ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಲ್ಲಿ ಯಾರೂ ಕಿಂಗ್‌ ಮೇಕರ್‌ ಆಗಲು ಸಾಧ್ಯವಿಲ್ಲ: ಸತೀಶ ಜಾರಕಿಹೊಳಿ

ಡಿಕೆಶಿ ಮಾತಿಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ
Published : 7 ಅಕ್ಟೋಬರ್ 2024, 15:17 IST
Last Updated : 7 ಅಕ್ಟೋಬರ್ 2024, 15:17 IST
ಫಾಲೋ ಮಾಡಿ
Comments

ಬೆಂಗಳೂರು: ‘ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಕಿಂಗ್‌ ಮೇಕರ್‌ ಆಗಲು ಸಾಧ್ಯವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ನಾನು ಕಾಂಗ್ರೆಸ್ ಪಕ್ಷಕ್ಕಾಗಿ ನಿಂತಿದ್ದೇನೆ. ಪಕ್ಷದ ಕೆಲಸಕ್ಕೆ 12 ಗಂಟೆ ಸಮಯ ನೀಡುತ್ತಿದ್ದೇನೆ. ಹೆದರುವ ಪರಿಸ್ಥಿತಿ ಇಲ್ಲ’ ಎಂದರು.

‘ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳ ಮಾಹಿತಿ ಹೈಕಮಾಂಡ್‌ಗೆ ಹೋಗುತ್ತದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ತುಮಕೂರಿನಲ್ಲೂ ನಾನು ಮತ್ತು ಪರಮೇಶ್ವರ ಭಾನುವಾರ ಭೇಟಿ ಆಗಿದ್ದೆವು. ಈ ಹಿಂದೆ ಸಚಿವ ಎಚ್.ಸಿ. ಮಹದೇವಪ್ಪ ಅವರ ಮನೆಯಲ್ಲೂ ಭೇಟಿ ‌ಆಗಿದ್ದೆವು. ನಾವ್ಯಾಕೆ ಭಯ ಪಡಬೇಕು. ಪಕ್ಷ‌ಕ್ಕೆ ಯಾರೆಲ್ಲ ನಿಷ್ಠೆಯಿಂದ ಇದ್ದಾರೆ ಎನ್ನುವುದನ್ನೂ ಹೈಕಮಾಂಡ್ ಗಮನಿಸುತ್ತದೆ’ ಎಂದರು.

‘ಪಕ್ಷಕ್ಕಾಗಿ ಕೆಲವರು ತೆರೆಮರೆಯಲ್ಲಿ ದುಡಿಯುತ್ತಾರೆ. ಅವರಲ್ಲಿ ಕೆಲವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ವಿಮಾನ ನಿಲ್ದಾಣ ರಸ್ತೆಯಲ್ಲಿ ಪೋಸ್ಟರ್, ಬ್ಯಾನರ್ ಹಾಕಿಸಿಕೊಂಡು ಕಾಣಿಸಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ ಸ್ವಂತ ಹಣ ಖರ್ಚು ಮಾಡಿ ಪಕ್ಷಕ್ಕೆ ದುಡಿಯುವವರಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ’ ಎಂದರು.

‘ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಯಾಗಿ ಅವರೇ ಮುಂದುವರಿಯಲಿದ್ದಾರೆ. ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಸದ್ಯಕ್ಕೆ ಮುಖ್ಯಮಂತ್ರಿ ಪಟ್ಟಕ್ಕೆ ಸ್ಪರ್ಧೆಯ ಸನ್ನಿವೇಶ ಇಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರೊಬ್ಬರ ವೈಯುಕ್ತಿಕ ತೀರ್ಮಾನ ಅಲ್ಲ’ ಎಂದರು.

‘ಈ ಹಿಂದೆ ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರವಾಗಿ ಬಹಿರಂಗವಾಗಿಯೇ ಹೇಳಿದ್ದೆವು. ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಯಿಂದ ಪಕ್ಷಕ್ಕೆ ಅನುಕೂಲವಾಗಲಿದೆ  ಎಂದಿದ್ದೆವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT