ಸ್ತ್ರೀ ಯ ದೇಹವೆಂಬುದು ಲೈಂಗಿಕ ಭೋಗವಸ್ತು ಎಂಬಂಥ ಮನಸ್ಥಿತಿ ಇಂದು ನೆನ್ನೆಯದಲ್ಲ. ಇಂತಹ ಮನಸ್ಥಿತಿಗಳ ವಿರುದ್ಧದ ಹೋರಾಟ, ಅನುಭವಿಸಬೇಕಾದ ದುಗುಡಗಳು ಅಂದಿನಿಂದ ಇಂದಿನವರೆಗೂ ಮುಂದು ವರಿದುಕೊಂಡು ಬಂದಿವೆ. ಇದಕ್ಕೊಂದು ಉದಾಹರಣೆ 12ನೇ ಶತಮಾನದ ವಚನಕಾರ್ತಿ ಅಕ್ಕ ಮಹಾದೇವಿಯ ಈ ವಚನ
ಬಟ್ಟಿಹ ಮೊಲೆಯ, ಭರದ ಜವ್ವನದ
ಚೆಲುವ ಕಂಡು ಬಂದಿರಣ್ಣಾ !
ಅಣ್ಣಾ, ನಾನು ಹೆಂಗೂಸಲ್ಲ !
ಅಣ್ಣಾ, ನಾನು ಸೂಳೆಯಲ್ಲ !
ಅಣ್ಣಾ, ಮತ್ತೆ ನನ್ನ ಕಂಡು
ಆರೆಂದು ಬಂದಿರಣ್ಣ ?
ಚನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪುರುಷನು
ನಮಗಾಗದ ಮೋರೆ ನೋಡಣ್ಣ

ಸ್ತ್ರೀಯರ ಅಸ್ಮಿತೆಯನ್ನು ಸ್ತ್ರೀ ದೇಹ ಎಂಬಷ್ಟಕ್ಕೇ ಇಳಿಸಿ ಕಾಣುವ ಈ ಪರಂಪರೆ ನೂರಾರು ವರ್ಷಗಳ ಹಿಂದಿನಿಂದಲೂ ಹೆಣ್ಣನ್ನು ಕಾಡಿದೆ. ಹೊಸ ಕಾಲದಲ್ಲಿ ಮಹಿಳೆಯನ್ನು ಅಳೆಯುವ ಇಂತಹ ‘ಎಕ್ಸ್ ರೇ ದೃಷ್ಟಿ’ ದೊಡ್ದದಾಗೇ ಬೆಳೆದಿದೆ. ಹೆಣ್ಣನ್ನು ಬರೀ ದೇಹವಾಗಿ ಪರಿಭಾವಿಸುವ ಕ್ರಮಕ್ಕೆ ಕಳೆದ ಶತಮಾನದ 80, 90ರ ದಶಕಗಳಲ್ಲಿ ಪ್ರತಿರೋಧದ ದನಿಗಳು ಕೇಳಿ ಬಂದಿದ್ದವು. ಆದರೆ ಇಂದು ಲೈಂಗಿಕ ಸರಕೀಕರಣ (ಆಬ್ಜೆಕ್ಟಿಫಿಕೇಷನ್) ಸಂಸ್ಕೃತಿ ದೊಡ್ಡದಾಗೇ ಕಾಣಿಸುತ್ತಿದೆ.

ಮಾಧ್ಯಮಗಳ ಸಂಗಮದ ಈ ಯುಗದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಚಿತ್ರಗಳು, ದೃಶ್ಯಗಳು ನಮ್ಮ ಸುತ್ತ ಆವರಿಸುತ್ತಿವೆ. ಇವುಗಳಲ್ಲಿ ಬಹುಪಾಲು ಚಿತ್ರಗಳು ಹೆಣ್ಣಿನ ದೇಹವನ್ನು ಲೈಂಗಿಕ ಸರಕಾಗಿ ಕಾಣುವಂತಹದ್ದೇ ಆಗಿರುತ್ತವೆ. ಇವನ್ನು ಕುರಿತು ಮಾತನಾಡಲು ಭಾಷೆಯೇ ಇಲ್ಲದಂತಾಗಿದೆ. ನಿಜ ಹೇಳಬೇಕೆಂದರೆ ಇಂದಿನ ಯುವಜನತೆಗೆ ಇದನ್ನು ಗುರುತಿಸುವಂತಹ ಸ್ಪಷ್ಟ ಗ್ರಹಿಕೆಗಳಿಲ್ಲ ಎಂದೂ ಅನಿಸುತ್ತದೆ. ಇಂತಹದೊಂದು ಸನ್ನಿವೇಶದಲ್ಲಿ ಮಹಿಳೆಯ ದೇಹದ ಸರಕೀಕರಣದ (ಆಬ್ಜೆಕ್ಟಿಫಿಕೇಷನ್) ವಿರುದ್ಧ ಬಾಲಿವುಡ್ ಚಿತ್ರನಟಿ, 27 ವರ್ಷದ ದೀಪಿಕಾ ಪಡುಕೋಣೆ ದನಿ ಎತ್ತಿದ್ದು ಮುಖ್ಯವಾದದ್ದು.

ಪ್ರಮುಖ ದಿನಪತ್ರಿಕೆಯೊಂದು ತನ್ನ ಸಾಮಾಜಿಕ ಮಾಧ್ಯಮದಲ್ಲಿ ‘OMG – ದೀಪಿಕಾ ಕ್ಲೀವೇಜ್ ಷೋ’ (ಓ ಮೈ ಗಾಡ್– ದೀಪಿಕಾ ಎದೆಸೀಳಿನ ಪ್ರದರ್ಶನ) ಎಂಬ ಶಿರೋನಾಮೆಯಡಿ ಛಾಯಾಚಿತ್ರ ಪ್ರಕಟಿಸಿತ್ತು. ಇದು ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿರುವ ಪುಕ್ಕಟೆ ಇಣುಕು ಕಾಮುಕತನವಲ್ಲದೆ (ವಾಯರಿಸಂ) ಬೇರೇನಲ್ಲ. ಆದರೆ ಇದರ ವಿರುದ್ಧ ದೀಪಿಕಾ ಪ್ರತಿಭಟಿಸಿದ್ದು ವಿಶೇಷ. ಎತ್ತರದ ಕ್ಯಾಮೆರಾ ಕೋನದಿಂದ ತೆಗೆದಂತಹ ಚಿತ್ರ ಅದು. ಒಂದು ವರ್ಷ ಹಳೆಯದು ಬೇರೆ. ಆಗ ಇದನ್ನು ದೀಪಿಕಾ ಅಭಿನಯವಿದ್ದ ‘ಚೆನ್ನೈ ಎಕ್ಸ್ಪ್ರೆಸ್’ ಚಿತ್ರದ ಪ್ರಚಾರಕ್ಕಾಗಿ ಬಳಸ ಲಾಗಿತ್ತು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ದೀಪಿಕಾ ‘ಹೌದು. ನಾನು ಮಹಿಳೆ. ನನಗೆ ಸ್ತನಗಳಿವೆ ಹಾಗೂ ಎದೆ ಸೀಳಿದೆ! ನಿಮಗೇನಾದರೂ ಸಮಸ್ಯೆಯೆ!??’ ಎಂದು ಟ್ವಿಟರ್ನಲ್ಲಿ ಖಾರವಾಗಿ ಕೇಳಿದ್ದರು. ಆ ನಂತರ ತಮ್ಮ ದೃಷ್ಟಿಕೋನವನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ತರ್ಕಬದ್ಧವಾಗಿ ಪ್ರಸ್ತುತಿಪಡಿಸಿ ಈ ವಾಗ್ವಾದವನ್ನು ಬೆಳೆಸಿದ್ದು ವಿಶೇಷ . ‘ನನ್ನ ವೃತ್ತಿಯ ಬಗ್ಗೆ ನಾನೇನೂ ಮುಗ್ಧಳಾಗಿಲ್ಲ’ ಎಂದೂ ದೀಪಿಕಾ ಬರೆದರು. ಏಕೆಂದರೆ, ಮಹಿಳೆಯರನ್ನು ಸಾಮಾನ್ಯವಾಗಿ ಅಧೀನ ನೆಲೆಯಲ್ಲಿ ಉಪಭೋಗ ವಸ್ತುವಾಗಿ ನೋಡುವಂತಹ ಚಿತ್ರಗಳನ್ನು ತಯಾರಿಸುವ ವ್ಯವಸ್ಥೆಯ ಅಂತರ್ಗತ ಭಾಗವಾಗಿರಬೇಕಾದ ವಿಪರ್ಯಾಸ ದೀಪಿಕಾ ವೃತ್ತಿಯದಾಗಿದೆ. ಇದು ತಮಗೂ ಗೊತ್ತಿದೆ ಎಂಬುದನ್ನು ಅವರು ಈ ವಾಕ್ಯಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

‘ತಲೆಯಿಂದ ಕಾಲ್ಬೆರಳವರೆಗೂ ಬಟ್ಟೆ ಧರಿಸಿರಬೇಕೆಂಬುದು ಒಂದು ಪಾತ್ರಕ್ಕೆ ಅಗತ್ಯವಾದರೆ ಮತ್ತೊಂದು ಪಾತ್ರಕ್ಕೆ ಪೂರ್ಣ ನಗ್ನವಾಗಿರಬೇಕಾದುದು ಅಗತ್ಯವಾಗಬಹುದು. ಇವನ್ನು ಒಪ್ಪಿಕೊಳ್ಳುವುದು ಬಿಡುವುದು ನಟಿಯಾಗಿ ನನ್ನ ಆಯ್ಕೆ. ಇದನ್ನು ಅರ್ಥ ಮಾಡಿಕೊಳ್ಳಿ. ಇದು ರೋಲ್ (ಪಾತ್ರ ); ರಿಯಲ್ (ವಾಸ್ತವ) ಅಲ್ಲ. ಆಯ್ದುಕೊಂಡ ಪಾತ್ರಕ್ಕೆ ನ್ಯಾಯ ಸಲ್ಲಿಸುವುದು ನನ್ನ ಕರ್ತವ್ಯ. ನನ್ನ ದೇಹ ಸೆಲಬ್ರೇಟ್ ಮಾಡಲು ನನಗೆ ಸಮಸ್ಯೆ ಇಲ್ಲ. ಪಾತ್ರ ಚಿತ್ರಣಕ್ಕೆ ತೆರೆಯ ಮೇಲೆ ದಿಟ್ಟವಾಗಿ ಅಭಿನಯಿಸಲು ನಾನು ಹಿಂಜರಿದಿಲ್ಲ’ ಎಂದು ಚಿತ್ರರಂಗ ಹಾಗೂ ನಿಜಜೀವನದ ಮಧ್ಯೆ ಗೆರೆ ಎಳೆಯಬೇಕಾದ ಅವಶ್ಯಕತೆಯನ್ನು ಮನದಟ್ಟು ಮಾಡಿಸಲು ದೀಪಿಕಾ ಯತ್ನಿಸಿದ್ದಾರೆ.

‘ನನ್ನ ಕಾಳಜಿ ಏನೆಂದರೆ ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಶಾರುಖ್ ಖಾನ್ ಅವರ 8 ಪ್ಯಾಕ್ ಅಥವಾ ಇತರ ಮಹಿಳೆ ಅಥವಾ ಪುರುಷನ ಅಂಗರಚನೆ (ಅನಾಟಮಿ) ಜೊತೆಗೆ ಇದನ್ನು ಗೊಂದಲ ಮಾಡಿಕೊಳ್ಳಬಾರದು. ಮಹಿಳಾ ಸಮಾನತೆ ಹಾಗೂ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಈ ಕಾಲದಲ್ಲಿ ಓದುಗರು ಅಥವಾ ವೀಕ್ಷಕರ ಗಮನ ಸೆಳೆದುಕೊಳ್ಳಲು ಇಂತಹ ಹಿನ್ನಡೆಯ ತಂತ್ರಗಳನ್ನು ಈಗಲೂ ಬಳಸಿಕೊಳ್ಳುತ್ತಿರುವ ಸಿದ್ಧಾಂತದ ವಿರುದ್ಧವಷ್ಟೇ ನಾನು ಮಾತನಾಡಿದ್ದೇನೆ’ ಎಂದು ದೀಪಿಕಾ ಸ್ಪಷ್ಟಪಡಿಸಿದ್ದಾರೆ.

‘ಸಿನಿಮಾದಲ್ಲಿ ಪುರುಷ ನಟನ 8 ಪ್ಯಾಕ್ ಆಬ್ಸ್ ನೋಡಿ ದಂಗಾಗುತ್ತೇವೆ. ಆದರೆ ಆತ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪುರುಷನ ತೊಡೆ ಸಂದಿಗೆ (ಕ್ರಾಚೆಟ್) ಝೂಮ್ ಮಾಡಿ ಅಭಿರುಚಿಹೀನ ಶಿರೋನಾಮೆ ನೀಡಲಾಗುತ್ತದೆಯೆ?’ ಎಂಬಂಥ ಪ್ರಶ್ನೆಯನ್ನು ಕೇಳುವ ದಿಟ್ಟತನ ಪ್ರದರ್ಶಿಸಿದ್ದಾರೆ ದೀಪಿಕಾ. ‘ಪರಸ್ಪರರಿಗೆ ಪ್ರೀತಿ, ಘನತೆ ಹಾಗೂ ಗೌರವ ತೋರಿಸಿ ಎಂಬುದು ಎಲ್ಲರಲ್ಲಿ ನನ್ನ ಕೋರಿಕೆ’ ಎಂದೂ ಅವರು ಹೇಳಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಮಹಿಳಾ ಪರ ಹೋರಾಟದಲ್ಲಿ ತೊಡಗಿಕೊಂಡಿರುವ ಸಾಮಾಜಿಕ ಕಾರ್ಯಕರ್ತೆಯೇನೂ ಅಲ್ಲ. ಅಥವಾ ಗಂಭೀರವಾದ ಕಾಳಜಿಗಳಿಗೆ ಧ್ವನಿಯಾಗುವ ‘ಪರ್ಯಾಯ ಸಿನಿಮಾ’ದಿಂದ ಬಂದ ಅಭಿನೇತ್ರಿಯೂ ಅಲ್ಲ. ಮುಖ್ಯವಾಹಿನಿಯ ಚಿತ್ರರಂಗವನ್ನು ಪ್ರವೇಶಿಸಿದ ಎಂಟು ವರ್ಷಗಳಲ್ಲೇ ಬಾಲಿವುಡ್ನ ಯಶಸ್ವೀ ತಾರೆಯಾಗಿದ್ದಾರೆ ಅವರು. ಹೀಗಾಗಿ ದೀಪಿಕಾ ಎತ್ತಿದ ಪ್ರಶ್ನೆ ಸಹಜವಾಗಿಯೇ ಮುಖ್ಯವಾಹಿನಿಯ ವಾಗ್ವಾದವಾಗಿ ಪರಿಣಮಿಸುತ್ತದೆ. ದೀಪಿಕಾ ಆಕ್ರೋಶಕ್ಕೆ ಪ್ರಚಾರಾಂದೋಲನದ ಸ್ವರೂಪವೂ ದಕ್ಕಿತು.

ಟ್ವಿಟರ್ನಲ್ಲಿ 70.25 ಲಕ್ಷ ಫಾಲೋವರ್ಸ್ಗಳನ್ನು ದೀಪಿಕಾ ಹೊಂದಿದ್ದಾರೆಂಬುದನ್ನು ಗಮನಿಸಿದರೆ ಇದರ ಪ್ರಭಾವ ಅರಿವಾಗುತ್ತದೆ. ಶಾರುಖ್ ಖಾನ್, ಪ್ರಿಯಾಂಕಾ ಛೋಪ್ರಾ, ಆಮೀರ್ ಖಾನ್, ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ಪ್ರಮುಖರು ಬೆಂಬಲಕ್ಕೆ ನಿಂತಿದ್ದು ಈ ಪ್ರಚಾರಾಂದೋಲನಕ್ಕೆ ಮತ್ತಷ್ಟು ಬಲ ತುಂಬಿದಂತಾಯಿತು. ಮಹಿಳೆಯನ್ನು ಉಪಭೋಗ ವಸ್ತುವಾಗಿಸಿದೆ (ಕಮಾಡಿಫಿಕೇಷನ್) ಮನರಂಜನಾ ಉದ್ಯಮ. ಪ್ರಚೋದಕ ರಂಜನೆ (ಟಿಟಿಲೇಟಿಂಗ್) ಒದಗಿಸಲು ಚಿತ್ರಗಳಲ್ಲಿ ‘ಐಟಂ ಗರ್ಲ್’ ಬೇಕು ಎಂಬ ಸೂತ್ರ ಸ್ಥಾಯಿಯಾಗಿ ಇದೆ.

ಇಂತಹ ಮನಸ್ಥಿತಿಗಳಿಗೆ ಮಾಧ್ಯಮಗಳೂ ಜೊತೆಯಾಗುತ್ತವೆ. ಹೀಗಾಗಿಯೇ ವೇಶ್ಯಾವಾಟಿಕೆ ಆರೋಪದಲ್ಲಿ ಸಿಲುಕಿದ ಬಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಬದುಕು ಅತಿರಂಜಿತ ಸುದ್ದಿಯಾಗುತ್ತದೆ. ಒಂದಷ್ಟು ಸಮಯವಾದರೂ ಜನರ ಗಮನವನ್ನು ಮಾಧ್ಯಮಗಳತ್ತ ಸೆಳೆದುಕೊಳ್ಳುವುದಷ್ಟೇ ಇದರ ಉದ್ದೇಶ. ಆದರೆ ಆಕೆಯನ್ನು ಬಳಸಿಕೊಂಡ ಪುರುಷರು ಪ್ರಚಾರದ ಬೆಳಕಿನಿಂದ ತಪ್ಪಿಸಿಕೊಂಡು ಖಾಸಗಿತನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಸಮಾಜದ ದ್ವಿಮುಖ ಧೋರಣೆಗಳಿಗೆ ಹಿಡಿದ ಕನ್ನಡಿ.

ಸ್ತ್ರೀತ್ವ ಎನ್ನುವುದನ್ನು ಕೇವಲ ಜೈವಿಕವಾಗಿ ನಿರ್ಣಯಿಸಬಹುದೆ ಎಂಬುದು ಪ್ರಶ್ನೆ. ನಮ್ಮ ಭಾಷೆ ಕೂಡ ಎಷ್ಟು ಪೂರ್ವಗ್ರಹಪೀಡಿತ ಎಂದರೆ ಅಂಗನೆ ಎನ್ನುವ ಪದ, ‘ದೇಹ’ ಹೊಂದಿದವಳು ಎಂಬ ಅರ್ಥವನ್ನು ಸ್ಫುರಿಸುತ್ತದೆ. ಗರ್ಭಕೋಶ ಹಾಗೂ ಮಗುವಿಗೆ ಹಾಲು ಉತ್ಪತ್ತಿ ಮಾಡುವ ಸ್ತನಗಳು ಜೈವಿಕವಾಗಿ ಸ್ತ್ರೀತ್ವವನ್ನು ಗ್ರಹಿಸುವಂತಹದ್ದು. ‘ಸ್ತನದಾಯಿನಿ’ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಮನ ತಟ್ಟುವ ಕಥೆಯಲ್ಲಿ ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ಮಹಿಳೆಯ ಅಸ್ಮಿತೆಯನ್ನು ದೇಹ, ಕೆಲಸಗಿತ್ತಿ ಹಾಗೂ ವಸ್ತುವಾಗಿ ಗುರುತಿಸುತ್ತಾರೆ.

25 ವರ್ಷಗಳವರೆಗೆ ಶ್ರೀಮಂತ ಹಸುಳೆಗಳಿಗೆ ಹಾಲೂಡುತ್ತಾ ನಂತರ ತನ್ನ ಉಪಯುಕ್ತತೆ ಕಳೆದುಕೊಂಡು ಸ್ತನ ಕ್ಯಾನ್ಸರ್ನಿಂದ ಸಾಯುವ ಮಹಿಳೆಯೊಬ್ಬಳ ಆರ್ದ್ರ ಕಥೆ ಇದು. ಹೆಣ್ಣಿನ ದೇಹವನ್ನು ಏನೆಲ್ಲಾ ವಿಧಗಳಲ್ಲಿ ಉಪಭೋಗದ ವಸ್ತುವಾಗಿಸುವ ವ್ಯವಸ್ಥೆಯ ಕ್ರೌರ್ಯವನ್ನು ಈ ಕಥೆ ಕಣ್ಣಮುಂದೆ ತರುತ್ತದೆ. ಹಾಗೆಯೇ ಈಚಿನ ದಿನಗಳಲ್ಲಿ ಬಾಡಿಗೆ ತಾಯಿಯರ ಸಂಖ್ಯೆ ಹೆಚ್ಚುತ್ತಿದ್ದು ಹೆಣ್ಣಿನ ಗರ್ಭವೂ ಖರೀದಿಸುವವರ ಬಳಕೆಯ ಸಾಧನವಾಗಿದೆ.

ವಾಸ್ತವವಾಗಿ ವಿಶ್ವವನ್ನು ಪುರುಷ ಕೇಂದ್ರಿತ ದೃಷ್ಟಿಕೋನದಿಂದ ಪರಿಭಾವಿಸುವ ಕ್ರಮ, ಈ ಸಮಸ್ಯೆಯ ಮೂಲ. ಮಹಿಳೆಯೂ ಪುರುಷ ಹೊಂದಬೇಕಾದ ಒಂದು ವಸ್ತು ಎಂಬಂಥ ದೃಷ್ಟಿಕೋನವನ್ನು ವಿಸ್ತೃತ ನೆಲೆಗಳಲ್ಲಿ ಅರ್ಥೈಸಿಕೊಳ್ಳಬೇಕು. ಮಹಿಳೆಯರೆಂದೂ ಕೇಂದ್ರಬಿಂದುಗಳಲ್ಲ. ಪರಿಧಿಯಲ್ಲಿರುವವರು ಎಂಬ ಮೌಲ್ಯಗಳನ್ನು ಪರಂಪರಾಗತವಾಗಿ ತುಂಬುತ್ತಾ ಬರಲಾಗಿದೆ. ಹೀಗಾಗಿ ಮಹಿಳೆ ಮಾಯೆಯಾಗಿದ್ದಾಳೆ. ಮೀನಿನ ಹೆಜ್ಜೆಯವಳಾಗಿದ್ದಾಳೆ. ಅರ್ಥವಾಗದ ನಿಗೂಢ ವ್ಯಕ್ತಿಯಾಗಿದ್ದಾಳೆ. ಯಾಕೆಂದರೆ ಮಹಿಳಾ ಕೇಂದ್ರಿತ ದೃಷ್ಟಿಯಿಂದ ಬದುಕನ್ನು ಪರಿಭಾವಿಸುವುದು ಪುರುಷರಿಗೆ ಸಾಧ್ಯವಿಲ್ಲ. ಈ ಬಗ್ಗೆ ಪುರುಷರಿಗೆ ತರಬೇತಿಯಾಗಿರುತ್ತದೆ. ಆದರೆ ಈ ಸತ್ಯವನ್ನು ಒಪ್ಪಲು ಸಮಾಜ ಇಷ್ಟಪಡುವುದಿಲ್ಲ.

ಮಹಿಳೆಯರಿಗೆ ಸಂಬಂಧಿಸಿದಂತೆ ಭಾರತೀಯ ಸಮಾಜ ಪ್ರಗತಿವಿರೋಧಿಯಾಗಿದೆ ಎಂಬಂಥ ಮಾತನ್ನು ಮತ್ತೊಬ್ಬ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅಮೆರಿಕದ ಮ್ಯಾಗಜೀನ್ ‘ವ್ಯಾನಿಟಿ ಫೇರ್’ಗೆ ಕಳೆದ ವರ್ಷ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿ ವರದಿಗಾರರೊಬ್ಬರೊಂದಿಗೆ ಮಾತಿನ ಚಕಮಕಿಗೂ ಅವರು ಇಳಿದಿದ್ದರು. ಆಗ ಸಹ ಭಾರತೀಯ ಮಹಿಳೆಯ ಸ್ಥಿತಿಗತಿ ಬಗ್ಗೆ ಕಹಿ ಸತ್ಯವನ್ನು ಹೇಳಿದ ಮಲ್ಲಿಕಾ ಶೆರಾವತ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲ ವ್ಯಕ್ತವಾಗಿತ್ತು.

ಬಾಲಿವುಡ್ನ ಹೊಸ ಪೀಳಿಗೆ ಹೀಗೆ ಪ್ರಶ್ನೆಗಳನ್ನು ಕೇಳುತ್ತಿದೆ ಎಂಬುದೇ ಹೊಸ ಹೆಜ್ಜೆ. ಪರಿಣೀತಿ ಚೋಪ್ರಾ ಅವರನ್ನು ಬಾಲಿವುಡ್ನ ‘ಆ್ಯಂಗ್ರಿ ಯೆಂಗ್ ಗರ್ಲ್’ ಎಂದು ಕರೆಯಲಾಗುತ್ತದೆ. ‘ಹುಡುಗಿಯರು ಹರೆಯದಲ್ಲಿದ್ದಾಗ ‘ಅದನ್ನು’ ಇಷ್ಟಪಡುತ್ತಾರೆ. ವಯಸ್ಸಾಗುತ್ತಾ ಹೋದ ಹಾಗೆ ತಮ್ಮನ್ನು ಹುಡುಗ ಶೋಷಿಸಿದ ಎಂದು ಅರಚಲು, ಕಿರುಚಲು ಶುರು ಮಾಡುತ್ತಾರೆ ಏಕೆ’ ಎಂಬಂಥ ಪ್ರಶ್ನೆ ಕೇಳಿದ ವರದಿಗಾರನಿಗೆ ಛೋಪ್ರಾ ಸರಿಯಾಗಿಯೇ ಉತ್ತರಿಸಿದ್ದರು. ‘‘ಅದನ್ನು’ ಎಂದರೆ ಏನು? ತಮ್ಮ ಜೊತೆಗಿರಬೇಕೆಂದು ನಿಮಗೆ ಹೆಣ್ಣುಮಕ್ಕಳು ಒತ್ತಾಯಿಸುತ್ತಾರೆಯೆ? ..ನೀವು ಅಷ್ಟೊಂದು ಹಿಂಸೆಗೊಳಗಾಗಿದ್ದೀರಾ? ‘ಸ್ಸಾರಿ..’

ಇದು ಹಾಸ್ಯಾಸ್ಪದ ಹಾಗೂ ಯಾವುದೇ ಹುಡುಗಿಗೆ ಇಂತಹ ಮಾತನ್ನಾಡುವುದು ಅಗೌರವವಾದದ್ದು’ ಎಂದು ಛೋಪ್ರಾ ಆ ವರದಿಗಾರನನ್ನು ತರಾಟೆಗೆ ತೆಗೆದುಕೊಂಡು ಪತ್ರಿಕಾಗೋಷ್ಠಿಯಲ್ಲಿ ಚಪ್ಪಾಳೆ ಗಿಟ್ಟಿಸಿದ್ದರು. ಆದರೆ, ಈ ಚಪ್ಪಾಳೆ ಅಥವಾ ದೀಪಿಕಾ ಪಡುಕೋಣೆ ವ್ಯಕ್ತಪಡಿಸಿದ ಪ್ರತಿರೋಧ ಶತಶತಮಾನಗಳ ಪೂರ್ವಗ್ರಹಗಳ ಪ್ರಾಬಲ್ಯದ ಕೋಟೆಯೊಳಗೆ ನಗಣ್ಯವಾಗಿ ಬಿಡಬಹುದಾದ ಕಟು ವಾಸ್ತವವೂ ನಮ್ಮ ನಡುವೆ ಇದೆ.

ಬಾಲಿವುಡ್ನ ಕಿರಿಯ ತಾರೆಯರು ತಮ್ಮನ್ನು ತಾವು ಹೀಗೆ ಪ್ರತಿಪಾದಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಬಾಲಿವುಡ್ನ ಹಿಂದಿನ ‘ಕನಸಿನ ಕನ್ಯೆ’ ಹಾಗೂ ಮಥುರಾದ ಬಿಜೆಪಿ ಸಂಸದೆ ಹೇಮಾಮಾಲಿನಿ ವಿಧವೆಯರ ಕುರಿತು ವಿವಾದಾತ್ಮಕವಾದ ಅಸೂಕ್ಷ್ಮ ಮಾತುಗಳನ್ನಾಡಿದ್ದಾರೆ. ಬಿಹಾರ ಹಾಗೂ ಪಶ್ಚಿಮ ಬಂಗಾಳಗಳ ವಿಧವೆಯರು ವೃಂದಾವನದಲ್ಲಿ ಹೆಚ್ಚು ಹೆಚ್ಚು ಬಂದು ಸೇರಿಕೊಳ್ಳುತ್ತಿರುವ ಕಾರಣ ವೃಂದಾವನದಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ ಎಂಬರ್ಥದ ಹೇಳಿಕೆಯನ್ನು ಅವರು ನೀಡಿದ್ದಾರೆ.

ವೃಂದಾವನ ಹೇಮಾಮಾಲಿನಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಸೇರಿದೆ. ಹೇಮಾಮಾಲಿನಿಯ ಪ್ರಕಾರ, 40,000 ವಿಧವೆಯರು ವೃಂದಾವನದಲ್ಲಿ ತುಂಬಿ ಹೋಗಿದ್ದಾರೆ. ಭಾರತದ ಕಪ್ಪುಚುಕ್ಕೆಯಾಗಿರುವ ವಿಧವಾ ಸಮಸ್ಯೆಯಂತಹ ಗಂಭೀರವಾದ ವಿಚಾರದ ಬಗ್ಗೆ ಹೇಮಾಮಾಲಿನಿ ಮಾತನಾಡಿದ ರೀತಿಗೆ ಏನೆನ್ನಬೇಕು? ವಿಧವೆಯರು ಯಾವ ಪ್ರದೇಶದವರಾದರೇನು? ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅವರ ಚಲನೆ ನಿರ್ಬಂಧಿಸಲು ಯಾರಿಗೂ ಹಕ್ಕಿಲ್ಲ.

ವಿಧವೆಯರಿಗೆ ಅಗತ್ಯವಾಗಿರುವುದು ಘನತೆಯ ಬದುಕು. ಹೇಮಾಮಾಲಿನಿ ಹಿಂದೆ ಕರ್ನಾಟಕದಿಂದಲೂ ರಾಜ್ಯಸಭೆಗೆ ಆಯ್ಕೆಯಾಗಿದ್ದವರು. ಕಾನೂನು ಹಾಗೂ ನೀತಿಗಳನ್ನು ರೂಪಿಸಬೇಕಾದ ನೇತಾರರಾಗಿರುವವರಲ್ಲಿ ಮಹಿಳಾ ಪರ ಸೂಕ್ಷ್ಮತೆ ನಾಸ್ತಿಯಾದರೆ ಸಮಾಜದಲ್ಲಿ ಪ್ರವಹಿಸುತ್ತಿರುವ ಮಹಿಳಾ ವಿರೋಧಿ ಪೂರ್ವಗ್ರಹಗಳ ವಿರುದ್ಧದ ಹೋರಾಟ ಎಷ್ಟರಮಟ್ಟಿಗೆ ತಾನೇ ಸಫಲವಾಗಬಹುದು?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.