ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಯೋತ್ಪಾದನೆ ಬೆಂಬಲಿಸುವವರನ್ನು ಏಕಾಂಗಿಯಾಗಿಸಿ: ಪ್ರಧಾನಿ ಮೋದಿ ಕರೆ

Published 4 ಜುಲೈ 2024, 15:45 IST
Last Updated 4 ಜುಲೈ 2024, 15:45 IST
ಅಕ್ಷರ ಗಾತ್ರ

ಅಸ್ತಾನ: ‘ಭಯೋತ್ಪಾದನೆಗೆ ಸ್ವರ್ಗದಂತಿರುವ, ಭಯೋತ್ಪಾದನೆ ಬೆಂಬಲಿಸುವ ದೇಶಗಳನ್ನು ‘ಏಕಾಂಗಿಯಾಗಿಸಿ ಮಾಡಿ, ಅವರ ಕಾರ್ಯತಂತ್ರಗಳನ್ನು ಬಯಲಿಗೆಳೆಯ ಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದರು.

ಇಲ್ಲಿ ನಡೆಯುತ್ತಿರುವ ಎರಡು ದಿನದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿರಲಿಲ್ಲ. ಆದರೆ, ಪ್ರಧಾನಿ ಅವರ ಭಾಷಣವನ್ನು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಓದಿದರು. ಪ್ರಧಾನಿ ಮೋದಿ ಅವರು ಪಾಕಿಸ್ತಾನ ಹಾಗೂ ಚೀನಾವನ್ನು ಗುರಿಯಾಗಿಸಿ ಮಾತನಾಡಿದರು.

‘ಉಗ್ರವಾದ ನಿರ್ಮೂಲನೆಯನ್ನು ಗಂ‌ಭೀರವಾಗಿ ಪರಿಗಣಿಸದಿದ್ದರೆ ಪ್ರಾದೇಶಿಕತೆ, ಅಂತರ‌ ರಾಷ್ಟ್ರೀಯ ಶಾಂತಿಗೆ ಬೆದರಿಕೆ ಒಡ್ಡಲಿದೆ. ಯಾವುದೇ ರೀತಿ ಭಯೋತ್ಪಾದನೆಯನ್ನು ಸಹಿಸಿ ಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದರು.

‘ಭಯೋತ್ಪಾದನೆಗೆ ನಿರ್ಣಾಯಕ ಪ್ರತಿಕ್ರಿಯೆ ಅಗತ್ಯ ಇದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ಇಂಥ ಸಂಘಟನೆಗಳಿಗೆ ಕಾರ್ಯಕರ್ತರ ಸೇರ್ಪಡೆಯು ಗಂಭೀರವಾದುದು. ಯುವಕರನ್ನು ಉಗ್ರ ಸಂಘಟನೆಗಳಿಗೆ ಸೇರಿಸುವ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಎಲ್‌ಎಸಿ: ಶೀಘ್ರ ಮತ್ತೆ ರಾಜತಾಂತ್ರಿಕರ ಸಭೆ’

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿ ರೇಖೆಯುದ್ದಕ್ಕೂ (ಎಲ್‌ಎಸಿ) ನಿಯೋಜಿಸಿರುವ ಸೇನೆಯನ್ನು ಹಿಂದೆ ಕರೆಯಿಸಿಕೊಳ್ಳಲು ಒಪ್ಪಂದ ಕುರಿತ ಚರ್ಚೆಗೆ ಭಾರತ–ಚೀನಾದ ರಾಜತಾಂತ್ರಿಕರು ಶೀಘ್ರ ಮತ್ತೆ ಸಭೆ ಸೇರುವರು.

ವಿದೇಶಾಂಗ ಸಚಿವ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಅಸ್ತಾನದಲ್ಲಿ ಭೇಟಿಯಾದ ಸಂದರ್ಭದಲ್ಲಿ, ಶೀಘ್ರದಲ್ಲಿಯೇ ಮತ್ತೆ ರಾಜತಾಂತ್ರಿಕರನ್ನು ಒಳಗೊಂಡ ಡಬ್ಲ್ಯುಎಂಸಿಸಿ ಸಭೆ ಸೇರಿ ಚರ್ಚಿಸುವ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ.

ಗಡಿ ವ್ಯವಹಾರ ಕುರಿತ ದ್ವಿಪಕ್ಷೀಯ ಸಂವಹನ ಮತ್ತು ಸಹಯೋಗದ (ಡಬ್ಲ್ಯುಎಂಸಿಸಿ) ನೇತೃತ್ವವನ್ನು ವಿದೇಶಾಂಗ ಸಚಿವಾಲಯದ ಪೂರ್ವ ಏಷ್ಯಾ ವಿಭಾಗದ ಜಂಟಿ ಕಾರ್ಯದರ್ಶಿ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ಪ್ರಧಾನ ನಿರ್ದೇಶಕರು ವಹಿಸಿದ್ದಾರೆ.

ಇದರ ಜೊತೆಗೆ ಬಾಕಿ ಉಳಿದಿರುವ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಉಭಯ ದೇಶಗಳ ಸೇನೆಗಳ ಕಮಾಂಡರ್‌ಗಳು ಕೂಡ ಸಭೆ ಸೇರಿ ಚರ್ಚಿಸಬೇಕು ಎಂದು ಇಬ್ಬರೂ ಸಚಿವರು ತೀರ್ಮಾನಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಹೇಳಿಕೆಯು ತಿಳಿಸಿದೆ.

ಸಮಸ್ಯೆ ಬಗೆಹರಿಸಿಕೊಳ್ಳಲು ಬದ್ಧ: ಚೀನಾದ ನೀತಿಗಳು ಹಾಗೂ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಉದ್ದಕ್ಕೂ ಎದುರಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿ ಶೃಂಗಸಭೆಯಲ್ಲಿ ಭಾರತವು ಗುರುವಾರ ಕಟು ಮಾತುಗಳನ್ನು ಆಡಿದೆ.

‘ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ, ಹಳಸಿರುವ ಸಂಬಂಧವನ್ನು ಮರುಸ್ಥಾಪಿಸುವ’ ಕುರಿತು ವಿದೇಶಾಂಗ ಸಚಿವ ಜೈಶಂಕರ್‌ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರೊಂದಿಗೆ ಗುರುವಾರ ಮಾತುಕತೆ ನಡೆಸಿದರು.

ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಂಬಂಧ ದ್ವಿಪಕ್ಷೀಯ ಒಪ್ಪಂದಕ್ಕೆ ಬದ್ಧ ವಾಗಿರುವುದು ಅವಶ್ಯಕವಾಗಿದೆ. ಗಡಿ ಸಮಸ್ಯೆಗಳ ಕುರಿತು ಎರಡೂ ದೇಶಗಳು ಈ ಹಿಂದೆಯೇ ರೂಪಿಸಿಕೊಂಡಿರುವ ನಿಯಮಗಳಿಗೆ ಬದ್ಧವಾಗಿರುವುದೂ ಮುಖ್ಯ’ ಎಂದು ಜೈಶಂಕರ್‌ ಹೇಳಿದ್ದಾರೆ.

‘ಎರಡೂ ದೇಶಗಳ ಸಂಬಂಧವು ಪರಸ್ಪರ ಗೌರವ, ಹಾಗೂ ಸಂವೇದನಾಶೀಲತೆಯಿಂದ ಕೂಡಿರಬೇಕು. ಅಲ್ಲದೆ ಗಡಿಯಲ್ಲಿ ಶಾಂತಿ ನೆಲಸದ ಹೊರತೂ ಎರಡೂ ದೇಶಗಳ ಸಂಬಂಧ ಉತ್ತಮಗೊಳ್ಳುವುದಿಲ್ಲ’ ಎಂದು ಹೇಳಿದರು.

ಪ್ರಧಾನಿ ಮೋದಿ ಹೇಳಿದ್ದು...
  • ನಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಾಗೂ ಸುಲಲಿತ ಸಂಪರ್ಕ ಸಾಧಿಸಲು, ಇತರ ದೇಶಗಳ ಸಾರ್ವಭೌಮತ್ವ ಮತ್ತು ಆ ದೇಶದ ಗಡಿಗಳ ಭದ್ರತೆಯನ್ನು ಗೌರವಿಸುವುದು ಮುಖ್ಯವಾಗುತ್ತದೆ‌

  • ಒಕ್ಕೂಟವು ಏಕತೆ, ಸಹಕಾರ, ಏಳಿಗೆ ಸಾಧಿಸಲು ಇರುವ ಉತ್ತಮ ವೇದಿಕೆಯಾಗಿದೆ. ಜೊತೆಗೆ, ‘ವಸುದೈವ ಕುಟುಂಬಕಂ’ ತತ್ವವನ್ನೂ ಒಕ್ಕೂಟ ಸಾರುತ್ತದೆ

  • ಹವಾಮಾನ ವೈಪರೀತ್ಯವು ಜಗತ್ತಿನ ಮುಂದಿರುವ ಪ್ರಮುಖ ಸವಾಲಾಗಿದೆ ಮತ್ತು ಭಾರತ ಹವಾಮಾನ ವೈಪರೀತ್ಯ ವನ್ನು ತಡೆಯುವ ಸಲುವಾಗಿ ಮಾಲಿನ್ಯವನ್ನು ತಡೆಗಟ್ಟಲು ಕಾರ್ಯಪ್ರವೃತ್ತವಾಗಿದೆ. ಜೊತೆಗೆ, ಎಲ್ಲ ರೀತಿಯ ಹವಾಗುಣವನ್ನು ತಡೆದುಕೊಳ್ಳುವ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತ ಕೆಲಸ ಮಾಡುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT