ಮಲೆನಾಡಿನ ಹಳ್ಳಿಯೊಂದರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ನನ್ನ ಹಳೆಯ ವಿದ್ಯಾರ್ಥಿನಿಯೊಬ್ಬಳು, ಸಂಭ್ರಮ ಹಂಚಿಕೊಳ್ಳಲು ಇತ್ತೀ ಚೆಗೆ ದೂರವಾಣಿ ಕರೆ ಮಾಡಿದ್ದಳು. ಕಳೆದ ವರ್ಷಾಂತ್ಯಕ್ಕೆ ಜರುಗಿದ ಪಂಚಾಯಿತಿ ಚುನಾವಣೆಯ ಎಡಗೈ ಹೆಬ್ಬೆರಳಿನ ಶಾಯಿಯ ಗುರುತು ಮಾಸುವ ಮುನ್ನವೇ ತೇಲಿಬಂದ ಸಂತಸಭರಿತ ಆಶ್ಚರ್ಯವದಾಗಿತ್ತು.

ಹಳೆಯ ವಿದ್ಯಾರ್ಥಿಗಳ ಯಾವ ಸಾಧನೆಯೂ ಮನ ಹಿಗ್ಗಿಸುವ ಸಂಗತಿಯೇ ಆಗಿರುವಾಗ, ಕೆಳಮಧ್ಯಮ ವರ್ಗದ ಕುಟುಂಬದ ಈ ವಿದ್ಯಾವಂತ ಮಹಿಳೆ ಜನಾಧಿಕಾರದ ಸೂತ್ರ ಹಿಡಿದದ್ದು, ಕೊಂಚ ಹೆಚ್ಚೇ ಸಂಭ್ರಮ ತಂದಿತು. ಆ ಉದ್ವೇಗದಲ್ಲಿ, ಗಾಂಧೀ ಕಲ್ಪನೆಯ ಗ್ರಾಮ ಸ್ವರಾಜ್ಯ ಹಾಗೂ ನಾಗರಿಕ ಸ್ವಯಂ ಆಡಳಿತದ ಆಶಯಗಳನ್ನು ಮರುಕಟ್ಟಬೇಕಾದ ಕುರಿತಂತೆಲ್ಲ ಒಂದೇ ಉಸಿರಿನಲ್ಲಿ ಇನ್ನೇನು ಉಪದೇಶಿಸಲಿದ್ದೆ! ಆದರೆ ಆ ಕ್ಷಣಕ್ಕೆ, ಪಂಚಾಯಿತಿ ಆಡಳಿತ ತತ್ವದ ಆಚಾರ್ಯರೆಂದೇ ಗೌರವಿಸಲ್ಪಡುವ ಡಾ. ಬಿ.ಎಸ್.ಭಾರ್ಗವ ಅವರು ಸುಮಾರು ಎರಡು ದಶಕಗಳ ಹಿಂದೆಯೇ ಬಲವಾಗಿ ಪ್ರತಿಪಾದಿಸುತ್ತಿದ್ದ ಮಾತೊಂದು ನೆನಪಾಯಿತು. ‘ಪಂಚಾಯತಕ್ಕೆ ಪ್ರಭುತ್ವದ ಲಗಾಮು ಹಾಗೂ ಪರಿಣತರ ಉಪದೇಶವೇ ಉರುಳಾಗಬಾರದು. ಸ್ವತಂತ್ರವಾಗಿ ಕೆಲಸ ಮಾಡುವ ಅದರ ಹಕ್ಕನ್ನು ಮೊದಲು ಹಿಂತಿರುಗಿಸಬೇಕು!’ ಈಗ ಆಕೆಯ ಮೇಲಿರಬಹುದಾದ ಬೆಟ್ಟದಷ್ಟು ನಿರೀಕ್ಷೆಗಳ ಅರಿವಾಗಿ, ಶುಭ ಹಾರೈಸಿ ಮಾತು ಮುಗಿಸಿದೆ.

ಸುಮಾರು ಐದೂ ಮುಕ್ಕಾಲು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಮೊನ್ನೆ ಆರಿಸಿಬಂದ ಹೊಸ ಪ್ರತಿ ನಿಧಿಗಳ ಮೇಲೆ ಜನಸಾಮಾನ್ಯರ ನಿರೀಕ್ಷೆಯ ಅಂಥ ಭಾರವಿದೆ. ಸಂವಿಧಾನ ಸಾಧಿಸಿದ ಸಾಮಾಜಿಕನ್ಯಾಯ ತತ್ವದಿಂದಾಗಿ, ಸಮಾಜದ ಬಹುಪಾಲು ಸ್ತರಗಳ ಪ್ರಾತಿನಿಧ್ಯ ಸಾಧ್ಯವಾಗಿರುವ ಕಾಲವಿದು. ಸಂವಿಧಾನದ 1993ರ 73ನೇ ತಿದ್ದುಪಡಿಯು ದೇಶದೆಲ್ಲೆಡೆ ಜಾರಿಗೆ ಬಂದ ಪಂಚಾಯಿತಿ ವ್ಯವಸ್ಥೆಗಿಂತ ಮೊದಲೇ ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಮುಂದಡಿಯಿಟ್ಟ ಹೆಮ್ಮೆ ಕರ್ನಾಟಕದ್ದು.

ಮೂರೂವರೆ ದಶಕಗಳಿಗೂ ಹೆಚ್ಚಿನ ಕಾಲದ ಈ ಗ್ರಾಮಾಡಳಿತದ ಅನುಭವ ನಾಡಿನ ಜನರಿಗಿದೆ. ಹೀಗಾಗಿ, ಒಂದು ಹಂತಕ್ಕೆ ಮಾಗಿರುವ ಪಂಚಾಯಿತಿ ವ್ಯವಸ್ಥೆಯ ಪ್ರಸಕ್ತ ಸಾಮರ್ಥ್ಯ ಹಾಗೂ ಮಿತಿಗಳನ್ನು ಅರ್ಥೈಸಿಕೊಳ್ಳಲೇಬೇಕಾದ ಅಗತ್ಯವಿದೆ ಈಗ. ಕನಿಷ್ಠ, ಮುಂದಿನ ಐದು ವರ್ಷದ ಆಡಳಿತವನ್ನು ಪರಿಣಾಮಕಾರಿಯಾಗಿಸುವ ಸೀಮಿತ ಉದ್ದೇಶಕ್ಕಾದರೂ ಅಂಥದ್ದೊಂದು ಆತ್ಮಾವಲೋಕನ ಬೇಕಲ್ಲವೇ?

ಕೇಂದ್ರೀಯ ಹಣಕಾಸು ಆಯೋಗಗಳ ಸತತ ನಿರ್ದೇಶನದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಗ್ರಾಮ ಪಂಚಾಯಿತಿಗಳಿಗೆ ಹರಿದು ಬರುವ ಅನುದಾನ ಪ್ರತಿವರ್ಷ ಹೆಚ್ಚಾಗುತ್ತಿದೆ. ಹಳ್ಳಿಗಳ ಮಹಿಳೆಯರು, ದೀನರು ಸಹ ಚುನಾಯಿತರಾಗಿ ಅಧಿಕಾರ ರಾಜಕಾರಣದ ಮುನ್ನೆಲೆಗೆ ಬಂದಿರುವುದನ್ನು, ಪಂಚಾಯಿತಿ ಸಬಲೀಕರಣವೆಂದು ರಾಜಕೀಯ ಪಕ್ಷ ಗಳು ನಿರೂಪಿಸುತ್ತಿವೆ. ಹೆಚ್ಚುತ್ತಿರುವ ಅನುದಾನದ ಗಾತ್ರ ಹಾಗೂ ಯೋಜನೆಗಳ ವೈವಿಧ್ಯ ಕಂಡು, ಪಂಚಾಯಿತಿಗಳ ಬಲವರ್ಧನೆಯಾಗುತ್ತಿದೆ ಎಂದು ಹಲವಾರು ತಜ್ಞರು ನಂಬಲು ಬಯಸುತ್ತಾರೆ. ಆದರೆ, ತಳಮಟ್ಟದ ಅಧ್ಯಯನಗಳು ಮಾತ್ರ ಭಿನ್ನ ವಾಸ್ತವವನ್ನೇ ತೆರೆದಿಡುತ್ತಿವೆ.

ವ್ಯಾಪಕವಾಗುತ್ತಿರುವ ಚುನಾವಣಾ ಅಪರಾಧ, ಸರ್ಕಾರಿ ಅನುದಾನದ ಭಾರಿ ದುರುಪಯೋಗ, ಕಳಪೆ ಕಾಮಗಾರಿಗಳು, ಸರ್ಕಾರದ ಆಸರೆ ಬೇಕಿರುವ ನೈಜ ಅರ್ಹರನ್ನು ತಲುಪದ ಯೋಜನೆಗಳು- ಇವೆಲ್ಲ, ಗ್ರಾಮ ಪಂಚಾಯಿತಿಗಳು ಹಣ-ಜಾತಿಗಳ ಪ್ರಭಾವದಲ್ಲಿ ಕರಗಿ ಪ್ರಜಾಪ್ರಭುತ್ವದ ಕಾವು ಕಳೆದುಕೊಳ್ಳುತ್ತಿರುವುದರ ಸ್ಪಷ್ಟ ಸಂಕೇತ ನೀಡುತ್ತಿವೆ.

ಪಂಚಾಯಿತಿ ವ್ಯವಸ್ಥೆಯನ್ನು ಬಳಲಿಸುತ್ತಿರುವ ನಾಲ್ಕು ಬಗೆಯ ಸಂಕೋಲೆಗಳನ್ನು ಗುರುತಿಸಬಹುದು. ಒಂದು, ಅತಿಯಾಗುತ್ತಿರುವ ಪಕ್ಷರಾಜಕೀಯ. ಗ್ರಾಮ ಪಂಚಾಯಿತಿಗಳು ಇದರಿಂದ ಮುಕ್ತವಿರಬೇಕೆಂಬುದು ನೀತಿಯಾಗಿದ್ದರೂ ಚುನಾವಣೆಗಳಿಂದ ಮೊದಲ್ಗೊಂಡು ಪ್ರತಿಕಾರ್ಯವೂ ರಾಜಕೀಯ ಪಕ್ಷಗಳ ನೀತಿ-ನಿರ್ದೇಶನದ ಅನ್ವಯವೇ ಸಾಗುತ್ತಿರುವುದು ಸತ್ಯವಲ್ಲವೇ? ಶಾಸಕರು, ಸಂಸದರು ಹಾಗೂ ಸಚಿವರನ್ನೊಳಗೊಂಡಂತೆ, ಮೇಲುಸ್ತರದ ಶಾಸಕಾಂಗದ ಆಣತಿಗನುಗುಣವಾಗಿಯೇ ಸಾಗಬೇಕಿರುವ ಅನಿವಾರ್ಯದಿಂದಾಗಿ, ನಿಜಕ್ಕೂ ಇಂದು ವಿಕೇಂದ್ರೀಕರಣವಾಗಿರುವುದು ಅಧಿಕಾರ ರಾಜಕಾರಣದ ಸಂಸ್ಕೃತಿ ಮಾತ್ರ.

ಎರಡನೆಯದು, ಅಧಿಕಾರವನ್ನು ಬಿಟ್ಟುಕೊಡಲು ಒಪ್ಪದ ಕಾರ್ಯಾಂಗ. ಪ್ರತಿದಿನವೂ ಒಂದಲ್ಲ ಒಂದು ಸುತ್ತೋಲೆಯನ್ನು ಹೊರಡಿಸುತ್ತ, ಪಂಚಾಯಿತಿಗಳು ಸ್ವತಂತ್ರವಾಗಿ ಚಿಂತಿಸುವ ಹಾಗೂ ಕೆಲಸ ಮಾಡುವ ಸಾಧ್ಯತೆ ಗಳನ್ನೇ ನಿರಾಕರಿಸುತ್ತಿದೆ. ಮೂರನೆಯದು, ನೀಡಿದ ಅನುದಾನವನ್ನು ಖರ್ಚು ಮಾಡುವುದೇ ‘ಸಾಧನೆ’ ಎಂಬ ಸರ್ಕಾರಿ ಅಳತೆಗೋಲನ್ನು ಪಂಚಾಯಿತಿಗಳ ಮೇಲೂ ಹೇರಿರುವುದು. ತಮ್ಮೂರಿನ ನಿಜವಾದ ಅಗತ್ಯಗಳನ್ನು ಗುರುತಿಸಿ, ಸೂಕ್ತ ಯೋಜನೆಗಳನ್ನು ರೂಪಿಸಿ ಅನುದಾನ ಕ್ರೋಡೀಕರಿಸುವ ಬದಲು, ಮೇಲಿಂದ ಹರಿದುಬರುವ ಹಣದ ಧಾರೆಗೆ ಇಲ್ಲಿ ಯೋಜನೆಗಳನ್ನು ಜೋಡಿಸುವ ವಿಕೃತಿ ವಿಪರೀತವಾಗುತ್ತಿದೆ. ಕೊನೆಯದಾಗಿ, ನೈಜ ಜನಾಧಿಕಾರ ಹಾಗೂ ಸ್ವಯಂ ಆಡಳಿತದ ಆಶಯಗಳೇ ಕಮರಿರುವುದು.

ನಿಯಮಿತವಾಗಿ ಗ್ರಾಮಸಭೆಗಳು ಜರುಗಿ, ಸಮು ದಾಯದ ಆಶೋತ್ತರಗಳಿಗೆ ಸ್ವತಂತ್ರವಾಗಿ ಸ್ಪಂದಿಸಬೇಕಾ ದದ್ದು ಪಂಚಾಯಿತಿಗಳ ಅಂತಃಸತ್ವವಾಗಬೇಕಿತ್ತು. ಆದರೆ, ಪಂಚಾಯಿತಿಗಳ ಗ್ರಾಮಸಭೆ, ಮಾಸಿಕಸಭೆ, ಸ್ಥಾಯಿ ಸಮಿತಿಗಳ ಕಾರ್ಯವಿಧಾನ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ- ಎಲ್ಲೆಲ್ಲೂ ತಳಮಟ್ಟದ ಜನಧ್ವನಿಗೆ ಆಸ್ಪದ ಇಲ್ಲವಾಗುತ್ತಿದೆ. ಅಧಿಕಾರ ರಾಜಕಾರಣದ ಚಹರೆಗಳನ್ನೆಲ್ಲ ಆಹ್ವಾನಿಸಿಕೊಂಡು, ಅಧಿಕಾರ ಕೇಂದ್ರಗಳ ಆದೇಶ ಪಾಲಿಸಲು ಕಾದಿರುವ ಶಾಖೆಗಳಂತೆ ಪಂಚಾಯಿತಿಗಳು ತೋರುತ್ತಿವೆ!

ಪರಿಣಾಮವೇನಾಗುತ್ತಿದೆ? ಗ್ರಾಮ ಪಂಚಾಯಿತಿಗೆ ಒಮ್ಮೆ ಭೇಟಿ ನೀಡಿದರೆ ಅರಿವಾಗುತ್ತದೆ. ವಾಸ್ತವ್ಯದ ಮನೆ, ಕುಡಿಯುವ ನೀರು, ರಸ್ತೆ ಸಂಪರ್ಕ ಇತ್ಯಾದಿ ಪ್ರಾಥಮಿಕ ಅಗತ್ಯಗಳಿಗೂ ಅರ್ಹರು ವರ್ಷಾನುಕಾಲ ಅಲೆಯಬೇಕು. ಕಾಡು, ಕೆರೆಯಂಗಳ, ಗೋಮಾಳ ಇತ್ಯಾದಿ ಸಮುದಾಯ ಆಸ್ತಿಗಳ ಅತಿಕ್ರಮಣ, ಕೆರೆ- ಬಾವಿ, ಹೊಳೆಗಳ ಮಾಲಿನ್ಯ ಇತ್ಯಾದಿಗಳಿಗೆ ಪಂಚಾ ಯಿತಿಗಳು ಕುರುಡಾಗುತ್ತಿವೆ. ಗ್ರಾಮಸ್ಥರ ಸುಸ್ಥಿರ ಜೀವನೋಪಾಯ ಸಾಧಿಸುವ ಸಂಜೀವಿನಿಯಾಗಬೇಕಿದ್ದ ನರೇಗಾದಂಥ ಯೋಜನೆಯು ತಳಮಟ್ಟದಭ್ರಷ್ಟಾಚಾರಕ್ಕೆ ರೂಪಕವಾಗುತ್ತಿದೆ! ಅಭಿವೃದ್ಧಿಯ ಹೆಸರಿ ನಲ್ಲಿ ಮೇಲಿನಿಂದ ಹೇರಲ್ಪಡುತ್ತಿರುವ ಭಾರಿ ಹಣ ಬೇಡುವ ಯೋಜನೆಗಳು ತಮಗೆ ಬೇಕೇ ಬೇಡವೇ ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನೂ ಪಂಚಾಯಿತಿಗಳು ಕಳೆದು ಕೊಳ್ಳುತ್ತಿವೆ. ಅಧಿಕಾರಸ್ಥರ ಕೃಪೆಯಿಂದಾಗಿ ದೊರಕುವ ತುಂಡು ಕಾಮಗಾರಿಗಳ ಗುತ್ತಿಗೆ ಪಡೆಯಲೆಂದೇ ಕಾದಿರುವ ಹೊಸ ಉದ್ಯಮವರ್ಗವೊಂದು ಪ್ರತೀ ಪಂಚಾಯಿತಿಯಲ್ಲೂ ಸೃಷ್ಟಿಯಾಗುತ್ತಿದೆ. ಈ ಹೊಸ ವರ್ಗವೇ ಪಂಚಾಯಿತಿಗಳ ಸ್ವರೂಪ ಹಾಗೂ ಕಾರ್ಯವಿಧಾನಗಳನ್ನು ನಿರ್ಧರಿಸುವಷ್ಟು ಶಕ್ತಿಶಾಲಿಯಾಗುತ್ತಿದೆ. ಪ್ರಜಾಪ್ರಭುತ್ವದ ಮೂಲಮೌಲ್ಯಗಳನ್ನೇ ಅಣಕಿಸುತ್ತಿರುವ ಈ ಕಟುವಾಸ್ತವವು ವಿಷಾದದ ಸಂಗತಿಯಲ್ಲದೆ ಇನ್ನೇನು?

ಸ್ವಾತಂತ್ರ್ಯೋತ್ತರ ಕಾಲದ ಪ್ರಮುಖ ಗಾಂಧಿವಾದಿ ಚಿಂತಕರಾದ ಧರ್ಮಪಾಲರ ಜನ್ಮಶತಾಬ್ದಿ ವರ್ಷವಿದು. ವಸಾಹತುಪೂರ್ವದಲ್ಲಿ ದೇಶದಲ್ಲಿದ್ದ ಸಶಕ್ತ ಪಂಚಾಯಿತಿ ವ್ಯವಸ್ಥೆಯನ್ನು ಬ್ರಿಟಿಷ್ ಆಡಳಿತ ಹೇಗೆ ಹಂತಹಂತವಾಗಿ ಸಾಯಿಸಿತು ಎಂಬುದನ್ನು ಲಂಡನ್ನಿನ ಅಂಕಿ-ಅಂಶಗಳ ಮೂಲಕವೇ ಜಗದ ಮುಂದಿಟ್ಟ ಅವರ ಕೃತಿಗಳ ಮರು ಓದಿಗೆ ಪ್ರೇರೇಪಿಸುವ ಅಗತ್ಯ ಕಾಣುತ್ತಿದೆ. ಏಕೆಂದರೆ, ಪ್ರಜಾಪ್ರಭುತ್ವವೇ ರೂಪಿಸಿರುವ ಇಂದಿನ ದೇಶಿ ಸರ್ಕಾರಗಳು ಇಂಗ್ಲಿಷರ ಆಡಳಿತ ವೈಖರಿಯನ್ನೂ ನಾಚಿ ಸುವ ರೀತಿಯಲ್ಲಿ ತಮ್ಮದೇ ಜನರ ಸ್ಥಳೀಯ ಸರ್ಕಾರಗಳ ಸ್ವಯಂ ಆಡಳಿತ ಸಾಮರ್ಥ್ಯವನ್ನು ಕರಗಿಸುತ್ತಿವೆ; ಅವನ್ನು ತಮ್ಮ ಅಡಿಯಾಳಾಗಿಸಿಕೊಳ್ಳುತ್ತಿವೆ!

ವರ್ತಮಾನದ ಸವಾಲುಗಳನ್ನೆಲ್ಲ ಮೀರಿ ನಿಂತು, ತಮ್ಮ ಕಾರ್ಯಕ್ಷಮತೆ ಹಾಗೂ ಜನಪರತೆ ಮೂಲಕವೇ ಸರ್ವರ ಸುಸ್ಥಿರ ಅಭಿವೃದ್ಧಿ ಸಾಧಿಸುವ ಹೊಣೆಗಾರಿಕೆಯು ಈಗಷ್ಟೇ ಗ್ರಾಮ ಪಂಚಾಯಿತಿಗಳ ಅಧಿಕಾರಸೂತ್ರ ಹಿಡಿದಿರುವ ಮಲೆನಾಡಿನ ಆ ಮಹಿಳೆಯಂಥ ಸಾವಿರಾರು ಯುವ ಜನಪ್ರತಿನಿಧಿಗಳ ಮೇಲಿದೆ. ಯಾವಾಗಲೂ ಮುಂದಿನ ತಲೆಮಾರು ಹೆಚ್ಚು ಸಮರ್ಥವಿರಬಲ್ಲದೆಂಬ ಲಾಗಾಯ್ತಿನ ಮಾತಿನಲ್ಲಿ ನಂಬಿಕೆ ಇಡೋಣವೇ?

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.