ಭಾರತದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹೊಸ ಸೇರ್ಪಡೆ ಗುಜರಾತಿನ ಧೋಲವೀರ (2021). ಇಲ್ಲಿ ಸಿಂಧೂ ಕಣಿವೆ ನಾಗರಿಕತೆಯ ನಗರವೊಂದನ್ನು ಪುರಾತತ್ವ ಇಲಾಖೆಯು 1968ರಲ್ಲಿ ಉತ್ಖನನ ಮಾಡಿ, ಇದರ ಮಹತ್ವವನ್ನೂ ವಿವರಗಳನ್ನೂ ಬಹಿರಂಗಪಡಿಸಿತ್ತು. ಇದು 4,500 ವರ್ಷಗಳ ಹಿಂದಿನ ನಗರ. ಇದರೊಂದಿಗೆ ಭಾರತದ ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆ 40 ದಾಟಿತು.

ಹಾಗೆಂದು ತೀರಾ ಸಂಭ್ರಮಿಸುವ ಸಂದರ್ಭವೇನೂ ಅಲ್ಲ. ಭಾರತದ ವಿಸ್ತೀರ್ಣಕ್ಕೆ ಹೋಲಿಸಿದರೆ, ಇಟಲಿ ಏನೇನೂ ಅಲ್ಲ, ಬರೀ ಮೂರು ಲಕ್ಷ ಚದರ ಕಿಲೊಮೀಟರ್ ಅಷ್ಟೇ. ಭಾರತ, ಅದರ ಹತ್ತರಷ್ಟಿದೆ. ಆದರೆ ಇಟಲಿ ತನ್ನ ದೇಶದ ಸಾಂಸ್ಕೃತಿಕ, ಐತಿಹಾಸಿಕ, ನೈಸರ್ಗಿಕ ಸಂಪತ್ತನ್ನು ಬಿಂಬಿಸುವಲ್ಲಿ, ವಿಶ್ವದ ಗಮನ ಸೆಳೆಯುವಲ್ಲಿ ಎಂದೂ ಮುಂದಿದೆ. ಅಲ್ಲಿ ಘೋಷಿಸಿರುವ ವಿಶ್ವ ಪಾರಂಪರಿಕ ತಾಣಗಳು 58. ಜಾಗತಿಕವಾಗಿ ಅದಕ್ಕೆ ಮೊದಲ ಸ್ಥಾನ. ಏಕೆ ಹೀಗೆ? ಯುನೆಸ್ಕೊ ಸಂಸ್ಥೆಯು ಪಾರಂಪರಿಕ ತಾಣಗಳನ್ನು ಪಟ್ಟಿ ಮಾಡುವಾಗ ತಾರತಮ್ಯ ತೋರುತ್ತಿದೆಯೇ? ಯುರೋಪಿಗೆ ಆದ್ಯತೆಯೇ ಎಂದು ಮೊದಲ ನೋಟಕ್ಕೆ ಅನ್ನಿಸಬಹುದು. ಭಾರತದಲ್ಲಿ 100ಕ್ಕೂ ಹೆಚ್ಚು ತಾಣಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲು ಅರ್ಹತೆ ಹೊಂದಿವೆ ಎಂದು ವಾದ ಮಾಡಲೂಬಹುದು. ಈ ಪ್ರಶ್ನೆಯನ್ನು ಬೇರೆ ಬೇರೆ ಕೋನಗಳಿಂದ ನೋಡಬೇಕಾಗುತ್ತದೆ.

2012ರಲ್ಲಿ ಪಶ್ಚಿಮಘಟ್ಟದ ಕೆಲವು ಭಾಗಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಬೇಕೆಂದಾಗ, ಅಂಥ ಸೂಚನೆಗೆ ಸಿಕ್ಕ ಪ್ರತಿಕ್ರಿಯೆಯೇ ಬೇರೆಯದಾಗಿತ್ತು. ಕೇರಳ, ತಮಿಳುನಾಡು ಒಡನೆಯೇ ಸಮ್ಮತಿಸಿದರೂ, ಕರ್ನಾಟಕದಲ್ಲಿ ವಿನಾಕಾರಣ ಅದು ರಾಜಕೀಯ ಸ್ವರೂಪ ಪಡೆಯಿತು. ಪಶ್ಚಿಮಘಟ್ಟದಲ್ಲಿರುವ ಬುಡಕಟ್ಟು ಜನರನ್ನು ಗುಳೆ ಎಬ್ಬಿಸುತ್ತಾರೆ, ಆ ಜಾಗದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುತ್ತದೆ, ಸ್ಥಳೀಯರನ್ನು ದೂರ ಇಡಲಾಗುತ್ತದೆ, ರಾಜ್ಯ ಸರ್ಕಾರಕ್ಕೂ ಅದರ ಮೇಲೆ ಹಕ್ಕಿರುವುದಿಲ್ಲ ಎಂಬ ಅಭಿಪ್ರಾಯ ಬಹುಬೇಗ ಚಾಲನೆ ಪಡೆಯಿತು.

ರಾಜ್ಯ ಸರ್ಕಾರವೂ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ಅನುಮಾನದಿಂದಲೇ ನೋಡಿತು. ಕೇಂದ್ರ ಸರ್ಕಾರ ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿ, ಇದೆಲ್ಲ ಊಹಾಪೋಹ, ನಮ್ಮ ಸಾಂಸ್ಕೃತಿಕ ಸಂಪತ್ತಿಗೆ ನಾವೇ ಬಾಧ್ಯಸ್ಥರು, ಇದು ವಿಶ್ವದ ಗಮನ ಸೆಳೆಯುತ್ತದೆ ಎಂಬುದೇ ದೊಡ್ಡ ಹೆಮ್ಮೆ ಎಂದು ಸಮಜಾಯಿಷಿ ಕೊಟ್ಟ ನಂತರ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ವನ್ಯಜೀವಿಧಾಮ, ಬಂಡೀಪುರ ರಾಷ್ಟ್ರೀಯ ಉದ್ಯಾನ, ನಾಗರಹೊಳೆ- ಇವು ಪಾರಂಪರಿಕ ಪಟ್ಟಿಗೆ ಸೇರಿದವು.

ಪಾರಂಪರಿಕ ತಾಣಗಳನ್ನು ಆಯ್ಕೆ ಮಾಡಲು ಯುನೆಸ್ಕೊ ಕೆಲವು ಮಾನದಂಡಗಳನ್ನು ರೂಪಿಸಿದೆ. ಜಾಗತಿಕವಾಗಿ ಯಾವುದೇ ಸಾಂಸ್ಕೃತಿಕ, ಐತಿಹಾಸಿಕ ಮತ್ತು ನೈಸರ್ಗಿಕ ಪಾರಂಪರಿಕ ತಾಣಗಳನ್ನು ಪರಿಗಣಿಸಲು ಎರಡು ಸಂಸ್ಥೆಗಳಿವೆ. ವಿಶ್ವ ಪಾರಂಪರಿಕ ತಾಣ ಸಮಿತಿ (ಡಬ್ಲ್ಯು.ಎಚ್.ಸಿ.), ಇನ್ನೊಂದು ಸಲಹಾ ಮಂಡಳಿ- ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ (ಐ.ಯು.ಸಿ.ಎನ್). ಯುನೆಸ್ಕೊದ ವರ್ಲ್ಡ್ ಹೆರಿಟೇಜ್ ಸೆಂಟರ್ ಕೇಂದ್ರ ಕಚೇರಿ ಪ್ಯಾರಿಸ್ನಲ್ಲಿದೆ. ಅಲ್ಲಿಗೆ ಆಯಾ ದೇಶದ ಮುಖ್ಯಸ್ಥರು ಶಿಫಾರಸನ್ನು ಕಳಿಸಬೇಕಾಗುತ್ತದೆ. ಪರಿಗಣನೆಗೆ ಮೊದಲು ಅವನ್ನೆಲ್ಲ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿರುತ್ತದೆ (ಬೇಲೂರು ಮತ್ತು ಹಳೆಬೀಡು ಹೊಯ್ಸಳ ಶಿಲ್ಪಕಲೆಯು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿದ್ದರೂ, ಈಗಲೂ ಅವು ತಾತ್ಕಾಲಿಕ ಪಟ್ಟಿಯಲ್ಲೇ ಇವೆ). ಈ ತಾಣಗಳು ವಿಶ್ವಸಂಸ್ಥೆ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಇವೆಯೇ ಎಂಬುದು ಮೊದಲು ಪರಿಗಣನೆಗೆ ಒಳಗಾಗುವ ಅಂಶ.

ವಿಶ್ವ ಪಾರಂಪರಿಕ ತಾಣಗಳಲ್ಲಿ ಮೂರು ಬಗೆಯನ್ನು ವಿಶ್ವಸಂಸ್ಥೆ (ಯುನೆಸ್ಕೊ ಮೂಲಕ) ಗುರುತಿಸಿದೆ. ಸಾಂಸ್ಕೃತಿಕ ತಾಣಗಳು- ಇವು ಅತ್ಯುತ್ಕೃಷ್ಟ ಮಾದರಿಗಳಾಗಿರಬೇಕು. ತಮ್ಮದೇ ಆದ ಅಸ್ಮಿತೆಯನ್ನು ಹೊಂದಿರಬೇಕು. ಇಂದಿಗೂ ಅವು ಪ್ರವಾಸಿಗರನ್ನು ಸೆಳೆಯುವಷ್ಟು ಆಕರ್ಷಕವಾಗಿರಬೇಕು. ಇದರಲ್ಲಿ ಕೋಟೆ, ಕೊತ್ತಲಗಳೂ ಬರುತ್ತವೆ, ದೇವಾಲಯಗಳೂ ಬರುತ್ತವೆ, ಪುರಾತನ ಕಾಲದ ಚಾರಿತ್ರಿಕ ಸಂಪತ್ತೂ ಸೇರುತ್ತದೆ.

ಇನ್ನೊಂದು, ನೈಸರ್ಗಿಕ ಸಂಪತ್ತು- ಇದರಲ್ಲಿ ಇಡೀ ಭೂಮಿಯಲ್ಲೇ ವಿಶಿಷ್ಟವಾದ ಭೌಗೋಳಿಕ ತಾಣಗಳು ಸೇರುತ್ತವೆ. ವಿಶೇಷವಾಗಿ, ಜೀವಿವೈವಿಧ್ಯದ ದೃಷ್ಟಿಯಿಂದ ಎಷ್ಟರಮಟ್ಟಿಗೆ ಅವು ಪೋಷಿಸಿವೆ ಎಂಬುದೂ ಲೆಕ್ಕಕ್ಕೆ ಬರುತ್ತದೆ. ಇವೆರಡಲ್ಲದೆ ಇನ್ನೊಂದು ವರ್ಗವೂ ಇದೆ- ಅದು ಸಮ್ಮಿಶ್ರ ತಾಣಗಳು (ಮಿಕ್ಸೆಡ್ ಸೈಟ್ಸ್). ಉದಾಹರಣೆಗೆ, ಸಿಕ್ಕಿಂನಲ್ಲಿರುವ ಕಾಂಚನಜುಂಗ ರಾಷ್ಟ್ರೀಯ ಉದ್ಯಾನವನ್ನು 2016ರಲ್ಲಿ ಯುನೆಸ್ಕೊ ಈ ಪಟ್ಟಿಯಲ್ಲಿ ಪರಿಗಣಿಸಿತು. ಇದರ ಹರವು 1,784 ಚದರ ಕಿಲೊಮೀಟರ್. ಆದರೆ ವೈವಿಧ್ಯದ ದೃಷ್ಟಿಯಿಂದ ಇದಕ್ಕೆ ಹೋಲಿಕೆಯೇ ಇಲ್ಲ. ಇಲ್ಲಿ ಸೀಳುನಾಯಿಗಳ ವಿಶಿಷ್ಟ ಪ್ರಭೇದಗಳಿವೆ, ನದಿ, ಕಡಿದಾದ ಕಣಿವೆ, ಹಿಮಾಚ್ಛಾದಿತ 20 ಶೃಂಗಗಳು ಜೊತೆಗೆ ಬೌದ್ಧರ ಹೆಚ್ಚಿನ ಆರಾಧನಾ ಕೇಂದ್ರಗಳು, ಹಾಗೆಯೇ ಬುಡಕಟ್ಟು ಜನಾಂಗಗಳಿಗೂ ಇದು ಆಶ್ರಯ ನೀಡಿದೆ. ಬುಡಕಟ್ಟು ಜನಾಂಗದಲ್ಲಿ ವೈದ್ಯಕೀಯ ಗುಣವಿರುವ ಸಸ್ಯಗಳನ್ನು ಗುರುತಿಸುವ ಒಂದು ಪರಂಪರೆಯೇ ಇಲ್ಲಿದೆ. ಅಂದರೆ ಧಾರ್ಮಿಕ, ಪ್ರಾಕೃತಿಕ, ಮಾನವಿಕ- ಈ ಮೂರೂ ಸಂಬಂಧಗಳು ಇಲ್ಲಿ ಏಕೀಭವಿಸಿವೆ.

ಭಾರತದ ಮೊದಲ ಸಮ್ಮಿಶ್ರ ಪಾರಂಪರಿಕ ತಾಣ ಇದು. ಇನ್ನೊಂದು ಪುಟ್ಟ ಸೂತ್ರವನ್ನು ಯುನೆಸ್ಕೊ ಅನುಸರಿಸುತ್ತದೆ. ಸಂರಕ್ಷಣೆಯ ವಿಚಾರ ಬಂದಾಗ ಸಾಂಸ್ಕೃತಿಕ ತಾಣಗಳಿಗೆ ಹೆಚ್ಚು ಪ್ರಾಧಾನ್ಯ. ಏಕೆಂದರೆ ಇಲ್ಲಿ ಸೃಜನಶೀಲತೆಯನ್ನು ಪ್ರತಿಪಾದಿಸಲು ಅವಕಾಶಗಳು ಹೆಚ್ಚಾಗಿವೆ. ಮೇಲಾಗಿ ಇದು ಮಾನವ ಪ್ರಯತ್ನದ ಫಲ. ಅದನ್ನು ಗುರುತಿಸಬೇಕು. ಈ ಕಾರಣಕ್ಕಾಗಿಯೇ ಸಾಂಸ್ಕೃತಿಕ ತಾಣಗಳು ಮತ್ತು ನೈಸರ್ಗಿಕ ತಾಣಗಳ ನಡುವೆ 3:1 ಅನುಪಾತವನ್ನು ಅನುಸರಿಸಲಾಗುತ್ತದೆ.

ಯುನೆಸ್ಕೊ ಮೌನವಾಗಿಯೇ ಇನ್ನಷ್ಟು ಅಂಶಗಳನ್ನು ಗಮನಿಸಿರುತ್ತದೆ. ಶಿಫಾರಸು ಮಾಡಿದ ತಾಣದ ಬಗ್ಗೆ ಜನರಿಗೆ ಎಷ್ಟರಮಟ್ಟಿಗೆ ಆಸಕ್ತಿ ಇದೆ, ಸರ್ಕಾರ ಮತ್ತು ಸಾರ್ವಜನಿಕರು ಇವುಗಳನ್ನು ರಕ್ಷಿಸುವಲ್ಲಿ ತೋರಿರುವ ಆಸಕ್ತಿ, ಅಂಥ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆಯೇ, ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದರೆ ಸ್ಥಳೀಯ ಜನರ ಆರ್ಥಿಕ ಬದುಕು ಉತ್ತಮಗೊಳ್ಳು
ತ್ತದೆಯೇ- ಇವು ಕೂಡ ಮಾನದಂಡದಲ್ಲಿ ಪರಿಗಣಿಸುವ ಅಂಶಗಳು. ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದರೆ ಏನು ಲಾಭ ಎಂಬ ಪ್ರಶ್ನೆ ಇಲ್ಲಿ ಬರಬಾರದು. ಅದು, ನಮ್ಮ ಮನೆಯಲ್ಲಿ ನಮ್ಮ ಹಿರಿಯರನ್ನು ಗೌರವಿಸಿದರೆ ಏನು ಲಾಭ ಎಂದಂತೆ.

ನಾಶ ಭೀತಿ ತಾಣಗಳನ್ನು ರಕ್ಷಿಸಲು ಸೂಕ್ತ ಮಾರ್ಗದರ್ಶನಗಳನ್ನು ಯುನೆಸ್ಕೊ ನೀಡುವುದುಂಟು. ಉದಾಹರಣೆಗೆ, ಅಫ್ಗಾನಿಸ್ತಾನದ ಬನಿಯಾ ಕಣಿವೆಯ ಆರನೇ ಶತಮಾನದ ಬುದ್ಧನ ಸ್ಮಾರಕಗಳನ್ನು 2001ರಲ್ಲಿ ತಾಲಿಬಾನೀಯರು ವಿಕೃತಗೊಳಿಸಿದಾಗ, ಆ ಚೂರು
ಗಳನ್ನೆಲ್ಲ ಸಂಗ್ರಹಿಸಿ, ಮೂಲರೂಪಕ್ಕೆ ತರಲು ವಿಶ್ವ ಸ್ಮಾರಕ ನಿಧಿಯ ನೆರವನ್ನು ಬಳಸಲಾಯಿತು.

ವಿಶ್ವ ಪಾರಂಪರಿಕ ತಾಣಗಳು ಇಡೀ ಮನುಕುಲದ ಆಸ್ತಿ. ಇಲ್ಲಿ ಯಾವ ಧರ್ಮ, ಯಾವ ದೇಶ ಎಂಬ ಪ್ರಶ್ನೆ ಏಳುವುದಿಲ್ಲ. ಮುಂದಿನ ತಲೆಮಾರಿನವರಿಗೆ ಚರಿತ್ರೆ ಹೇಳಲು ಇವೇ ನೇರವಾಗಿ ಒದಗಿಬರುವ ಪುರಾವೆಗಳು. ಇತಿಹಾಸದ ಪಠ್ಯವನ್ನು ವಿಕೃತಗೊಳಿಸಬಹುದು. ಆದರೆ ನಿಸರ್ಗ ಎಲ್ಲೋ ಅದರ ಚರಿತ್ರೆಯ ಜೊತೆಗೆ ನಮ್ಮ ಚರಿತ್ರೆ ಉಳಿಯಲೂ ಅವಕಾಶ ಮಾಡಿದೆ. ಕರ್ನಾಟಕದಲ್ಲೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಅದೆಷ್ಟು ತಾಣಗಳಿಲ್ಲ? ಕಾವೇರಿ ನದಿ ಬಳುಕುತ್ತ, ಬಾಗುತ್ತ ತಲಕಾಡಿನಲ್ಲಿ ಕೊರೆದಿರುವ ಮರಳ ರಾಶಿಗೆ ಯಾವುದು ಸಾಟಿ ಇದೆ? ಉಡುಪಿ ಜಿಲ್ಲೆಯ ಮಲ್ಪೆಯಿಂದ ಕೆಲವೇ ಕಿಲೊಮೀಟರ್ ದೂರ ಸಮುದ್ರದಲ್ಲಿರುವ ಸ್ತಂಭಾಕೃತಿಯ ಶಿಲೆಗಳಿಗೆ ಪ್ರಕೃತಿಯೇ ಶಿಲ್ಪಿ. ಇದು ಆರೂವರೆ ಕೋಟಿ ವರ್ಷದ ಇತಿಹಾಸವನ್ನು ಸಾರುತ್ತದೆ.

ಇನ್ನೂ ಅಚ್ಚರಿ ಎಂದರೆ, ಬೇಲೂರು, ಹಳೆಬೀಡು, ಶ್ರೀರಂಗಪಟ್ಟಣ, ಬಾದಾಮಿ, ಶ್ರವಣಬೆಳಗೊಳದ ಗೊಮ್ಮಟ ಇನ್ನೂ ವಿಶ್ವ ಪಾರಂಪರಿಕ ತಾಣಕ್ಕೆ ಸೇರಬೇಕಾಗಿದೆ. ಹಂಪಿ ಮತ್ತು ಪಟ್ಟದಕಲ್ಲು– ಇವೆರಡಕ್ಕೆ ಮಾತ್ರ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಇದಕ್ಕೆ ಪ್ರಯತ್ನ ಯಾರಿಂದಾಗಬೇಕು? ಆರಂಭಕ್ಕೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಸಕ್ತಿ ತಳೆದು ರಾಜ್ಯ ಸರ್ಕಾರಕ್ಕೆ ವರದಿ ಕಳಿಸಬೇಕು. ಅಲ್ಲಿಂದ ಶಿಫಾರಸು ಆಗಿ ಕೇಂದ್ರಕ್ಕೆ ಹೋಗಬೇಕು. ಅಲ್ಲಿಂದ ವಿಶ್ವ ಪಾರಂಪರಿಕ ತಾಣದ ಕೇಂದ್ರ ಕಚೇರಿ ಇರುವ ಪ್ಯಾರಿಸ್ಗೆ ಹೋಗಬೇಕು.

ಇಷ್ಟೆಲ್ಲ ಆಸಕ್ತಿ ತಳೆದರೇನೇ ನಮ್ಮ ಸಂಸ್ಕೃತಿಯ ಪ್ರತಿಬಿಂಬ ಎನ್ನಿಸುವ ಸ್ಮಾರಕಗಳನ್ನು ವಿಶ್ವಕ್ಕೂ ಪರಿಚಯಿಸಬಹುದು. ಅಂದಹಾಗೆ, ಏ. 18 ವಿಶ್ವ ಪಾರಂಪರಿಕ ದಿನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.