ಕಾಸರಗೋಡು... ದೇವರನಾಡಿನ ಕೊನೆಯ ಕೂಸು ಅಳುತ್ತಿದೆ.., ಅಳುತ್ತಲೇ ಇದೆ. ಎಷ್ಟೇ ಅತ್ತು, ಕೈಕಾಲು ಬಡಿದರೂ ಈ ಮಗುವಿಗೆ ಬಯಸಿದ್ದು ಸಿಕ್ಕಿಲ್ಲ, ಸಿಗುವ ಲಕ್ಷಣವೂ ಇಲ್ಲ. ಹೆಸರಲ್ಲೇ(KASARAGOD) ‘ಗೋಡ್’ (ದೇವರು) ಇದ್ದರೂ ಬದುಕು ತ್ರಿಶಂಕು ಸ್ಥಿತಿಯಲ್ಲಿದೆ.

ರಾಜ್ಯದ ಏಕೈಕ ವಿಭಿನ್ನ ವಿಶಿಷ್ಟ ಜಿಲ್ಲೆ ಇದು. ಬಹು ಭಾಷೆಗಳು, ಬಹು ನದಿಗಳು, ಬಹು ವೃತ್ತಿಗಳು, ಬಹುವಿಧ ಕೃಷಿಗಳ ಸಂಪದ್ಭರಿತ ಜಿಲ್ಲೆ, ಲೆಕ್ಕಕ್ಕಿದೆ, ಆಟಕ್ಕಿಲ್ಲ. ‘ಕನ್ನಡ, ಕನ್ನಡಿಗರ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟಕ್ಕೆ ‘ರಾಜಕೀಯ ಬಲ’ ಇಲ್ಲದ ಕಾರಣ ಎಲ್ಲೂ ತಲುಪಿಲ್ಲ. ಯುವ ಪೀಳಿಗೆ, ನೌಕರರು ಕನ್ನಡ ಹೋರಾಟದಲ್ಲಿ ಹಿಂದಿನಂತೆ ಸೇರುತ್ತಿಲ್ಲ. ಸಂಪನ್ಮೂಲ ಕ್ರೋಡೀಕರಣವೂ ಒಂದು ಸಮಸ್ಯೆಯೇ. ಹಿರಿಯ ಹೋರಾಟಗಾರರಲ್ಲಿ ಕೆಲವರು ವಿಧಿವಶರಾದರು, ಕೆಲವರು ನೇಪಥ್ಯಕ್ಕೆ ಸರಿದರು... ಇವೆಲ್ಲ ಕಾರಣಗಳಿಂದ ಹೋರಾಟದ ಕಾವು ಈಗಂತೂ ಕ್ಷೀಣಗೊಂಡಂತಿದೆ. ಭವಿಷ್ಯ ಮಂಕಾಗಿದೆ’ ಎಂಬುದು ಜಿಲ್ಲೆಯ ಕನ್ನಡ ಪರ ಹೋರಾಟಗಾರರ ವಲಯದಲ್ಲಿ ಕೇಳಿಬರುತ್ತಿರುವ ನಿಟ್ಟುಸಿರು.

ತ್ರಿಶಂಕು: ಕೇರಳ ರಾಜ್ಯದ 14ನೇ ಹಾಗೂ ಉತ್ತರದ ಕೊನೆಯ ಜಿಲ್ಲೆ ಇದು, ರಚನೆಯಲ್ಲೂ ಕೊನೆಯದು (24 ಮೇ 1984) ಎಂಬ ಕಾರಣದಿಂದ ಆ ರಾಜ್ಯದ ಕೊನೆಯ ಕೂಸು ಇದು. ಸ್ವರ್ಗದಿಂದ ಹೊರತಳ್ಳಿದ ‘ತ್ರಿಶಂಕು’ವಿನಂತೆ ಮೇಲೇರದೆ, ಕೆಳಗಿಳಿಯದೆ, ಅತ್ತ ದೇವರಾಗದೆ, ಇತ್ತ ಸಾಮಾನ್ಯ ಬದುಕು ನಡೆಸಲಾರದ ಸ್ಥಿತಿ. ಇದು ಇಲ್ಲಿನ ಜನರ ಸ್ಥಿತಿಯೂ ಹೌದು. ಈ ಪ್ರದೇಶದ ಮೂಲ ಕನ್ನಡ ಭಾಷಿಗ ಜನವಿಭಾಗ (ಮಲಯಾಳಕ್ಕೆ ಹೋಲಿಸಿ ಮಾತ್ರ)ವನ್ನು ಅತ್ತ ದೇವರ ನಾಡಿನ ಹೆತ್ತಮ್ಮನೂ ಪೂರ್ಣರೂಪದಲ್ಲಿ ಸ್ವೀಕರಿಸಿಲ್ಲ. ಇತ್ತ ಸೇರಬೇಕಾಗಿದ್ದ ಕನಡಮ್ಮನೂ ಅಪ್ಪಿಕೊಂಡಿಲ್ಲ. ಅಧಿಕೃತವಾಗಿ ಅವರು, ಅನಧಿಕೃತವಾಗಿ ಇವರು ಸಾಕುತ್ತಿದ್ದಾರೆ. ಹೀಗಾಗಿ ಕಾಸರಗೋಡು ಕರ್ನಾಟಕಕ್ಕೆ ಗಡಿನಾಡು.

ಓಣಂ ಕೇರ ಮೂಲೆ: ಮಲಯಾಳಿಗರ ಲೆಕ್ಕದಲ್ಲಿ ಒಂದೊಮ್ಮೆ ಇದು ‘ಓಣಂ ಕೇರಾ ಮೂಲ’ (ಓಣಂ ಆಚರಿಸದ ಅನಾಗರಿಕ ಪ್ರದೇಶ– ಕುಗ್ರಾಮ). ಈಗ ಇಲ್ಲಿ ಕನ್ನಡವನ್ನು ಕನ್ನಡಕ ಇಟ್ಟು ಹುಡುಕಬೇಕಾದ ಸ್ಥಿತಿ,(ಮಲಯಾಳಂನಲ್ಲಿ ಕಣ್ಣಡ ಅಂದರೆ ಕನ್ನಡಕವೇ!). ಹಿಂದೆಲ್ಲ ಸರ್ಕಾರಿ ನೌಕರರಿಗೆ ಶಿಕ್ಷಾ ವರ್ಗಾವಣೆ ಎಂದರೆ ಕಾಸರಗೋಡು, ಅದರಲ್ಲೂ ಚಂದ್ರಗಿರಿ ನದಿಯ ಈ ಬದಿಯ ಕನ್ನಡ, ತುಳು, ಕೊಂಕಣಿ ಪ್ರದೇಶ! ಕಾಸರಗೋಡಿನ ಮಲಯಾಳವನ್ನೇ ಅರ್ಥಮಾಡಿಕೊಳ್ಳಲಾರದ ಅಂದಿನ ಕೇರಳೀಯ ಸರ್ಕಾರಿ ನೌಕರರು ಇಲ್ಲಿ ಒದ್ದಾಡುತ್ತಿದ್ದರು. ಅವರು ಬ್ರಿಟಿಷರಂತೆ ಮಲಯಾಳಂ ಭಾಷೆಯಲ್ಲೇ ಮಾತನಾಡುತ್ತಿದ್ದರು, ಶಿಕ್ಷಕರು ಕನ್ನಡಿಗ ವಿದ್ಯಾರ್ಥಿಗಳಿಗೆ ಅದರಲ್ಲೇ ಪಾಠ ‘ಬೋಧಿಸು’ತ್ತಿದ್ದರು. ‘ಕನ್ನಡ ಕಲಿಯಲ್ವಾ?’ ಅಂದ್ರೆ ಕೇರಳದ ‘ಮಾತೃಭಾಷೆ ಮಲಯಾಳಂ’ ಎಂಬ ಪ್ರತಿಕ್ರಿಯೆ. ಬೆರಳೆಣಿಕೆಯ ಕೆಲವರು ಮಾತ್ರ ನಾಟಕಗಳಲ್ಲಿ ಇಂಗ್ಲಿಷರು ಕನ್ನಡ ಮಾತನಾಡಿದಂತೆ ‘ಮಲ್ಗನ್ನಡ’ ಮಾತನಾಡುತ್ತಿದ್ದರು. ಜಿಲ್ಲೆಯ ಕೆಲವು ಭಾಗದಲ್ಲಿ ಇದೇ ಸ್ಥಿತಿ ಇದೆ. ಬದಲಾವಣೆ ಎಂದರೆ ಕೇಳುಗರಾದ ಕನ್ನಡಿಗರು ಮಲಯಾಳಂ ಕಲಿತಾಗಿದೆ. ಜನಸಾಮಾನ್ಯರೂ ‘ಬಹುಭಾಷಾ ವಿದ್ವಾಂಸ’ರಾಗಿದ್ದಾರೆ. ರಾಜ್ಯದ ಬೇರಾವ ಜಿಲ್ಲೆಯ ಜನರಿಗೂ ಇಲ್ಲದ ಬವಣೆ ಇಲ್ಲಿನ ಕನ್ನಡಿಗರಿಗೆ ಇದೆ. ಇಂಗ್ಲಿಷ್ ಹಿಂದಿ ಸೇರಿದಂತೆ ಕನ್ನಡ, ಮಲಯಾಳ, ತುಳು, ಕೊಂಕಣಿ, ಬ್ಯಾರಿ, ಮಾಪ್ಪಿಳ... ಹೀಗೆ ಹಲವು ಭಾಷೆಗಳನ್ನು ಕಲಿತಿದ್ದರೆ ಮಾತ್ರ ಇವರಿಗೆ ಬದುಕಲು ಸಾಧ್ಯ! ಆದರೂ ನೌಕರಿಗಾಗಿ ಇವರು ಸ್ಥಳೀಯ ಒಂದೇ ಭಾಷೆ ಕಲಿತ ಮಲಯಾಳಿಗಳೊಂದಿಗೆ ಸ್ಪರ್ಧಿಸಿ ಸೋಲುತ್ತಿದ್ದಾರೆ, ಅದೆಷ್ಟೊ ಅಭ್ಯರ್ಥಿಗಳು ಜಿಲ್ಲೆಯ ಉದ್ಯೋಗ ವಿನಿಮಯ ಕಚೇರಿಯಿಂದ ‘ನಿರುದ್ಯೋಗ ಭತ್ತೆ’ ಪಡೆಯುತ್ತಿದ್ದಾರೆ. ಅಥವಾ ಅವರು ಕೊಟ್ಟ ‘ಜವಾನ’ನ ಕೆಲಸ ಪಡೆದು ಬಕೆಟ್ ಪೊರಕೆ (ಸರ್ಕಾರಿ ಕೆಲಸದ ವ್ಯಾಮೋಹಕ್ಕೆ ಪದವಿ ಪಡೆದವರೂ!) ಹಿಡಿಯಬೇಕಾಗುತ್ತದೆ. ಮಲಯಾಳಂ ಭಾಷಾ ಮಾಧ್ಯಮದ ಅಭ್ಯರ್ಥಿಗಳು ಆಳುತ್ತಿದ್ದಾರೆ. ಕನ್ನಡ ಮಾಧ್ಯಮದ ಇವರು ಅಳುತ್ತಿದ್ದಾರೆ.

ಗಡಿನಾಡು ಪಟ್ಟ: ಭಾಷಾವಾರು ಪ್ರಾಂತ್ಯ ವಿಂಗಡನೆಯ ವೇಳೆ ಅದೇಕೆ ಕಾಸರಗೋಡನ್ನು ಕೇರಳಕ್ಕೆ ಸೇರಿಸಿದರೋ ಗೊತ್ತಿಲ್ಲ. ಅಂದು ಇಲ್ಲಿ ಮಾತನಾಡುತ್ತಿದ್ದ ಭಾಷೆ ಮಲಯಾಳಂ ಆಗಿರಲಿಲ್ಲ (ಮಾಪ್ಪಿಳ, ಬ್ಯಾರಿ, ಅರೆಭಾಷೆ ಎಂದು ಈಗ ಕರೆಯುತ್ತಿದ್ದಾರೆ). ಕನ್ನಡ ಮಾತೃಭಾಷೆಯಾಗಿ ವ್ಯವಹಾರ ಮಾಡುವವರೇ ಅಧಿಕವಾಗಿದ್ದರೂ ಕರ್ನಾಟಕಕ್ಕೆ ಸೇರಿಸದೆ ಅನ್ಯಾಯ ಮಾಡಲಾಗಿತ್ತು ಎಂಬುದು ಜಿಲ್ಲೆಯ ಬಗ್ಗೆ ಅರಿತ ತಜ್ಞರ ಅಭಿಮತ. ಆದರೆ ಕೇರಳದ ಆಡಳಿತಾಧಿಕಾರಿಗಳ ಹಟದಿಂದಾಗಿ ಈ ವಿಸ್ತಾರ ಭೂಪ್ರದೇಶದ ಜನರು ತಮ್ಮಿಷ್ಟದ ಕನ್ನಡದ ಬದಲು ಸರ್ಕಾರಗಳು ಹೇರಿದ ಮಲಯಾಳಂ ಭಾಷೆಯೊಂದಿಗೆ ಬದುಕನ್ನು ಬೆಸೆದುಕೊಳ್ಳಬೇಕಾಗಿ ಬಂತು ಎನ್ನುವುದು ಇತಿಹಾಸ.

ಕರ್ನಾಟಕದ ಯಾವುದೇ ಪ್ರದೇಶವನ್ನು ‘ಗಡಿನಾಡು’ ಎಂದು ಕರೆಯುವುದರಲ್ಲಿ ಅರ್ಥವಿದೆ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ (ಈಗ ಕಲ್ಯಾಣ ಕರ್ನಾಟಕ)ಗಳ ಭಾಗದಲ್ಲೆಲ್ಲ ಕೆಲವು ಗ್ರಾಮಗಳಷ್ಟೇ ‘ಗಡಿನಾಡು’ ಅರ್ಥವ್ಯಾಪ್ತಿಯ ಸಂಕಷ್ಟದಲ್ಲಿವೆ. ಆದರೆ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಕೇರಳದ ಕಾಸರಗೋಡು ಮಾತ್ರ 79 ಗ್ರಾಮಗಳನ್ನು (ಅಂದು ಕನ್ನಡ ಭಾಷಿಕ ಪ್ರದೇಶ) ಒಳಗೊಂಡ ಒಂದು ಜಿಲ್ಲೆ, ಸಮಗ್ರವಾಗಿ ‘ಗಡಿನಾಡು’ ಎಂಬ ಹಣೆಪಟ್ಟಿ ಪಡೆದುಕೊಂಡಿರುವುದು ಐತಿಹಾಸಿಕ ದುರಂತ. ‘ಗಡಿ’ ಎಂದರೆ ಸೀಮೆ, ಭಾಗ ಎಂಬ ಅರ್ಥದಂತೆ ಗಾಯ ಎಂಬರ್ಥವೂ ಇದೆ, ಇಲ್ಲಿನ ಸೌಲಭ್ಯ ವಂಚಿತ, ಅರ್ಹತೆಯನ್ನು ಬಳಸಲಾಗದ ಕನ್ನಡಿಗರಿಗೆ ಭಾಷಾವಾರು ಪ್ರಾಂತ್ಯ ವಿಂಗಡನೆ ಪ್ರಕರಣ ಆರದ ಗಾಯದಂತೆ ಬದುಕಿನಲ್ಲಿ ನೋಯಿಸುತ್ತಿದೆ.

ಸಂತ್ರಸ್ತರು: ಅಂದೇ ಸರಿಪಡಿಸಬಹುದಿತ್ತು, ಕೇಂದ್ರ ಸರ್ಕಾರದ ಆಡಳಿತಾಧಿಕಾರಿಗಳು ಮಾಡಿಲ್ಲ, ಅಥವಾ ಅವರಿಗೆ ಮನದಟ್ಟು ಮಾಡಿಕೊಡುವಲ್ಲಿ ಇಲ್ಲಿಯ ಕನ್ನಡಿಗರು ಸಫಲರಾಗಲಿಲ್ಲ. ಒಂದು ವಿಭಾಗ ಕನ್ನಡಿಗ ಹೋರಾಟಗಾರರೂ ತಾಂತ್ರಿಕ ಕಾರಣ ನೀಡಿ ಒಪ್ಪಲಿಲ್ಲ (ಮಹಾಜನ್ ವರದಿ, ಸರೋಜಿನಿ ಮಹಿಷಿ ವರದಿ). ಈಗಲೂ ಇಲ್ಲಿನ ಕನ್ನಡಿಗ ಶಾಲಾ ವಿದ್ಯಾರ್ಥಿಗಳಿಗೆ ಹಿಂದಿ, ಇಂಗ್ಲಿಷ್ , ಸಂಸ್ಕೃತ ಇತ್ಯಾದಿಗಳಿಗೆ ಬೋಧನೆ ಮಲಯಾಳಂ ವ್ಯಾಖ್ಯಾನದೊಂದಿಗೆ ಆಗುತ್ತಿದೆ ಕನ್ನಡ ಭಾಷೆಯಲ್ಲಿ ಅಲ್ಲ. 10ನೇ ತರಗತಿ ವರೆಗೆ ಎಲ್ಲವನ್ನೂ ಅಷ್ಟಿಷ್ಟಾದರೂ ಕನ್ನಡದಲ್ಲಿ ಕಲಿತ ವಿದ್ಯಾರ್ಥಿ ಜಿಲ್ಲೆಯಲ್ಲಿ ಕಾಲೇಜು ಮೆಟ್ಟಿಲೇರಿದಾಗ ಇದ್ದಕ್ಕಿದ್ದಂತೆ ಇಂಗ್ಲಿಷ್ ಮಾಧ್ಯಮ ಅರಗಿಸಿಕೊಳ್ಳಬೇಕಾಗುತ್ತದೆ. ಮಲಯಾಳಿ ವಿದ್ಯಾರ್ಥಿಗಳಿಗಾದರೆ ವಿಷಯ ಬೋಧನೆ, ಪರೀಕ್ಷೆ ಬರವಣಿಗೆಗೆ ಮಾತೃಭಾಷೆಯಲ್ಲಿ ಅವಕಾಶ ಇದೆ. ಆದರೆ ಕನ್ನಡಿಗರು ಅರ್ಥವಾಗದ ಮಲಯಾಳಂ ಅಥವಾ ಇಂಗ್ಲಿಷ್ನಲ್ಲಿ ಪಾಠ ಕೇಳಿ, ಇಂಗ್ಲಿಷ್ನಲ್ಲಿ ವಿಷಯ ಓದಿ, ಇಂಗ್ಲಿಷ್ನಲ್ಲೇ ಬರೆಯುವ ಸ್ಥತಿ ಇಲ್ಲಿರುವುದನ್ನು ಸರ್ಕಾರಗಳು ಗಂಭೀರವಾಗಿ, ಅಮಾನವೀಯ ಎಂದು ಪರಿಗಣಿಸಿಲ್ಲ. ಇಷ್ಟೆಲ್ಲ ಆದರೂ ಕೇರಳವಾಗಲೀ, ಕರ್ನಾಟಕವಾಗಲಿ ಇಲ್ಲಿನ ಕನ್ನಡಿಗ ಜನರನ್ನು ‘ಸಂತ್ರಸ್ತರು’ (sufferer- ನೊಂದವರು) ಎಂದು ಶಾಸನಾತ್ಮಕವಾಗಿ ಪರಿಗಣಿಸಿ, ಸೌಲಭ್ಯ, ನೌಕರಿ, ಶಿಕ್ಷಣ ನೀಡದಿರುವುದು ಕೂಡ ಹೋರಾಟಗಳು ಸರಿಯಾದ ಸಾರಿಯಲ್ಲಿ ನಡೆದಿಲ್ಲ ಎಂಬುದಕ್ಕೆ ಸಾಕ್ಷಿ.

ಹೊಸ ಸವಾಲುಗಳು: ಕಾಸರಗೋಡು ಜಿಲ್ಲೆಯ ಅಚ್ಚಕನ್ನಡ ಭೂ ಪ್ರದೇಶವನ್ನು ಭಾಷಿಕವಾಗಿ, ಭೌಗೋಳಿಕವಾಗಿ, ವೃತ್ತಿಪರವಾಗಿ ಮಲಯಾಳೀಕರಣಕ್ಕೆ ಕೇರಳ ಸರ್ಕಾರ ನಡೆಸಿದ ಪ್ರತ್ಯಕ್ಷ ಪ್ರಯತ್ನಗಳನ್ನು ಕನ್ನಡಿಗರು ಭಾಗಶಃ ವಿಫಲಗೊಳಿಸಿದ್ದರೂ, ಪರೋಕ್ಷ ಪ್ರಯತ್ನ ಬಹುತೇಕ ಸಫಲವಾಗಿದೆ. ಮಲಯಾಳಂ ಕಡ್ಡಾಯ ಜಾರಿ ಪ್ರಯತ್ನ, ಕನ್ನಡ ಮಾಧ್ಯಮ ತರಗತಿಗೆ ಮಲಯಾಳಿ ಶಿಕ್ಷಕರ ನೇಮಕಾತಿ, ಅರ್ಜಿ– ಪ್ರಕಟಣೆ, ಫಲಕಗಳಲ್ಲಿ ದಿಢೀರ್ ಕನ್ನಡ ನಾಪತ್ತೆಯಾಗುವುದು ಇತ್ಯಾದಿ ಸರ್ಕಾರಿ ಪ್ರಯತ್ನಗಳಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಕಾನೂನು ಹೋರಾಟ ನಡೆಯುತ್ತಿದೆ.

ಆದರೆ, ಈಗ ಮಾತೃಭಾಷೆಯೇ ಇಲ್ಲಿ ಬದಲಾಗುತ್ತಿದೆ. ಭಾಷಾವಾರು ಪ್ರಾಂತ್ಯ ವಿಂಗಡನೆಯ ಬಳಿಕ ದಶಕಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ಮಾತೃಭಾಷೆಯನ್ನು ಶಾಲೆ ಕಲಿಕೆಯ ಭಾಷೆಯಾದ ‘ಕನ್ನಡ’ ಎಂದೇ ನಮೂದಿಸಿ ಮಲಯಾಳಂ ಸರ್ಕಾರಕ್ಕೆ ಕನ್ನಡಿಗರು ಸೆಡ್ಡು ಹೊಡೆದಿದ್ದರು. ಆದರೆ ಇತ್ತೀಚಿನ ದಶಕಗಳಿಂದ ಸಹವರ್ತಿ ಭಾಷೆ ತುಳು ಜಿಲ್ಲೆಯ ಕನ್ನಡ ಅಸ್ಮಿತೆಗೆ ಮಾರಕವಾಗುತ್ತಿದೆ. ಬಹುತೇಕ ಈಗ ಮಾತೃಭಾಷೆ ತುಳು ಎಂದು ಬದಲಾಗಿದೆ. ಉಳಿದಂತೆ ಕನ್ನಡ ಭಾವನಾತ್ಮಕ ನಂಟು ಹೊಂದಿದ್ದರೂ ನೌಕರಿ, ಬದುಕು ಕಟ್ಟಲು ವಿಫಲವಾಗುತ್ತಿರುವುದರಿಂದ ಕಲಿಕೆಯ ಭಾಷೆ ಕನ್ನಡದದ ಜಾಗದಲ್ಲಿ ಇಂಗ್ಲಿಷ್ ಮಾಧ್ಯಮ ಅತಿಕ್ರಮಣ ಮಾಡಿದೆ. ಇವೆರಡೂ ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆಗೆ ನಡುಕ ತಂದಿದೆ. ಮಲಯಾಳಂ ಕಲಿಯುವ ಕನ್ನಡಿಗರ ಮಕ್ಕಳ ಸಂಖ್ಯೆಯೂ ಕಡಿಮೆ ಏನಲ್ಲ. ಇವೆಲ್ಲ ಕನ್ನಡ ಎಂಬ ಜನಮತ ಗಣನೆಯ ವೇಳೆ ಮಲಯಾಳಂ ಎದುರು ಕನ್ನಡದ ಸೋಲಿಗೆ ಪ್ರಬಲ ಕಾರಣವಾಗಬಹುದು.

ಕೃಷಿ ಅತಿಕ್ರಮಣ: ಗಡಿನಾಡು ಸಂಕಷ್ಟದೊಂದಿಗೆ ಜಿಲ್ಲೆಗೆ ಸರ್ಕಾರ ಕೊಟ್ಟ ಮತ್ತೊಂದು ಸಂಕಷ್ಟ ಎಂಡೊಸಲ್ಫಾನ್ ಪೀಡಿತ ಜಿಲ್ಲೆ ಎಂಬ ಕುಖ್ಯಾತಿ. ಎಂಡೊಸಂತ್ರಸ್ತರಿಗೆ ಸೌಲಭ್ಯಗಳೇನೋ ಅಷ್ಟಿಷ್ಟು ಸಿಕ್ಕಿದವು. ಆದರೆ ಜಿಲ್ಲೆಯ ಕನ್ನಡ ಅಸ್ಮಿತೆಗೆ ತದನಂತರದ ಬೆಳವಣಿಗೆಗಳು ವಜ್ರಾಘಾತ ನೀಡಿದುವು. ಎಂಡೊಪೀಡಿತ ಕನ್ನಡ ಪ್ರದೇಶಗಳಲ್ಲಿ ಸರ್ಕಾರಿ ಗೇರುತೋಟ (ಗೋಡಂಬಿ) ವ್ಯಾಪಕವಾಗಿದ್ದುವು, ಉಳಿದ ಕಡೆ ಅಡಿಕೆ, ತೆಂಗು, ಭತ್ತ, ಕರಿಮೆಣಸು ಇತ್ಯಾದಿ ಸ್ಥಳೀಯರೇ ನಿರ್ವಹಿಸುವ ಕೃಷಿಗಳಿದ್ದವು. ಸರ್ಕಾರಿ ಗೇರು ತೋಟಗಳಲ್ಲೂ ಬಹುತೇಕ ಕನ್ನಡ, ತುಳು ಸಿಬ್ಬಂದಿ, ಕಾರ್ಮಿಕರು, ಸ್ಥಳೀಯರು ಇದ್ದರು. ಆದರೆ, ಎಂಡೊಸಲ್ಫಾನ್ ಪ್ರಕರಣದ ಬಳಿಕ ಸರ್ಕಾರಿ ಗೇರು ತೋಟ ರಬ್ಬರ್ ತೋಟಗಳಾಗಿ ಬದಲಾಯಿತು. ಇಲ್ಲೆಲ್ಲ ಖಾಸಗಿ ರಬ್ಬರ್ ತೋಟಗಳೂ ಬೆಳೆದುವು. ಇದರೊಂದಿಗೆ ಸರ್ಕಾರದ ಮಲಯಾಳಿಕರಣಕ್ಕೆ ಕ್ರಾಂತಿಯ ವೇಗ ಲಭಿಸಿತು.

ಜತೆಗೆ, ಕನ್ನಡ ಪ್ರದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಗ್ರಾಮಾಂತರದಲ್ಲೂ ಕಲಿಕೆಯ ಆಕರ್ಷಣೆ, ಸೌಲಭ್ಯ ಇತ್ಯಾದಿ ಸರ್ಕಾರಕ್ಕೆ ಪರೋಕ್ಷ ಸಾಥ್ ನೀಡಿದುವು. ಗಡಿಕನ್ನಡ ‘ಉತ್ಸವ ಮೂರ್ತಿ’ ನೇಪಥ್ಯ ಸೇರಿತು. ರಬ್ಬರ್ ಕೃಷಿ ಹಾಗೂ ನಿರ್ವಹಣೆ ಸ್ಥಳೀಯ ಕನ್ನಡ– ತುಳು ಕೆಲಸಗಾರರಿಗೆ ಹೊಸತು. ಹೀಗಾಗಿ ಭಾರಿ ಸಂಖ್ಯೆಯ ಮಲಯಾಳಿ ಕಾರ್ಮಿಕರು, ಸಿಬ್ಬಂದಿ, ಮೇಲುಸ್ತುವಾರಿಗಳು ಕನ್ನಡ ನೆಲದಲ್ಲಿ ಹರಡಿಕೊಂಡರು. ಭೌಗೋಳಿಕವಾಗಿ ಈ ಪ್ರದೇಶಗಳು ಮಲಯಾಳೀಕರಣ ಆಗಿದ್ದರೆ, ಕಾರ್ಮಿಕರು ತಾವು ಕನ್ನಡ–ತುಳು ಕಲಿಯುವ ಬದಲು ಅಲ್ಲಿನವರೇ ಮಲಯಾಳಂ ಮಾತನಾಡುವಂತೆ ಮಾಡಿದರು. ರಬ್ಬರ್ ಮಂಡಳಿಯ ವ್ಯವಹಾರವೂ ಇದಕ್ಕೆ ಪೂರಕವಾಗಿತ್ತು ಎಂಬುದು ಗಮನಾರ್ಹ ಅಂಶ.

ಬದಲಾದ ಕನ್ನಡಿಗ: ಈಗ ಕಾಸರಗೋಡಿನ ಕನ್ನಡ–ತುಳು ಪ್ರದೇಶಗಳಾವುವೂ ಮಲಯಾಳಿ ನೌಕರರು, ಆಡಳಿತ ವ್ಯವಸ್ಥೆಗೆ ‘ಓಣಂ ಕೇರಾ ಮೂಲೆ’ಯಾಗಿ ಉಳಿದಿಲ್ಲ. ಹಿಂದೆಲ್ಲ ಸರ್ಕಾರ ಕೊಡುತ್ತಿದ್ದ ಓಣಂ ರಜೆ, ಓಣಂ ಪರೀಕ್ಷೆ, ಓಣಂ ಭತ್ತೆಯಷ್ಟನ್ನೇ ಅನುಭವಿಸುತ್ತಿದ್ದ ಕನ್ನಡಿಗರು ಈಗ ಮಲಯಾಳಿಗಳಂತೆ ಬದುಕಿನ ‘ವೇಷ’ ಬದಲಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕನ್ನಡ ಮನ–ಮನೆಯೊಳಗೆ ಸೆರೆಯಾಗಿದೆ. ಆಧುನಿಕ ಕೃಷಿ ನೀತಿ, ಮಾಹಿತಿ ತಂತ್ರಜ್ಞಾನ, ಸರ್ಕಾರಿ ಸೌಲಭ್ಯಗಳ ಫಲಾನುಭವಿಗಳಾಗಬೇಕಿದ್ದರೆ ‘ಕೇರಳ ರಾಜ್ಯದ ಪ್ರಜೆ’ಗಳಾಗಿರುವ ಕನ್ನಡಿಗರು ಮನದಲ್ಲಿ ಕನ್ನಡ, ಹೊರಗಡೆ ಮಲಯಾಳಿ ಆಗಿ ಬದುಕಬೇಕಿದೆ. ಬದುಕುವುದಕ್ಕಾಗಿ, ಮುಂದಿನ ಪೀಳಿಗೆ ಸಂಕಷ್ಟಕ್ಕೆ ಒಳಗಾಗದಿರಲಿ ಎಂಬ ಕಾರಣಕ್ಕೆ ಕರ್ನಾಟಕದ ಕಡೆಗೆ ದೈನ್ಯ ಅಥವಾ ದೈನೇಸಿ ನೋಟದ ಬೊಗಸೆ ಹಿಡಿದು, ಮಲಯಾಳಂ ಭಾಷೆಯತ್ತ ಪ್ರತಿಭಟನೆಯ ‘ಕತ್ತಿ ಝಳಪಿಸು’ವುದನ್ನು ಬಹುತೇಕ ನಿಲ್ಲಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಮಲಯಾಳಂ ಅಥವಾ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸುತ್ತಿದ್ದಾರೆ. ಕನ್ನಡ ಉಳಿಸುವ ಉದ್ದೇಶದಿಂದ ‘ಕರ್ನಾಟಕದ ಗಡಿನಾಡು’ ಎಂಬ ಹಣೆ ಪಟ್ಟಿ ಬಿಟ್ಟು ಕೇರಳ ಮಲಯಾಳಂ ಜತೆಗೆ ವಿಲೀನವಾಗುತ್ತಿದ್ದಾರೆ.

ಸಂಪನ್ಮೂಲದ ಕೊರತೆ: ಕಾಸರಗೋಡಿನಲ್ಲಿ ಮಲೆಯಾಳಂ ಅತಿಕ್ರಮಣದ ವಿರುದ್ಧ ಕನ್ನಡ ಪರ ಹೋರಾಟಕ್ಕೆ ಇದುವರೆಗೆ ರಾಜಕೀಯ ಬಲ ಹೇಗೆ ಇಲ್ಲವೋ, ಆರ್ಥಿಕ ಬಲವೂ ಇಲ್ಲ. ಹೋರಾಟಗಾರರೇ ವೆಚ್ಚ ಭರಿಸಬೇಕಾದ ಅನಿವಾರ್ಯತೆ. ಹೀಗಾಗಿ ಇದುವರೆಗೆ ಇದ್ದ ಹೋರಾಟದ ಕಾವು, ಕೆಚ್ಚು ಮುಂದಿನ ಪೀಳಿಗೆಗೆ ಮುಂದುವರಿಯುವ ಲಕ್ಷಣ ಕಾಣಿಸುತ್ತಿಲ್ಲ. ಕಡಲ ತೀರದ ಕನ್ನಡ ನೆಲ ಇದುವರೆಗೆ ‘ಮಲಯಾಳಂ ಕಡಲುಕೊರೆತ’ದ ಭೀತಿಯಲ್ಲಿದ್ದರೆ, ಈಗ ‘ಅದರೊಳಕ್ಕೇ ಕುಸಿದು’ ಅಸ್ತಿತ್ವ ಕಳೆದುಕೊಳ್ಳುವ ಆತಂಕವೂ ಸುಳಿದಾಡುತ್ತಿದೆ. ಇದು ಇಲ್ಲಿನ ಹಿರಿಯ ಹೋರಾಟಗಾರರ ಮಾತುಗಳಲ್ಲೇ ಕಾಣಿಸುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡು ಘಟಕದ ಅಧ್ಯಕ್ಷ ಎಸ್. ವಿ. ಭಟ್ ಹೋರಾಟದ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿ ಸಂಘಟನೆ, ಕಾನೂನು ಹೋರಾಟದ ಖರ್ಚು–ವೆಚ್ಚಗಳ ಆತಂಕವನ್ನು ಹಂಚಿಕೊಂಡರು. ‘ಇತ್ತೀಚಿನ ಕೆಲವು ವರ್ಷಗಳಿಂದ ಕನ್ನಡ ಶಾಲೆಗಳು ಕನ್ನಡ ಮಾಧ್ಯಮ ವಿಷಯಗಳಿಗೂ ಕನ್ನಡ ಅರಿಯದ ಮಲಯಾಳಂ ಶಿಕ್ಷಕರನ್ನು ನೇಮಿಸುವ ಕುತಂತ್ರ (ಉಪ್ಪಳ, ಬೇಕಲ, ಉದುಮ) ನಡೆಯುತ್ತಿದೆ. ಇದನ್ನು ಪ್ರತಿಭಟಿಸಿದ್ದೇವೆ. ಇದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದೇವೆ. ಕಾನೂನು ಚಟುವಟಿಕೆ ಪ್ರಗತಿಯಲ್ಲಿದೆ. ಆದರೆ ಸಮಸ್ಯೆ ಎಂದರೆ ಹೋರಾಟವಿರಲಿ, ಕಾನೂನು ಹೋರಾಟವಿರಲಿ ಖರ್ಚು–ವೆಚ್ಚ ಇರುತ್ತದೆ. ಇದನ್ನು ಮುಖಂಡರೇ ಭರಿಸಬೇಕಾಗುತ್ತದೆ. ಸಂಘಟನೆಯ ಹಣ ಇಲ್ಲ. ಹೋರಾಟದ ವೆಚ್ಚಗಳಿಗೆ ಚಂದಾ, ದೇಣಿಗೆ, ನೆರವು ನೀಡುವ ಗಡಿನಾಡಿನ ಕನ್ನಡಿಗರು ಇಲ್ಲ. ಜಿಲ್ಲಾ ನ್ಯಾಯಾಲಯಗಳಲ್ಲಿನ ಕಾನೂನು ಹೋರಾಟದ ವೆಚ್ಚ ಹೇಗಾದರೂ ಭರಿಸಬಹುದು. ಆದರೆ ಹೈಕೋರ್ಟ್, ಸುಪ್ರೀಂ ಕೋರ್ಟ್ಗಳಲ್ಲಿ ಕನ್ನಡಿಗರ ಸಮಸ್ಯೆಯ ಬಗ್ಗೆ ಹೋರಾಟ ಮಾಡಬೇಕಿದ್ದರೆ ಲಕ್ಷಾಂತರದ ಇಡುಗಂಟು, ಶುಲ್ಕ ಬೇಕಾಗುತ್ತದೆ. ಇದನ್ನು ನಾವು ಎಲ್ಲಿಂದ ತರಲಿ’ ಎಂದು ಅವರು ಪ್ರಶ್ನಿಸುತ್ತಾರೆ. ಕನ್ನಡ ಭಾಷಾ ಅಲ್ಪಸಂಖ್ಯಾತ ಎಂಬ ಸೌಲಭ್ಯ ಪಡೆದವರು, ಗಡಿನಾಡಿನಲ್ಲಿ ನೌಕರಿ ಪಡೆದವರು, ಸಾಹಿತ್ಯಕ ಫಲಾನುಭವಿಗಳು, ಹೋರಾಟಗಳ ಪ್ರಯೋಜನ ಪಡೆದವರು– ಹೋರಾಟಕ್ಕೆ ಪ್ರತ್ಯಕ್ಷ ಬರಲಾರರು. ಆದರೆ ಮುಂದಿನ ಹೋರಾಟಕ್ಕೆ ಆರ್ಥಿಕ ನೆರವು ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯ ಅವರದು, ಆದರೆ ಕೇಳಲು ಮುಖಂಡರಿಗೆ ಸಂಕೋಚ, ‘ಕೇಳಿಸಿಕೊಳ್ಳಲು’ ಸಂಪನ್ನ ಗಡಿನಾಡ ಕನ್ನಡಿಗರಿಗೂ ಮುಜುಗರ. ಇದರಿಂದ ಹೋರಾಟಕ್ಕೆ ಗರ ಬಡಿದಂತಾಗಿರುವುದಂತೂ ಸತ್ಯ.

ಉತ್ತರವೂ ಕ್ಷೀಣ: ‘ಕನ್ನಡದ ಅಸ್ಮಿತೆಗಾಗಿ ಹೋರಾಟ ಕ್ಷೀಣವಾಗುತ್ತಿದೆಯೇ’ ಎಂಬ ಪ್ರಶ್ನೆಗೆ ಗಡಿನಾಡ ಕನ್ನಡ ಹೋರಾಟಗಾರರಲ್ಲಿಪ್ರಮುಖರಾದ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಶಿವರಾಮ ಕಾಸರಗೋಡು ‘ಇಲ್ಲ’ ಎಂದ ಉತ್ತರದಲ್ಲಿ ದೃಢತೆ ಕಾಣಿಸಲಿಲ್ಲ.

ಕನ್ನಡ ಗ್ರಾಮ: ‘ಸರ್ಕಾರದಿಂದಲೇ ಎಲ್ಲವನ್ನೂ ಬಯಸುವ ಬದಲು ಮೀಪುಗುರಿ ಎಂಬಲ್ಲಿ ‘ಕನ್ನಡ ಗ್ರಾಮ’ ಎಂಬ ಚಿಂತನೆಯ ಸಾಕ್ಷಾತ್ಕಾರದತ್ತ ಅವರು ಪ್ರಾಯೋಗಿಕ ಪ್ರಯತ್ನದಲ್ಲಿದ್ದಾರೆ. ಕನ್ನಡಿಗರಿಗೆ ವಸತಿ ಸಹಿತ ವೃತ್ತಿ ತರಬೇತಿ, ಕನ್ನಡ ಕಂಪ್ಯೂಟರ್ ತರಬೇತಿ, ಧರ್ಮಸ್ಥಳದ ಸಂಸ್ಥೆಗಳು ನಡೆಸುವ ಶೈಲಿ ಸ್ವಾವಲಂಬಿ ವರಮಾನ ಒದಗಿಸುವ ಕಲಿಕೆ ಕನ್ನಡ ಭಾಷಾ ಮಕ್ಕಳಿಗೆ ನೀಡಬೇಕೆನ್ನುವ ಆಶಯ ಇಲ್ಲಿದೆ. ಬಹುಕೋಟಿ ಮೊತ್ತದ ಯೋಜನೆ 3 ದಶಕಗಳ ಮೆಲುಕು ಇದೇ ನವೆಂಬರ್ 4ರಿಂದ ಒಂದು ವರ್ಷ ನಡೆಯಲಿದೆ. ಇದೇ ಡಿಸೆಂಬರ್ನಲ್ಲಿ ಕನ್ನಡ ಸಮ್ಮೇಳನವೂ ಇದೆ’ ಎನ್ನುತ್ತಾರೆ ರೂವಾರಿ ಶಿವರಾಮ ಕಾಸರಗೋಡು.

ಹೋರಾಟಗಾರರ ನೋವು: ‘ಕನ್ನಡಕ್ಕಾಗಿ ಹೋರಾಟ ಜನ ಪರವಾಗಿ ಕೊನೆಮುಟ್ಟುವವರೆಗೂ ಮುಂದುವರಿಸುತ್ತೇವೆ’ ಎನ್ನುವ ಹಲವರು ಮಾತಿನ ಒಂದು ಹಂತದಲ್ಲಿ ‘ಹೋರಾಟಕ್ಕೆ ಜನರೇ ಸಿಗುತ್ತಿಲ್ಲ’, ‘ನಿವೃತ್ತ ಕನ್ನಡ ಸರ್ಕಾರಿ ನೌಕರರೆಲ್ಲ ಬಹುಭಾಗ ಮಂಗಳೂರು, ಪುತ್ತೂರು ಕಡೆ ವಲಸೆ ಹೋಗಿ ಅಲ್ಲಿ ನೆಲೆಸಲು ಪ್ರಯತ್ನಿಸುತ್ತಾರೆ’, ‘ಕನ್ನಡ ಹೋರಾಟಕ್ಕೆ ಕರೆದರೆ ಪ್ರಯೋಜನ ಪಡೆದವರೇ ಮತ್ತೆ ಬರುತ್ತಿಲ್ಲ’ ಎಂಬರ್ಥದ ನೋವನ್ನೂ ತೋಡಿಕೊಳ್ಳುತ್ತಾರೆ. ಇಷ್ಟು ವರ್ಷ ಹೋರಾಟದ ಚುಕ್ಕಾಣಿ ಹಿಡಿದ ಅನೇಕರ ಅಳಲುಗಳಲ್ಲಿ ಇಂಥ ದಾಖಲಿಸಲಾಗದ ಪಿಸುನುಡಿಗಳೂ ಇರುತ್ತವೆ.

ಕ್ಲಾಸ್–ಮಾಸ್: ಭಾಷಾವಾರು ಪ್ರಾಂತ್ಯ ವಿಂಗಡನೆಯ ಬಳಿಕ ಕಾಸರಗೋಡು ಮಲಯಾಳಂ ಭಾಷೆಯ ತೆಕ್ಕೆಗೆ ಬಿದ್ದುದು ಅಂದಿನ ಅಚ್ಚಗನ್ನಡ ನೆಲದ ಜನರಿಗೆ ತಲ್ಲಣ ಮೂಡಿಸಿತು. ಅಂದು ಹೋರಾಟದ ಮುಂಚೂಣಿಯಲ್ಲಿ ಸರ್ಕಾರಿ ನೌಕರರು, ಶಿಕ್ಷಕರು ಇದ್ದರು. ಒಂದರ್ಥದಲ್ಲಿ ಅಂದೆಲ್ಲ ‘ಅಕಾಡೆಮಿಕ್ ಶೈಲಿಯ ಹೋರಾಟ’ವನ್ನು ಪಡೆದುಕೊಂಡಿತ್ತು. ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಸೀಮಿತವಾಗಿತ್ತು. ಶಿಕ್ಷಕರು, ಪ್ರಾಧ್ಯಾಪಕರು, ವಕೀಲರು, ಕವಿ–ಸಾಹಿತಿಗಳೇ ಇರುತ್ತಿದ್ದರು. ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಛಾಪು ಮೂಡಿಸಿದವರೇ ಇಲ್ಲೆಲ್ಲ ಕಾಣಿಸಿಕೊಳ್ಳುತ್ತಿದ್ದರು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಜನವಿಭಾಗ ಕನ್ನಡ ಹೋರಾಟಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಚಾಲಕರು, ಇತರ ಕಾರ್ಮಿಕರು ಮುಂಚೂಣಿಗೆ ಬರುತ್ತಿದ್ದಾರೆ. ಹೋರಾಟದ ಚುಕ್ಕಾಣಿ ಈಗ ‘ಕ್ಲಾಸ್’ ಹಂತದಿಂದ ‘ಮಾಸ್’ ಹಂತಕ್ಕೆ ತಲುಪಿದೆ. ಆದಕ್ಕಾಗಿ ಕೇರಳದ ಮಲಯಾಳಿ ಭಾಷಾ ಬಲ ಹೊಂದಿ ಪಕ್ಷಗಳು ಕಾಸರಗೋಡಿನಲ್ಲಿ ಹಿಂದೆಲ್ಲ ‘ಕನ್ನಡದ ಒಣ ನಗು’ ಚೆಲ್ಲುತ್ತಿದ್ದರೆ, ಈಗ ‘ಕನ್ನಡದ ಮುಖವಾಡ’ ಧರಿಸ ತೊಡಗಿವೆ.

ಚುನಾವಣೆಗಷ್ಟೇ ಕನ್ನಡ ಪ್ರೀತಿ: ಪ್ರತೀ ಬಾರಿ ಚುನಾವಣೆ ಬಂದಾಗಲೂ ಕಾಸರಗೋಡು ಜಿಲ್ಲೆಯ ‘ಅಚ್ಚ ಕನ್ನಡ ಪ್ರದೇಶ’ಗಳಲ್ಲಿ ಮಲಯಾಳ ಅಭ್ಯರ್ಥಿಗಳ ಕನ್ನಡದ ಬಗ್ಗೆ ವಿಶೇಷ ಒಲವು ತೋರುತ್ತಾರೆ. ಮತ ಎಣಿಕೆ, ಫಲಿತಾಂಶ ಪ್ರಕಟವಾಗುವುದರೊಂದಿಗೆ ಅದು ಕೊನೆಗೊಳ್ಳುತ್ತದೆ. ಒಂದೆರಡು ಸಲ ಸ್ವಲ್ಪ ಮುಂದುವರಿದು ವಿಧಾನಸಭೆಯಲ್ಲಿ ‘ಕನ್ನಡ’ದಲ್ಲೇ (ಅಥವಾ ಮಲಯಾಳಂನಲ್ಲಿ ಬರೆದ ಕನ್ನಡ ಒಕ್ಕಣೆ) ಪ್ರಮಾಣ ವಚನ ಓದಿ ಜಿಲ್ಲೆಯ ಕನ್ನಡಿಗರತ್ತ ವಾರೆಗಣ್ಣು ಬೀರುತ್ತಾರೆ. ಇದನ್ನೆಲ್ಲ ಮೀರಿ ಇಲ್ಲಿನ ಕನ್ನಡಿಗರಿಗೆ ಕನ್ನಡ ಬಳಸಿ ಬದುಕುವ, ಬದುಕಲು ಗಳಿಸುವ ಹಕ್ಕು ಪ್ರತಿಪಾದಿಸಲು ಅನುಕೂಲವಾಗುವಂತೆ ಶಾಸನಾತ್ಮ ಪರಿಣಾಮ ಬೀರುವ ಇಚ್ಛಾಶಕ್ತಿ ಯಾರೂ ಮಾಡಿದಂತಿಲ್ಲ. ಇಷ್ಟು ವರ್ಷಗಳ ‘ತೀವ್ರ ಹೋರಾಟ’ ಈಗ ಇಲ್ಲಿನ ‘ಗಡಿನಾಡ ಕನ್ನಡಿಗ’ರಿಗೆ ಲಭಿಸಿರುವ ಶಾಸನಾತ್ಮಕ ಅವಕಾಶಗಳೆಂದರೆ

1. ಕನ್ನಡದಲ್ಲಿ ಕಲಿಕೆ. 2. ಮಲೆಯಾಳದ ಜತೆ ಕನ್ನಡದಲ್ಲಿ ಬರೆದ ಅರ್ಜಿ ಫಾರಂ, ಕೆಲವೊಮ್ಮೆ ತಿಳಿವಳಿಕೆ ಪ್ರಕಟಣೆಗಳು. 3. ಶೈಕ್ಷಣಿಕವಾಗಿ ಶೇಕಡ 5 ಪ್ರಮಾಣದ ಮೀಸಲಾತಿ. ಇಷ್ಟೇ. ಇನ್ನುಳಿದಂತೆ ಸಾಹಿತ್ಯ ಪರಿಷತ್ತು, ಲೋಕಸೇವಾ ಆಯೋಗ, ಸ್ಥಳೀಯ ಅಕಾಡೆಮಿಗಳು ಇತ್ಯಾದಿ ಸಂಸ್ಥೆಗಳಿಗೆ ಕೆಲವು ‘ಕನ್ನಡ ಹೋರಾಟಗಾರ’ರನ್ನು ನೇಮಕ ಮಾಡಲಾಗುತ್ತದೆ ಅಥವಾ ಅವರ ಪರೋಕ್ಷ ‘ಶಿಫಾರಸಿನಂತೆ’ ವ್ಯಕ್ತಿಗಳನ್ನು ನೇಮಕ ಮಾಡುವ ಪರಿಪಾಠವೂ ಇಲ್ಲಿದೆ. ಇಂಥ ‘ಮೂಗಿಗೆ ತುಪ್ಪ ಸವರುವ’ ಕಾರ್ಯ ನಿರಂತರ ನಡೆದಿದೆ, ನಡೆಯುತ್ತಿದೆ.

‘ನೌಕರಿಯ ಸ್ಪರ್ಧೆಗಳಲ್ಲಿ ಮಲಯಾಳದಲ್ಲೇ ಪರೀಕ್ಷೆ ಬರೆಯುವವರೊಂದಿಗೆ ಸ್ಪರ್ಧಿಸುವ ಸಾಂವಿಧಾನಿಕ ‘ಅಸಮಾನತೆ’ ಬಗೆಹರಿದಿಲ್ಲ. ಸರ್ಕಾರಿ ಶಾಸನಾತ್ಮಕ ಪ್ರಕಟಣೆ (ರಾಜ್ಯ ಪತ್ರ, ಗೆಜೆಟ್ ನೋಟಿಫಿಕೇಶನ್), ಇತರ ಪ್ರಕಟಣೆಗಳನ್ನು ಕನ್ನಡದಲ್ಲಿ ಓದು ಅನುಕೂಲ ಸ್ವತಂತ್ರ ಜಿಲ್ಲೆಯಾಗಿ ಮೂರು ದಶಕಗಳಾದರೂ ಸಮರ್ಪಕವಾಗಿ ಈ ಕನ್ನಡಿಗರಿಗೆ ಲಭಿಸಿಲ್ಲ. ಸರ್ಕಾರಿ ಆಡಳಿತ ಯಂತ್ರದ ಚಟುವಟಿಕೆಯನ್ನು ಸ್ವಂತ ಮಾತೃಭಾಷೆಯಲ್ಲಿ ಅರಿಯುವ ಹಕ್ಕು ಇವರಿಗೆ ಲಭಿಸಿಲ್ಲ’ ಎನ್ನುವುದು ವಿಷಯ ತಜ್ಞರ ಅಭಿಮತ.

ಉಪಚುನಾವಣೆಯಲ್ಲಿ ಕನ್ನಡ ಚಮತ್ಕಾರ: ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಹಂತದ ಮಾನದಂಡಗಳಲ್ಲಿ ‘ಭಾಷಾ ಅಲ್ಪಸಂಖ್ಯಾತ’ ಅರ್ಹತೆ ಇದೇ ಮೊದಲ ಬಾರಿಗೆ ಬಂದಿರುವುದನ್ನು ಕನ್ನಡಿಗರು ಹೆಮ್ಮೆಯಿಂದ ಹೇಳುತ್ತಾರೆ. ಕೇರಳ ಮಾಧ್ಯಮಗಳೂ ಇದನ್ನೇ ಚರ್ಚಿಸಿದುವು. ಮೂವರು ಅಭ್ಯರ್ಥಿಗಳೂ ‘ಗಡಿನಾಡ ಕನ್ನಡಿಗ’ರು ಅಥವಾ ಸಮರ್ಪಕ ಕನ್ನಡ ಬಲ್ಲವರೇ ಅಗಿದ್ದರು. ಫಲಿತಾಂಶವೂ ಅಂತೆಯೇ ಆಯಿತು. ಆದರೆ ‘ಅಚ್ಚ ಕನ್ನಡಿಗ’ ಎಂದು ಹೇಳಿಕೊಂಡವರನ್ನು ಅದೇ ಕನ್ನಡಿಗರು ವಿಧಾನ ಸಭೆಗೆ ಕಳಿಸಿಲ್ಲ. ಈ ಬಾರಿಯಾದರೂ ಕಾಸರಗೋಡಿನ ಅರ್ಹತೆ ಇದ್ದೂ ನೊಂದ ಕನ್ನಡಿಗರಿಗೆ ‘ಭಾಷೆ ಆಧರಿತ ಪ್ರಯೋಜನ’ ಲಭಿಸುತ್ತದೆಯೇ? ಅಥವಾ ಇಲ್ಲಿನ ಹೋರಾಟಕ್ಕೆ ಆಡಳಿತ ಯಂತ್ರದ ‘ಹೊಸ ಶೈಲಿ’ ಪ್ರತಿಕ್ರಿಯೆ ಇದಾಗಿರಬಹುದೇ? ಎಂಬುದು ಜಿಜ್ಞಾಸೆಯ ವಿಷಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.