ಅಕೇಶಿಯಾ ಮತ್ತು ನೀಲಗಿರಿ ನಿಷೇಧಿಸಲು ಆಗ್ರಹಿಸಿ ಹಾಗೂ ಸರ್ಕಾರವು ಎಂಪಿಎಂ ಕಾರ್ಖಾನೆಗೆ ನೀಡಿದ್ದ ಅರಣ್ಯ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ವು ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ‘ಮಲೆನಾಡು ಪಶ್ಚಿಮ ಘಟ್ಟಗಳ ಶ್ರೇಣಿಯ ನಿತ್ಯ ಹರಿದ್ವರ್ಣ ಕಾಡನ್ನು ಹೊಂದಿದೆ. ಇಲ್ಲಿ ಹಲವು ನದಿಗಳು ಜನ್ಮತಾಳಿವೆ. ಜೀವ ವೈವಿಧ್ಯ ಪ್ರದೇಶವಿದು. ಇಲ್ಲಿ ಪರಿಸರ ಏರುಪೇರಾದರೆ ವನ್ಯಜೀವಿಗಳು ಮಾತ್ರವಲ್ಲ ಅದು ಮಾನವ ಸಂಕುಲದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪ್ರದೇಶಗಳಲ್ಲಿ ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳನ್ನು ಬೆಳೆಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.