ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರಂಗ| ಸಿಡುಕಿನಿಂದ ಸಮಾಧಾನದವರೆಗೆ: ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಹೇಗೆ?

ಅಕ್ಷರ ದಾಮ್ಲೆ
Published : 3 ಆಗಸ್ಟ್ 2024, 0:29 IST
Last Updated : 3 ಆಗಸ್ಟ್ 2024, 0:29 IST
ಫಾಲೋ ಮಾಡಿ
Comments
ಪ್ರ

ನನ್ನ ಮಗನಿಗೀಗ ಹದಿನೇಳು ವರ್ಷ. ಎಲ್ಲದಕ್ಕೂ ಸಿಡುಕುತ್ತಾನೆ. ಜೋರು ಮಾಡಿದರೆ ತನಗೆ ತಾನೇ ದಂಡಿಸಿಕೊಳ್ಳುತ್ತಾನೆ. ಗೋಡೆಗೆ ಗುದ್ದುವುದು, ತಲೆಯನ್ನು ಗೋಡೆಗೆ ಅಪ್ಪಳಿಸುವುದು, ತನ್ನ ಕೈ ಕಚ್ಚಿಕೊಳ್ಳುವುದು, ಕೆಲವೊಮ್ಮೆ ಕುಯ್ದುಕೊಳ್ಳಲೂ ಯತ್ನಿಸುತ್ತಾನೆ. ಜೋರು ಮಾಡಬೇಕಾ, ಪ್ರೀತಿಸಬೇಕಾ, ತಿಳಿಸಿಹೇಳಬೇಕಾ... ಏನು ಮಾಡಿದರೂ ಮತ್ತೆ ಒಂದೆರಡು ವಾರಗಳಲ್ಲಿ ಇದೇ ವರ್ತನೆ ಪುನರಾವರ್ತನೆ ಆಗುತ್ತಿದೆ. ಏನು ಮಾಡಬೇಕು?

ನಿಮ್ಮ ಪರಿಸ್ಥಿತಿಯ ಸಂದಿಗ್ಧತೆ ಬಹುಷಃ ಅನೇಕ ಹೆತ್ತವರನ್ನು ಕಾಡುವಂಥದ್ದೇ. ಹದಿಹರೆಯದ ಮಕ್ಕಳ ಮಾನಸಿಕ ಸಮಸ್ಯೆಗಳ ಬಗ್ಗೆ ಅನೇಕರು ಬೇರೆ ಬೇರೆ ರೀತಿಯಲ್ಲಿ ಬಹಳ ವರ್ಷಗಳಿಂದ ತಿಳಿಸುತ್ತಾ ಬಂದಿದ್ದಾರೆ. ಆದರೆ ಸಮಸ್ಯೆ ಏನೆಂದರೆ, ಮನಃಶ್ಶಾಸ್ತ್ರದಲ್ಲಿ ಯಾವುದೋ ಒಂದು ಪರಿಹಾರ ಸುಮಾರಾಗಿ ಒಂದೇ ತೆರನಾಗಿ ಕಾಣುವಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕೊಡುವುದಿಲ್ಲ. ಹಾಗಾಗಿ ಇವುಗಳನ್ನು ಒಂದೊಂದಾಗಿಯೇ ಬಿಡಿಸಿ ನೋಡುವ ಅಗತ್ಯವಿದೆ.

ಹದಿಹರೆಯದ ವಯಸ್ಸಿನಲ್ಲಿ ಸಿಡುಕುತನ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿ ತಮ್ಮ ಹೊಸ ಐಡೆಂಟಿಟಿಯನ್ನು ಸ್ಥಾಪಿಸುವಂತಹ ಹಂತ ಇದು. ಅವರಿಗೆ ತಮ್ಮೊಳಗಾಗುತ್ತಿರುವ ತುಮುಲಗಳನ್ನು ಹೆತ್ತವರೊಡನೆ ಹಂಚಿಕೊಳ್ಳಲು ಎಷ್ಟೋ ಬಾರಿ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹೇಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಎನ್ನುವ ಅಸಹಾಯಕತೆ ಇರುತ್ತದೆ. ಹಾಗಾಗಿ ಸಣ್ಣ ಸಣ್ಣ ವಿಷಯಗಳಿಗೂ ಸಿಡುಕುತ್ತಾರೆ. ಮೂಲಭೂತವಾಗಿ ಆ ಸಿಡುಕುತನದ ಹಿಂದೆ ಕೋಪ ಅಥವಾ ಅಸಹಿಷ್ಣುತೆಗಿಂತ ಹೆಚ್ಚಾಗಿ ಅಸಹಾಯಕತನವೇ ಪರಿಣಾಮ ಬೀರುತ್ತಿರುತ್ತದೆ.

ಇಂತಹ ಪರಿಸ್ಥಿತಿಯನ್ನು ಹೇಗೆ ಸಂಭಾಳಿಸುವುದು ಎನ್ನುವ ವಿಚಾರವನ್ನು ವಿಮರ್ಶಿಸುವುದಾದರೆ, ಮಕ್ಕಳಿಗೆ ತಮ್ಮಲ್ಲಾಗುತ್ತಿರುವ ಭಾವನೆಗಳನ್ನು ವ್ಯಕ್ತಪಡಿಸಲು ಹೇಳಿಕೊಡಿ ಮತ್ತು ಯಾವುದೇ ಅಂಜಿಕೆ ಇಲ್ಲದೆ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಕೊಡಿ.

ಕೆಲವೊಂದು ಬಾರಿ ಅವರು ಹೇಳುವ ವಿಚಾರಗಳು ಸಮಂಜಸ ಅಂತ ಅನ್ನಿಸದಿದ್ದರೂ, ನೀವು ತತ್‌ಕ್ಷಣ ಪ್ರತಿಕ್ರಿಯಿಸದೆ, ಅವರಿಗೆ ನಿಧಾನವಾಗಿ ತಿಳಿ ಹೇಳಿ. ಜೋರು ಮಾಡುವುದರಿಂದ ಮಕ್ಕಳಲ್ಲಿರುವ ಅಸಹಾಯಕತನ ಜಾಸ್ತಿ ಆಗುತ್ತದೆಯೇ ಹೊರತು, ಕಡಮೆ ಆಗುವುದಿಲ್ಲ. ಗೋಡೆಗೆ ಗುದ್ದುವುದು, ತಲೆಯನ್ನು ಗೋಡೆಗೆ ಅಪ್ಪಳಿಸುವುದು, ತನ್ನ ಕೈ ಕಚ್ಚಿಕೊಳ್ಳುವುದು, ಕೆಲವೊಮ್ಮೆ ಕುಯ್ದುಕೊಳ್ಳಲೂ ಪ್ರಯತ್ನ ಮಾಡುವುದು ಇವೆಲ್ಲವೂ ಅಸಹಾಯಕತೆಯ ಪ್ರಕಟಣೆಯ ಬೇರೆ ಬೇರೆ ಮುಖಗಳಷ್ಟೇ.

ಅಂಥ ವರ್ತನೆಗಳನ್ನು ಕಂಡಾಗ, ನೀವು ಅಸಹಾಯಕರಾಗುವ ಬದಲು ಸಮಾಧಾನಿಸಿ, ಅವರ ಭಾವನೆಗಳಿಗೆ ರೂಪ ಕೊಡುವುದಕ್ಕೆ ಸಹಾಯ ಮಾಡಿ. ಮಾತಿನಲ್ಲಿ ಅಭಿವ್ಯಕ್ತಿಗೊಳಿಸುವುದು ಕಷ್ಟವಾದರೆ, ಬರಹದ ರೂಪದಲ್ಲಿ ಅಥವಾ ಚಿತ್ರದ ರೂಪದಲ್ಲಾದರೂ ಹೊರಹಾಕಿಸುವ ಪ್ರಯತ್ನ ಮಾಡಿ.

ಯಾವಾಗ ಅಭಿವ್ಯಕ್ತಿಯ ಮಾರ್ಗಗಳು ಅವರಿಗೆ ಅರ್ಥವಾಗುತ್ತದೋ ಆವಾಗ ಸಿಡುಕುತನ ಕಡಮೆಯಾಗಿ, ಸಮಾಧಾನ ನೆಲೆ ಮಾಡುತ್ತದೆ. ಈ ಮೂಲಕ ಹದಿಹರೆಯದಲ್ಲಾಗಬಹುದಾದ ಯಾವುದೇ ವ್ಯತಿರಿಕ್ತ ಪರಿಸ್ಥಿತಿಯನ್ನು ದೂರ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT