ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರೀಕರಣ ಸೆಟ್‌: ಅರಣ್ಯ ಒತ್ತುವರಿ ಆರೋಪ; ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Published 25 ಜುಲೈ 2024, 16:18 IST
Last Updated 25 ಜುಲೈ 2024, 16:18 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಪ್ಲಾಂಟೇಷನ್‌ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾದ 20 ಎಕರೆ ಜಮೀನನ್ನು ಕೆನರಾ ಬ್ಯಾಂಕ್‌ ಮತ್ತು ಕೆವಿಎನ್‌ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿದೆ’ ಎಂದು ಆರೋಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ವಕೀಲ ಜಿ.ಬಾಲಾಜಿ ನಾಯ್ಡು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಆರ್‌.ವಿಜಯ್‌ ಕುಮಾರ್ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ಇತರೆ ಪ್ರತಿವಾದಿಗಳಾದ ಎಚ್‌ಎಂಟಿ ಲಿಮಿಟೆಡ್‌, ಕೆನರಾ ಬ್ಯಾಂಕ್‌ನ ಕೇಂದ್ರ ಕಚೇರಿಯ ವ್ಯಸ್ಥಾಪಕ ನಿರ್ದೇಶಕ, ಕೆವಿಎನ್‌ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿ ಮಾಲೀಕರಿಗೂ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಆಗಸ್ಟ್‌ 19ಕ್ಕೆ ಮುಂದೂಡಿದೆ.

‘ಕೆವಿಎನ್‌ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿಯು ಅನಧಿಕೃತವಾಗಿ ಅರಣ್ಯ ಜಮೀನು ಒತ್ತುವರಿ ಮಾಡಿದೆ. ಈ ಜಾಗದಲ್ಲಿ ನಟ ಯಶ್‌ ಅವರ ಮುಂದಿನ ಚಿತ್ರವಾದ ‘ಟಾಕ್ಸಿಕ್‌’ ಚಿತ್ರೀಕರಣಕ್ಕೆ ಅದ್ದೂರಿ ಸೆಟ್‌ ಹಾಕಲಾಗಿದೆ. ಆದ್ದರಿಂದ, ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT