ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ ಅಂಕಣ: ಕಮ್ಯುನಿಸ್ಟ್ ಕನಸುಗಾರನ ನಿರ್ಗಮನ

Published : 17 ಸೆಪ್ಟೆಂಬರ್ 2024, 0:24 IST
Last Updated : 17 ಸೆಪ್ಟೆಂಬರ್ 2024, 0:24 IST
ಫಾಲೋ ಮಾಡಿ
Comments

ಇಪ್ಪತ್ತನೆಯ ಶತಮಾನದ ತೊಂಬತ್ತರ ದಶಕದಲ್ಲಿ ದೇಶದ ತುಂಬ ದ್ವೇಷ ಹಬ್ಬಿಸುವ ಡಿಜಿಟಲ್ ಸಾಮಾಜಿಕ ಮಾಧ್ಯಮಗಳು ಬಂದಿರಲಿಲ್ಲ. ಟೆಲಿವಿಷನ್, ಪತ್ರಿಕೆಗಳು ಕೂಡ ಬಹುಮಟ್ಟಿಗೆ ಆರೋಗ್ಯಕರವಾಗಿದ್ದ ಕಾಲ. ಆದರೂ ಕೋಮುದ್ವೇಷ ಬಿತ್ತುವವರು ಅಂಕಿ-ಅಂಶಗಳನ್ನು ತಿರುಚಿ ಕೋಮುಭಾವನೆ ಕೆರಳಿಸುವ ಭಾಷಣ, ಬರಹಗಳನ್ನು ಹಬ್ಬಿಸುತ್ತಿದ್ದರು. ಈ ಹುಸಿಪ್ರಚಾರ, ಅಪಪ್ರಚಾರಗಳನ್ನು ಎದುರಿಸಲು ಸೀತಾರಾಂ ಯೆಚೂರಿ ಒಬ್ಬ ಕಮಿಟೆಡ್ ಬುದ್ಧಿಜೀವಿಯಾಗಿ ಬೌದ್ಧಿಕ ಪರಿಶ್ರಮದ ಕೆಲಸವೊಂದನ್ನು ಕೈಗೆತ್ತಿಕೊಂಡರು.

ಅಲ್ಪಸಂಖ್ಯಾತರ ಬಗ್ಗೆ ಹರಡಲಾಗುತ್ತಿದ್ದ ಸುಳ್ಳುಗಳನ್ನು ಅಂಕಿ-ಅಂಶಗಳ ಸಮೇತ ಮುಖಾಮುಖಿಯಾದರು. ಆ ಹೊತ್ತು ಕಮ್ಯುನಿಸ್ಟ್,  ಜನತಾದಳ, ಕಾಂಗ್ರೆಸ್ ಪಕ್ಷಗಳಿಗಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲಿರುವ ಎಲ್ಲರೂ ಕೋಮುವಾದಕ್ಕೆ ಸಮರ್ಥ ಉತ್ತರಗಳನ್ನು ಕೊಡಬಲ್ಲ ರೀತಿಯಲ್ಲಿ ವಿಚಾರಸಾಮಗ್ರಿಯನ್ನು ಸಿದ್ಧಪಡಿಸಿಕೊಟ್ಟರು. ಆ ಉತ್ತರಗಳು ಅನೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ, ಪತ್ರಕರ್ತರಿಗೆ ಹಾಗೂ ಸಾಮಾಜಿಕ ಕಾಳಜಿಯುಳ್ಳವರಿಗೆ ಸರಿ ದಾರಿ ತೋರಿಸಿದವು.  

ಮೊನ್ನೆ ತೀರಿಕೊಂಡ ಸೀತಾರಾಂ ಯೆಚೂರಿ (12 ಆಗಸ್ಟ್ 1952- 12 ಸೆಪ್ಟೆಂಬರ್‌ 2024) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಕ್ಷದ ಜನರಲ್ ಸೆಕ್ರೆಟರಿಯಾಗಿದ್ದವರು. ಬಾಲ್ಯದಲ್ಲಿ ಮನೆಯವರು ಹಾಕಿದ ಜನಿವಾರದ ವಿರುದ್ಧ ಬಂಡೆದ್ದ ಹುಡುಗ ಯೆಚೂರಿ ಮಾರ್ಕ್ಸ್‌ವಾದದತ್ತ ನಡೆದಿದ್ದು ಸಹಜವಾಗಿತ್ತು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಂ.ಎ. (ಅರ್ಥಶಾಸ್ತ್ರ) ಓದುವಾಗ ‘ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ’ ಸೇರಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯೆಚೂರಿ, ಸಿಪಿಎಂ ಸೇರಿದರು. ಕಮಿಟೆಡ್ ಕಮ್ಯುನಿಸ್ಟ್ ಹಾಗೂ ಪ್ರಖರ ಮಾರ್ಕ್ಸ್‌ವಾದಿ ಚಿಂತಕನಾಗಿ ಬೆಳೆದರು. ಎಂಬತ್ತರ ದಶಕದವರೆಗೂ ಕಾಂಗ್ರೆಸ್ ವಿರೋಧಿಯಾಗಿದ್ದ ಯೆಚೂರಿ, ಹಲ ಬಗೆಯ ವಿರೋಧ ಪಕ್ಷಗಳ ಜೊತೆ ಸಂವಾದ ಮಾಡಬಲ್ಲ ಕಲೆ ಬೆಳೆಸಿಕೊಂಡರು.

ಸಿಪಿಎಂ ನಾಯಕರಾಗಿದ್ದ ಹರಕಿಶನ್‌ ಸಿಂಗ್ ಸುರ್ಜಿತ್ ನಂತರದ ಕಮ್ಯುನಿಸ್ಟ್ ನಾಯಕರ ನಡುವೆ ಯೆಚೂರಿ ಅತ್ಯಂತ ಫ್ಲೆಕ್ಸಿಬಲ್ ಆಗಿದ್ದವರು. ಕಮ್ಯುನಿಸ್ಟ್ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದರೂ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಕಾಲ ಹತ್ತಿರದಲ್ಲಿಲ್ಲ ಎಂಬ ವಾಸ್ತವವನ್ನು ಅರಿತು, ಅದಕ್ಕೆ ತಕ್ಕಂತೆ ರಾಜಕೀಯ ಹೊಂದಾಣಿಕೆಗಳನ್ನು ರೂಪಿಸಲು ಯತ್ನಿಸಿದವರು. 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ, ನಂತರ ದೇವೇಗೌಡ, ಗುಜ್ರಾಲ್ ನೇತೃತ್ವದ ಕೇಂದ್ರ ಸರ್ಕಾರಗಳು ಅಧಿಕಾರಕ್ಕೆ ಬರಲು ತೆರೆಮರೆಯ ತಾತ್ವಿಕ ರಾಜಕೀಯ ಸಿದ್ಧತೆಗಳನ್ನು ಮಾಡಿದವರು. ಆ ಮೂಲಕ ವಿರೋಧ ಪಕ್ಷಗಳ ಒಕ್ಕೂಟಗಳಿಗೆ ಸ್ಪಷ್ಟ ಚೌಕಟ್ಟು ಕೊಡಲೆತ್ನಿಸಿದವರು.

1989ರ ನಂತರ ಆರಂಭವಾದ ವಿರೋಧ ಪಕ್ಷಗಳ ಒಕ್ಕೂಟ ರಾಜಕಾರಣವು ಭಾರತದ ಪ್ರಜಾಪ್ರಭುತ್ವ ಮಾಗುತ್ತಿರುವುದರ ಸಂಕೇತ ಎಂದು ಯೆಚೂರಿ ವ್ಯಾಖ್ಯಾನಿಸಿದರು. ಒಂದು ಕಾಲಕ್ಕೆ ಕಾಂಗ್ರೆಸ್, ಬಿಜೆಪಿಯನ್ನು ಹೊರತುಪಡಿಸಿದ ಒಕ್ಕೂಟಗಳನ್ನು ಕಟ್ಟುವುದರ ಹಿಂದೆ ಇದ್ದ ಯೆಚೂರಿ, 2004ರ ಹೊತ್ತಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ರಾಜಕಾರಣದಲ್ಲಿ ತೊಡಗಿದರು. ಮಾರ್ಕ್ಸ್‌ವಾದಿ ಸಿದ್ಧಾಂತಕ್ಕೆ ಬದ್ಧರಾಗಿಯೂ ಇಂಥ ಹೊಂದಾಣಿಕೆಗಳನ್ನು ಮಾಡಲು ಹಿಂಜರಿಯದ ಯೆಚೂರಿ, ‘ಮಾರ್ಕ್ಸ್‌ವಾದ ಒಂದು ಸೃಜನಶೀಲ ವಿಜ್ಞಾನ’ ಎಂದು ಬಣ್ಣಿಸುತ್ತಿದ್ದರು. ಈ ಸೃಜನಶೀಲ ವೈಜ್ಞಾನಿಕತೆಯ ಕೌಶಲ, 2004ರ ಯುಪಿಎ ಸರ್ಕಾರದ ಕಾಲದಲ್ಲಿ ಯೆಚೂರಿ ‘ಕಾಮನ್ ಮಿನಿಮಂ ಪ್ರೋಗ್ರಾಂ’ ರೂಪಿಸಿದ ರೀತಿಯಲ್ಲಿತ್ತು.  

ಮಾತೃಭಾಷೆ ತೆಲುಗು ಹಾಗೂ ಇಂಗ್ಲಿಷ್, ಹಿಂದಿ ಭಾಷೆಗಳನ್ನು ದಕ್ಷವಾಗಿ ಬಳಸುತ್ತಿದ್ದ ಯೆಚೂರಿ ಮರಾಠಿ, ಬಂಗಾಳಿ ಭಾಷೆಗಳಲ್ಲೂ ಮಾತಾಡಬಲ್ಲವರಾಗಿದ್ದರು. ಸಿದ್ಧಾಂತದ ಸ್ಪಷ್ಟತೆ ಹಾಗೂ ವಿಚಾರಗಳನ್ನು ಜನರಿಗೆ ತಲುಪಿಸುವ ಸರಳತೆ ಎರಡನ್ನೂ ತಮ್ಮ ಮಾತಿನಲ್ಲಿ ಬೆಸೆಯಬಲ್ಲವರಾಗಿದ್ದರು. ಒಮ್ಮೆ ಐಡಿಯಲಿಸಂ (ಆದರ್ಶ) ಮತ್ತು ಐಡಿಯಾಲಜಿಗಳ (ಸಿದ್ಧಾಂತ) ಸಂಬಂಧವನ್ನು ವಿವರಿಸುತ್ತಾ ಯೆಚೂರಿ ಹೇಳಿದ್ದರು: ‘ಇವೆರಡಕ್ಕೂ ಹತ್ತಿರದ ಸಂಬಂಧವಿದೆ. ಆದರ್ಶವು ಬದಲಾವಣೆಯ ಹುಡುಕಾಟ ನಡೆಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಆದರೆ ಅದು ಯಾವ ಥರದ ಬದಲಾವಣೆಯಾಗಿರಬೇಕು ಎಂದು ತೀರ್ಮಾನಿಸುವ ಕೆಲಸವನ್ನು ಸಿದ್ಧಾಂತ ಮಾಡುತ್ತದೆ. ಕೊನೇ ಪಕ್ಷ ನನ್ನ ಮಟ್ಟಿಗಂತೂ ಇವೆರಡೂ ಒಂದರೊಡನೊಂದು ಬೆರೆತಿವೆ’.  

ಗಂಭೀರವಾದ ವಿಮೋಚನಾ ಸಿದ್ಧಾಂತವೊಂದನ್ನು ಕಾಲಕಾಲಕ್ಕೆ ಅನ್ವಯಿಸುವ ತುರ್ತು, ಕಾಳಜಿ ಹಾಗೂ ಮುಕ್ತತೆ ಯೆಚೂರಿಯವರಲ್ಲಿ ಇದ್ದವು. ಇವತ್ತಿಗೂ ವಿವಿಧ ಬಗೆಯ ಸಂಘಟನೆಗಳು ಹಾಗೂ ಪಕ್ಷಗಳ ಜೊತೆ ಸೈದ್ಧಾಂತಿಕ ನೆಲೆಯಿಟ್ಟುಕೊಂಡೇ ವ್ಯವಹರಿಸುವವರಿಗೆ ಯೆಚೂರಿ ಮಾದರಿ ಉಪಯುಕ್ತವಾಗಬಲ್ಲದು. ‘ಮಾರ್ಕ್ಸ್‌ವಾದ ಎನ್ನುವುದು ಮೂರ್ತವಾದ ಸ್ಥಿತಿಗತಿಗಳನ್ನು ಮೂರ್ತವಾಗಿ ವಿಶ್ಲೇಷಣೆ ಮಾಡುವ ಸೃಜನಶೀಲ ವಿಜ್ಞಾನ ಎಂದು ನಾನಂತೂ ನಂಬಿದ್ದೇನೆ’ ಎಂದು ಯೆಚೂರಿ ಹೇಳುತ್ತಿದ್ದರು. ‘ಸ್ಥಿತಿಗತಿಗಳ ಬದಲಾವಣೆಯಾದಂತೆ ನಿಮ್ಮ ವಿಶ್ಲೇಷಣೆಯೂ ಬದಲಾಗದಿದ್ದರೆ ನೀವು ಮಾರ್ಕ್ಸ್‌ವಾದಿಗಳಾಗಿ ಉಳಿದಿರುವುದಿಲ್ಲ. ಇದು ನನ್ನ ದೃಢವಾದ ನಂಬಿಕೆ. ನೀವು ಮಾರ್ಕ್ಸ್‌ವಾದಿಯಾಗಿರಬೇಕೆಂದರೆ ಕಾಲದ ಓಟದ ವೇಗದ ಜೊತೆಗೆ ಓಡಲು ನೀವು ಸಿದ್ಧರಿರಬೇಕಾಗುತ್ತದೆ’.

ಕಾಲದ ವೇಗದ ಜೊತೆಗೆ ಹೆಜ್ಜೆ ಹಾಕುವ ಯೆಚೂರಿ ಅವರ ಪ್ರಯೋಗ 1989ರಲ್ಲಿ ಹಲವು ವಿರೋಧ ಪಕ್ಷಗಳನ್ನು ಒಗ್ಗೂಡಿಸಲೆತ್ನಿಸಿದಾಗ ಶುರುವಾಯಿತು. ಅದು 2023– 24ರಲ್ಲಿ ‘ಇಂಡಿಯಾ’ ಒಕ್ಕೂಟದ ರೂಪೀಕರಣದಲ್ಲಿ ಭಾಗಿಯಾಗುವವರೆಗೂ ಅವರ ನಡೆ ನುಡಿಗಳಲ್ಲಿ ಮುಂದುವರಿಯಿತು. ಸೂಕ್ತ ಅವಕಾಶ ಸಿಕ್ಕಾಗಲೆಲ್ಲ ಸಮಾನತೆಯ ಸಿದ್ಧಾಂತವನ್ನು ರಾಜಕಾರಣದ ಮುಂಚೂಣಿಗೆ ತರುವುದು, ವಿಶಾಲ ಅರ್ಥದಲ್ಲಾದರೂ ಈ ತತ್ವಗಳ ಪರವಾಗಿರುವ ಒಕ್ಕೂಟ ಹಾಗೂ ಸರ್ಕಾರಗಳ ಮೂಲಕ ಸಾಧ್ಯವಾದಷ್ಟು ಮಟ್ಟಿಗಿನ ಸಮಾನತೆಯ ಗುರಿ ಸಾಧಿಸುವುದು- ಇವೆರಡೂ ಯೆಚೂರಿಯವರ ರಾಜಕಾರಣದಲ್ಲಿ ಸಹಜವಾಗಿ ಬೆರೆತಿದ್ದವು.

ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ ಥರದ ಕಾರ್ಯಕ್ರಮಗಳ ಹಿಂದೆ ಯೆಚೂರಿ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಪ್ರತಿಪಾದಿಸುವ ದುಡಿಯುವ ವರ್ಗದ ಪರವಾದ ಒತ್ತಾಸೆಗಳಿದ್ದವು. ಯೆಚೂರಿ ರಾಜ್ಯಸಭೆಯಲ್ಲಿ ಮಂಡಿಸುತ್ತಿದ್ದ ವಿಚಾರಗಳು ಹಾಗೂ ಖಡಕ್ ವಿಶ್ಲೇಷಣೆಗಳು ಒಟ್ಟಾರೆಯಾಗಿ ವಿರೋಧ ಪಕ್ಷಗಳಿಗೆ ಖಚಿತ ವಾಗ್ವಾದಗಳ ಮಾದರಿಗಳನ್ನು ಒದಗಿಸುತ್ತಿದ್ದವು.  

1960ರ ದಶಕದಲ್ಲಿ ಬೇರ್ಪಟ್ಟ ಸಿಪಿಐ, ಸಿಪಿಎಂ ಪಕ್ಷಗಳು ಈ ಕಾಲದಲ್ಲಿ ಒಟ್ಟಾಗುವುದರ ಬಗೆಗೂ ಯೆಚೂರಿ ಆಗಾಗ ಪ್ರಯತ್ನ ನಡೆಸಿದ್ದರು. ಆದರೆ ಆ ಒಗ್ಗೂಡುವಿಕೆ ಮೇಲ್ಮಟ್ಟದಲ್ಲಿ ಮಾತ್ರ ಆಗದೆ ಈ ಎರಡೂ ಪಕ್ಷಗಳ ಬುಡಮಟ್ಟದ ಸಂಘಟನೆಗಳ ಮಟ್ಟದಲ್ಲಿ, ಕಾರ್ಯಕರ್ತರ ಮಟ್ಟದಲ್ಲಿ ಆದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದು ಅವರು ನಂಬಿದ್ದರು. ಇವತ್ತು ಹಿಂತಿರುಗಿ ಯೆಚೂರಿಯವರ ರಾಜಕಾರಣದ ದಿಕ್ಕುಗಳನ್ನು ನೋಡುತ್ತಿದ್ದರೆ, ವಿರೋಧ ಪಕ್ಷಗಳ ಒಕ್ಕೂಟಗಳಿಂದ ಹಿಡಿದು ಕಮ್ಯುನಿಸ್ಟ್ ಬಣಗಳ ಒಗ್ಗೂಡುವಿಕೆಯ ಪ್ರಯತ್ನಗಳವರೆಗೆ; ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ರೈತ ಆಂದೋಲನದಲ್ಲಿ ಟ್ರೇಡ್ ಯೂನಿಯನ್ನುಗಳು ಹಾಗೂ ರೈತ ಸಂಘಟನೆಗಳು ಒಂದು ಮಟ್ಟದ ತಾತ್ವಿಕ ಒಕ್ಕೂಟವನ್ನು ಸಾಧಿಸಿದ್ದರವರೆಗೆ… ಯೆಚೂರಿಯವರ ಚಿಂತನೆ, ಯೋಜನೆಗಳು ಕೂಡ ಹಿನ್ನೆಲೆಯಲ್ಲಿ ಇದ್ದವು. 

ಸಮಾಜ ಬದಲಾವಣೆಯ ಕ್ರಿಯಾಶೀಲ ಸಿದ್ಧಾಂತವೊಂದನ್ನು ಗಟ್ಟಿಯಾಗಿ ನಂಬಿದ ಚಿಂತಕ-ನಾಯಕನೊಬ್ಬ ಖಚಿತ ಗುರಿಗಳನ್ನು ಇಟ್ಟುಕೊಂಡು ಕೆಲಸ ಮಾಡಬಲ್ಲ ಪ್ರ್ಯಾಕ್ಟಿಕಲ್ ಮಾದರಿಯೊಂದನ್ನು ಯೆಚೂರಿ ರೂಪಿಸಿಕೊಂಡಿದ್ದರು. ಯೆಚೂರಿಯವರಿಂದ ಒಂದೆರಡಾದರೂ ಸೈದ್ಧಾಂತಿಕ ಪಾಠಗಳನ್ನು, ಪರಿಭಾಷೆಗಳನ್ನು ಕಲಿತವರಲ್ಲಿ ಈ ಕಾಲದ ನಾಯಕರಾದ ರಾಹುಲ್ ಗಾಂಧಿಯವರೂ ಇದ್ದಾರೆ. ‘ಯೆಚೂರಿ ಎರಡು ಪಕ್ಷಗಳ ಜನರಲ್ ಸೆಕ್ರೆಟರಿಯ ಥರ ಇದ್ದಾರೆ. ಒಂದು ಸಿಪಿಎಂ, ಇನ್ನೊಂದು ಕಾಂಗ್ರೆಸ್’ ಎಂದು ಕಾಂಗ್ರೆಸ್ ನಾಯಕ ಜಯರಾಂ ರಮೇಶ್ ತಮಾಷೆ ಮಾಡುತ್ತಿದ್ದುದರಲ್ಲಿ ಅರ್ಥವಿತ್ತು!

ಸುಮಾರು ಐವತ್ತು ವರ್ಷ ಸಾರ್ವಜನಿಕ ಜೀವನದಲ್ಲಿದ್ದು, ಕೈ, ಬಾಯಿ ಕೆಡಿಸಿಕೊಳ್ಳದೆ ರಾಜಕಾರಣ ಮಾಡಿದ ನಾಯಕರಲ್ಲಿ ಯೆಚೂರಿಯವರೂ ಒಬ್ಬರು. ಪಕ್ಷದ ಸಿಪಾಯಿಯಾಗಿ ಅನೇಕ ಸಲ ಅವರು ತಮಗೆ ಒಲ್ಲದ ನಿಲುವುಗಳನ್ನೂ ತಲುಪಿದಂತಿದೆ. ಆದರೂ ತನಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ಸಿದ್ಧಾಂತ ದೊಡ್ಡದು ಎಂದು ಯೆಚೂರಿ ನಂಬಿದ್ದರು. ಸಮಾನತೆಯ ಸಿದ್ಧಾಂತಗಳನ್ನು ನಂಬುವುದರ ಜೊತೆಗೇ ಅಂಥ ಸಿದ್ಧಾಂತಗಳ ಗುರಿಗಳತ್ತ ಸದಾ ನಡೆಯಲೆತ್ನಿಸುವ ಹಾಗೂ ಸಮಾಜ ಬದಲಾವಣೆಯ ಕನಸುಗಳಲ್ಲಿ ಕೆಲವನ್ನಾದರೂ ಸಾಕಾರಗೊಳಿಸಿಕೊಳ್ಳುವ ಬದ್ಧತೆಯನ್ನು ಯೆಚೂರಿಯವರ ಅರ್ಥಪೂರ್ಣವಾದ ಸಾರ್ಥಕ ರಾಜಕೀಯ ಬದುಕು ತೋರಿಸಿಕೊಟ್ಟಿದೆ.        

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT