ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಗೆ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಪರ್ಯಾಯ ನಾಮಕರಣವನ್ನೇ ಮಾಡಿದೆ. ಆಡಳಿತಾರೂಢ ಪಕ್ಷ ಮಾತ್ರವಲ್ಲದೆ ಎಲ್ಲ ಪಕ್ಷಗಳೂ ನಾರಿ ಶಕ್ತಿಗೆ ವಂದಿಸಲು ಮುಗಿಬೀಳುತ್ತಿವೆ. ಹಾಗಿದ್ದರೆ ಇದರ ಹಿಂದಿನ ಅಸಲಿಯತ್ತು ಏನಿರಬಹುದು? ಒಂದೇ ಒಂದು ಸಣ್ಣ, ಆದರೆ ಮಹತ್ವವಾದ ಅಂಕಿಅಂಶವು ನಮ್ಮ ಈ ಕುತೂಹಲವನ್ನು ಒಮ್ಮೆಗೇ ತಣಿಸುತ್ತದೆ.

ಬಾನ್ಸುರಿ ಸ್ವರಾಜ್, ಬಂತೋ ಕಠಾರಿಯ, ಸಂಯುಕ್ತಾ ಪಾಟೀಲ, ಪ್ರಿಯಾಂಕಾ ಜಾರಕಿಹೊಳಿ, ಸೀತಾ ಸೊರೇನ್, ಪ್ರಭಾ ಮಲ್ಲಿಕಾರ್ಜುನ, ಗಾಯತ್ರಿ ಸಿದ್ಧೇಶ್ವರ, ಸೌಮ್ಯಾ ರೆಡ್ಡಿ... ಪ್ರಸಕ್ತ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಇಂತಹ ಹೆಸರುಗಳು ಜನಮಾನಸದಲ್ಲಿ ಮಂದಹಾಸ ಮೂಡಿಸುತ್ತವೆ. ವ್ಹಾವ್! ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಮುನ್ನವೇ ಹೊಸ ಮುಖಗಳಿಗೆ ಈ ಪರಿ ಮನ್ನಣೆಯೇ ಎಂದು ಅಚ್ಚರಿ ಹುಟ್ಟಿಸುತ್ತವೆ. ಆದರೆ ಈ ಪಟ್ಟಿಯ ಮೇಲೊಂದು ಭೂತಗನ್ನಡಿ ಹಿಡಿದರೆ ಅಲ್ಲಿ ಕಾಣಸಿಗುವುದು ಬೇರೆಯದೇ ಮುಖ!

ಪಕ್ಷಾತೀತವಾಗಿ ಇಲ್ಲಿ ಕಂಡುಬರುವ ಒಂದು ಸಾಮ್ಯತೆಯೆಂದರೆ, ಇವರೆಲ್ಲರಿಗೂ ಇರುವ ರಾಜಕೀಯ ನಂಟು. ದಶಕಗಳಿಂದಲೂ ಅಧಿಕಾರ ರಾಜಕಾರಣದ ಗಾಳಿಯನ್ನೇ ಉಸಿರಾಡುತ್ತಾ ಬಂದಿರುವ ಕುಟುಂಬಗಳ ಕುಡಿಗಳು ಇವರು. ಇದು, ಮಸೂದೆಯ ಭವಿಷ್ಯದ ಫಲಾನುಭವಿಗಳ ಬಗೆಗೆ ಸ್ಥೂಲ ಚಿತ್ರಣವೊಂದನ್ನು ನಮಗೆ ಕಟ್ಟಿಕೊಡುತ್ತದೆ. ಕೆಲವರು ತಂದೆ, ತಾಯಿ ಅಥವಾ ಪತಿ ಮೃತಪಟ್ಟಾಗ ‘ಅನುಕಂಪದ ಆಧಾರ’ದಲ್ಲಿ ಪಡೆಯುವ ಸರ್ಕಾರಿ ನೌಕರಿಯಂತೆ ಟಿಕೆಟ್ ಗಿಟ್ಟಿಸಿದವರಾಗಿದ್ದರೆ, ನಿನ್ನೆ ಮೊನ್ನೆಯವರೆಗೂ ಜಾರ್ಖಂಡ್ ಮುಕ್ತಿ ಮೋರ್ಚಾದಲ್ಲಿದ್ದು, ಭ್ರಷ್ಟಾಚಾರ ಹಗರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಸೀತಾ ಸೊರೇನ್ ಅಂತಹವರು ‘ಸ್ವಚ್ಛ’ವಾಗುವ ಸಲುವಾಗಿ ಬಿಜೆಪಿಯ ಕದ ತಟ್ಟಿದವರು. ಇದೇ ತಿಂಗಳ 19ರಂದು ಪಕ್ಷ ಸೇರಿ, ಆರೇ ದಿನಗಳಲ್ಲಿ ಟಿಕೆಟ್ ಗಿಟ್ಟಿಸಿಕೊಂಡವರು! ಆದರೆ ಚುನಾವಣಾ ಅಖಾಡದಲ್ಲಿ ಸೆಣಸುವುದು ಸಾಮಾನ್ಯ ಮಾತ್ರದವರಿಗೆ ಅಸಾಧ್ಯ ಎನ್ನುವಂತಹ ಇಂದಿನ ಪರಿಸ್ಥಿತಿಯಲ್ಲಿ, ಪುರುಷಾಧಿಪತ್ಯವು ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಕಣಕ್ಕಿಳಿಸಲು ಮನಸ್ಸು ಮಾಡಿರುವುದನ್ನೂ ಒಂದು ಕ್ರಾಂತಿಕಾರಕ ನಡೆ ಎಂದೇ ಪರಿಗಣಿಸಬೇಕಾಗುತ್ತದೆ!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೆಪ್ಟೆಂಬರ್ನಲ್ಲಿ ಹೊಸ ಸಂಸತ್ ಭವನಕ್ಕೆ ಅಡಿಯಿಟ್ಟಾಗ, ಏಕಾಏಕಿ ವಿಶೇಷ ಅಧಿವೇಶನ ಕರೆದು ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ- 2023ರ ಹಿಂದೆ ರಾಜಕೀಯ ಲಾಭ ಗಳಿಕೆಯ ಉದ್ದೇಶ ಇರುವುದು ಸುಸ್ಪಷ್ಟ. ಆದರೂ ಅದರಿಂದ ತನ್ನ ಮಹತ್ವವನ್ನೇನೂ ಕಳೆದುಕೊಳ್ಳದ ಮಸೂದೆ, ಕೆಲವು ಪ್ರಶ್ನೆಗಳು ಮತ್ತು ಅನುಮಾನಗಳನ್ನೂ ಹುಟ್ಟುಹಾಕಿದೆ.

1996ರಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿದ್ದರೂ ಒಳಮೀಸಲಾತಿಯ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಮ್ಮತ, ಬದ್ಧತೆ ತೋರದೇ ಇದ್ದ ಕಾರಣಕ್ಕೆ ಶೈತ್ಯಾಗಾರ ಸೇರಿದ್ದ ಈ ಸಾಂವಿಧಾನಿಕ ಹಕ್ಕೊತ್ತಾಯಕ್ಕೆ ಈಗ ಪಕ್ಷಾತೀತವಾಗಿ ಬೆಂಬಲ ದೊರೆತಿರುವುದು ಸ್ವಾಗತಾರ್ಹ ಬೆಳವಣಿಗೆಯೇ ಸರಿ. ಏಕೆಂದರೆ, ಇದೇ ರಾಜಕೀಯ ಪಕ್ಷಗಳು ಒಂದು ಕಾಲದಲ್ಲಿ ಇಂತಹದ್ದೊಂದು ಮೀಸಲಾತಿಯ ಪ್ರಸ್ತಾಪವನ್ನೇ ಸಾರಾಸಗಟಾಗಿ ತಿರಸ್ಕರಿಸಿದ್ದವು.

ವಿಶ್ವಸಂಸ್ಥೆಯ ಒತ್ತಾಸೆಯ ಮೇರೆಗೆ ಸರಿಸುಮಾರು 50 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ನೇಮಿಸಿದ್ದ ಸಮಿತಿಯು ‘ಮಹಿಳೆಯರ ಸ್ಥಿತಿಗತಿ’ ಕುರಿತು ‘ಟುವರ್ಡ್ಸ್ ಈಕ್ವಾಲಿಟಿ’ ಶೀರ್ಷಿಕೆಯಡಿ ವರದಿಯೊಂದನ್ನು ಸಲ್ಲಿಸಿತ್ತು. ದೇಶದ ರಾಜಕೀಯ ವಲಯದಲ್ಲಿ ಮಹಿಳೆಯರ ನಿರಾಶಾದಾಯಕ ಸ್ಥಿತಿ ಸುಧಾರಿಸಬೇಕಾದರೆ ಶಾಸನಸಭೆಗಳಲ್ಲಿ ಅವರಿಗೆ ಶೇ 30ರಷ್ಟು ಮೀಸಲಾತಿ ಕಲ್ಪಿಸಬೇಕಾದ ಅನಿವಾರ್ಯವನ್ನು ವರದಿ ಪ್ರತಿಪಾದಿಸಿತ್ತು. ಸಮಿತಿಯು ಈ ಕುರಿತು ನಡೆಸಿದ ವ್ಯಾಪಕ ಚರ್ಚೆಯ ಸಂದರ್ಭದಲ್ಲಿ, ಮಹಿಳೆಯರೂ ಒಳಗೊಂಡಂತೆ ಬಹುತೇಕ ಎಲ್ಲ ಪಕ್ಷಗಳ ನಾಯಕರೂ ಮಹಿಳಾ ಮೀಸಲಾತಿ ಪ್ರಸ್ತಾಪಕ್ಕೆ ಅಸಹನೆ ವ್ಯಕ್ತಪಡಿಸಿದ್ದರು. ಸ್ತ್ರೀಯರನ್ನು ಶೋಷಿತರಂತೆ ಪರಿಗಣಿಸಿ ಮೀಸಲಾತಿ ನೀಡುವುದು ಪ್ರತಿಗಾಮಿ ನಡೆ ಎಂದೇ ವಾದಿಸಿದ್ದರು.

ಆದರೆ ಇಂದು ಸರ್ಕಾರ ಈ ಮಸೂದೆಗೆ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಪರ್ಯಾಯ ನಾಮಕರಣವನ್ನೇ ಮಾಡಿದೆ. ಆಡಳಿತಾರೂಢ ಪಕ್ಷ ಮಾತ್ರವಲ್ಲದೆ ಎಲ್ಲ ಪಕ್ಷಗಳೂ ನಾರಿ ಶಕ್ತಿಗೆ ವಂದಿಸಲು ಮುಗಿಬೀಳುತ್ತಿವೆ. ಹಾಗಿದ್ದರೆ ಇದರ ಹಿಂದಿನ ಅಸಲಿಯತ್ತು ಏನಿರಬಹುದು? ಒಂದೇ ಒಂದು ಸಣ್ಣ, ಆದರೆ ಮಹತ್ವವಾದ ಅಂಕಿಅಂಶವು ನಮ್ಮ ಈ ಕುತೂಹಲವನ್ನು ಒಮ್ಮೆಗೇ ತಣಿಸುತ್ತದೆ.

1962ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರಲ್ಲಿ ಪ್ರತಿ 1,000 ಪುರುಷರಿಗೆ 675 ಮಹಿಳೆಯರು ಇದ್ದರೆ, ಅದೇ 2019ರ ಚುನಾವಣೆಯಲ್ಲಿ ಮಹಿಳೆಯರ ಮತದಾನದ ಪ್ರಮಾಣ ಪುರುಷ ಮತದಾರರ ಸಂಖ್ಯೆಯನ್ನು ಮೀರಿಸಿತ್ತು! ಮತದಾನದ ಹಕ್ಕು ಪಡೆದ ಪ್ರತಿ 1,000 ಪುರುಷರಿಗೆ ಮಹಿಳೆಯರ ಸಂಖ್ಯೆ 926 ಮಾತ್ರ ಇದ್ದುದರ ನಡುವೆಯೂ ಅತಿ ಹೆಚ್ಚಿನ ಹೆಂಗಳೆಯರು ಮತಗಟ್ಟೆಗೆ ಹಾಜರಾಗಿ ಹಕ್ಕು ಚಲಾಯಿಸಿದ್ದರು. ಶೇ 67.01ರಷ್ಟು ಪುರುಷರಿಗೆ ಪ್ರತಿಯಾಗಿ ಶೇ 67.18ರಷ್ಟು ಸ್ತ್ರೀಯರು ಮತದಾನ ಮಾಡಿದ ದಾಖಲೆಯು ಸ್ವತಂತ್ರ ಭಾರತದಲ್ಲಿ ಇತಿಹಾಸವನ್ನೇ ನಿರ್ಮಿಸಿತು. ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಯಾವುದೇ ಚುನಾವಣೆಯಲ್ಲಿ ಮಹಿಳೆಯರಿಗೆ ನಿರ್ದಿಷ್ಟ ಭರವಸೆಗಳಿಲ್ಲದ ಪ್ರಣಾಳಿಕೆಗಳೇ ಬಿಡುಗಡೆಯಾಗದಿರುವುದರ ಹಿಂದಿನ ಮರ್ಮ ಇದು!

ಮಸೂದೆಗೆ ಇದೀಗ ಉಭಯ ಸದನಗಳ ಅನುಮೋದನೆ ದೊರೆತಿರುವುದು ಅದರ ಜಾರಿಯ ಸಾಧ್ಯಾಸಾಧ್ಯತೆಯನ್ನಂತೂ ನಿಚ್ಚಳವಾಗಿಸಿದೆ. ಆದರೂ ಇಷ್ಟೆಲ್ಲಾ ಸಾಂಸ್ಥಿಕ ತಡೆಗೋಡೆಗಳನ್ನು ದಾಟಿ ಬಂದ ನಂತರವೂ ಈ ಬಾರಿಯ ಚುನಾವಣೆಯಲ್ಲೇ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಾರದಿರುವುದೇಕೆ? ನಿಜಕ್ಕೂ ರಾಜಕೀಯ ಪಕ್ಷಗಳಿಗೆ ಬದ್ಧತೆ ಇದ್ದರೆ ಮಸೂದೆಯ ಹಂಗಿಲ್ಲದೆಯೂ ಹೆಚ್ಚು ಮಹಿಳೆಯರಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲವೇ? ಮಹಿಳೆಯರ ಮತ ಗಳಿಸುವಲ್ಲಿ ಇರುವ ಹವಣಿಕೆಯು ಅವರನ್ನು ಚುನಾವಣಾ ಕಣದಲ್ಲಿ ಹುರಿಯಾಳುಗಳನ್ನಾಗಿಸುವಲ್ಲಿ ಮಾತ್ರ ಹೆಚ್ಚಾಗಿ ಕಾಣುವುದಿಲ್ಲವೇಕೆ? ಇಂತಹ ಪ್ರಶ್ನೆಗಳಿಗೆ, ಪಕ್ಷಾತೀತವಾದ ರಾಜಕೀಯ ಚಾಣಾಕ್ಷ ನಡೆ ಎಂಬುದಲ್ಲದೆ ಬೇರೆ ಯಾವ ಉತ್ತರವೂ ಕಾಣಸಿಗದು. ಈ ಬಾರಿಯ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಮಹಿಳೆಯರ ಉಮೇದುವಾರಿಕೆಯಲ್ಲಿನ ವಿವಿಧ ಪಕ್ಷಗಳ ಬದ್ಧತೆಯನ್ನು ನಿಕಷಕ್ಕೆ ಒಡ್ಡಿದರೆ, ರಾಷ್ಟ್ರೀಯ ಪಕ್ಷಗಳದ್ದಷ್ಟೇ ಅಲ್ಲ ಪ್ರಾದೇಶಿಕ ಪಕ್ಷಗಳ ಮುಖವಾಡವೂ ಕಳಚಿಬೀಳುತ್ತದೆ.

ಜಯಲಲಿತಾ ಅವರಂತಹ ವರ್ಚಸ್ವಿ ನಾಯಕಿಯನ್ನು ಹೊಂದಿದ್ದ ಎಐಎಡಿಎಂಕೆ, ತಮಿಳುನಾಡಿನಲ್ಲಿ ಸ್ಪರ್ಧಿಸುತ್ತಿರುವ 32 ಕ್ಷೇತ್ರಗಳಲ್ಲಿ ನಿಲ್ಲಿಸಿರುವುದು ಏಕೈಕ ಮಹಿಳೆಯನ್ನು! ಇನ್ನು ಡಿಎಂಕೆ ಸ್ಪರ್ಧಿಸುತ್ತಿರುವ 21 ಸ್ಥಾನಗಳಲ್ಲಿ ಸೆಣಸುತ್ತಿರುವ ಮಹಿಳೆಯರು ಮೂವರು ಮಾತ್ರ. ಈ ಮಸೂದೆ ಜಾರಿಯ ವಿಷಯದಲ್ಲಿ ಲವಲೇಶವೂ ಬದ್ಧತೆ ಇಲ್ಲ ಎಂದು ಬಿಜೆಪಿಯ ಕಾಲೆಳೆದಿದ್ದ ಸಿಪಿಎಂ, ಕೇರಳದಲ್ಲಿ ತಾನು ಸ್ಪರ್ಧಿಸುತ್ತಿರುವ 15 ಸ್ಥಾನಗಳಲ್ಲಿ ಅವಕಾಶ ನೀಡಿರುವುದು ಇಬ್ಬರು ಹೆಣ್ಣುಮಕ್ಕಳಿಗಷ್ಟೇ. ಮಸೂದೆ ಮಂಡನೆಯಾದ ಸಂಭ್ರಮದಲ್ಲಿ ಇದೇ ರಾಜ್ಯದ ತ್ರಿಶೂರಿನಲ್ಲಿ ಬಿಜೆಪಿ ರಾಜ್ಯ ಘಟಕ ತಮಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೋದಿ, ಇಲ್ಲಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್ಡಿಎಫ್ಗೆ ಮಹಿಳೆಯರ ಸಾಮರ್ಥ್ಯದ ಬಗ್ಗೆ ನಂಬಿಕೆ ಇಲ್ಲ ಎಂದು ಲೇವಡಿ ಮಾಡಿದ್ದರು. ಆದರೆ ಅಂತಹ ಸಾಮರ್ಥ್ಯದ ಬಗೆಗೆ ಅವರ ಪಕ್ಷ ಇಟ್ಟಿರುವ ನಂಬಿಕೆಯು ಕೇರಳದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾತ್ರ ಪ್ರತಿಫಲಿಸುತ್ತಿಲ್ಲ. ಏಕೆಂದರೆ, ಅಲ್ಲಿ ಪಕ್ಷದಿಂದ ಕಣಕ್ಕೆ ಇಳಿದಿರುವವರು ಬರೀ ನಾಲ್ವರು ಮಹಿಳೆಯರು. ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿ ಮಮತಾ ದೀದಿ ನೇತೃತ್ವದ ಟಿಎಂಸಿಯಿಂದ 12 ಮಹಿಳೆಯರು ಅಖಾಡದಲ್ಲಿ ಇರುವುದರಿಂದ, ಇದ್ದುದರಲ್ಲಿ ಟಿಎಂಸಿಯೇ ವಾಸಿ ಎನ್ನುವಂತಾಗಿದೆ.

ಇಂತಹ ನಿರಾಶಾದಾಯಕ ಸ್ಥಿತಿಯಲ್ಲಿ, 2026ರಲ್ಲಿ ನಡೆಯಲಿದೆಯೆಂದು ಅಂದಾಜಿಸಲಾಗಿರುವ ಜನಗಣತಿ, ತದನಂತರ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯು ಮಹಿಳಾ ಮೀಸಲು ಕ್ಷೇತ್ರಗಳ ಸಂಖ್ಯೆ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಂತೂ ಇದೆ. ಆದರೆ ಈ ಎರಡೂ ಕಾರ್ಯಗಳು ವಿಳಂಬವಾಗದಂತೆ ಎಚ್ಚರ ವಹಿಸಿ, ಮಸೂದೆ ಜಾರಿಯು 2029ರ ಚುನಾವಣೆಯನ್ನೂ ದಾಟಿ ಹೋಗದಂತೆ ನೋಡಿಕೊಳ್ಳಬೇಕಾದ ಗುರುತರ ಹೊಣೆ ಮುಂಬರುವ ಹೊಸ ಸರ್ಕಾರದ ಮೇಲಿದೆ.

ಅಂತಹದ್ದೊಂದು ನಿರೀಕ್ಷೆ ಸಾಕಾರಗೊಂಡಿದ್ದೇ ಆದಲ್ಲಿ, ಐಷಾರಾಮಿ ಕಾರಿನಲ್ಲಿ ಬಂದಿಳಿಯುವ ರಾಜಕೀಯ ಕುಟುಂಬಗಳ ಹೆಣ್ಣುಮಕ್ಕಳ ಜೊತೆಗೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯ ಕಾರಣದಿಂದಲೇ ಬೆಳಗಾವಿಯ ಮೇಯರ್ ಆಗಿ, ಸರ್ಕಾರಿ ಕಾರೇ ತಮ್ಮ ಪುಟ್ಟ ಮನೆಯ ಮುಂದೆ ಬಂದು ನಿಲ್ಲುವಂತೆ ಮಾಡಿದ, ಪೌರಕಾರ್ಮಿಕರಾಗಿದ್ದ ಸವಿತಾ ಕಾಂಬ್ಳೆ ಅಂತಹವರು ಶಾಸನಸಭೆಗಳಲ್ಲೂ ಮಿಂಚಿಯಾರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.