ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸಲು ಮುಂದಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 1ರಿಂದ 10ನೇ ತರಗತಿಯ ಮಕ್ಕಳ ಬ್ಯಾಗ್ ತೂಕದ ಹೊರೆಯನ್ನು 1.5 ಕೆ.ಜಿ.ಯಿಂದ 5ಕೆ.ಜಿ.ವರೆಗೆ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ.

1993ರಲ್ಲಿ ನೇಮಿಸಿದ್ದ ಯಶಪಾಲ ವರ್ಮ ಸಮಿತಿಯ ‘ಹೊರೆ ಇಲ್ಲದ ಕಲಿಕೆ’ ವರದಿ, ಕೇಂದ್ರ ಸರ್ಕಾರದ ‘ಶಾಲಾ ಬ್ಯಾಗ್ ನೀತಿ–2020’ ಹಾಗೂ ಮಕ್ಕಳು ಮತ್ತು ಕಾನೂನು ಕೇಂದ್ರ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ಅಧ್ಯಯನವರದಿ ಆಧಾರದಲ್ಲಿ ಉಲ್ಲೇಖಿಸಿದಂತೆ ಹಾಗೂ ಮೂಳೆ ತಜ್ಞರ ಶಿಫಾರಸಿನಂತೆ ಮಕ್ಕಳು ಅವರ ದೇಹದ ತೂಕದ ಶೇ 10ರಿಂದ 15ರಷ್ಟು ಭಾರ ಹೊರಬಹುದು ಎಂಬ ಅಂಶಗಳ ಆಧಾರದಲ್ಲಿ ಸುತ್ತೋಲೆ ಹೊರಡಿಸಲಾಗಿದೆ.

1ರಿಂದ 2ನೇ ತರಗತಿಯ ಮಕ್ಕಳಿಗೆ 1.5ರಿಂದ 2 ಕೆ.ಜಿ, 3ರಿಂದ 5ನೇ ತರಗತಿ 2ರಿಂದ 3 ಕೆ.ಜಿ, 6ರಿಂದ 8 ತರಗತಿ 3ರಿಂದ 4 ಕೆ.ಜಿ ಹಾಗೂ 9ರಿಂದ 10ನೇ ತರಗತಿಯ ಮಕ್ಕಳಿಗೆ 4ರಿಂದ 5 ಕೆ.ಜಿ.ವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಲಾಗಿದೆ.

ಶಾಲಾ ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಅಂದಿನ ಪಠ್ಯಪುಸ್ತಕ ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ಮಾತ್ರ ತರುವಂತೆ ನೋಡಿಕೊಳ್ಳಬೇಕು. 200 ಪುಟ ಮೀರದ ನೊಟ್ಬುಕ್ ಬಳಸಲು ಸೂಚಿಸಬೇಕು. ಶಾಲೆಗಳಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಬ್ಯಾಗ್ ಹೊರೆಯಿಂದ ಆಗುವ ದುಷ್ಪರಿಣಾಮಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ನಿಯಮ ಉಲ್ಲಂಘಿಸುವ ಶಿಕ್ಷಕರು, ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಅರೆಬೆಂದ ಅರ್ಜಿ: ಹೈಕೋರ್ಟ್ ಗರಂ

‘ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾದ ಅರ್ಜಿಯಲ್ಲಿ ಯಾವುದೇ ಪುರಾವೆಗಳಿಲ್ಲ. ಇದೊಂದು ಅರೆಬೆಂದ ಅರ್ಜಿ‘ ಎಂದು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಎಲ್. ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ಆಲಿಸಿದ ನ್ಯಾಯಪೀಠ, ‘ವಿಷಯವೇನೊ ಗಂಭೀರವಾಗಿದೆ. ಆದರೆ, ಅರ್ಜಿದಾರರು ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿರುವುದನ್ನು ಬಿಟ್ಟರೆ ಬೇರಾವುದೇ ಪ್ರಯತ್ನ ಮಾಡಿಲ್ಲ. ಶಾಲೆಗಳಿಗೆ ಖುದ್ದು ಭೇಟಿ ಕೊಟ್ಟು ಸಮಸ್ಯೆ ಅರಿತಿದ್ದೇನೆ ಎಂಬ ಅವರ ವಾದಕ್ಕೆ ಪೂರಕವಾದ ಯಾವುದೇ ಪುರಾವೆಗಳು ಕಾಣಿಸುತ್ತಿಲ್ಲ. ಅಗತ್ಯ ಮಾಹಿತಿ ಕಲೆ ಹಾಕಿದ ನಂತರ ಕೋರ್ಟ್ಗೆ ಬರಬಹುದಿತ್ತು‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಮೊದಲು ಅರ್ಜಿ ವಜಾಗೊಳಿಸಿದ ನ್ಯಾಯಪೀಠ, ಬಳಿಕ ಅರ್ಜಿದಾರರ ಮನವಿಯಂತೆ ಹೊಸದಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಿ ವಿಲೇವಾರಿ ಮಾಡಿತು.

‘ಮಕ್ಕಳ ಬ್ಯಾಗ್ ತೂಕದ ಮಿತಿ ಇಷ್ಟೇ ಇರಬೇಕೆಂದು 2020ರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ನಿಯಮ
ಪಾಲನೆಯಾಗುತ್ತಿಲ್ಲ. ಆರೋಗ್ಯ ತಜ್ಞರ ಪ್ರಕಾರ ಭಾರಿ ತೂಕದ ಶಾಲಾ ಬ್ಯಾಗ್ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ, ಸಂವಿಧಾನದ 21ನೇ ವಿಧಿಯಡಿ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು‘ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.