‘ಹೇಳು ಭೂಮಿತಾಯೆ ನೀನು

ಯಾರ ಪಗಡೆಯ ದಾಳ?

ನಿನ್ನ ಮಕ್ಕಳೆಲ್ಲ ನಿನಗೆ

ಬರಿಯ ಶೋಕಮೇಳ’

ಭೂಮಿಯನ್ನು ಇನ್ನಿಲ್ಲದಂತೆ ಶೋಷಿಸುವ ಮನುಕುಲದ ವಿವೇಚನಾರಹಿತ ನಡೆಯ ಬಗ್ಗೆ ಕವಿ ಗೋಪಾಲಕೃಷ್ಣ ಅಡಿಗರು ಹೀಗೆ ನಮ್ಮನ್ನೆಲ್ಲ ಬಹಳ ಹಿಂದೆಯೇ ಎಚ್ಚರಿಸಿದ್ದರು. ಈಗ ಭೂಮಿಯ ಕ್ಷೇಮದ ಬಗ್ಗೆ ಚಿಂತಿಸುವ ‘ವಿಶ್ವ ಭೂಮಿ ದಿನ’ವು (ಏ. 22) ಪ್ಲಾಸ್ಟಿಕ್ ವರ್ಸಸ್ ಭೂಗ್ರಹ ಎಂಬ ತಿರುಳಿನೊಂದಿಗೆ ಮತ್ತೆ ಬಂದಿದೆ. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳುವಾಗ ‘ಸರ್, ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ನ ಅಂಶ ದೊರಕಿದೆ, ಇದು ಡೇಂಜರಸ್ ಅಲ್ವಾ?’ ಎಂಬ ವಿದ್ಯಾರ್ಥಿಯೊಬ್ಬನ ಗಾಬರಿಯ ಪ್ರಶ್ನೆಗೆ ನನ್ನಲ್ಲಿ ಉತ್ತರವಿತ್ತಾದರೂ ನಮಗೆ ಬೇಕಾದ ಹಾಗೆ ಬಳಸಿ ಬಿಸಾಡುತ್ತಿರುವ ಪ್ಲಾಸ್ಟಿಕ್ನಿಂದ ದೊಡ್ಡ ರೀತಿಯ ಪಾರಿಸರಿಕ ಅನನುಕೂಲವಾಗುತ್ತಿದೆ ಮತ್ತು ಅದರ ವಿರುದ್ಧ ನಾವು ಸಾರಿರುವ ವಿಶ್ವಸಮರ ದೊಡ್ಡ ರೀತಿಯಲ್ಲಿ ವಿಫಲವಾಗಿದೆ ಎಂದು ವಿವರಿಸಲು ತುಸು ಹೊತ್ತು ಬೇಕಾಯಿತು.

ಮಾನವರ ರಕ್ತದಲ್ಲಿ ಮೈಕ್ರೊ ಪ್ಲಾಸ್ಟಿಕ್ ಕಣಗಳು ಇರುವುದು ಪತ್ತೆಯಾಗಿ ವರ್ಷವೇ ಆಯಿತು. ಸೃಷ್ಟಿಯ ಎಲ್ಲ ಜಾಗಗಳಲ್ಲಿ ನುಗ್ಗುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ಮತ್ತು ಅದರ ಕಸವನ್ನು ಸರಿಯಾಗಿ ನಿರ್ವಹಿಸುವ ಬಗ್ಗೆ ಎರಡು ದಶಕಗಳಿಂದ ವಿಶ್ವ ವೇದಿಕೆಗಳಲ್ಲಿ ಚರ್ಚೆ, ಒಪ್ಪಂದಗಳು ಆಗುತ್ತಲೇ ಇವೆ. ಭೂಮಿಯನ್ನು ರತ್ನಗರ್ಭ ವಸುಂಧರ ಎನ್ನುತ್ತೇವೆ. ಭೂಮಿಯ ಗರ್ಭದ ಒಳಗೆ ರತ್ನಮುತ್ತುಗಳೇ ತುಂಬಿವೆ ಎಂಬುದು ಇದರ ಅರ್ಥ. ಈಗ ಕೈ ಹಾಕಿದಲ್ಲೆಲ್ಲ ಪ್ಲಾಸ್ಟಿಕ್ ಕಸ ದೊರಕುತ್ತಿದೆ.

ಮೂವತ್ತು ವರ್ಷಗಳಿಂದ ಭಾರಿ ಪ್ರಮಾಣದ ಪ್ಲಾಸ್ಟಿಕ್ ಅನ್ನು ಭೂಮಿಯೊಳಗೆ ತುಂಬಿದ್ದೇವೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡದಿರುವ ದೇಶಗಳ ಸೂಚ್ಯಂಕ ಪಟ್ಟಿಯಲ್ಲಿ ನಾವು ನಾಲ್ಕನೆಯ ಸ್ಥಾನದಲ್ಲಿದ್ದೇವೆ. ಹೋದ ವರ್ಷ ನಮ್ಮಲ್ಲಿ ಸರಿಯಾಗಿ ವಿಲೇವಾರಿಯಾಗದ ಪ್ಲಾಸ್ಟಿಕ್ ಕಸದ ಪ್ರಮಾಣ 70 ಲಕ್ಷ ಟನ್ಗಳಷ್ಟಿತ್ತು. ಅಂಕಿ ಅಂಶಗಳ ಪ್ರಕಾರ, ನಮ್ಮಲ್ಲಿ ರೀಸೈಕಲ್ ಆಗುತ್ತಿರುವ ಪ್ಲಾಸ್ಟಿಕ್ ಕಸದ ಪ್ರಮಾಣ ಶೇಕಡ 12ರಷ್ಟು ಮಾತ್ರ. ಭಾರತೀಯ ಪ್ರಜೆಯೊಬ್ಬ ವಾರ್ಷಿಕ 5.3 ಕೆ.ಜಿ. ಪ್ಲಾಸ್ಟಿಕ್ ಬಳಸುತ್ತಾನೆ. ವಿಶ್ವದ ಪ್ರಜೆಯ ಸರಾಸರಿ ಪ್ಲಾಸ್ಟಿಕ್ನ ಬಳಕೆ 21 ಕೆ.ಜಿ. ಇದೆ.

ಎರಡು ವರ್ಷಗಳ ಹಿಂದೆ ನೈರೋಬಿಯಲ್ಲಿ ನಡೆದ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಅಸೆಂಬ್ಲಿಯ 5ನೇ ಅಧಿವೇಶನದಲ್ಲಿ ರಾಸಾಯನಿಕಗಳು ಮತ್ತು ತ್ಯಾಜ್ಯ ನಿರ್ವಹಣೆಗಾಗಿ ವೈಜ್ಞಾನಿಕ ನೀತಿಯನ್ನು ರೂಪಿಸಲು 14 ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅದರಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ಸಂಪೂರ್ಣವಾಗಿ ತಡೆಯುವ ಅಂಶವೂ ಇತ್ತು ಮತ್ತು ಅದನ್ನು ವಿಶ್ವದ ಎಲ್ಲ ದೇಶಗಳು ಕಾನೂನಾತ್ಮಕವಾಗಿ ಪಾಲಿಸಲೇಬೇಕೆಂಬ ಸ್ಪಷ್ಟ ಉಲ್ಲೇಖವಿತ್ತು. ಸಭೆಯಲ್ಲಿ ಭಾಗವಹಿಸಿದ ಎಲ್ಲ ದೇಶಗಳು 2024ರ ವೇಳೆಗೆ ಸಿದ್ಧವಾಗುವ ‘ಪ್ಲಾಸ್ಟಿಕ್ ಮಾಲಿನ್ಯ ತಡೆ ನಿರ್ಣಯ’ಕ್ಕೆ ಬದ್ಧರಾಗುತ್ತೇವೆ ಎಂಬ ವಚನ ನೀಡಿವೆ.

ನಾವೆಲ್ಲ ಪ್ಲಾಸ್ಟಿಕ್ ಬಳಸಲು ಶುರು ಮಾಡಿ ಸುಮಾರು ಒಂದು ಶತಮಾನವೇ ಕಳೆದಿದೆ. ಆಳದ ಸಮುದ್ರಗಳಿಂದ ಹಿಡಿದು ಎತ್ತೆತ್ತರದ ಪರ್ವತಗಳಲ್ಲೂ ಪ್ಲಾಸ್ಟಿಕ್ ವಿರಾಜಿಸುತ್ತಿದೆ. ವಿಶ್ವದಲ್ಲಿ ಪ್ರತಿವರ್ಷ 46 ಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. 14 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವು ಸಾಗರದ ತಳ ಸೇರುತ್ತದೆ. ಉತ್ಪಾದನೆಯ ಶೇಕಡ 50ರಷ್ಟು ಪ್ಲಾಸ್ಟಿಕ್ ಏಕಬಳಕೆಯದಾಗಿರುತ್ತದೆ.

ಏಕಬಳಕೆಯ ಪ್ಲಾಸ್ಟಿಕ್ ಲೋಟ, ಕೈಚೀಲ, ಪ್ಯಾಕೇಜಿಂಗ್ ಹಾಳೆಗಳು ಪೃಥ್ವಿಯನ್ನು ಇಂಚಿಂಚಾಗಿ ಕೊಲ್ಲುತ್ತಿವೆ. ನಮ್ಮಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಮೂರು ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿದೆ. ಒಟ್ಟು ಕಸದಲ್ಲಿ ಕಾಲು ಭಾಗವನ್ನು ದಹಿಸುತ್ತೇವೆ. ಉಳಿದದ್ದರಲ್ಲಿ ಅರ್ಧ ಭೂಭರ್ತಿಯಾದರೆ ಇನ್ನರ್ಧವು ಸಾಗರಗಳ ಪಾಲಾಗುತ್ತದೆ.

ರೀಸೈಕಲ್ ಮಾಡಿಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುವವರಿಗೆ ಅದು ಅಷ್ಟು ಸುಲಭವಲ್ಲ ಎಂದು ‘ಕ್ಲೈಮೇಟ್ ಇಂಟೆಗ್ರಿಟಿ’ ಎಂಬ ಅಂತರರಾಷ್ಟ್ರೀಯ ಸಂಸ್ಥೆ ಇತ್ತೀಚೆಗೆ ತೀಕ್ಷ್ಣ ಹೇಳಿಕೆ ನೀಡಿದೆ. ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ತ್ಯಾಜ್ಯದ ಸಂಪೂರ್ಣ ರೀಸೈಕ್ಲಿಂಗ್ ಸಾಧ್ಯವಿಲ್ಲ ಎಂಬುದು ತಿಳಿದಿದ್ದರೂ ರೀಸೈಕಲ್ ಮಾಡಬಹುದು ಎಂಬ ಸುಳ್ಳನ್ನು ಸರ್ಕಾರಗಳು ಮೂವತ್ತು ವರ್ಷಗಳಿಂದ ಹೇಳುತ್ತಲೇ ಬಂದಿವೆ. ತಮ್ಮ ವ್ಯವಹಾರ ವೃದ್ಧಿಸಿಕೊಳ್ಳಲು ಕಂಪನಿಗಳು ಸುಳ್ಳು ಹೇಳಬಹುದು. ಅದರ ಬಗ್ಗೆ ಚಕಾರವೆತ್ತದ ಸರ್ಕಾರಗಳಿಗೆ ಏನು ಹೇಳುವುದು? ಉತ್ಪಾದನೆಗೆ ಖರ್ಚಾಗುವುದಕ್ಕಿಂತ ಹೆಚ್ಚಿನ ವಿದ್ಯುತ್ತು ಮತ್ತು ಇತರ ಸಂಪನ್ಮೂಲಗಳು ರೀಸೈಕ್ಲಿಂಗ್ಗೆ ಬೇಕು ಎಂದು ಗೊತ್ತಿದ್ದ ಮೇಲೂ ತಜ್ಞರು ಏಕೆ ಸುಮ್ಮನಿದ್ದಾರೆ?

ಬಳಸಿ ಬಿಸಾಡಿರುವ ಪ್ಲಾಸ್ಟಿಕ್ನಲ್ಲಿ ಬರೀ ಶೇಕಡ 10ರಷ್ಟನ್ನು ರೀಸೈಕಲ್ ಮಾಡಬಹುದು. ಕಸ ವಿಲೇವಾರಿಯ ಸಮರ್ಥ ವ್ಯವಸ್ಥೆಗಳಿಲ್ಲದ ಊರುಗಳಲ್ಲಿ ಜನರು ಮನೆಯ ಮುಂದೆ, ರಸ್ತೆಯ ಪಕ್ಕದಲ್ಲಿ ಎಸೆದು ಬೆಂಕಿ ಹಚ್ಚಿ ವಿಷಗಾಳಿಯನ್ನು ಉಸಿರಾಡುತ್ತಾರೆ. ಪ್ಲಾಸ್ಟಿಕ್ ಉತ್ಪಾದನೆ ಮತ್ತು ರೀಸೈಕಲ್ವರೆಗಿನ ಅವಧಿಯಲ್ಲಿ ಹೊಮ್ಮುವ 200 ಕೋಟಿ ಟನ್ ಶಾಖವರ್ಧಕ ಅನಿಲಗಳು ಭೂಮಿಯ ಬಿಸಿಯನ್ನು ತ್ವರಿತವಾಗಿ ಏರಿಸುತ್ತವೆ. ಇದರ ತಡೆಗಾಗಿ 300 ಶತಕೋಟಿ ಡಾಲರ್ ಹಣ ವ್ಯಯವಾಗುತ್ತಿದೆ. ಪ್ರತಿವರ್ಷ ‘ಪ್ಲಾಸ್ಟಿಕ್ ಓವರ್ಶೂಟ್ ಡೇ’ ಎಂಬ ದಿನ ಸದ್ದಿಲ್ಲದೇ ಬಂದು ಹೋಗುತ್ತದೆ. ನಿರ್ವಹಿಸಲಾಗದಷ್ಟು ಪ್ಲಾಸ್ಟಿಕ್ ಕಸ ಉತ್ಪಾದನೆಯಾಗುವ ದಿನವನ್ನು ಹಾಗೆ ಕರೆಯಲಾಗುತ್ತದೆ. ಹಿಂದಿನ ಜನವರಿ ಆರರಂದು ನಮ್ಮ ದೇಶ ಆ ದಿನಕ್ಕೆ ಸಾಕ್ಷಿಯಾಗಿತ್ತು.

ಶೇಕಡ 99ರಷ್ಟು ಪ್ಲಾಸ್ಟಿಕ್ ಅನ್ನು ಪೆಟ್ರೊ ರಾಸಾಯನಿಕ ಗಳಿಂದ ಉತ್ಪಾದಿಸಲಾಗುತ್ತದೆ. ಪ್ಲಾಸ್ಟಿಕ್ ಮಾಲಿನ್ಯ ತಡೆ ನಿರ್ಣಯಕ್ಕೆ ದೇಶಗಳು ಒಪ್ಪಿಗೆ ನೀಡುವುದನ್ನು ಪೆಟ್ರೊ ಕೆಮಿಕಲ್ ಕಂಪನಿಗಳು ಒಪ್ಪುತ್ತಿಲ್ಲ. ನೈರೋಬಿಯ ಸಭೆಯ ನಿರ್ಣಯ ಭೂಮಿಯ ಸ್ವಾಸ್ಥ್ಯಕ್ಕಾಗಿ ನಾವು ಮಾಡುವ ತ್ಯಾಗ ಎಂದು ಗೊತ್ತಿದ್ದರೂ ಉತ್ಪಾದನೆಗೆ ಕಚ್ಚಾ ಸಾಮಗ್ರಿ ಒದಗಿಸುವ ತೈಲ, ಅನಿಲ ಮತ್ತು ಕಲ್ಲಿದ್ದಲು ಕ್ಷೇತ್ರಗಳು ಒಲವು ತೋರಿಸುತ್ತಿಲ್ಲ.

ಹೇಗಾದರೂ ಮಾಡಿ ಇದನ್ನು ನಿತ್ರಾಣಗೊಳಿಸಬೇಕಲ್ಲ ಎಂದು ಚಿಂತಿಸುವ ಉದ್ಯಮ ಮುಂದಾಳುಗಳು, ನಾವು ಪ್ಲಾಸ್ಟಿಕ್ ಅನ್ನು ಇಂಧನವನ್ನಾಗಿ ಪರಿವರ್ತಿಸುತ್ತೇವೆ ಅಂತಲೋ ವಾತಾವರಣಕ್ಕೆ ಹಾನಿಯಾಗದಂತೆ ದಹಿಸುತ್ತೇವೆ ಅಂತಲೋ ಅರೆಬೆಂದ ಪರಿಹಾರ ಸೂಚಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಯೂನಿಲಿವರ್ ಕಂಪನಿಯವರು ಪ್ಲಾಸ್ಟಿಕ್ ಚೀಲದ ಪೊಟ್ಟಣಗಳನ್ನು ಸುರಕ್ಷಿತವಾದ ರೀತಿಯಲ್ಲಿ ತೈಲವನ್ನಾಗಿ ಪರಿವರ್ತಿಸುತ್ತೇವೆ ಎಂದು ಇಂಡೊನೇಷ್ಯಾದಲ್ಲಿ ಭಾರಿ ಉಮೇದಿನಿಂದ ಕಂಪನಿ ಪ್ರಾರಂಭಿಸಿದ್ದರು. ಈಗ ಅದು ಕೆಲಸ ನಿಲ್ಲಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಲು ನಮ್ಮಲ್ಲಿ ‘ಎಕ್ಸ್ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ’ (ಇಪಿಆರ್) ನೀತಿಯನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಯಾವುದೇ ಕಂಪನಿಯು ಒಂದು ವರ್ಷದಲ್ಲಿ ಎಷ್ಟು ಪ್ಲಾಸ್ಟಿಕ್ ಉತ್ಪಾದಿಸುತ್ತದೆಯೋ ಅಷ್ಟೇ ಪ್ರಮಾಣದ ಕಸವನ್ನು ಹಿಂಪಡೆಯಬೇಕು. ಸರಿಯಾಗಿ ಪಾಲಿಸುವ ಕಂಪನಿಗಳಿಗೆ ‘ಇನಾಮು’ ನೀಡಲಾಗುತ್ತದೆ. ಒಂದುವೇಳೆ ಉತ್ಪಾದಿಸಿದ್ದಕ್ಕಿಂತ ಹೆಚ್ಚು ಕಸ ಸಂಗ್ರಹಿಸುವ ಕಂಪನಿಗಳು ತಮಗೆ ಸಿಗುವ ಇನಾಮನ್ನು ಅಷ್ಟಾಗಿ ಕಸ ಸಂಗ್ರಹಿಸದ ಕಂಪನಿಗಳಿಗೆ ವರ್ಗಾಯಿಸಿ ಹಣ ಸಂಪಾದಿಸಬಹುದು.

2015ರಲ್ಲಿ ಪ್ಲಾಸ್ಟಿಕ್ ಕಸದ ಆಮದನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರವು ನಾಲ್ಕು ವರ್ಷಗಳ ನಂತರ ನಿಷೇಧವನ್ನು ತೆಗೆದುಹಾಕಿದೆ. 2022ರಲ್ಲಿ 80 ಸಾವಿರ ಟನ್ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ನಾವು ಮರುಬಳಕೆಗಾಗಿ, ಅದು ಸೋವಿ ಎಂಬ ಕಾರಣಕ್ಕೆ, ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದೆವು. ನಾವೇ ಪ್ರತಿನಿತ್ಯ 26 ಸಾವಿರ ಟನ್ ಪ್ಲಾಸ್ಟಿಕ್ ಕಸ ಉತ್ಪಾದಿಸುತ್ತೇವೆ. ವಾಸ್ತವ ಹೀಗಿರುವಾಗ ಹೊರಗಿನಿಂದ ಏಕೆ ಆಮದು ಮಾಡಿಕೊಳ್ಳಬೇಕು?

ಪುನರ್ಬಳಕೆ ಮಾಡಲಾಗದ ಪ್ಲಾಸ್ಟಿಕ್ ಉತ್ಪಾದನೆಯನ್ನು ತತ್ಕ್ಷಣದಿಂದ ನಿಲ್ಲಿಸಬೇಕು. ಇಪಿಆರ್ ಅನ್ನು ಮತ್ತಷ್ಟು ಬಿಗಿಗೊಳಿಸಬೇಕು. ಅಂತರರಾಷ್ಟ್ರೀಯ ಒಪ್ಪಂದಗಳನ್ನು ಚಾಚೂತಪ್ಪದೆ ಪಾಲಿಸಬೇಕು. ವಿಶ್ವದೆಲ್ಲೆಡೆ ಏಕಬಳಕೆಯ ಪ್ಲಾಸ್ಟಿಕ್ನ ಸಂಪೂರ್ಣ ನಿಷೇಧ ಆಗಬೇಕು. ಅನಗತ್ಯ ಉತ್ಪನ್ನಗಳ ತಯಾರಿಕೆ ಮತ್ತು ಅತಿಯಾಗಿ ಪ್ಯಾಕ್ ಮಾಡುವುದನ್ನು ನಿಲ್ಲಿಸಬೇಕು. ಕಡಿಮೆ ಸಂಪನ್ಮೂಲ ಬಳಸುವ ವಸ್ತುವಿನ್ಯಾಸವನ್ನು ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.