ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ಪ್ರದೂಷ್‌ಗೆ ₹30 ಲಕ್ಷ: ದರ್ಶನ್‌ ಸ್ವಇಚ್ಛಾ ಹೇಳಿಕೆ

Published : 19 ಜೂನ್ 2024, 16:33 IST
Last Updated : 19 ಜೂನ್ 2024, 16:33 IST
ಫಾಲೋ ಮಾಡಿ
Comments

ಬೆಂಗಳೂರು: ‘ಮೃತದೇಹದ ವಿಲೇವಾರಿ ಮಾಡಿ ತನ್ನ ಹೆಸರು ಎಲ್ಲಿಯೂ ಬಹಿರಂಗ ಆಗದಂತೆ ಪೊಲೀಸರು ವಕೀಲರು ಹಾಗೂ ಶವ ಸಾಗಿಸುವ ವ್ಯಕ್ತಿಗಳಿಗೆ ಕೊಡಲು ₹30 ಲಕ್ಷ ಹಣವನ್ನು ಪ್ರದೂಷ್‌ ಎಂಬಾತನಿಗೆ ನೀಡಿದ್ದೆ’ ಎಂದು ದರ್ಶನ್‌ ಸ್ವಇಚ್ಛಾ ಹೇಳಿಕೆ ನೀಡಿದ್ದು ಆ ಹಣವನ್ನು ಪ್ರದೂಷ್‌ ಮನೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

‘ಪಟ್ಟಣಗೆರೆಯಲ್ಲಿ ಜಯಣ್ಣ ಎಂಬವರಿಗೆ ಸೇರಿದ ಇನ್‌ಟ್ಯಾಕ್‌ ಆಟೊಪಾರ್ಕ್‌ ಇಂಡಿಯಾ ಲಿಮಿಟೆಡ್‌ನ ಶೆಡ್‌ನಲ್ಲಿ ಕೃತ್ಯ ನಡೆದಿತ್ತು. ಇಲ್ಲಿ 5ರಿಂದ 6 ಎಕರೆ ಜಾಗವಿದೆ. ಆ ಪ್ರದೇಶದ ಒಂದು ಬದಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಲಾಠಿ ಮರದ ಕೊಂಬೆಗಳು ನೀರಿನ ಬಾಟಲಿ ಸ್ಥಳದಲ್ಲಿ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಸೆಕ್ಯೂರಿಟಿ ಗಾರ್ಡ್‌ ಕೊಠಡಿಯಲ್ಲಿ ಮೃತದೇಹ ಇಡಲಾಗಿತ್ತು. ಅಲ್ಲಿ ಬಿದ್ದಿದ್ದ ರಕ್ತ ಹಾಗೂ ಕೂದಲು ಮಾದರಿಯನ್ನು ಎಫ್‌ಎಸ್‌ಎಲ್‌ ತಜ್ಞರು ಸಂಗ್ರಹಿಸಿದ್ದಾರೆ. ಶೆಡ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗೆ ಸಂಬಂಧಿಸಿದ ಡಿವಿಆರ್‌ ಅನ್ನು ಜಪ್ತಿ ಮಾಡಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ. 

ರಕ್ತದ ಕಲೆ ಪತ್ತೆ: ಮೃತದೇಹ ಸಾಗಿಸಿದ ಸ್ಕಾರ್ಪಿಯೊ ವಾಹನವನ್ನು ಎಫ್‌ಎಸ್‌ಎಲ್‌ ತಜ್ಞರು ಪರಿಶೀಲಿಸಿದ್ದು ರಕ್ತದ ಕಲೆಗಳು ಹಾಗೂ ಭೌತಿಕ ಕುರುಹುಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.‌

ಪ್ರದೂಷ್‌ ಪ್ರಯತ್ನ: ಮೃತದೇಹವನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆಯಲಾಗಿತ್ತು. ಕೊಲೆಯಾದ ವ್ಯಕ್ತಿಯ ಮೊಬೈಲ್‌, ಆರೋಪಿ ರಾಘವೇಂದ್ರ ಅವರ ಮೊಬೈಲ್‌ ಅನ್ನು ಪ್ರದೋಷ್‌ ಕಾಲುವೆಗೆ ಎಸೆದು ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ಮೊಬೈಲ್‌ಗಳು ದೊರೆತಿಲ್ಲ. ರಾಘವೇಂದ್ರ ಹೊಸ ಬಟ್ಟೆ ಖರೀದಿಸಿ ಕೃತ್ಯ ನಡೆದ ಸ್ಥಳದಲ್ಲಿ ಧರಿಸಿದ್ದ ಬಟ್ಟೆಗಳನ್ನು ಆರ್‌ಆರ್‌ ನಗರದ ಐಡಿಯಲ್‌ ಹೋಮ್ಸ್ ಶಿಪ್‌ ಬಳಿಯ ಖಾಲಿ ಪ್ರದೇಶದಲ್ಲಿ ಎಸೆದಿದ್ದರು’ ಎಂದು ವಿವರಿಸಲಾಗಿದೆ.

‘ಮೃತದೇಹ ಎಸೆದ ಬಳಿಕ ಕಾರ್ತಿಕ್‌, ಕೇಶವ, ನಿಖಿಲ್‌ ಅವರು ಆರ್‌ಆರ್‌ ನಗರದ ಟ್ರೋಬ್ರೊ ಹೋಟೆಲ್‌ನಲ್ಲಿ ಕೊಠಡಿ ಪಡೆದು ಉಳಿದುಕೊಂಡಿದ್ದರು. ಅವರು ಹೊಸ ಹೊಸಬಟ್ಟೆ ಧರಿಸಿ ಹಳೇ ಬಟ್ಟೆಯನ್ನು ಕೊಠಡಿಯಲ್ಲಿ ಬಿಟ್ಟು ತೆರಳಿದ್ದರು. ಕೊಠಡಿ ಪರಿಶೀಲಿಸಿದಾಗ ಬಟ್ಟೆ ಇರಲಿಲ್ಲ. ಎರಡು ದಿನಗಳ ಬಳಿಕ ಹೋಟೆಲ್‌ ಸಿಬ್ಬಂದಿ ಬಿಬಿಎಂಪಿ ಕಸದ ಲಾರಿಗೆ ಆ ಬಟ್ಟೆಗಳನ್ನು ಹಾಕಿದ್ದರು’ ಎಂದು ವಿವರಿಸಲಾಗಿದೆ.

ವಿದ್ಯುತ್ ಶಾಕ್, ಪ್ರಬಲ ಹೊಡೆತಗಳಿಂದ ಸಾವು

ಆರೋಪಿಗಳ ಹಲ್ಲೆಯಿಂದ ರೇಣುಕಸ್ವಾಮಿ ಅವರ ಸಾವು ಸಂಭವಿಸಿದೆ ಎಂಬ ಅಂಶ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದ್ದು, ವೈದ್ಯರ ಅಂತಿಮ ವರದಿ ತನಿಖಾಧಿಕಾರಿಗಳ ಕೈ ಸೇರಿದೆ.ವಿದ್ಯುತ್ ಶಾಕ್ ಹಾಗೂ ಪ್ರಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ. ಈ ವರದಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ರವಾನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. 

ಸಾಮಾಜಿಕ ಮಾಧ್ಯಮದ ಮೇಲೆ ನಿಗಾ

ದರ್ಶನ್‌ ಅಭಿಮಾನಿಗಳ ಸಂಘದ ಸದಸ್ಯರು ಸಾಮಾಜಿಕ ಮಾಧ್ಯಮ ಮೂಲಕ ಕೆಲವರಿಗೆ ಬೆದರಿಕೆ ಹಾಕುತ್ತಿದ್ದು, ನಿಗಾ ವಹಿಸಲಾಗಿದೆ ಎಂದು ಪೊಲೀಸರು ಹೇಳಿದರು.  

‘ದರ್ಶನ್‌ ಅಭಿಮಾನಿಗಳು ಹಾಗೂ ಸಂಘದ ಸದಸ್ಯರು ಬೆದರಿಕೆ ಹಾಕುತ್ತಿರುವುದು ಗೊತ್ತಾಗಿದೆ. ಇಂಥವರ ಮೇಲೆ ಕಣ್ಣಿಡಲು ಪೊಲೀಸ್‌ ಅಧಿಕಾರಿ ಒಬ್ಬರಿಗೆ ಸೂಚಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ನಟ ಪ್ರಥಮ್‌ಗೆ ಬೆದರಿಕೆ: ನಟ ಪ್ರಥಮ್‌ ಅವರಿಗೆ ದರ್ಶನ್‌ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಮಧ್ಯಾಹ್ನ ಪ್ರಥಮ್‌ ಅವರೇ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT