ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ನೀಡಿರುವ ಅನುಮತಿಗೆ ಅಸ್ತು ಎಂದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಜಮೀನು ಮಾರಾಟ ಮಾಡಿದ್ದ ಜೆ.ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್ ಇದೇ 23ಕ್ಕೆ ನಿಗದಿಪಡಿಸಿದೆ.

ರಿಟ್ ಮೇಲ್ಮನವಿಗಳ ಅರ್ಜಿದಾರರ ಪರ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ದುಷ್ಯಂತ ದವೆ ಅವರು ಬುಧವಾರ ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿ, ‘ಈ ಎರಡೂ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಪರಿಗಣಿಸಬೇಕು’ ಎಂದು ಕೋರಿದರು.

ಜೆ.ದೇವರಾಜು ಪರ ಮೇಲ್ಮನವಿಯನ್ನು ಉಲ್ಲೇಖಿಸಿದ ದುಷ್ಯಂತ ದವೆ ಅವರು, ‘ಈಗ್ಗೆ 25 ವರ್ಷಗಳ ಹಿಂದೆ ನಡೆದಿರುವ ಈ ಪ್ರಕರಣದಲ್ಲಿ ಅರ್ಜಿದಾರರನ್ನು ಪಕ್ಷಕಾರರನ್ನಾಗಿ ಮಾಡದೇ ಏಕಸದಸ್ಯ ನ್ಯಾಯಪೀಠ ಕಟು ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರು ಸಣ್ಣ ಭೂಮಾಲೀಕರು. ಆದರೆ, ಶಕ್ತಿಯುತ ರಾಜಕಾರಣಿಗಳ ರಾಜಕೀಯ ಕೆಸರೆರಚಾಟದಲ್ಲಿ ಅವರನ್ನು ಸಿಲುಕಿಸಲಾಗಿದೆ’ ಎಂದು ಆಕ್ಷೇಪಿಸಿದರು.

‘ಅರ್ಜಿದಾರರು ಸಕಾರಣವಿಲ್ಲದೇ ಯಾತನೆ ಅನುಭವಿಸುವಂತಾಗಿದ್ದು, ಕ್ರಿಮಿನಲ್ ವಿಚಾರಣೆಗೆ ಗುರಿಯಾಗಬೇಕಿದೆ. ಆದ್ದರಿಂದ, ಈ ಮೇಲ್ಮನವಿಗಳನ್ನು ಇದೇ 22ಕ್ಕೆ ವಿಚಾರಣೆಗೆ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಹೊಣೆಗಾರಿಕೆ ಎದುರಿಸಬೇಕಾಗುತ್ತದೆ’ ಎಂದರು. ಇದನ್ನು ಆಲಿಸಿದ ನ್ಯಾಯಪೀಠ ಇದೇ 23ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಮೇಲ್ಮನವಿಗಳಲ್ಲಿ ಒಂದರ ಫಿರ್ಯಾದುದಾರ ಸ್ನೇಹಮಯಿ ಕೃಷ್ಣ, ಕೇಂದ್ರ ಗೃಹ ಸಚಿವಾಲಯ, ಸಿಬಿಐ, ರಾಜ್ಯ ಸರ್ಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ. ಮತ್ತೊಂದು ಮೇಲ್ಮನವಿಯಲ್ಲಿ ದೂರುದಾರರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ, ಎಸ್.ಪಿ.ಪ್ರದೀಪ್ ಕುಮಾರ್, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ.

ಏನಿದು ಪ್ರಕರಣ?

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಒಡೆತನದ್ದು ಎನ್ನಲಾದ ಕೃಷಿ ಭೂಮಿಯನ್ನು ಮುಡಾ ವಶಪಡಿಸಿಕೊಂಡು ಅದಕ್ಕೆ ಪರ್ಯಾಯವಾಗಿ 14 ನಿವೇಶನಗಳನ್ನು ಪ್ರಮುಖ ಜಾಗದಲ್ಲಿ ಹಂಚಿಕೆ ಮಾಡಲಾಗಿದೆ’ ಎನ್ನುವುದು ವಿವಾದದ ಕೇಂದ್ರ ಬಿಂದು.

‘ಪರಿಹಾರ ರೂಪದಲ್ಲಿ ನೀಡಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆಯೇ ಅಕ್ರಮದಿಂದ ಕೂಡಿದೆ. ಇಡೀ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರು ಪ್ರಭಾವ ಬೀರಿರುವುದು ಕಂಡು ಬಂದಿದೆ’ ಎಂದು ಆರೋಪಿಸಲಾದ ಮೂರು ಖಾಸಗಿ ದೂರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಇವುಗಳನ್ನು ಆಧರಿಸಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಕಲಂ (ಪಿಸಿ ಕಾಯ್ದೆ) 17ಎ ಅಡಿ ತನಿಖೆ ನಡೆಸಲು 2024ರ ಆಗಸ್ಟ್ 17ರಂದು ಮಂಜೂರಾತಿ ನೀಡಿದ್ದರು.

‘ರಾಜ್ಯಪಾಲರು ಹೊರಡಿಸಿರುವ ಈ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಕಳೆದ 2024ರ ಸೆಪ್ಟೆಂಬರ್ 24ರಂದು ಅಸ್ತು ಎಂದು ತೀರ್ಪು ನೀಡಿದ್ದರು. ಈ ಬೆನ್ನಲ್ಲೇ ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.