ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೆಬನಾನ್: ಸಾವಿನ ಸಂಖ್ಯೆ 558ಕ್ಕೆ ಏರಿಕೆ

Published : 24 ಸೆಪ್ಟೆಂಬರ್ 2024, 15:45 IST
Last Updated : 24 ಸೆಪ್ಟೆಂಬರ್ 2024, 15:45 IST
ಫಾಲೋ ಮಾಡಿ
Comments

ಬೈರೂತ್‌ (ಲೆಬನಾನ್‌): ಹಿಜ್ಬುಲ್ಲಾ ಬಂಡುಕೋರರ ತಾಣವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಸೇನೆ ಮಂಗಳವಾರ ಲೆಬನಾನ್‌ನ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ವೈಮಾನಿಕ ದಾಳಿ ನಡೆಸಿದೆ.

ಎರಡು ದಿನದ ವೈಮಾನಿಕ ದಾಳಿಯಲ್ಲಿ 50 ಮಕ್ಕಳು, 94 ಮಹಿಳೆಯರು ಸೇರಿದಂತೆ 558 ಜನರು ಮೃತಪಟ್ಟಿದ್ದು, 1,835 ಜನರು ಗಾಯಗೊಂಡಿ‌ದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವ ‌ಫಿರಾಸ್ ಅಬಿಯಾದ್‌ ತಿಳಿಸಿದ್ದಾರೆ.

ಬೈರೂತ್‌ ಮೇಲೆ ನಡೆದ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಹಿಜ್ಬುಲ್ಲಾ ಕಮಾಂಡರ್‌ ಇಬ್ರಾಹಿಂ ಖುಬೈಸಿ ಅವರೂ ಮೃತರಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಹಿಜ್ಬುಲ್ಲಾ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

‘ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್‌ ವಿಭಾಗದ ಕಮಾಂಡರ್‌ ಇಬ್ರಾಹಿಂ ಖುಬೈಸಿ ಅವರನ್ನು ಹತ್ಯೆ ಮಾಡಿದ್ದೇವೆ. ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ನಡೆಸುತ್ತಿದ್ದ ಕ್ಷಿಪಣಿ ದಾಳಿಗೆ ಅವರು ಕಾರಣರಾಗಿದ್ದರು’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಇಸ್ರೇಲ್‌ ಗಡಿಗೆ ಸಮೀಪವಿರುವ ಬಿಂತ್ ಜೆಬೈಲ್‌ ಆಸ್ಪತ್ರೆಯು ಮಂಗಳವಾರದ ದಾಳಿಯಲ್ಲಿ ಹಾನಿಗೊಳಗಾಗಿದೆ.

‘ಹಿಜ್ಬುಲ್ಲಾ ಬಂಡುಕೋರರನ್ನು ಲೆಬನಾನ್‌ನಿಂದ ಹೊರಹಾಕಲು ಇಸ್ರೇಲ್‌ ಎಲ್ಲ ಪ್ರಯತ್ನ ಮಾಡಲಿದೆ’ ಎಂದು ಸೇನಾ ವಕ್ತಾರ, ಡೇನಿಯಲ್ ಹಗರಿ ಹೇಳಿದ್ದಾರೆ.

‘ಹಿಜ್ಬುಲ್ಲಾ ಬಂಡುಕೋರರು ಹಲವು ವರ್ಷಗಳಲ್ಲಿ ಸುಮಾರು 9 ಸಾವಿರ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲ್‌ ಮೇಲೆ ಉಡಾಯಿಸಿದ್ದಾರೆ. ಸೇನೆಯು ಸೋಮವಾರ ಒಂದೇ ದಿನ ಉಗ್ರರ 1,300 ಗುರಿಗಳನ್ನು ನಾಶಗೊಳಿಸಿದೆ’ ಎಂದಿದ್ದಾರೆ.

1.5 ಲಕ್ಷದಷ್ಟು ರಾಕೆಟ್‌ಗಳು ಹಾಗೂ ಕ್ಷಿಪಣಿಗಳು ಹಿಜ್ಬುಲ್ಲಾ ಬಳಿಯಿದೆ ಎಂದು ‌ಅಂದಾಜಿಸಿರುವ ಇಸ್ರೇಲ್‌, ‘ದಕ್ಷಿಣ ಲೆಬನಾನ್‌ನನ್ನು ಯುದ್ಧ ವಲಯವನ್ನಾಗಿ ಮಾಡಿದೆ’ ಎಂದು ದೂರಿದೆ.

ಎಚ್ಚರಿಕೆ: 2006ರ ನಂತರ ಇಸ್ರೇಲ್‌–ಹಿಜ್ಬುಲ್ಲಾ ಬಂಡುಕೋರರ ನಡುವೆ ನಡೆ‌ಯುತ್ತಿರುವ ಬೃಹತ್ ಸಂಘರ್ಷ ಇದಾಗಿದೆ. ‌ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಮುನ್ನ, ದಕ್ಷಿಣ ಹಾಗೂ ಪೂರ್ವ ಲೆಬನಾನ್‌ನ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಇಸ್ರೇಲ್‌ ಸೇನೆಯು ಎಚ್ಚರಿಕೆ ನೀಡಿದೆ. ಅಪಾರ ಸಂಖ್ಯೆಯ ಜನರು ಪಲಾಯನ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

‘ಸೇನೆಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ. ಇದೀಗ ನೀವಿರುವ ಸ್ಥಳಗಳಿಂದ ಹೊರಬನ್ನಿ. ನಮ್ಮ ಕಾರ್ಯಾಚರಣೆ ಮುಗಿಯುತ್ತಿದ್ದಂತೆ, ನಿಮ್ಮ ಮನೆಗಳಿಗೆ ಸುರಕ್ಷಿತವಾಗಿ ಮರಳಬಹುದು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಲೆಬನಾನ್‌ ಜನರಿಗೆ ಧ್ವನಿ ಮುದ್ರಿತ ಸಂದೇಶದ ಮೂಲಕ ಮನವಿ ಮಾಡಿದ್ದಾರೆ. 

‘ಮನೆಗಳನ್ನು ತೊರೆದ ಜನರು’

ಜಿನೀವಾ: ಇಸ್ರೇಲ್‌ನ ದಾಳಿಯಿಂದ ಕಂಗೆಟ್ಟಿರುವ ಲೆಬನಾನ್‌ನ ಸಾವಿರಾರು ಮಂದಿ ಸೋಮವಾರದಿಂದ ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ‘ವಾಸಸ್ಥಳ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಿದ್ದು ಇಸ್ರೇಲ್‌ನ ದಾಳಿ ಹಾಗೂ ಅದರ ಗಂಭೀರ ಪರಿಣಾಮವನ್ನು ನಾವು ಗಮನಿಸುತ್ತಿದ್ದೇವೆ’ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ವಕ್ತಾರ ಮ್ಯಾಥ್ಯೂ ಸಾಲ್ಟ್‌ಮಾರ್ಶ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT