ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೂನ್‌ 24ರವರೆಗೆ ಪ್ರಜ್ವಲ್‌ ಪೊಲೀಸ್‌ ಕಸ್ಟಡಿಗೆ

Published 19 ಜೂನ್ 2024, 15:31 IST
Last Updated 19 ಜೂನ್ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪದ ಮೂರನೇ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಾಡಿ ವಾರಂಟ್‌ ಮೂಲಕ ಪುನಃ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂಬ ಪ್ರಾಸಿಕ್ಯೂಷನ್‌ ಮನವಿಗೆ ಪ್ರಜ್ವಲ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಕುರಿತ ವಿಚಾರಣೆಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (42ನೇ ಎಸಿಎಂಎಂ) ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್ ಬುಧವಾರ ನಡೆಸಿದರು. ವಿಚಾರಣೆ ವೇಳೆ ಆರೋಪಿ ಪ್ರಜ್ವಲ್‌ ರೇವಣ್ಣ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾದರು.

ಪ್ರಜ್ವಲ್‌ ಪರ ವಕೀಲ ಜಿ.ಅರುಣ್‌, ‘ಈಗಾಗಲೇ ಮೊದಲ ಎರಡು ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ಹೀಗಿರುವಾಗ ಪುನಃ ಬಾಡಿ ವಾರಂಟ್ ಮೂಲಕ ಕಸ್ಟಡಿಗೆ ಕೇಳುತ್ತಿರುವುದು ಕಿರುಕುಳವಲ್ಲದೆ ಮತ್ತೇನೂ ಅಲ್ಲ. ಹಾಗಾಗಿ ಕಸ್ಟಡಿಯ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ಇದನ್ನು ಆಕ್ಷೇಪಿಸಿದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ನಾಯಕ್, ‘ಆರೋಪಿಯು ವೈದ್ಯಕೀಯ ತಪಾಸಣೆಗಳು ಮುಜುಗುರ ಉಂಟು ಮಾಡುತ್ತಿವೆ ಎಂದು ನ್ಯಾಯಾಲಯದಲ್ಲಿ ಆಕ್ಷೇಪಿಸಿದರೆ ಏನು ಮಾಡಲೂ ಸಾಧ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸಲೇಬೇಕು. ಇವನ್ನೆಲ್ಲಾ ಕಿರುಕುಳ ಎಂದು ಆರೋಪಿಸಲು ಆಗದು. ಪ್ರಕರಣದಲ್ಲಿ ವಿಡಿಯೊಗಳನ್ನು ತಾಳೆ ಮಾಡಬೇಕು, ಸ್ಥಳ ಮಹಜರು, ಹೇಳಿಕೆ ದಾಖಲು, ಧ್ವನಿಯ ಮಾದರಿ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸುವ ಅಗತ್ಯವಿದ್ದು ಕಸ್ಟಡಿಗೆ ನೀಡಬೇಕು’ ಎಂದು ಮನವಿ ಮಾಡಿದರು. ಇದನ್ನು ಮನ್ನಿಸಿದ ನ್ಯಾಯಾಧೀಶರು ಆರೋಪಿಯನ್ನು ಇದೇ 24ರ ತನಕ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT