ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇತುವೆ ಕುಸಿತಕ್ಕೆ ದೋಷಪೂರಿತ ಡಿಪಿಆರ್‌ ಕಾರಣ: ನಿತಿನ್‌ ಗಡ್ಕರಿ

Published : 26 ಸೆಪ್ಟೆಂಬರ್ 2024, 15:58 IST
Last Updated : 26 ಸೆಪ್ಟೆಂಬರ್ 2024, 15:58 IST
ಫಾಲೋ ಮಾಡಿ
Comments

ಬೆಂಗಳೂರು: ‘ದೇಶದಾದ್ಯಂತ ಸೇತುವೆಗಳು ಕುಸಿದ ಹಲವು ಪ್ರಕರಣಗಳು ನಡೆದಿವೆ. ಆ ಸೇತುವೆ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದ ಸಿಬ್ಬಂದಿಯಿಂದ ಲೋಪವಾಗಿದ್ದು, ಸೇತುವೆ ಕುಸಿಯಲು ಆ ಸಿಬ್ಬಂದಿಯೇ ಕಾರಣ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ರಾಜ್ಯ ಲೋಕೋಪಯೋಗಿ ಇಲಾಖೆ, ಇಂಡಿಯನ್‌ ರೋಡ್‌ ಕಾಂಗ್ರೆಸ್‌, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಅಂತರರಾಷ್ಟ್ರೀಯ ರೋಡ್‌ ಕಾಂಗ್ರೆಸ್‌ ಜಂಟಿಯಾಗಿ ನಗರದಲ್ಲಿ ಆಯೋಜಿಸಿರುವ, ‘ಸೇತುವೆ ಸುರಕ್ಷತೆ’ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಡ್ಕರಿಗೂ ಮುನ್ನ ಮಾತನಾಡಿದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸೇತುವೆಗಳನ್ನು ತಪಾಸಣೆ ಮತ್ತು ನಿರ್ವಹಣೆ ಮಾಡುವ ವ್ಯವಸ್ಥೆ ಇಲ್ಲ’ ಎಂದರು. ಇಂಡಿಯನ್‌ ರೋಡ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಡಿ.ಸಾರಂಗಿ, ‘ಮೂರು ವರ್ಷದಲ್ಲಿ ದೇಶದಾದ್ಯಂತ ನಿರ್ಮಾಣ ಹಂತದ 11 ಸೇತುವೆಗಳು ಕುಸಿದಿವೆ. ವಿನ್ಯಾಸ ಮತ್ತು ನಿರ್ಮಾಣ ಹಂತದಲ್ಲಿ ಹಲವು ಲೋಪಗಳಿದ್ದ ಕಾರಣದಿಂದಲೇ ಸೇತುವೆ ಬಿದ್ದಿವೆ’ ಎಂದರು.

ಈ ಇಬ್ಬರ ಮಾತುಗಳಿಗೆ ನಿತಿನ್‌ ಗಡ್ಕರಿ, ‘ಡಿಪಿಆರ್‌ ಸಿದ್ಧಪಡಿಸುವಾಗ ವಿನ್ಯಾಸ, ಬಳಸಬೇಕಿರುವ ಸಾಮಗ್ರಿಗಳ ಗುಣಮಟ್ಟ ನಿರ್ಧಾರ, ವಿನ್ಯಾಸ ಪರಿಷ್ಕರಣೆ, ಅವುಗಳ ಆಧಾರದಲ್ಲಿ ಯೋಜನಾ ವೆಚ್ಚ ನಿರ್ಧರಿಸುವ ಹಂತಗಳಲ್ಲಿ ಲೋಪಗಳಾಗಿವೆ. ಸಂಬಂಧಿತ ಅಧಿಕಾರಿಗಳು, ಡಿಪಿಆರ್‌ ಸಿದ್ಧಪಡಿಸುವಲ್ಲಿ ನೆರವಾದ ಕಂಪನಿಗಳಿಂದಲೂ ಲೋಪವಾಗಿರುತ್ತದೆ. ಸೇತುವೆಗಳು ಕುಸಿದಿದ್ದಕ್ಕೆ ಅವರನ್ನೇ ಹೊಣೆಗಾರಿಕೆ ಮಾಡಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಸೇತುವೆ, ಹೆದ್ದಾರಿ ನಿರ್ಮಾಣದಲ್ಲಿ ಅಂತಹ ಸಾಮಗ್ರಿ ಬಳಸಬಹುದು, ಇಂತಹ ಸಾಮಗ್ರಿ ಬಳಸಬಹುದು ಎಂದು ಅಧಿಕಾರಿಗಳು ನನ್ನ ಬಳಿ ಹೇಳುತ್ತಾರೆ. ನಾನು ಎಂಜಿನಿಯರ್‌ ಅಲ್ಲ, ಅಧಿಕಾರಿಗಳು ಹೇಳಿದ್ದನ್ನು ನಂಬಿ ಒಪ್ಪಿಗೆ ನೀಡಿ ಬಿಟ್ಟಿರುತ್ತೇನೆ. ಈ ಹಿಂದೆ ಸಚಿವನಾಗಿದ್ದಾಗ ಅಂತಹ ತಪ್ಪು ಮಾಡಿದ್ದೆ. ಅಧಿಕಾರಿಗಳು ಹೇಳಿದರೆಂದು, ಕರಾವಳಿ ಪ್ರದೇಶದಲ್ಲಿ ನಿರ್ಮಿಸಿದ ಸೇತುವೆಗಳಲ್ಲಿ ಹಸಿರು ಲೇಪನ ಇದ್ದ ಕಬ್ಬಿಣವನ್ನು ಬಳಸಲು ಒಪ್ಪಿಗೆ ನೀಡಿದ್ದೆ. ಆ ಸೇತುವೆಗಳು ಬಿದ್ದಿವೆ. ಈಗ ಅಂತಹ ನಿಯಮಗಳನ್ನೆಲ್ಲಾ ಬಿಗಿಗೊಳಿಸಲಾಗಿದೆ’ ಎಂದರು.

‘ರಸ್ತೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ನಿರಂತರ ಸಂಶೋಧನೆ ನಡೆಸಲಾಗುತ್ತಿದೆ. ಹಳೆಯ ಟೈರ್‌, ರಬ್ಬರ್‌, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಬಳಸಿ ರೂಪಿಸಿದ ಡಾಂಬರನ್ನು ಬಳಸಲಾಗುತ್ತಿದೆ. ಸೇತುವೆಗಳ ಗುಣಮಟ್ಟ ಮತ್ತು ವಿನ್ಯಾಸಕ್ಕೆ ಜಾಗತಿಕ ಮಟ್ಟದ ಸಂಹಿತೆಯನ್ನು ರೂಪಿಸಬೇಕಿದೆ’ ಎಂದರು.

ಬಿದ್ದ ಸೇತುವೆಗಳ ಅವಶೇಷಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಕಳಪೆ ಸಾಮಗ್ರಿ ಬಳಕೆ ಮತ್ತು ದೋಷಪೂರಿತ ವಿನ್ಯಾಸವೇ ಕಾರಣ ಎಂಬುದು ಗೊತ್ತಾಯಿತು
ಡಿ.ಸಾರಂಗಿ ಪ್ರಧಾನ ಕಾರ್ಯದರ್ಶಿ ಇಂಡಿಯನ್ ರೋಡ್‌ ಕಾಂಗ್ರೆಸ್‌
ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸೇತುವೆಗಳ ಸ್ಥಿತಿಗತಿ ತಪಾಸಣೆ ಮತ್ತು ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇಲ್ಲ
ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ
ಬಿದ್ದಿರುವ ಸೇತುವೆಗಳ ಡಿಪಿಆರ್ ಸಿದ್ಧಪಡಿಸಿದ ಸಿಬ್ಬಂದಿಯನ್ನು ಅಮಾನತು ಮಾಡುತ್ತೇನೆ. ಸೇತುವೆ ನಿರ್ಮಿಸಿದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುತ್ತೇನೆ
ನಿತಿನ್‌ ಗಡ್ಕರಿ ಕೇಂದ್ರ ರಸ್ತೆ ಸಾರಿಗೆ–ಹೆದ್ದಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT