ಬಳ್ಳಾರಿ: ಷ.ಶೆಟ್ಟರ್ 2ನೇ ತರಗತಿಯಲ್ಲಿದ್ದಾಗ ಭಾರತ ಬಿಟ್ಟು ತೊಲಗಿ ಚಳವಳಿ ನಡೆಯುತ್ತಿತ್ತು. 1942ಲ್ಲಿ ಒಮ್ಮೆ ಶಾಲೆಯಿಂದ ಮನೆ ಬರುವಾಗ ಊರ ಮಧ್ಯ ನಿರ್ಮಿಸಿದ್ದ ಬಾನ್‌ಫೈರ್‌ನಲ್ಲಿ ಜನ ವಿದೇಶಿ ವಸ್ತುಗಳನ್ನು ಬೆಂಕಿಗೆ ಹಾಕುತ್ತಿದ್ದುದನ್ನು ನೋಡಿ ಅವರು ತಮ್ಮ ಅಂಗಿಯನ್ನು ಬಿಚ್ಚಿ ಅದರಲ್ಲಿ ಹಾಕಿ ಮನೆಗೆ ಬಂದಿದ್ದರು!

ಆಗ ಅವರ ತಂದೆ ಕಪಾಳಕ್ಕೊಂದು ಏಟು ಕೊಟ್ಟು, ‘ಮಗನೇ ನಿನ್ನ ಅಂಗಿ ವಿದೇಶಿಯದ್ದಲ್ಲ, ನಿಮ್ಮವ್ವ ನೂತು ನೇಯಿಸಿದ ಖಾದಿ ಬಟ್ಟೆಯದು, ಅವಳೇ ಪ್ರೀತಿಯಿಂದ ಹೊಲಿದಿದ್ದ ಅಂಗಿ’ ಎಂದಾಗ ಅವರು ಅವಮಾನದಲ್ಲಿ ಬೆಂದಿದ್ದರು. ‘ಹುಂಬತನ ದೇಶಪ್ರೇಮವಲ್ಲ. ಹೋರಾಟಕ್ಕೂ ಅರಿವಿನ ನೆಲೆ ಬೇಕು’ ಎಂದು ತಂದೆ ಹೇಳಿದ್ದರು.

ಹುಟ್ಟೂರಾದ ಹಂಪಸಾಗರದಿಂದ 64 ವರ್ಷಗಳ ಹಿಂದೆ ತಮ್ಮ ನೆಲೆಯನ್ನು ಬದಲಿಸಿಕೊಂಡು ಮೈಸೂರು, ಧಾರವಾಡ, ಕೇಂಬ್ರಿಡ್ಜ್ ಮತ್ತು ಬೆಂಗಳೂರಿನಲ್ಲಿ ಜೀವನ ಸಾಗಿಸಿದ್ದ ಪ್ರೊ.ಷ.ಶೆಟ್ಟರ್ ತಮ್ಮ ಕೊನೆಯ ವರ್ಷಗಳಲ್ಲಿ ಹುಟ್ಟೂರನ್ನು ಇಂಥ ಘಟನೆಗಳ ಮೂಲಕ ಮತ್ತೆ ಸ್ಮರಿಸಲು ಆರಂಭಿಸಿದ್ದರು.

ಕಂಪ್ಲಿಯಲ್ಲಿ 2014ರ ಫೆಬ್ರುವರಿಯಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಅವರಿಗೆ ಅನುಪಮ ಪುಳಕದ ಜೊತೆಗೆ, ನೆನಪುಗಳನ್ನು ಮರುಕಳಿಸುವಂತೆ ಮಾಡಿತ್ತು.

ಆರು ದಶಕಗಳ ಬಳಿಕ ಅವರನ್ನು ಹುಟ್ಟೂರು ಆ ಪರಿ ಸ್ವಾಗತಿಸಿತ್ತು. ಕಂಪಿಲರಾಯ ಮತ್ತು ಕುಮಾರರಾಮನ ಕ್ಷೇತ್ರದಲ್ಲಿ ನಡೆದಿದ್ದ ಸಮ್ಮೇಳನವು, ಇತಿಹಾಸದ ಮರುಶೋಧನೆಯ ಪ್ರಿಯರಾದ ಶೆಟ್ಟರ್‌ಗೆ ’ಸೌಭಾಗ್ಯ’ ಎಂಬಂತೆ ಕಂಡಿತ್ತು. ಹೀಗಾಗಿ ಇಡೀ ಜಿಲ್ಲೆಯನ್ನು ತಮ್ಮ ಭಾಷಣದಲ್ಲಿ ಚರಿತ್ರೆಕಾರನ ಕಣ್ಣಲ್ಲಿ ಮರು ವಿಶ್ಲೇಷಿಸಿದ್ದರು.

ಸ್ವಾತಂತ್ರ್ಯ ಬರುವುದಕ್ಕೆ ಹನ್ನೆರಡು ವರ್ಷ ಮುಂಚೆ ಹುಟ್ಟಿದ್ದ ಅವರು, ಮದ್ರಾಸ್ ಪ್ರಾಂತ್ಯದಲ್ಲಿದ್ದ ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಬೇಕೋ ಅಥವಾ ಮೈಸೂರು ರಾಜ್ಯಕ್ಕೋ ಎಂಬ ಹೋರಾಟ ನಡೆಯುತ್ತಿದ್ದ ಹೊತ್ತಿಗೆ ಕಾಲೇಜು ವಿದ್ಯಾರ್ಥಿ. ಬಳ್ಳಾರಿಯನ್ನು ತೆಲುಗುಮಯ ಮಾಡಿಕೊಂಡಿದ್ದ ಆಂಧ್ರದವರ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯ ಕಂಡು ಬಳ್ಳಾರಿಯು ಮದ್ರಾಸ್ ಪ್ರಾಂತ್ಯದಿಂದ ಮೈಸೂರು ಪ್ರಾಂತ್ಯಕ್ಕೆ ಸೇರಿಕೊಂಡಿತು. ಅದರ ಪರಿಣಾಮವಾಗಿಯೇ, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಬೇಕೆಂಬ ಅವರ ಆಸೆಯೂ ಕಮರಿ, ಮೈಸೂರಿನ ಮಹಾರಾಜ ಕಾಲೇಜಿಗೆ ಬಿಎ (ಆನರ್ಸ್)ಗೆ ಸೇರಿಕೊಂಡಿದ್ದರು.

ಅವರ ಬಾಲ್ಯವೂ ಚೇತಹಾರಿಯಾಗಿತ್ತು. ತುಂಗಭದ್ರಾ ಅಣೆಕಟ್ಟು ವೀಕ್ಷಿಸಲು ಸರ್.ಎಂ.ವಿಶ್ವೇಶ್ವರಯ್ಯನವರು ಬಂದಾಗ, ಶಾಲೆಗೆ ಚಕ್ಕರ್ ಹೊಡೆದು ಮೂರು ಮೈಲು ಓಡುತ್ತಾ ಹೋಗಿ ಅವರನ್ನು ನೋಡಿದ್ದ ಶೆಟ್ಟರ್, ಹೈದ್ರಾಬಾದ್ ಕರ್ನಾಟಕ ವಿಮೋಚನೆಗೂ ಮುನ್ನ, ನಡೆದ ರಜಾಕಾರರ ಹಿಂಸಾಕಾಂಡಕ್ಕೆ ಬಲಿಯಾಗಿ ಮೂಗು, ಕಿವಿ, ಮೊಲೆ ಕಳೆದುಕೊಂಡ ಹಲವು ಮಹಿಳೆಯರನ್ನು ಹೊಸಪೇಟೆಯಲ್ಲಿ ಕಂಡಿದ್ದರು.

ಅದೇ ಕಾಲದಲ್ಲಿ, ಸರ್ದಾರ್ ವಲ್ಲಭಾಬಾಯ್ ಪಟೇಲರು, ಪೊಲೀಸರೊಂದಿಗೆ ಹೈದ್ರಾಬಾದ್ ನವಾಬನನ್ನು ಮಣಿಸಲು ತುಂಗಭದ್ರೆಯ ಆ ಕಡೆ ಇದ್ದ ನವಾಬನ ಮುನಿರಾಬಾದ್‌ನಲ್ಲಿ ಹಗಲಿರುಳೂ ಸಿಡಿಯುತ್ತಿದ್ದ ತೋಪುಗಳ ಶಬ್ದವೂ ಅವರ ಕಿವಿಯಲ್ಲಿ ನೆಲೆಗೊಂಡಿತ್ತು. ಚರಿತ್ರೆಯ ಅವರ ಹೊಸ ಕಥನಗಳಿಗೆ ಬಾಲ್ಯದ ಇಂಥ ಹಲವು ಅನುಭವಗಳೇ ಸ್ಫೂರ್ತಿಯಾಗಿರಬಹುದು.

ಬಳ್ಳಾರಿಯ ಸಂಗನಕಲ್ಲು ಮತ್ತು ತೆಕ್ಕಲಕೋಟೆಯಲ್ಲಿ ಪುಣೆಯ ಡೆಕ್ಕನ್ ಕಾಲೇಜಿನ ಪ್ರಾಕ್ತನ ಶಾಸ್ತ್ರಜ್ಞ ಡಾ.ಸಂಕಾಲಿಯ ಅವರು 60–70ರ ದಶಕದಲ್ಲಿ ಶಿಲಾಯುಗದ ಅವೇಶಷಗಳ ಉತ್ಖನನ ನಡೆಸುವ ಸಂದರ್ಭದಲ್ಲಿ ಶೆಟ್ಟರ್ ಕೂಡ ಅವರೊಂದಿಗೆ ಸುತ್ತಾಡಿದ್ದರು. ಅಂಥ ಹಲವು ನೆನಪುಗಳನ್ನು ಶೆಟ್ಟರ್ ಸಮ್ಮೇಳನದಲ್ಲಿ ಮೊಗೆದು ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.