ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾದಲ್ಲಿ ಇನ್ನೆರಡು ಕಾನ್ಸುಲೇಟ್ ಕಚೇರಿ ಆರಂಭ: ಪ್ರಧಾನಿ ಮೋದಿ

Published : 9 ಜುಲೈ 2024, 10:46 IST
Last Updated : 9 ಜುಲೈ 2024, 10:46 IST
ಫಾಲೋ ಮಾಡಿ
Comments

ಮಾಸ್ಕೊ: ರಷ್ಯಾದಲ್ಲಿ ಇನ್ನೆರಡು ಕಾನ್ಸುಲೇಟ್ ಕಚೇರಿ ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕಜಾನ್ ಮತ್ತು ಯೆಕಟೆರಿನ್‌ಬರ್ಗ್‌ಗಳಲ್ಲಿ ಕಾನ್ಸುಲೇಟ್ ಆರಂಭವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಮಾಸ್ಕೊದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವು ಒಳ್ಳೆಯ ಸುದ್ದಿಗಳನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಕಜಾನ್ ಮತ್ತು ಯೆಕಟೆರಿನ್‌ಬರ್ಗ್‌ಗಳಲ್ಲಿ ಹೊಸದಾಗಿ ಕಾನ್ಸುಲೇಟ್ ಕಚೇರಿಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಇವು ಪ್ರಯಾಣ ಮತ್ತು ವ್ಯಾಪಾರದ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲಕರವಾಗಲಿವೆ ಎಂದು ಹೇಳಿದ್ದಾರೆ.

2 ವರ್ಷಗಳ ಹಿಂದೆ ಭಾರತ–ರಷ್ಯಾದ ‘ನಾರ್ತ್‌–ಸೌತ್ ಕಾರಿಡಾರ್’ಮೂಲಕ ಮೊದಲ ಸರಕು ಸಾಗಣೆ ಮಾಡಲಾಗಿದೆ. ಅದೊಂದು ಗಮನಾರ್ಹ ಸಾಧನೆಯಾಗಿತ್ತು. ಈಗ ಭಾರತ ಮತ್ತು ರಷ್ಯಾ ದೇಶಗಳು ಚೆನ್ನೈ-ವಾಲ್ಡಿವೋಸ್ಟಾಕ್ ಪೂರ್ವ ಕಾರಿಡಾರ್ ತೆರೆಯಲು ಮುಂದಾಗಿವೆ ಎಂದು ಹೇಳಿದರು.

ಯೆಕತರಿನ್‌ಬರ್ಗ್‌, ರಷ್ಯಾದ ನಾಲ್ಕನೇ ಅತಿದೊಡ್ಡ ನಗರವಾಗಿದ್ದು, ಆರ್ಥಿಕತೆಯ ಕೇಂದ್ರವಾಗಿದೆ. ಓಲ್ಗಾ ಮತ್ತು ಕಝಾಂಕಾ ನದಿ ಸಂಗಮ ತಾಣವನ್ನು ಒಳಗೊಂಡ ಕಝಾನ್ ನಗರದಲ್ಲೂ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಅಕ್ಟೋಬರ್‌ನಲ್ಲಿ ಇಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ.

21ನೇ ಶತಮಾನದಲ್ಲಿ ಭಾರತವು ವಿಶ್ವ ಬಂಧು ಪಾತ್ರ ನಿರ್ವಹಿಸಲಿದೆ ಎಂದು ಮೋದಿ ಹೇಳಿದರು.

2015ರಲ್ಲಿ ನಾನು ರಷ್ಯಾಗೆ ಮೊದಲ ಬಾರಿಗೆ ಭೇಟಿ ನೀಡಿದಾಗ 21ನೇ ಶತಮಾನವು ಭಾರತಕ್ಕೆ ಸೇರಿದ್ದಾಗಿರುತ್ತದೆ ಎಂದು ಹೇಳಿದ್ದೆ. ಇಂದು ವಿಶ್ವ ಬಂಧುವಾಗಿ ಭಾರತವು ಜಗತ್ತಿಗೆ ಹೊಸ ವಿಶ್ವಾಸ ನೀಡುತ್ತಿದೆ. ಭಾರತದ ಬೆಳೆಯುತ್ತಿರುವ ಸಾಮರ್ಥ್ಯವು ಇಡೀ ವಿಶ್ವಕ್ಕೆ ಸ್ಥಿರತೆ ಮತ್ತು ಸಮೃದ್ಧಿಯ ಭರವಸೆ ನೀಡಿದೆ. ಭಾರತವು ವಿಶ್ವದ ಬಹುವಿಧದ ಬೆಳವಣಿಗೆಯ ಆಧಾರಸ್ತಂಭವಾಗಿದೆ. ಭಾರತವು ಶಾಂತಿ ಮತ್ತು ರಾಜತಾಂತ್ರಿಕತೆಯ ಮಾತುಗಳನ್ನಾಡಿದಾಗ ಇಡೀ ವಿಶ್ವ ಕೇಳಿಸಿಕೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ.

ಇದೇವೇಳೆ, ಮೋದಿ ಮಾತುಗಳನ್ನು ಕೇಳುತ್ತಿದ್ದ ಭಾರತೀಯರು ತ್ರಿವರ್ಣ ಧ್ವಜವನ್ನು ಹಿಡಿದು, ಮೋದಿಯನ್ನು ಅಭಿನಂದಿಸಿದರು.

’ಭಾರತದ ‘ಸುಖ–ದುಃಖದ ಗೆಳೆಯ’

ರಷ್ಯಾ–ಮೋದಿ  ಮಾಸ್ಕೊ (ಪಿಟಿಐ): ಭಾರತ–ರಷ್ಯಾ ಬಾಂಧವ್ಯ ವೃದ್ಧಿಯಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರ ನಾಯಕತ್ವದ ಕೊಡುಗೆ ಹೆಚ್ಚು ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ‘ಭಾರತದ ಸುಖ–ದುಃಖದಲ್ಲಿ ಜೊತೆಗಿರುವ ಗೆಳೆಯನಂತೆ ರಷ್ಯಾ’ ಎಂದು ಬಣ್ಣಿಸಿದ್ದಾರೆ. ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪಶ್ಚಿಮ ರಾಷ್ಟ್ರಗಳು ರಷ್ಯಾದ ಸಾಮರ್ಥ್ಯವನ್ನು ನಿಸ್ತೇಜಗೊಳಿಸಲು ಯತ್ನಿಸುತ್ತಿರುವ ಹೊತ್ತಿನಲ್ಲಿಯೇ ಪ್ರಧಾನಿ ಈ ಮಾತು ಹೇಳಿದ್ದಾರೆ. ಅವರು ಇಲ್ಲಿ ಭಾರತ ಮೂಲದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು.  ‘ರಷ್ಯಾದ ಹೆಸರು ಕೇಳುತ್ತಿದ್ದಂತೆಯೇ ಪ್ರತಿ ಭಾರತೀಯನಲ್ಲೂ ರಷ್ಯಾ ನಂಬಿಕಾರ್ಹ ಪಾಲುದಾರ. ಕಷ್ಟ–ಸುಖದಲ್ಲಿ ಜೊತೆಗಿರುವ ಗೆಳೆಯ ಎಂಬ ಭಾವನೆ ಮೂಡುತ್ತದೆ’ ಎಂದು ಹೇಳಿದರು.  ‘ಚಳಿಗಾಲದಲ್ಲಿ ರಷ್ಯಾದ ತಾಪಮಾನ ಎಷ್ಟೇ ಮೈನಸ್‌ ಡಿಗ್ರಿ ಸೆಲ್ಸಿಯಸ್ ಇರಲಿ. ಭಾರತ–ರಷ್ಯಾದ ಭಾಂಧವ್ಯ ಎಂದಿಗೂ ಪ್ಲಸ್‌ ಆಗಿರಲಿದೆ. ಮಧುರವಾಗಿರಲಿದೆ. ಈ ಬಾಂಧವ್ಯವು ದೃಢವಾದ ಪರಸ್ಪರ ನಂಬಿಕೆ ಮತ್ತು ಗೌರವದ ಅಡಿಪಾಯವನ್ನು ಅವಲಂಬಿಸಿದೆ’ ಎಂದು ಮೋದಿ ಹೇಳಿದರು. ‘ಜಗತ್ತಿಗೆ ಈಗ ಬೇಕಾಗಿರುವುದು ಕೂಡಿ ಬಾಳುವ ಮನೋಧರ್ಮ; ಪ್ರಭಾವ ಬೀರುವ ಧೋರಣೆ ಅಲ್ಲ. ಕೂಡಿ ಬಾಳುವುದರ ಪ್ರಾಮುಖ್ಯವನ್ನು ಭಾರತದಷ್ಟು ಹೆಚ್ಚು ಅರ್ಥಪೂರ್ಣವಾಗಿ ಜಗತ್ತಿಗೆ ಬೇರಾರೂ ಸಾರಲು ಸಾಧ್ಯವಿಲ್ಲ. ಏಕೆಂದರೆ ಭಾರತದಲ್ಲಿ ಈ ಭಾವನೆಯನ್ನು ಪೂಜಿಸುವ ಸಂಪ್ರದಾಯವಿದೆ’ ಎಂದು ಹೇಳಿದರು. ‘ಪ್ರಗತಿ ಕುರಿತು ಭಾರತದಲ್ಲಿ 10 ವರ್ಷಗಳಲ್ಲಿ ನೋಡಿರುವುದು ಟ್ರೇಲರ್ ಮಾತ್ರ. ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ತ್ವರಿತಗತಿಯ ಪ್ರಗತಿ ನೋಡಲಿದ್ದೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT