ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತ್ಯ ಸಮ್ಮೇಳನ ಮುಂದೂಡಿಕೆ

Published : 14 ಆಗಸ್ಟ್ 2015, 19:41 IST
ಫಾಲೋ ಮಾಡಿ
Comments

ರಾಯಚೂರು: ನಗರದಲ್ಲಿ ಅಕ್ಟೋಬರ್‌ 9ರಿಂದ 11ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2016ಕ್ಕೆ ಮುಂದೂಡಲು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ನಿರ್ಧರಿಸಿತು.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಈ ತೀರ್ಮಾನ ಬರಲಾಯಿತು.

‘ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು, ಸಾಹಿತ್ಯ ವಲಯ ಹಾಗೂ ವಿವಿಧ ಸಂಘ–ಸಂಸ್ಥೆಗಳ ಭಾವನೆಯನ್ನು ಗೌರವಿಸೋಣ. ಸಮ್ಮೇಳನ ನಡೆಸಿ ಆಕ್ರೋಶಕ್ಕೆ ಗುರಿಯಾಗುವುದು ಬೇಡ. ಸಮ್ಮೇಳನವನ್ನು  2016ರಲ್ಲಿ ರಾಯಚೂರಿನಲ್ಲೇ ನಡೆಸೋಣ’ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ ‘ಸಮ್ಮೇಳನದ ಸಿದ್ಧತೆಗಾಗಿ ಈಗಾಗಲೇ 24 ಸಭೆಗಳನ್ನು ನಡೆಸಲಾಗಿದೆ. ಊಟ, ವಸತಿ, ಸ್ಮರಣ ಸಂಚಿಕೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರಳವಾಗಿ ಆಚರಿಸುವ ಮೂಲಕ ಕೃಷಿ ಸಂಬಂಧಿತ ಚರ್ಚೆಗೆ ಹೆಚ್ಚು ಒತ್ತು ನೀಡಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ’ ಎಂದು ಸಭೆಯ ಗಮನಕ್ಕೆ ತಂದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಎ.ವಸಂತಕುಮಾರ್ ಮಾತನಾಡಿ ‘ಕೃಷಿ ಬಗ್ಗೆ ಚರ್ಚೆ ಮಾಡಿದರೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಹೀಗಾಗಿ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಚರ್ಚೆಗೆ ಅವಕಾಶ ನೀಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ಶಾಸಕರಾದ ಎ.ವೆಂಕಟೇಶ್ ನಾಯಕ ಹಾಗೂ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ‘ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಇನ್ನೂ ಕೆಲವು ದಿನಗಳ ಬಳಿಕ ತೀರ್ಮಾನ ಕೈಗೊಳ್ಳಬಹುದು’ ಎಂದು ಹೇಳಿದರು. ಸಂಸದ ಬಿ.ವಿ.ನಾಯಕ್ ಮಾತನಾಡಿ ‘ಸಾಹಿತ್ಯ ಸಮ್ಮೇಳನ ಯಾವುದೇ ಕಾರಣಕ್ಕೂ ಜಿಲ್ಲೆಯ ಕೈ ತಪ್ಪಬಾರದು’ ಎಂದು ಕಳಕಳಿ ವ್ಯಕ್ತಪಡಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ‘ಡಾ.ಶರಣಪ್ರಕಾಶ ಪಾಟೀಲ,  ರಾಜ್ಯದಲ್ಲಿ ಆವರಿಸಿರುವ ಬರ ಮತ್ತು ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳಿಂದಾಗಿ ಪ್ರತಿಕೂಲ ಸನ್ನಿವೇಶ ಇದೆ. ಇಂತಹ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಸಾಹಿತ್ಯ ಉತ್ಸವವನ್ನು ನಡೆಸುವುದು ಸೂಕ್ತವಲ್ಲ. ಪರಿಸ್ಥಿತಿ ತಿಳಿಯಾಗುವವರೆಗೆ ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕು ಎಂಬ ಅನಿಸಿಕೆ ಒಕ್ಕೊರಲಿನಿಂದ ವ್ಯಕ್ತವಾಯಿತು ಎಂದು ತಿಳಿಸಿದರು.
*
ಸದ್ಯಕ್ಕೆ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ.  82ನೇ ಸಮ್ಮೇಳನ ರಾಯಚೂರಿನಲ್ಲೇ ನಡೆಯಲಿದ್ದು, ಯಾವಾಗ ನಡೆಸಬೇಕು ಎಂಬುದನ್ನು ನಂತರ ನಿರ್ಧರಿಸಲಾಗುವುದು.
- ಡಾ.ಶರಣಪ್ರಕಾಶ ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT