ಭಾರತದ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಾ ಹೋದಂತೆ, ಕುಪಿತವಾದ ಬ್ರಿಟಿಷ್ ಸರ್ಕಾರವು ಅದನ್ನು ಹತ್ತಿಕ್ಕಲು ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿತು. ಇದರ ಭಾಗವಾಗಿ, ಧರ್ಮ ಮತ್ತು ಜಾತಿಗಳ ನಡುವೆ ಭೇದಭಾವವನ್ನು ಹುಟ್ಟುಹಾಕಿ, ಒಡೆದು ಆಳುವ ನೀತಿಯನ್ನು ಅನುಸರಿಸಿತು. ಹಿಂಸೆ, ಚಿತ್ರಹಿಂಸೆ ಮತ್ತು ಕ್ರೌರ್ಯದ ಮೂಲಕ ಜನರಲ್ಲಿ ಭಯ, ಭೀತಿಯನ್ನು ಹುಟ್ಟಿಸಿತು. ಬರ್ಬರ, ದಮನಕಾರಿ ಮತ್ತು ಅಮಾನವೀಯ ಎನಿಸುವ ಕಾನೂನುಗಳನ್ನು ಜಾರಿಗೆ ತಂದಿತು. ಅವುಗಳಲ್ಲಿ ಪ್ರಮುಖವಾದವೆಂದರೆ, ಸೆಡಿಷನ್ (ರಾಜದ್ರೋಹ) ಕಾನೂನು, ಕ್ರಿಮಿನಲ್ ನ್ಯಾಯಾಂಗ ನಿಂದನೆ ಕಾಯ್ದೆ, ಕ್ರಿಮಿನಲ್ ಮಾನನಷ್ಟ ಕಾಯ್ದೆ ಮುಂತಾದವು.

ಬ್ರಿಟಿಷರು ಭಾರತೀಯ ದಂಡ ಸಂಹಿತೆಗೆ (ಐಪಿಸಿ) ತಿದ್ದುಪಡಿ ತಂದು, ಸೆಕ್ಷನ್ 124(ಎ) ಅನ್ನು ಸೇರಿಸಿದರು. ಈ ಸೆಕ್ಷನ್ ಬಳಸಿ ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು. ಅಲ್ಲಿ ಅವರಿಗೆ ಅನೇಕ ರೀತಿಯಲ್ಲಿ ಕಷ್ಟ, ನೋವು, ಹಿಂಸೆಯನ್ನು ನೀಡಿದರು. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಆ್ಯನಿ ಬೆಸೆಂಟ್, ವೀರೇಂದ್ರ ದತ್ ಅವರಂತಹ ನಾಯಕರು ಸಹ ಈ ಕಾನೂನಿನ ಅಡಿಯಲ್ಲಿ ಪ್ರಕರಣಗಳನ್ನು ಎದುರಿಸಿ ಜೈಲುವಾಸ ಅನುಭವಿಸಬೇಕಾಯಿತು. ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಪರಿಣಾಮವಾಗಿ 1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದಿತು. ಆದರೆ ಆನಂತರವೂ ನಮ್ಮ ಸರ್ಕಾರಗಳು ಇಂತಹ ಅಮಾನವೀಯ, ಬರ್ಬರ ಹಾಗೂ ದಮನಕಾರಿ ಕಾನೂನುಗಳನ್ನು ಮುಂದುವರಿಸಿಕೊಂಡು ಬಂದಿದ್ದು ದುರದೃಷ್ಟಕರ.

ನಮ್ಮ ಸರ್ಕಾರದ ಅತಿರೇಕಗಳನ್ನು ಪ್ರಶ್ನಿಸಿದರೆ, ವಿಮರ್ಶಿಸಿದರೆ ಅಥವಾ ಟೀಕಿಸಿದರೆ ಸೆಕ್ಷನ್ 124(ಎ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ, ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಈ ದಿಸೆಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ದೇಶದ ಗಮನವನ್ನು ಸೆಳೆದ ಪ್ರಕರಣಗಳೆಂದರೆ, 2007ರಲ್ಲಿ ಬಿನಾಯಕ್ ಸೇನ್, 2010ರಲ್ಲಿ ಅರುಂಧತಿ ರಾಯ್, 2012ರಲ್ಲಿ ಅಸೀಮ್ ತ್ರಿವೇದಿ, 2015ರಲ್ಲಿ ತಮಿಳು ಕಲಾವಿದ ಕೋವನ್, 2018ರಲ್ಲಿ ಹಾರ್ದಿಕ್ ಪಟೇಲ್, ನಗರ ನಕ್ಸಲ್ವಾದಿಗಳೆಂಬ ಆರೋಪದ ಮೇಲೆ ರೋನಾ ವಿಲ್ಸನ್, ಸುಧೀರ್ ಧವಳೆ, ಶೋಮಾ ಸೇನ್, ಮಹೇಶ್ ರಾವತ್, ಸುರೇಂದ್ರ ಗಡಲಿಂಗ್, ವರವರ ರಾವ್ ಮೊದಲಾದವರನ್ನು ಬಂಧಿಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ನೂರಾರು ಚಳವಳಿಗಾರರ ವಿರುದ್ಧ ಸಹ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಯಿತು. ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಜನಪರ ನಾಯಕರು, ಸಮಾಜಸೇವಕರ ವಿರುದ್ಧವೂ ಈ ಕಾನೂನನ್ನು ಬಳಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಈ ಸೆಕ್ಷನ್ನ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ದಮನಕಾರಿ ಕಾನೂನಿನ ಅಗತ್ಯ ಇದೆಯೇ?

ಸುಪ್ರೀಂ ಕೋರ್ಟ್ 1962ರಲ್ಲಿ ಕೇದಾರನಾಥ್ ಸಿಂಗ್ ಪ್ರಕರಣದಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ ಅನ್ನು ರದ್ದುಪಡಿಸಲು ನಿರಾಕರಿಸಿತು. ಆದರೆ, ಈ ತೀರ್ಪಿನಲ್ಲಿ ಸರ್ಕಾರವು ಸೆಡಿಷನ್ ಸೆಕ್ಷನ್ ಅನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಬೇಕೆಂದು ಹೇಳಿತು. ಅವುಗಳೆಂದರೆ:

ವ್ಯಕ್ತಪಡಿಸಿದ ಅಭಿಪ್ರಾಯಗಳು ಹಿಂಸೆಯನ್ನು ಪ್ರಚೋದಿಸುವಂತೆ ಇರಬೇಕು.

ಸಾರ್ವಜನಿಕ ಸುವ್ಯವಸ್ಥೆ ಕದಡುವಂತಿರಬೇಕು.

ತಕ್ಷಣದ ಪರಿಣಾಮಗಳನ್ನು ಉಂಟುಮಾಡುವಂತೆ ಇರಬೇಕು.

ಕಾನೂನುಬಾಹಿರ ಮತ್ತು ಅಕ್ರಮ ಮಾರ್ಗಗಳಿಂದ ಸರ್ಕಾರವನ್ನು ಬುಡಮೇಲು ಮಾಡುವಂತೆ ಇರಬೇಕು.

ಕೇದಾರನಾಥ್ ಸಿಂಗ್ ಪ್ರಕರಣದ ತೀರ್ಪು ಬಂದು 60 ವರ್ಷಗಳು ಕಳೆದುಹೋಗಿವೆ. ಈ ಕಾಲಾವಧಿಯಲ್ಲಿ ಸರ್ಕಾರಗಳು ನ್ಯಾಯಾಲಯ ರೂಪಿಸಿದ ಮಾನದಂಡಗಳನ್ನು ಪಾಲಿಸಲೇ ಇಲ್ಲ. ದೇಶದ್ರೋಹದ ಸೆಕ್ಷನ್ ಬಳಸಿ ಸಾವಿರಾರು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿವೆ. ಇಂದಿಗೂ ನೂರಾರು ಜನ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಮತ್ತು ಪ್ರಕರಣಗಳು ವಿಲೇವಾರಿ ಆಗದೆ ಬಾಕಿ ಉಳಿದುಕೊಂಡಿವೆ.

ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕಳೆದ ಜೂನ್ನಲ್ಲಿ ರದ್ದುಗೊಳಿಸಿತು. ಕೇದಾರನಾಥ್ ಸಿಂಗ್ ಪ್ರಕರಣದಲ್ಲಿ ರೂಪಿಸಿರುವ ಮಾನದಂಡಗಳನ್ನು ಸರ್ಕಾರ ಪಾಲಿಸಬೇಕೆಂದು ಈ ಸಂದರ್ಭದಲ್ಲಿ ಅದು ಮತ್ತೆ ಹೇಳಿದೆ. ಆದರೆ ತಾನು ರೂಪಿಸಿರುವ ಮಾನದಂಡಗಳನ್ನು ಸರ್ಕಾರ ಯಾಕೆ ಪಾಲಿಸಲಿಲ್ಲ ಎಂದು ನ್ಯಾಯಾಲಯವು ಪ್ರಶ್ನಿಸಲಿಲ್ಲ ಮತ್ತು ಅದಕ್ಕಾಗಿ ಶಿಕ್ಷಿಸಲಿಲ್ಲ. ನ್ಯಾಯಾಲಯ ವಿಧಿಸಿದ ಮಾನದಂಡಗಳನ್ನು ಸರ್ಕಾರ 60 ವರ್ಷಗಳ ಕಾಲ ಪಾಲಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ದೇಶದ್ರೋಹದ ಸೆಕ್ಷನ್ ಅನ್ನು ರದ್ದುಗೊಳಿಸಬೇಕಾಗಿತ್ತು. ಇಂತಹ ಒಂದು ಸುವರ್ಣ ಅವಕಾಶವನ್ನು ಸುಪ್ರೀಂ ಕೋರ್ಟ್ ಕಳೆದುಕೊಂಡಿತು.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಮಾನವ ಹಕ್ಕು ಮತ್ತು ನಮ್ಮ ಸಂವಿಧಾನದ ಅಡಿ ಮೂಲಭೂತ ಹಕ್ಕು. ದೇಶದ್ರೋಹದ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಎರಡೂ ಒಟ್ಟೊಟ್ಟಿಗೆ ಮುಂದುವರಿಯಲು ಸಾಧ್ಯವಿಲ್ಲ. ದೇಶದ್ರೋಹದ ಸೆಕ್ಷನ್ ಅನ್ನು ಅದು ಮೂಲತಃ ಜನ್ಮತಾಳಿದ ಬ್ರಿಟನ್ನಲ್ಲೇ ರದ್ದುಗೊಳಿಸಲಾಗಿದೆ. ಅಮೆರಿಕ, ನ್ಯೂಜಿಲೆಂಡ್ನಂತಹ ಅನೇಕ ಪ್ರಜಾ
ಪ್ರಭುತ್ವ ದೇಶಗಳಲ್ಲಿ ಈ ರೀತಿಯ ಕಾನೂನನ್ನು ಜಾರಿಗೊಳಿಸಿಲ್ಲ. ಭಾರತವು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಸೆಡಿಷನ್ ಕಾನೂನನ್ನು ರದ್ದುಗೊಳಿಸಬೇಕು.

ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವ್ಯಕ್ತಿ ಸ್ವಾತಂತ್ರ್ಯವು ಮೊದಲನೆಯ ಹೆಜ್ಜೆ. ವ್ಯಕ್ತಿಯು ಸತ್ಯಕ್ಕಾಗಿ ನಡೆಸುವ ಹುಡುಕಾಟದ ಸ್ವಾತಂತ್ರ್ಯ ಮೊಟಕುಗೊಳ್ಳಬಾರದು. ಎಲ್ಲ ಪ್ರಮುಖ ವಿಷಯಗಳ ಬಗ್ಗೆಯೂ ಮುಕ್ತವಾದ ಚರ್ಚೆ ನಡೆಯಬೇಕು. ಪ್ರಗತಿ ಸಾಧ್ಯವಾಗುವುದು ಪರಂಪರೆಯನ್ನು ಒಪ್ಪಿಕೊಳ್ಳುವುದರ ಮೂಲಕವಲ್ಲ. ಬದಲಾಗಿ, ಜನರ ಅಭಿಪ್ರಾಯಗಳು ಬದಲಾಗುವಷ್ಟರ ಮಟ್ಟಿಗೆ ಹೊಸ ವಿಷಯಗಳನ್ನು ವೈಜ್ಞಾನಿಕ ಚಿಂತನೆ ಆಧರಿಸಿ ಮಂಡಿಸುವ ಮೂಲಕ. ವ್ಯಕ್ತಿಯ ಚಿಂತನಾ ಕ್ರಮ ವೃದ್ಧಿಯಾಗಲು, ವೈಚಾರಿಕತೆ ಅರಳಲು, ಬೌದ್ಧಿಕ ಜಗತ್ತು ವಿಸ್ತಾರಗೊಳ್ಳಲು ಮತ್ತು ವ್ಯಕ್ತಿತ್ವ ಪರಿಪಕ್ವಗೊಳ್ಳಲು ಎಲ್ಲ ರೀತಿಯ ಅಭಿಪ್ರಾಯಗಳ ಬಗ್ಗೆಯೂ ತಿಳಿದಿರಬೇಕು.

ಜ್ಞಾನ ಮತ್ತು ವಿವೇಕವು ಆಕಾಶದಿಂದ ಉದುರುವುದಿಲ್ಲ. ಮಾನವನ ಅನುಭವ ಜ್ಞಾನವನ್ನು ವಿಮರ್ಶೆಗೆ ಒಳಪಡಿಸಿದಾಗ ಪ್ರಗತಿಪರ ಚಿಂತನೆ ಎಂದು ಕರೆಯಲಾಗುವ ವೈಚಾರಿಕತೆಯು ಉಗಮವಾಗುವುದು. ಮಾನವನ ನಾಗರಿಕತೆಯು ಬೇಟೆಯಾಡುವ ಕಾಲದಿಂದ ಇಂದಿನ ಅತ್ಯಂತ ಆಧುನಿಕ ವೈಜ್ಞಾನಿಕ ಯುಗವನ್ನು ಮುಟ್ಟಿರುವುದು ಈ ಪ್ರಕ್ರಿಯೆಯ ಮೂಲಕವೇ.

ಸೆಕ್ಷನ್ 124(ಎ) ಅನ್ನು ಸುಪ್ರೀಂ ಕೋರ್ಟ್ ಇದೀಗ ಅಮಾನತಿನಲ್ಲಿ ಇರಿಸಿದೆ. ‘ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲ ಸಂಸ್ಥೆಗಳಿಗೆ ಅವುಗಳದ್ದೇ ಆದ ಲಕ್ಷಣ ರೇಖೆಗಳಿವೆ, ಯಾರೂ ಈ ಗಡಿಗಳನ್ನು ದಾಟಬಾರದು’ ಎಂದು ಕೇಂದ್ರ ಕಾನೂನು ಸಚಿವರು ಪ್ರತಿಕ್ರಿಯಿಸಿದ್ದಾರೆ. ಆದರೆ ಶಾಸಕಾಂಗ ರಚಿಸಿರುವ ಯಾವುದೇ ಕಾನೂನು ಸಂವಿಧಾನದ ಯಾವುದೇ ವಿಧಿಗೆ ವಿರುದ್ಧವಾಗಿದ್ದರೆ ಅಂತಹ ಕಾನೂನನ್ನು ರದ್ದುಗೊಳಿಸುವ ಅಧಿಕಾರವು ನ್ಯಾಯಾಂಗಕ್ಕೆ ಇದೆಯೆಂಬ ವಿಚಾರವನ್ನು ಯಾರೂ ಮರೆಯಬಾರದು.

ಈ ಸೆಕ್ಷನ್ ಕುರಿತು ಸರ್ಕಾರವು ‘ಅರ್ಹ ವೇದಿಕೆ’ಯ ಮೂಲಕ ಮರುಪರಿಶೀಲನೆ ನಡೆಸುವವರೆಗೆ ದೇಶದ್ರೋಹದ ಕಾನೂನಿನ ಅಡಿ ಯಾವುದೇ ಪ್ರಕರಣ ದಾಖಲು ಮಾಡಬಾರದೆಂದು ಸುಪ್ರೀಂ ಕೋರ್ಟ್ ಆದೇಶಿಸಿರುವುದು ಸ್ವಾಗತಾರ್ಹ. ಅದು, ಈ ಸದವಕಾಶ
ವನ್ನು ಬಳಸಿಕೊಂಡು, ದೇಶದ್ರೋಹದ ಕಾನೂನನ್ನು ರದ್ದುಗೊಳಿಸಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲೆಂದು ಆಶಿಸುತ್ತೇನೆ.

ನ್ಯಾ. ಎಚ್.ಎನ್.ನಾಗಮೋಹನ ದಾಸ್.

ಲೇಖಕ: ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ಹೈಕೋರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.