವನ್ನೂ ನಡೆಸಿದೆ. ಉದ್ಯೋಗ ಚೀಟಿ ಇಲ್ಲದವರನ್ನು ಗುರುತಿಸಿ, ಯೋಜನೆ ಅಡಿ ಗುರುತಿನ ಚೀಟಿ ನೀಡಿರುವುದು ಅಭಿಯಾನದ ವಿಶೇಷ. ಅಲ್ಲದೆ, ಕೆಲಸ ಹುಡುಕಿಕೊಂಡು ಗುಳೆ ಹೋಗುವುದನ್ನು ತಪ್ಪಿಸುವುದೂ ಇದರ ಉದ್ದೇಶ.

ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡ ಪಂಚಾಯಿತಿಗಳಿಗೆ ತಲಾ ಒಬ್ಬರಂತೆ, ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅವರ ಮೂಲಕ ಸ್ಥಳೀಯ ಪಂಚಾಯಿತಿಗೆ ಭೇಟಿ ನೀಡಿ, ಬೆಳೆ ನಷ್ಟ ಹೊಂದಿದ ರೈತರು ಹಾಗೂ ಉದ್ಯೋಗ ಚೀಟಿ ಇಲ್ಲದವರನ್ನು ಗುರುತಿಸಿ ಅವರೆಲ್ಲರಿಗೂ ಗುರುತಿನ ಚೀಟಿ ನೀಡಲಾಗಿತ್ತು.

ತೋಟಗಾರಿಕೆ ಬೆಳೆ ಬೆಳೆಯಲು, ಕೃಷಿ ಹೊಂಡ, ಕಂದಕ, ಎರೆಹುಳು ತೊಟ್ಟಿ ನಿರ್ಮಿಸಲು, ಹೊಲ ಮತ್ತು ಬದುಗಳಲ್ಲಿ ಸಸಿ ನೆಡಲು, ರೇಷ್ಮೆ ನರ್ಸರಿ ಬೆಳೆಸಲು ಖಾತ್ರಿ ಯೋಜನೆ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಹಮ್ಮಿಕೊಳ್ಳುವಂತೆ ರೈತರನ್ನು ಉತ್ತೇಜಿಸಲಾಗಿತ್ತು. ಒಬ್ಬ ಸಂತ್ರಸ್ತ ₹1.50 ಲಕ್ಷದವರೆಗಿನ ಕಾಮಗಾರಿ ಕೈಗೊಳ್ಳಲು ಯೋಜನೆ ಅಡಿ ಅವಕಾಶವಿರುವ ಕುರಿತು ಗಮನ ಸೆಳೆಯಲಾಗಿತ್ತು. ಇದಲ್ಲದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷೇತ್ರ ಬದು, ದನದ ದೊಡ್ಡಿ, ಕೊಳವೆ ಬಾವಿ ಮರುಪೂರಣ, ಕುರಿ– ಮೇಕೆ, ಕೋಳಿ, ಹಂದಿ, ಮೀನು ಶೆಡ್‌ ನಿರ್ಮಾಣ ಹಾಗೂ ವೈಯಕ್ತಿಕ ಮನೆ ನಿರ್ಮಾಣಕ್ಕೆ ಅವಕಾಶವಿರುವ ಕುರಿತು ಅರಿವು ಮೂಡಿಸಲಾಗಿತ್ತು.

‘ಇತ್ತೀಚೆಗೆ ವೈಯಕ್ತಿಕ ಕಾಮಗಾರಿ ಆದೇಶ ಪತ್ರವನ್ನು ರೈತರಿಗೆ ವಿತರಿಸಲಾಗಿದೆ. ಕಾಮಗಾರಿಗೆ ಜ.31ರ ಗಡುವು ವಿಧಿಸಿರುವುದರಿಂದ ಕೆಲಸ ಭರದಿಂದ ನಡೆದಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಅಭಿಯಾನ ನಿಲ್ಲುವುದಿಲ್ಲ. ಕನಿಷ್ಠ ಹತ್ತು ಸಾವಿರ ಸಂತ್ರಸ್ತರಿಗೆ ಜನವರಿ 15ರೊಳಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ನೀಡುವ ಗುರಿ ಇದೆ’ ಎಂದು ಅವರು ವಿವರಿಸಿದರು.

ಬದುಕು ಖಾತ್ರಿ ಅಭಿಯಾನದ ಅಂಕಿ ಅಂಶ

12,886: ಜಿಲ್ಲೆಯ 21 ಪಂಚಾಯಿತಿಗಳಲ್ಲಿ ಬೆಳೆನಷ್ಟ ಹೊಂದಿದ ರೈತರು
1,243: ಅಭಿಯಾನದಲ್ಲಿ ಉದ್ಯೋಗ ಚೀಟಿ ಪಡೆದವರು
2,564: ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರು
8,730: ಜಿಲ್ಲಾ ಪಂಚಾಯಿತಿ ಅನುಮೋದಿಸಿದ ಕಾಮಗಾರಿಗಳು
₹ 28.80 ಕೋಟಿ: ಕಾಮಗಾರಿಗಳ ಅಂದಾಜು ವೆಚ್ಚ
ಜ.31: ಕಾಮಗಾರಿ ಪೂರ್ಣಗೊಳಿಸಲು ಗಡುವು

* ಪ್ರಾಯೋಗಿಕ ಅಭಿಯಾನದ ಪ್ರಗತಿಯನ್ನು ಗಮನಿಸಿ ಜಿಲ್ಲೆಯ ಎಲ್ಲ ಪಂಚಾಯಿತಿಗಳಿಗೂ ವಿಸ್ತರಿಸುವ ಉದ್ದೇಶವಿದೆ

-ಡಾ. ಕೆ.ವಿ.ರಾಜೇಂದ್ರ, ಜಿ.ಪಂ, ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT