ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸದ ವಾಹನಗಳಿಗೆ ಬೀಳಲಿದೆ ದಂಡ; ಸೆ.15 ಕೊನೇ ದಿನ

Published : 11 ಸೆಪ್ಟೆಂಬರ್ 2024, 19:55 IST
Last Updated : 11 ಸೆಪ್ಟೆಂಬರ್ 2024, 19:55 IST
ಫಾಲೋ ಮಾಡಿ
Comments

ಬೆಂಗಳೂರು: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅವಧಿಯನ್ನು ವಿಸ್ತರಿಸದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಫಲಕ ಅಳವಡಿಸದ ವಾಹನಗಳಿಗೆ ಇನ್ನು ಮುಂದೆ ದಂಡ ಬೀಳಲಿದೆ.

2019ರ ಏಪ್ರಿಲ್ 1ರ ನಂತರ ನೋಂದಣಿಯಾದ ವಾಹನಗಳಲ್ಲಿ ಎಚ್‌ಎಸ್‌ಆರ್‌ಪಿ ಇದೆ. ಅದಕ್ಕಿಂತ ಹಿಂದಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು 2023ರ ಆಗಸ್ಟ್‌ 16ರಿಂದ ನವೆಂಬರ್‌ 16ರವರೆಗೆ ಮೂರು ತಿಂಗಳು ಅವಕಾಶವನ್ನು ಸಾರಿಗೆ ಇಲಾಖೆ ಮೊದಲ ಬಾರಿ ನೀಡಿತ್ತು. ವಾಹನ ಮಾಲೀಕರಿಂದ ಸ್ಪಂದನೆ ಸಿಗದೇ ಇದ್ದುದರಿಂದ ಫೆ.17ರವರೆಗೆ ಗಡುವು ವಿಸ್ತರಿಸಿತ್ತು. ಆಗಲೂ ಮಾಲೀಕರು ಎಚ್ಚೆತ್ತುಕೊಳ್ಳದೇ ಇದ್ದುದರಿಂದ ಮೇ 31ರ ಗಡುವು ನೀಡಿತ್ತು.

ಗಡುವು ವಿಸ್ತರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಬಿಎನ್‌ಡಿ ಎನರ್ಜಿ ಪ್ರೈವೆಟ್‌ ಲಿಮಿಟೆಡ್ ಕಂಪನಿಯು ಜೂನ್‌ನಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅದನ್ನು ಮಾನ್ಯ ಮಾಡಿದ್ದ ಹೈಕೋರ್ಟ್‌, ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರಿಂದ ಸೆ.15ರವರೆಗೆ ಮತ್ತೆ ಗಡುವು ವಿಸ್ತರಿಸಲಾಗಿತ್ತು. ಇನ್ನು ನಾಲ್ಕು ದಿನಗಳಲ್ಲಿ ಈ ಗಡುವು ಮುಗಿಯಲಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಂಚಾರ ವಿಭಾಗದ ಪೊಲೀಸರು ಸೆ. 16ರಿಂದ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲಿದ್ದಾರೆ.

52 ಲಕ್ಷ ಅಳವಡಿಕೆ: ರಾಜ್ಯದಲ್ಲಿ 2019ರ ಏ.1ಕ್ಕೂ ಮೊದಲು ನೋಂದಣಿಯಾದ 2 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ. ಅದರಲ್ಲಿ 52 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಇನ್ನೂ 1.48 ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಬಾಕಿ ಇದೆ ಎಂದು ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಅವಕಾಶ: http//transport.karnataka.gov.in ಅಥವಾ www.siam.in ಮೂಲಕವೂ ಎಚ್‌ಎಸ್‌ಆರ್‌ಪಿ ಅಳವಡಿಸಲು ನೋಂದಣಿ ಮಾಡಿಕೊಳ್ಳಬಹುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್‌ ಮಾಹಿತಿ ನೀಡಿದ್ದಾರೆ.

ಇನ್ನೆಷ್ಟು ಬಾರಿ ವಿಸ್ತರಣೆ?
‘ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು 2023ರ ಆಗಸ್ಟ್‌ನಿಂದ ಅವಕಾಶ ನೀಡಲಾಗಿದೆ. ಎಷ್ಟು ಬಾರಿ ವಿಸ್ತರಣೆ ಮಾಡುವುದು? ವಿಸ್ತರಣೆಗೂ ಒಂದು ಮಿತಿ ಬೇಕಲ್ಲವೆ? ಹಾಗಾಗಿ ಸೆ. 15ರ ನಂತರ ವಿಸ್ತರಣೆ ಇರುವುದಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ರಶೀದಿ ಇಟ್ಟುಕೊಳ್ಳಿ
‘ಸೆ.15ರ ಒಳಗೆ ಎಚ್‌ಎಸ್‌ಆರ್‌ಪಿಗೆ ನೋಂದಣಿ ಮಾಡಿಕೊಂಡವರು ಅದರ ರಶೀದಿಯನ್ನು ಹೊಸ ನಂಬರ್‌ ಪ್ಲೇಟ್‌ ಬರುವವರೆಗೆ ತಮ್ಮಲ್ಲಿ ಇಟ್ಟುಕೊಳ್ಳಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಥವಾ ಪೊಲೀಸರು ತಪಾಸಣೆ ನಡೆಸುವಾಗ ರಶೀದಿ ಇಲ್ಲದೇ ಇದ್ದರೆ ದಂಡ ಕಟ್ಟಬೇಕಾಗುತ್ತದೆ. ಎಲ್ಲರೂ ನಾಲ್ಕು ದಿನಗಳ ಒಳಗೆ ಎಚ್‌ಎಸ್‌ಆರ್‌ಪಿಯನ್ನು ಅಳವಡಿಸಿಕೊಳ್ಳುವ ಮೂಲಕ ದಂಡದಿಂದ ಪಾರಾಗಬಹುದು’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್‌ ಮಾಹಿತಿ ನೀಡಿದರು.
ಮೊದಲ ಬಾರಿಗೆ ₹500, ಬಳಿಕ ₹1000 ದಂಡ
‘ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳು ಮೊದಲ ಬಾರಿ ಪತ್ತೆಯಾದಾಗ ₹500 ದಂಡ ವಿಧಿಸಲಾಗುತ್ತದೆ. ಆನಂತರ ಪ್ರತಿ ಬಾರಿ ₹1000 ದಂಡ ಕಟ್ಟಬೇಕಾಗುತ್ತದೆ. ತ‍ಪಾಸಣೆ ಮಾಡುವಾಗ ನಂಬರ್‌ ಪ್ಲೇಟ್‌ ಒಂದನ್ನೇ ಪರಿಶೀಲಿಸುವುದಿಲ್ಲ. ವಿಮೆ, ನೋಂದಣಿ ಪ್ರಮಾಣಪತ್ರ (ಆರ್‌ಸಿ), ವಾಹನ ಚಾಲನಾ ಪರವಾನಗಿ (ಡಿಎಲ್‌) ಸೇರಿದಂತೆ ಎಲ್ಲ ದಾಖಲೆಗಳನ್ನೂ ಪರಿಶೀಲಿಸುತ್ತಾರೆ. ಸಂಬಂಧಪಟ್ಟ ದಾಖಲೆಗಳು ಇಲ್ಲದೇ ಇದ್ದರೆ ಇನ್ನಷ್ಟು ದಂಡ ಕಟ್ಟಬೇಕಾಗುತ್ತದೆ’ ಎಂದು ಸಾರಿಗೆ ಇಲಾಖೆಯ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT