ಚನ್ನಣ್ಣ ವಾಲೀಕಾರ ವೇದಿಕೆ (ಕಲಬುರ್ಗಿ): ‘ಕನ್ನಡ ಪುಸ್ತಕೋದ್ಯಮ ಉಳಿಯಬೇಕೆಂದರೆ ತುರ್ತಾಗಿ ಪುಸ್ತಕ ನೀತಿ ರಚಿಸುವ ಅಗತ್ಯವಿದೆ’ ಎಂದು ಲೇಖಕ ಪ್ರಕಾಶ್ ಕಂಬತ್ತಳ್ಳಿ ಪ್ರತಿಪಾದಿಸಿದರು.

‘ಪುಸ್ತಕೋದ್ಯಮ–ಸವಾಲುಗಳು’ ಕುರಿತು ಮಾತನಾಡಿದ ಅವರು, ಕನ್ನಡದ ಮಟ್ಟಿಗೆ ಪುಸ್ತಕೋದ್ಯಮ ಎನ್ನುವ ಪದಬಳಕೆ ಇನ್ನೂ ಅಷ್ಟು ಸಮಂಜಸವಾಗಿಲ್ಲ. ಪುಸ್ತಕ ಸಂಸ್ಕೃತಿ ಎಂದೇ ಬಳಸುವುದು ಸೂಕ್ತ. ಉದ್ಯಮವಾಗಿ ಬೆಳೆಯಬೇಕಾದರೆ ಹಲವು ಆಯಾಮಗಳಲ್ಲಿ ಶ್ರದ್ಧೆ–ಶ್ರಮ ಹಾಕಬೇಕಿದೆ’ ಎಂದರು.

70ರ ದಶಕದಲ್ಲಿ ವರ್ಷಕ್ಕೆ 600ರಿಂದ 700 ಪುಸ್ತಕಗಳು ಮಾತ್ರ ಪ್ರಕಟಗೊಳ್ಳುತ್ತಿದ್ದವು. ಈಗ ಪ್ರಕಟಣೆಗಳ ಸಂಖ್ಯೆ ಸಾವಿರಾರು ಆಗಿದೆ. 3 ಕೋಟಿ ಇದ್ದ ಕನ್ನಡಿಗರ ಸಂಖ್ಯೆ 6 ಕೋಟಿ ಆಗಿದೆ. ಆದರೆ, ಓದುಗರ ಸಂಖ್ಯೆ ಹೆಚ್ಚಲೇ ಇಲ್ಲ. ಇದು ಕನ್ನಡ ಬರಹಗಾರರು ಮತ್ತು ಪ್ರಕಾಶಕರಿಗೆ ಬಿದ್ದ ದೊಡ್ಡ ಪೆಟ್ಟು ಎಂದು ವಿಷಾದಿಸಿದರು.

ಕಂಪ್ಯೂಟರ್ ಯುಗ ಆರಂಭವಾದ ಮೇಲೆ ಪುಸ್ತಕ ಪ್ರಕಟಣೆ ಅಪಾರ ಬದಲಾವಣೆ ಕಂಡಿದೆ. ಈಗಂತೂ ಸಣ್ಣದೊಂದು ಚಿಪ್ಪಿನಲ್ಲಿ ನೂರಾರು ಪುಸ್ತಕ ಸಂಗ್ರಹಿಸಿ ಇಟ್ಟುಕೊಳ್ಳುವ ಕಾಲ ಬಂದಿದೆ. ಇದರಿಂದ ಗ್ರಂಥಾಲಯಗಳು ಕಣ್ಮರೆಯಾಗಿ, ಚಿಪ್ಪು ಸಂಸ್ಕೃತಿಯೇ ಬೆಳೆಯುತ್ತಿದೆ. ಸಾಂಪ್ರದಾಯಿಕ ಪುಸ್ತಕಗಳ ಕಾಲ ಮುಂದೆ ಮುಗಿದು ಹೋಗಬಹುದೇ ಎಂಬ ಆತಂಕ ಕಾಡುತ್ತಿದೆ. ನಾವು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವು ಪುಸ್ತಕಗಳನ್ನು ಬರೆಯಲು ಮತ್ತು ಪ್ರಕಟಿಸಲು ಹೆಚ್ಚು ಅನುಕೂಲ ಮಾಡಿಕೊಟ್ಟಿವೆಯೇ ಹೊರತು; ಓದುವ ಹಸಿವುಮೂಡಿಸುವಲ್ಲಿ ಸೋತಿವೆ ಎಂದು ಪ್ರತಿಪಾದಿಸಿದರು.

ಯುವ ಸಮುದಾಯ ಪುಸ್ತಕ ಪ್ರೀತಿ ನಿರಾಕರಿಸುತ್ತಿದೆ. ಪುಸ್ತಕ ಮಳಿಗೆ, ಗ್ರಂಥಾಲಯಗಳಲ್ಲಿ 50 ವರ್ಷ ಮೇಲ್ಪಟ್ಟವರೇ ಸಿಗುತ್ತಾರೆ. ಈ ಯುವ ಮನಸ್ಸುಗಳನ್ನು ಹಿಡಿದು ಓದಲು ಹಚ್ಚುವ ಮಾರ್ಗ ಯಾವುದು ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಕೈಯಲ್ಲಿರುವ ಮೊಬೈಲ್‌ನಲ್ಲಿ ಅವರು ಕುರುಚಲು ಸಾಲುಗಳನ್ನು ಓದುತ್ತಾರೆಯೇ ಹೊರತು; ಗಂಭೀರ ಸಾಹಿತ್ಯದ ವಾಸನೆಯನ್ನೂ ಪಡೆಯುವುದಿಲ್ಲ. ಹೀಗಾಗಿ, ಕನ್ನಡ ಪುಸ್ತಕ ಲೋಕದ ಮುಂದೆ ಸವಾಲು ತಂದೊಡ್ಡಿದ ತಂತ್ರಜ್ಞಾನದಲ್ಲೇ ನಾವು ಅದರ ಪರಿಹಾರಗಳನ್ನೂ ಶೋಧಿಸಬೇಕಿದೆ ಕಿವಿಮಾತು ಹೇಳಿದರು.

‘ಲೇಖಕ- ಓದುಗ’ ಕುರಿತು ಪ್ರಬಂಧ ಮಂಡಿಸಿದ ಡಾ.ಗಾಯತ್ರಿ ನಾವಡ, ‘ಲೇಖಕ- ಓದುಗ- ಪ್ರಕಾಶಕ ಮತ್ತು ವ್ಯಾಪಾರಿ ಈ ನಾಲ್ಕೂ ದಿಕ್ಕುಗಳು ಸಂಧಿಸಿದಾಗ ಮಾತ್ರ ಪುಸ್ತಕ ಲೋಕ ಉಳಿಯುತ್ತದೆ. ಬದಲಾದ ಕಾಲಘಟ್ಟ ಈ ನಾಲ್ವರನ್ನೂ ಚೆದುರಿಸಿ ಬಿಟ್ಟಿದೆ. ಧಾವಂತದ ದಿನಚರಿಯಲ್ಲಿ ಓದುಗ ಪುಸ್ತಕದ ಕಡೆಗೆ ಹೋಗುತ್ತಿಲ್ಲ, ಪುಸ್ತಕಗಳೇ ಓದುಗರ ಕಡೆಗೆ ಬಂದರೂ ಓದುವವರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಡಾ.ಬಸವರಾಜ ಡೋಣೂರ ‘ಹೊಸ ಓದಿನ ಪ್ರೇರಣೆಗಳು’ ಕುರಿತು ಪ್ರಬಂಧ ಮಂಡಿಸಿದರು.

‘ಕಾದಂಬರಿ ಓದುಗರನ್ನು ಕಿತ್ತುಕೊಂಡ ಧಾರಾವಾಹಿ’

‘80ರ ದಶಕದವರೆಗೂ ಕನ್ನಡದಲ್ಲಿ ಕಾದಂಬರಿಗಳ ಸ್ವರ್ಣಯುಗ ಕಾಣುತ್ತೇವೆ. ಇದಕ್ಕೆ ಕಾರಣ ಮಹಿಳೆಯರು. ಮನೆಯಲ್ಲಿರುವ ಮಹಿಳೆಯರು ಕಾದಂಬರಿಗಳನ್ನು ಹೆಚ್ಚು ಓದುವ ಮೂಲಕ ಬರಹಗಾರರನ್ನು ಹುಟ್ಟಿಸಿದರು. ನಂತರ ಟಿ.ವಿ. ಬಂದ ಮೇಲೆ ಕಾದಂಬರಿ ಎಸೆದು ಧಾರಾವಾಹಿ ಮುಂದೆ ಕುಳಿತರು. ಈ ಧಾರಾವಾಹಿಯವರೇ ನಮ್ಮ ಕಾದಂಬರಿ ಓದುಗರನ್ನು ಕಿತ್ತುಕೊಂಡು ಬಿಟ್ಟರು’ ಎಂದು ಪ್ರಕಾಶ್ ಕಂಬತ್ತಳ್ಳಿ ಹೇಳಿದಾಗ ಸಭಾಂಗಣದಲ್ಲಿ ನಗೆಯ ಅಲೆ ತೇಲಿತು.

ಕಟಿಂಗ್ ಅಂಗಡಿಯಲ್ಲೂ ಲೈಬ್ರೆರಿ

‘ನಾನು ಕೇರಳದ ಕಟಿಂಗ್ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಬಹಳಷ್ಟು ಸೆಲೂನ್‌ಗಳಲ್ಲಿ ಪುಟ್ಟ ಗ್ರಂಥಾಲಯಗಳೂ ಇವೆ. ಕೂದಲು ಕತ್ತರಿಸಿಕೊಳ್ಳಲು ಬಂದವರು ಕಪಾಟಿನಲ್ಲಿದ್ದ ಪುಸ್ತಕ ತೆರೆದು ಎರಡು ಪುಟ ಓದಿದರೆ ಸಾಕು; ಅವರಿಗೆ ಕಟಿಂಗ್‌ನಲ್ಲಿ ಶೇ 30ರಷ್ಟು ರಿಯಾಯಿತಿ ಕೊಡುತ್ತಾರೆ! ಇದಪ್ಪ ಪುಸ್ತಕ ಪ್ರೀತಿಯೆಂದರೆ’ ಎಂದು ಡಾ.ಗಾಯತ್ರಿ ಹೇಳಿದಾಗ ಸಭಿಕರು ಚಪ್ಪಾಳೆ ತಟ್ಟಿ ಕಟಿಂಗ್ ಅಂಗಡಿಯವನನ್ನು ಅಭಿನಂದಿಸಿದರು.

‘ಕೇರಳದ ಜನಪ್ರತಿನಿಧಿಗಳಿಗೆ ನೀಡುವ ಸಂಭಾವಣೆಯಲ್ಲಿ ಇಂತಿಷ್ಟು ಭಾಗ ಪುಸ್ತಕ ಖರೀದಿಗಾಗಿಯೇ ಬಳಸಬೇಕು ಎಂಬ ನಿಯಮ ಮಾಡಿದ್ದಾರೆ. ನಮ್ಮಲ್ಲಂತೂ ಕ್ರೇನ್ ಮೂಲಕ ಎತ್ತಲಾಗದಂಥ ದೊಡ್ಡ ದೊಡ್ಡ ಹಾರಗಳನ್ನು ಹಾಕಿಸಿಕೊಂಡು ಮೆರೆಯುವವರು ಇದ್ದಾರೆ. ಅವರ ತಲೆಗೆ ತಿವಿದು ಈ ಹಣವನ್ನು ಪುಸ್ತಕ ಕೊಂಡು ಓದಲು ಬಳಸಿ ಎಂದು ಹೇಳಬೇಕಾಗಿದೆ’ ಎಂಬ ಗಾಯತ್ರಿ ಅವರ ಮಾತಿಗೆ ಪ್ರೇಕ್ಷಕರು ತಲೆದೂಗಿದರು.

ಎಡ-ಬಲ ಸಿದ್ಧಾಂತಗಳ ತಿಕ್ಕಾಟ

‘ಈಗೀಗ ಎಡಪಂಥ- ಬಲಪಂಥ ಎಂದು ಬರಹಗಾರರೂ ವಿಭಾಗವಾಗಿದ್ದಾರೆ. ಒಂದು ಪಂಥದವರು ಇನ್ನೊಂದು ಪಂಥದ ಲೇಖಕನನ್ನು ಒಪ್ಪಿಕೊಳ್ಳುವುದೇ ಇಲ್ಲ. ತತ್ವ ಹಿಂಡಿ ಹಿಪ್ಪೆ ಆಗಿ, ಪಂಥವೇ ಉಳಿದುಕೊಂಡಿದೆ. ಕನ್ನಡ ಓದುಗರನ್ನು ಎಡ–ಬಲ ಎಂದು ಭಾಗ ಮಾಡಿ ಸೀಳಿದವರ್ಯಾರೋ ಏನೋ’ ಎನ್ನುವ ಮೂಲಕ ಕವಯತ್ರಿ ಸೂಕ್ಷ್ಮತೆಗೆ ಕನ್ನಡಿ ಹಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.