ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುಪತಿಯಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಲು ವಿಶ್ವ ಹಿಂದೂ ಪರಿಷತ್ ಆಗ್ರಹ

Published : 30 ಸೆಪ್ಟೆಂಬರ್ 2024, 9:07 IST
Last Updated : 30 ಸೆಪ್ಟೆಂಬರ್ 2024, 9:07 IST
ಫಾಲೋ ಮಾಡಿ
Comments

ಮಂಗಳೂರು: 'ದನದ ಕೊಬ್ಬು ಮತ್ತು‌ ಮೀನಿನ ಎಣ್ಣೆ ಬೆರಕೆಯಾಗಿದ್ದ ತುಪ್ಪ ಬಳಸಿ ತಯಾರಿಸಿದ ಲಡ್ಡು ದೇವರಿಗೆ ಅರ್ಪಿಸಿದ ತಿರುಪತಿ ದೇವಸ್ಥಾನದಲ್ಲಿ ದೇಸಿ ಹಸುಗಳ ಗೋಶಾಲೆ ತೆರೆಯಬೇಕು' ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನಡೆದ ಧರ್ಮಾಗ್ರಹ ಸಭೆಯಲ್ಲಿ ಈ ಕುರಿತ ನಿರ್ಣಯ ಮಂಡಿಸಲಾಯಿತು.

ಪ್ರಾಣಿಜನ್ಯ ಕೊಬ್ಬು ಇರುವ ಲಡ್ಡು ಅರ್ಪಿಸಿದ್ದನ್ನು ಖಂಡಿಸಿದ ಸಭೆ, 'ದೇವಸ್ಥಾನವನ್ನು ಅಪವಿತ್ರಗೊಳಿಸಿದ ಮತ್ತು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವವರಿಗೆ ಕಠಿಣ ಶಿಕ್ಷೆ ನೀಡಬೇಕು‌ ಮತ್ತು, ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು' ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಒತ್ತಾಯಿಸಿತು.

ದೇವಸ್ಥಾನಕ್ಕೆ ಅಗತ್ಯವಿರುವ ತುಪ್ಪವನ್ನು ದೇವಸ್ಥಾನ ಟ್ರಸ್ಟ್‌ ವತಿಯಿಂದಲೇ ತಯಾರಿಸಬೇಕು, ಅದಕ್ಕಾಗಿ 25 ಸಾವಿರ ದೇಸಿ ಹಸುಗಳನ್ನು ಸಾಕಲು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಮುಂದಾಗಬೇಕು, ದೇಶದ ಇತರ ದೇವಸ್ಥಾನಗಳಲ್ಲೂ ತುಪ್ಪಕ್ಕಾಗಿ ದೇಸಿ ದನಗಳ ಗೋಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಲಾಯಿತು.

ದೇವಸ್ಥಾನಗಳು ಸರ್ಕಾರ ಮತ್ತು ರಾಜಕಾರಣಿಗಳ ಹಿಡಿತದಲ್ಲಿ ಇರುವುದರಿಂದ ಅಪವಿತ್ರ ಆಗುತ್ತಿವೆ. ಆದ್ದರಿಂದ ದೇಶದ ಎಲ್ಲ ದೇವಸ್ಥಾನಗಳನ್ನು ಮುಕ್ತಗೊಳಿಸಿ ಹಿಂದೂ ಸಮಾಜಕ್ಕೆ ಹಸ್ತಾಂತರ ಮಾಡಬೇಕು. ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ ಮತ್ತು ರಾಜ್ಯ ಧಾರ್ಮಿಕ ಪರಿಷತ್ ಸ್ಥಾಪಿಸಬೇಕು ಎಂದು ಸಭೆ ಆಗ್ರಹಿಸಿತು.

ದೀಪಕ್ಕೆ ಹಾಕುವ ಎಳ್ಳೆಣ್ಣೆ, ದೀಪದ ಎಣ್ಣೆ ಮತ್ತು ತೆಂಗಿನ ಎಣ್ಣೆಯಲ್ಲೂ ಕಲಬೆರಕೆ ಇರುವುದು ಕಂಡುಬಂದಿದೆ.‌ ಆದ್ದರಿಂದ ಎಲ್ಲ ದೇವಸ್ಥಾನಗಳಲ್ಲಿ ಪರಿಶುದ್ಧ ಎಣ್ಣೆಯನ್ನೇ ಬಳಸಬೇಕು ಎಂದು ಆಗ್ರಹಿಸಲಾಯಿತು.

ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಮಂಗಳೂರು ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ಚಾಮೀಜಿ, ವಿಶ್ವ ಹಿಂದೂ ಪರಿಷತ್ ನ ಕಲ್ಲಡ್ಕ ಪ್ರಭಾಕರ ಭಟ್, ಎಚ್.ಕೆ.ಪುರುಷೋತ್ತಮ, ಎಂ.ಬಿ.ಪುರಾಣಿಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT