ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಜುಲೈ 1ರವರೆಗೆ ಸೂರಜ್‌ ರೇವಣ್ಣ ಸಿಐಡಿ ಕಸ್ಟಡಿಗೆ

Published 24 ಜೂನ್ 2024, 19:30 IST
Last Updated 24 ಜೂನ್ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯುವಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ (42ನೇ ಎಸಿಎಂಎಂ) ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಸೋಮವಾರ ವಿಚಾರಣೆ ನಡೆಸಿದರು.

ಸೂರಜ್‌ ರೇವಣ್ಣ ಅವರನ್ನು ಭಾನುವಾರವಷ್ಟೇ (ಜೂನ್‌ 23) ನ್ಯಾಯಾಧೀಶ ಶಿವಕುಮಾರ್ ಅವರ ಕೋರಮಂಗಲದ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಹೀಗಾಗಿ, ಕಲಾಪದ ದಿನವಾದ ಸೋಮವಾರದಂದು ಕೋರ್ಟ್‌ಗೆ ಹಾಜರುಪಡಿಸಿದಾಗ ಪ್ರಾಸಿಕ್ಯೂಷನ್‌ ಪರ ವಕೀಲ ಸಿ.ವಿಶ್ವನಾಥ್‌ ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು.

ಇದಕ್ಕೆ ಸೂರಜ್‌ ರೇವಣ್ಣ ಪರ ವಕೀಲ ನಿಖಿಲ್‌ ಡಿ.ಕಾಮತ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಎರಡು ಅಥವಾ ಮೂರು ದಿನ ಕೊಟ್ಟರೆ ಸಾಕು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಕೇವಲ ಕಿರುಕುಳದ ಉದ್ದೇಶ ಅಷ್ಟೇ. ಪ್ರಕರಣದಲ್ಲಿ ದೂರುದಾರ ಘಟನೆ ನಡೆದ ಸಮಯದಲ್ಲಿ ದೂರು ನೀಡಿಲ್ಲ. ಬದಲಾಗಿ ತಡವಾಗಿ ದೂರು ಸಲ್ಲಿಸಿದ್ದಾನೆ. ಬ್ಲಾಕ್‌ ಮೇಲ್ ಮಾಡುವ ಯತ್ನ ನಡೆಸಿದ್ದಾನೆ’ ಎಂದರು.

ಇದನ್ನು ವಿಶ್ವನಾಥ್‌ ಅಲ್ಲಗಳೆದರಾದರೂ, ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜುಲೈ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿ ವಿಚಾರಣೆ ಮುಂದೂಡಿದರು.

ಸೂರಜ್‌ ವಿಚಾರಣೆಗೆ ಸಿಐಡಿ ತನಿಖಾ ತಂಡ

‘ಸೂರಜ್‌ ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಲು ತಂಡವನ್ನು ನೇಮಿಸಲಾಗಿದ್ದು ಮಂಗಳವಾರದಿಂದ ಆರೋಪಿ ವಿಚಾರಣೆ ನಡೆಸಲಾಗುವುದು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತನಿಖಾಧಿಕಾರಿಗಳಾಗಿ ಸಿಐಡಿ ಎಸ್​ಪಿ ವೆಂಕಟೇಶ್​ ಡಿವೈಎಸ್​ಪಿ ಉಮೇಶ್​ ಇನ್​ಸ್ಪೆಕ್ಟರ್​ ನರೇಂದ್ರ ಬಾಬು ಅವರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಸಿಐಡಿ ಕಚೇರಿಯಲ್ಲೇ ವಿಚಾರಣೆ ನಡೆಯಲಿದೆ. ತನಿಖೆಗೆ ಸಿದ್ಧತೆ ನಡೆಸಲಾಗಿದೆ. ಆರೋಪಿ ಹೇಳಿಕೆಗಳನ್ನು ವಿಡಿಯೊ ರೆಕಾರ್ಡ್ ಮಾಡಲಾಗುವುದು. ಕೃತ್ಯ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತರ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. 8 ಗಂಟೆ ವಿಚಾರಣೆ ನಡೆಸಿ ನಂತರ ಬಂಧಿಸಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬಿಟ್ಟಿದ್ದರು. ಈ ನಡುವೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು. ಹೀಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಾಡಿ ವಾರಂಟ್​ ಅರ್ಜಿ ಸಲ್ಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT