ಮನುಷ್ಯ ಜೀವಿಗೆ ಬಿಡುವು ಸಿಗಬೇಕೆಂದರೆ ಒಂದು ಕೆಲಸದಿಂದ ಇನ್ನೊಂದಕ್ಕೆ ನೆಗೆಯಲೇಬೇಕು ಎಂದು ಗುರುತಿಸುತ್ತಾನೆ ಅನತೋಲ್ ಫ್ರಾನ್ಸ್. ಎಂದರೆ ಶ್ರಮ ನಮ್ಮ ಸಂಸ್ಕೃತಿ ಅಲ್ಲ, ಅದು ಮಾನವ ಬದುಕಿನ ಮೂಲತತ್ವ.

{28 ಏಪ್ರಿಲ್ 2019 ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಮತ್ತೆ ಮರು ಓದಿಗೆ ನೀಡಲಾಗಿದೆ.}

ನಾಲ್ಕು ಕಾಲಿನ ವಾನರ ಎರಡು ಕಾಲಿನ ನರನಾಗಿ ವಿಕಾಸ ಹೊಂದಿದಾಗ ಮುಖ್ಯವಾಗಿ ಆದ ಬದಲಾವಣೆಗಳು ಎರಡು: ಯೋಚಿಸಬಲ್ಲ ಮಿದುಳಿನ ಬೆಳವಣಿಗೆ ಮತ್ತು ಮುಂಗಾಲುಗಳು ‘ಕೈ' ಆಗಿ ರೂಪುಗೊಂಡದ್ದು. ಚಲನೆಯೇ ಮುಖ್ಯವಾಗಿದ್ದ ಚತುಷ್ಪಾದಿ ಸ್ಥಿತಿಯಿಂದ, ಎರಡು ಕೈಗಳಿರುವ ದ್ವಿಪಾದಿ ಸ್ಥಿತಿಗೆ ಮನುಷ್ಯ ಕುಲ ಬಂತು. ಕೈಗಳು ರೂಪುಗೊಂಡಿದ್ದೇ ‘ಕೆಲಸ' ಮಾಡಲು. ಮಾನವರಿಗೆ ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ. ಮನುಷ್ಯ ಜೀವಿಗೆ ಬಿಡುವು ಸಿಗಬೇಕೆಂದರೆ ಒಂದು ಕೆಲಸದಿಂದ ಇನ್ನೊಂದಕ್ಕೆ ನೆಗೆಯಲೇಬೇಕು ಎಂದು ಗುರುತಿಸುತ್ತಾನೆ ಅನತೋಲ್ ಫ್ರಾನ್ಸ್. ಎಂದರೆ ಶ್ರಮ ನಮ್ಮ ಸಂಸ್ಕೃತಿ ಅಲ್ಲ, ಅದು ಮಾನವ ಬದುಕಿನ ಮೂಲತತ್ವ.

ಮೇ ತಿಂಗಳು ಶ್ರಮವನ್ನು, ಶ್ರಮಿಕರನ್ನು ಮರುಗೌರವಿಸುವ ತಿಂಗಳು. ತಿಂಗಳ ಆರಂಭವೇ ಕಾರ್ಮಿಕರ ದಿನ. ಸರ್ವರಿಗೂ ಸಮಾನ ಅವಕಾಶ, ಹಕ್ಕು, ಅಧಿಕಾರಗಳಿರುವ ಸಮಸಮಾಜ ಪ್ರತಿಪಾದಿಸಿ ಅದನ್ನು ಸಾಕಾರಗೊಳಿಸುವ ಮಾರ್ಗಗಳನ್ನು ಚರ್ಚಿಸಿದ ಮಾರ್ಕ್ಸ್ ಹುಟ್ಟಿದ ದಿನ ಮೇ 5. ಜೀವಿಗಳ ಶ್ರೇಷ್ಠತೆ ಕುಲದಿಂದಲ್ಲ, ಕಾಯಕದಿಂದ ಬರುತ್ತದೆಂದು ಕಾಯಕವೇ ಕೈಲಾಸವೆಂದ ಬಸವಣ್ಣನ ಜಯಂತಿ ಮೇ 7 ರಂದು. ಕಾಯಕಜೀವಿಗಳಿಗೆ ಸೂಕ್ತ ಗೌರವ, ಹಕ್ಕುಗಳನ್ನು ಗಳಿಸಿಕೊಡಲು ಚಳವಳಿ ಕಟ್ಟಿದ ಬಸವ-ಮಾರ್ಕ್ಸ್ರ ನಡುವೆ ದೇಶಕಾಲದ ದೀರ್ಘ ಅಂತರವಿದ್ದರೂ, ಮಾರ್ಗ ಭಿನ್ನವಾಗಿದ್ದರೂ, ಸಮಾಜಕ್ಕೆ ಶ್ರಮ-ಶ್ರಮಿಕರ ಮಹತ್ವ ತಿಳಿಸುವುದೇ ಅವರ ಪ್ರತಿಪಾದನೆಯಾಗಿದೆ. ಅವರ ನೆನಪಿನಲ್ಲಿ ಶ್ರಮ, ಶ್ರಮದ ಸ್ವಾವಲಂಬನೆ ಕುರಿತು ಪರಿಶೀಲಿಸುವುದು ಸೂಕ್ತವಾಗಿದೆ.

ಭಗವಂತ ಕೈ ಕೊಟ್ಟ...

ದೈಹಿಕ ಶ್ರಮವು ಮಿದುಳಿನಲ್ಲಿ ಎಂಡಾರ್ಫಿನ್ ಎಂಬ ರಸದೂತವನ್ನು ಉತ್ಪತ್ತಿ ಮಾಡುತ್ತದೆ. ಅದು ನೈಸರ್ಗಿಕ ನೋವು ನಿವಾರಕ. ಆತಂಕದ ಮನಃಸ್ಥಿತಿಯನ್ನು (ಸ್ಟ್ರೆಸ್) ಶಮನಗೊಳಿಸುವ, ಆತ್ಮಗೌರವವನ್ನು ಹೆಚ್ಚು ಮಾಡುವ, ಆಹ್ಲಾದವನ್ನು ಉದ್ದೀಪಿಸುವ ಕಣವೂ ಹೌದು. ಚಾಕೊಲೇಟ್-ಮೆಣಸಿನ ಖಾರ-ನಗು-ವೈನ್-ಲೈಂಗಿಕ ಚಟುವಟಿಕೆ-ಧ್ಯಾನದಿಂದ ಸ್ವಲ್ಪ ಎಂಡಾರ್ಫಿನ್ ಉತ್ಪತ್ತಿಯಾಗುವುದಾದರೂ ದೈಹಿಕ ಶ್ರಮದಿಂದ ಹೆಚ್ಚು ತಯಾರಾಗುತ್ತದೆ.

ನಮ್ಮ ಹಿರಿಯರು ಶ್ರಮದ ಈ ಲಾಭವನ್ನು ತಿಳಿದಿದ್ದರು. ಸೋಮಾರಿತನವನ್ನು, ಕುಳಿತು ಉಣ್ಣುವುದನ್ನು ಹೀಗಳೆವ; ಶ್ರಮದ ಮಹತ್ವ ಸಾರುವ ಅಸಂಖ್ಯ ಗಾದೆ, ನುಡಿಗಟ್ಟು, ಪದ, ಹಾಡುಗಳನ್ನು ಹೇಳಿದರು. ವಿಶ್ವದಲ್ಲಿಯೇ ಕಾಯಕವನ್ನು ಧರ್ಮ ಮಾಡಿಕೊಂಡ ಮೊದಲ ಅಧ್ಯಾತ್ಮವಾದಿಗಳು ಶಿವಶರಣರು. ಕಾಯದಿಂದ ಹುಟ್ಟುವುದೇ ಕಾಯಕ, ಕಾಯಕವೇ ಆಧ್ಯಾತ್ಮ ಸಾಧನೆಯ ಮೂಲ ಎಂದರು ಬಸವಾದಿ ಶರಣರು. ಅನೇಕ ಮತಧರ್ಮಗಳು ಕಠೋರ ವ್ರತನಿಯಮಗಳಿಂದ ದೇಹವನ್ನು ದಂಡಿಸಿ ಅದು ಮಾಯೆ ಎಂದರೆ, ಶರಣರು ಕಾಯವನ್ನು ನಿರಾಕರಿಸದೇ ಕಾಯಕವ್ರತಕ್ಕಾಗಿ ಉಪಯೋಗಿಸಿದರು.

ಶಿವಶರಣರ ಕಾಯಕಪ್ರೀತಿ ಎಷ್ಟರಮಟ್ಟಿನದೆಂದರೆ: ನಗೆಯ ಮಾರಿತಂದೆ ಎಂಬ ವಚನಕಾರನ ಕಾಯಕವೆಂದರೆ ಭಕ್ತಿ-ಹಾಸ್ಯ ರಸಮಿಶ್ರಿತ ದೃಷ್ಟಾಂತ ಕತೆಗಳನ್ನು ಸಾಭಿನಯವಾಗಿ ಹೇಳಿ ಜನರನ್ನು ನಗಿಸುತ್ತ ಧರ್ಮ, ಆಧ್ಯಾತ್ಮದರಿವನ್ನು ಮೂಡಿಸುವುದು. ಪ್ರತಿಫಲವಾಗಿ ಕಾಸು ಪಡೆದು ಜಂಗಮಸೇವೆ, ದಾಸೋಹ ನಡೆಸುವುದು. ಒಂದು ದಿನ ಮೂರು ದಾರಿ ಕೂಡುವಲ್ಲಿ ದಿನವಿಡೀ ನಿಂತರೂ ನಗಿಸಿಕೊಳ್ಳುವಂಥವರು ಯಾರೂ ಬರುವುದಿಲ್ಲ. ಸಂಜೆವೇಳೆಗೊಬ್ಬ ವೃದ್ಧ ಸಪತ್ನೀಕನಾಗಿ ನಡೆದು ಬರುತ್ತಿರುವುದು ಕಾಣುತ್ತದೆ. ತಮ್ಮನ್ನು ನಗಿಸಲು ಸಾಧ್ಯವೇ ಎಂದವರು ಸವಾಲೆಸೆದಾಗ, ತನ್ನ ಹಾವಭಾವ, ಮಾತುಗಳಿಂದ ನಗೆಯ ಮಾರಿತಂದೆ ಅವರನ್ನು ನಗಿಸಿಬಿಡುತ್ತಾನೆ. ಆದರೆ ಪ್ರತಿಫಲವಾಗಿ ಏನೂ ಕೊಡದೇ ಹೊರಟಾಗ ಹಣ ಕೇಳುತ್ತಾನೆ. ತಾವು ಅವನ ಕಾಯಕನಿಷ್ಠೆ ಪರೀಕ್ಷಿಸಲು ಬಂದ ಶಿವಶಿವೆಯರೆಂದು ಬಂದವರು ನಿಜರೂಪ ತೋರಿದರೂ, ನಗಿಸಿದ್ದಕ್ಕೆ ಕಾಸು ಕೊಡಲೇಬೇಕೆಂದು ಆಗ್ರಹಿಸುತ್ತಾನೆ. ‘ಎಲೈ ಶರಣನೇ, ನಾನು ದೇವರು, ನಿನಗೆ ಕಾಸನ್ನಷ್ಟೇ ಅಲ್ಲ, ಏನು ಬೇಕಾದರೂ ಕೊಡಬಲ್ಲೆ. ಶಿವಸಾಯುಜ್ಯವಾದರೂ ಕೊಡುವೆ, ಕೇಳು’ ಎಂದು ಶಿವನೆನ್ನಲು, ‘ಶಿವಸಾಯುಜ್ಯ ಆಮೇಲಿನ ಮಾತು. ನನಗೀಗ ಕಾಸು ಕೊಡು. ಮನೆಗೆ ಕಾಳುಕಡಿ ಒಯ್ಯಬೇಕು, ದಾಸೋಹ ನಡೆಸಬೇಕು ಎನ್ನುತ್ತಾ ಕಾಯಕ ಮೀರಿದ ಪ್ರತಿಫಲ ತನಗೆ ಬೇಡವೆನ್ನುತ್ತಾನೆ. ‘ನಿನ್ನನ್ನು ಸ್ವರ್ಗಕ್ಕೊಯ್ಯುತ್ತೇನೆ, ಮತ್ತೇಕೆ ಇಂತಹ ಸಣ್ಣಪುಟ್ಟ ವರಗಳ ಕೇಳುವೆ’ ಎಂದು ಶಿವನೆಂದರೆ, ‘ನಿನ್ನ ಕೈಲಾಸ, ಸ್ವರ್ಗ ಯಾರಿಗೆ ಬೇಕು? ಅವನ್ನು ನೀನೇ ತಲೆಗೆ ಸುತ್ತಿಕೋ. ಕೈಲಾಸವೆಂಬುದು ಸೋಮಾರಿಗಳ ನೆಲೆ. ಅದರೊಡೆಯ ನೀನು ಮಹಾ ಸೋಮಾರಿ. ಅಲ್ಲಿ ಕಾಯಕವಿಲ್ಲ, ದುಡಿಮೆಯಿಲ್ಲ; ಗುರುಲಿಂಗಜಂಗಮರ ದಾಸೋಹವಿಲ್ಲ. ಕೈಲಾಸ, ಸ್ವರ್ಗ ನನಗೆ ಬೇಡ’ ಎಂದು ಖಡಾಖಂಡಿತ ನಿರಾಕರಿಸುತ್ತಾನೆ!

ಧೂಳಯ್ಯನೆಂಬ ಶರಣ ಹೊಲಿಯುವ ಕಾಯಕದವ. ಅವನ ಸೂಜಿಕಣ್ಣಲ್ಲಿ ಒಮ್ಮೆ ಶಿವ ಬಂದು ಕುಳಿತನಂತೆ. ಅದಕ್ಕೆ ಧೂಳಯ್ಯ ‘ಅಡ್ಡ ಸರಿ, ನನ್ನ ಕಾಯಕ ಮಾಡಬೇಕು’ ಎಂದನಂತೆ!

ಹೀಗೆ ಇಷ್ಟದೈವವೇ ಅಡ್ಡ ಬಂದರೂ ಆಚೆ ಸರಿಸುವಷ್ಟು ಕಾಯಕಶ್ರದ್ಧೆ ಇಟ್ಟುಕೊಂಡಿದ್ದ ಕಾಯಕನಿರತರ ನೆಲ ನಮ್ಮದು. ನಿದ್ರೆ ಬರದ, ಹಸಿವೆ ಬಾಧಿಸದ, ನೋವೇ ಇರದ, ಮಾಡಲೇನೂ ಕೆಲಸವಿರದೆ ಬರಿಯ ವಿರಾಮ-ಸುಖಗಳೇ ತುಂಬಿದ ದಿವ್ಯನೆಲೆ ಸ್ವರ್ಗವೆನ್ನುವರಲ್ಲವೆ? ಕಾಯಕವಿರದ ಸ್ವರ್ಗ ತಮಗೆ ಬೇಡವೇಬೇಡ ಎಂದರು ಕಾಯಕಯೋಗಿ ಶರಣರು!

ಕಾಯಕದಲ್ಲಿ ನಿರತರಾಗುವುದೆಂದರೆ ಒಂದೇ ಸಲಕ್ಕೆ ನಮ್ಮನ್ನು ನಾವು ಹುಡುಕಿಕೊಳ್ಳುವ ಮತ್ತು ಕಳೆದುಕೊಳ್ಳುವ, ರಚನ-ನಿರಚನ ಎರಡೂ ಆಗುವ ವಿಶಿಷ್ಟ ಕ್ರಿಯೆ. ಮನುಷ್ಯರಿಗೆ ಮಾತ್ರ ಸಾಧ್ಯವಾಗುವ ಶ್ರಮದ ಸೌಂದರ್ಯ ಅದು. ಹಾಗಾಗಿಯೇ ಶ್ರಮದಿಂದ ಕಲೆ ಹುಟ್ಟುವುದು.

ಆದರೆ ಶ್ರಮ ಸಂಸ್ಕೃತಿಯ ಕಾಡುಮನುಷ್ಯ ನಾಗರಿಕಗೊಳ್ಳುತ್ತ ಹೋದಂತೆ ಕಾಯಕ ಸಂಸ್ಕೃತಿ ವಿರಾಮ ಸಂಸ್ಕೃತಿಯಾಗುವತ್ತ ಚಲಿಸಿತು. ಅತಿ ಕಡಿಮೆ ಶ್ರಮಕ್ಕೆ ಅತಿ ಹೆಚ್ಚು ಪ್ರತಿಫಲ ಬಯಸುವ ಯಂತ್ರಯುಗಕ್ಕೆ ಮನುಷ್ಯ ಸಮಾಜ ಬಂದು ಮುಟ್ಟಿತು. ಯಂತ್ರಯುಗದಲ್ಲೂ ಶ್ರಮ ಇದ್ದೇ ಇದೆ. ಆದರೆ ಒಂದೆಡೆ ವಿರಾಮವೇ ಮೌಲ್ಯವೆನಿಸಿಕೊಂಡರೆ; ಇನ್ನೊಂದೆಡೆ ಶ್ರಮದ ಕೀಳುಗೊಳಿಸುವಿಕೆಯ ವೈರುಧ್ಯ ಕಂಡುಬರುತ್ತದೆ.

ಶ್ರಮಯುಗವು ಯಂತ್ರ ಯುಗವಾಗುತ್ತಾ ಶ್ರಮರಾಹಿತ್ಯ ಮತ್ತು ಅತಿಶ್ರಮವೆಂಬ ಎರಡು ವಿರುದ್ಧ ಬಿಂದುಗಳನ್ನು ತಲುಪಿದೆ. ಯಂತ್ರಯುಗದ ಶ್ರಮ ಕುರಿತ ಮಾರ್ಕ್ಸ್ನ ಗ್ರಹಿಕೆ ಅನನ್ಯವಾಗಿದೆ. ಶ್ರಮರಾಹಿತ್ಯ ಒಂದು ತುದಿಯಾದರೆ ಅತಿಶ್ರಮ ಮತ್ತೊಂದು ತುದಿಯಾಗಿದೆ.

ಶ್ರಮರಾಹಿತ್ಯವೇ ಸ್ವರ್ಗ

ಮನುಷ್ಯರನ್ನು ಮತ್ತು ಶ್ರಮವನ್ನು ಮೇಲುಕೀಳೆಂದು ಶ್ರೇಣೀಕರಣಗೊಳಿಸಿದ ಕಾಲದಿಂದ ಶ್ರಮ ಕೀಳೆನಿಸಿಕೊಂಡಿತು. ದೈಹಿಕ ಶ್ರಮರಹಿತ ಬೌದ್ಧಿಕ ದುಡಿಮೆ ವಿರಾಮ ಸಂಸ್ಕೃತಿಯ ವಿರಳ ಜನರನ್ನು ಸೃಷ್ಟಿಸಿತು. ವಿಪರ್ಯಾಸವೆಂದರೆ ಅದೇ ಜ್ಞಾನ, ಅದೇ ಶ್ರೇಷ್ಠ ಎನಿಸಿಕೊಂಡಿತು. ಬೌದ್ಧಿಕ ದುಡಿಮೆ ದೈಹಿಕ ಶ್ರಮಕ್ಕಿಂತ ಶ್ರೇಷ್ಠ ಎನಿಸಿಕೊಂಡ ದಿನವೇ ಹೆಚ್ಚು ಶ್ರಮಪಡುವ ಬಹುಸಂಖ್ಯಾತ ಜನರದು ಕೆಳ ಜಾತಿ/ವರ್ಗವಾಯಿತು. ಶ್ರಮದ ಕೆಲಸವು ಚಾಕರಿ, ಜೀತ, ಸೇವೆ, ಕೂಲಿ ಎನಿಸಿಕೊಂಡಿತು. ಮಾನವ ಸಮಾಜದಲ್ಲಿ ಗಟ್ಟಿಗೊಳ್ಳುತ್ತ ಹೋದ ಈ ಅಸಹಜ ವರ್ಗೀಕರಣವು ಇವತ್ತಿನ ಎಲ್ಲ ತಾರತಮ್ಯ, ವಂಚನೆಗಳ ಮೂಲವಾಗಿದೆ.

ಭೂಮಿ ಮೇಲಿನ ಸಕಲ ಜೀವರಾಶಿಗಳಲ್ಲೇ ಅತ್ಯಂತ ಪರಾವಲಂಬಿಗಳು ನಾವು. ತಮ್ಮ ಆಹಾರ ತಾವು ತಯಾರಿಸಿಕೊಳ್ಳುವ ಸಸ್ಯ ಸ್ವಾಯತ್ತ ಒತ್ತಟ್ಟಿಗಿರಲಿ, ದಿನಬಳಕೆಯ ಬಟ್ಟೆ, ಸೋಪು, ಪೊರಕೆ, ಬ್ರಷ್, ಎಣ್ಣೆ, ಅಕ್ಕಿ, ಔಷಧಿ, ಕಾರು, ಮೊಬೈಲು, ಕುರ್ಚಿ, ಮನೆ, ಕಪಾಟು, ಪುಸ್ತಕ, ಪೆನ್ನು, ಚಪ್ಪಲಿ ಮುಂತಾದ ಅವಶ್ಯಕ ವಸ್ತುಗಳಲ್ಲಿ ಒಂದೇ ಒಂದನ್ನೂ ನಾವು ತಯಾರಿಸಿಕೊಳ್ಳಲಾರೆವು. ಪ್ರತಿಯೊಬ್ಬರೂ ತಮ್ಮ ವಸ್ತುಗಳಿಗಾಗಿ, ಕೆಲಸಕ್ಕಾಗಿ ಮತ್ತೊಬ್ಬರ ಶ್ರಮ ಅವಲಂಬಿಸಿದ್ದೇವೆ. ನಮಗಾಗಿ ಯಾರೋ ಕೆಲಸ ಮಾಡಬೇಕು. ಅದಕ್ಕೆ ಕೂಲಿ ಕೊಟ್ಟು ನಾವು ಹಿರಿಮೆ ಅನುಭವಿಸಬೇಕು. ಯಂತ್ರ ನಮ್ಮ ಕೆಲಸ ಮಾಡಬೇಕು, ಯಂತ್ರ ತಯಾರಿಸಲು/ತಿರುಗಿಸಲು ಮತ್ಯಾರೋ ಇರಬೇಕು. ಗಾಂಧೀಜಿ ಹಿಂದ್ ಸ್ವರಾಜ್ನಲ್ಲಿ, ಚಾರ್ಲಿ ಚಾಪ್ಲಿನ್ ಮಾಡರ್ನ್ ಟೈಮ್ಸ್ ಸಿನಿಮಾದಲ್ಲಿ ಚಿತ್ರಿಸಿರುವಂತೆ ಸಂಪೂರ್ಣ ಶ್ರಮಪರಾವಲಂಬನೆಯೇ ಬದುಕಿನ ಅತ್ಯುಚ್ಚ ಸ್ಥಿತಿ, ಪರಮಸುಖ ಎಂದು ಭಾವಿಸಲಾಗಿದೆ.

ಅತಿಶ್ರಮ

ಮಾರ್ಕ್ಸ್ನ ಪ್ರಕಾರ ಮೌಲ್ಯವಿಲ್ಲದ, ಕೀಳುಗೊಳಿಸಲ್ಪಟ್ಟ ಅತಿಶ್ರಮ ಎರಡು ನೆಲೆಗಳಲ್ಲಿ ಸಂಭವಿಸುತ್ತಿದೆ:

ಅ) ಕಾರ್ಮಿಕರ- ಸೇವಾ ವರ್ಗದ ಉತ್ಪಾದಕ/ಪಾಲನಾ ಶ್ರಮ
ಆ) ಮಹಿಳೆಯರ ಕೌಟುಂಬಿಕ ಶ್ರಮ

‘ಕಾರ್ಖಾನೆಗಳಿಂದ ದಿನದ ಕೆಲಸ ಮುಗಿಸಿ ಕಾರ್ಮಿಕರು ಹೊರಬರುವಾಗ ಅವರ ಶ್ರಮದ ಸಾವು ಆಗಿರುತ್ತದೆ. ತಯಾರಿಸಿದ ವಸ್ತುವಿಗೆ ಮೌಲ್ಯ ತಂದುಕೊಡುವುದು ಶ್ರಮಿಕರ ರಕ್ತ, ಬೆವರು ಮತ್ತು ಕಣ್ಣೀರೇ ಆಗಿರುತ್ತದೆ ಎನ್ನುತ್ತಾನೆ ಮಾರ್ಕ್ಸ್. ಶ್ರಮದಿಂದಲೇ ವಸ್ತುವಿಗೆ ಮೌಲ್ಯ. ಆದರೆ ಹೆಸರುಳಿಯುವುದು ಬಂಡವಾಳ ಹಾಕಿದವರದು ಮಾತ್ರ. ಫೆರೋ ಖುಫ್ರುವಿನ ಪಿರಮಿಡ್ ಆಗಲಿ, ಶಹಜಹಾನನ ತಾಜಮಹಲಾಗಲಿ, ಏಕತಾ ಮೂರ್ತಿಯೇ ಆಗಲಿ - ತಯಾರಿಕೆಯ ಹಿಂದಿನ ಸಸ್ತಾ ಮಾನವಶ್ರಮ ನೆನಪಿನಲ್ಲುಳಿಯುವುದಿಲ್ಲ. ಮಾಡಿಸಿದವರ ಹೆಸರಷ್ಟೇ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಕೈಯಲ್ಲಿರುವ ಮೊಬೈಲನ್ನೇ ಗಮನಿಸಿ; ಅದಕ್ಕೆ ಬಳಸಿದ ಲೋಹ, ಲೋಹದ ಅದಿರನ್ನು ಗಣಿಯಿಂದ ತೆಗೆದವರು, ಶುದ್ಧೀಕರಿಸಿದವರು, ಹಾಳೆ ಮಾಡಿದವರು, ಗಾಜು ಮಾಡಿದವರು, ಚಿಪ್ ಬರೆದವರು, ಬ್ಯಾಟರಿ ಮಾಡಿದವರು, ಅವನ್ನೆಲ್ಲ ಕೂಡಿಸಿದವರು, ಮೊಬೈಲಿನ ಸಿಗ್ನಲ್ಗಾಗಿ ಉಪಗ್ರಹ ತಯಾರಿಸುವುದರ ಹಿಂದಿನ ಸಾವಿರದೆಂಟು ತಂತ್ರಜ್ಞರು, ವಿಜ್ಞಾನಿಗಳು, ಕಾರ್ಮಿಕರು, ಈ ಇವರೆಲ್ಲರ ಪೊರೆದ ಅವರವರ ಕುಟುಂಬಗಳ ಮಹಿಳೆಯರು - ಇವರ್ಯಾರ ಬಗೆಗೂ ನಮಗೆ ಗೊತ್ತಾಗುವುದಿಲ್ಲ. ಮೊಬೈಲು ತಯಾರಿಸಲೆಂದು ಬಂಡವಾಳ ಹಾಕಿದ ಕಂಪನಿಯ ಹೆಸರು ಮಾತ್ರ ಜಾಹೀರಾಗುತ್ತದೆ.

ಅದಕ್ಕೆ ಕಾರಣ ಯಾಂತ್ರಿಕ ಯುಗದಲ್ಲಿ ಬಳಕೆಯಾಗುತ್ತಿರುವ ದೈಹಿಕ ಶ್ರಮದ ಸ್ವರೂಪ ಬದಲಾಗಿರುವುದು. ಯಂತ್ರಗಳೊಡನೆ ಮನುಷ್ಯ ಕೆಲಸ ಮಾಡುವಾಗ ತಾನೊಂದು ಯಂತ್ರವೇ, ಯಂತ್ರದ ಭಾಗವೇ ಆಗಿರುತ್ತಾನೆ. ಬಳಕೆಯಾದ ಶ್ರಮ ಅನಾಮಿಕವಾಗಿರುತ್ತದೆ. ಶ್ರಮ ಕಾಣದಂತೆ ವಸ್ತು ತಯಾರಾಗಿರುತ್ತದೆ. ಹೀಗಾಗಿ ಉತ್ಪಾದನಾ ಶ್ರಮ ತೃಪ್ತಿ ನೀಡದೇ, ಮಾಡುವವರಿಗೆ ಮುದ ನೀಡದೇ, ಕೆಲಸ ಗುಲಾಮಗಿರಿಯೆನಿಸುತ್ತಿದೆ. ಶ್ರಮ ಸಂಸ್ಕೃತಿಯಿದ್ದರೂ ಅತಿಶ್ರಮದ ಕಾರಣದಿಂದ ತೃಪ್ತಿ, ಘನತೆಯ ಬದುಕು ಇಲ್ಲವಾಗಿದೆ.

ಅದೇ ವೇಳೆಗೆ ಯಂತ್ರಗಳಿಂದ ತಯಾರಾದ ರಾಶಿ ರಾಶಿ ವಸ್ತುಗಳು ನಾವು ಕೈಯಿಂದ ಮಾಡುವುದಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ. ವಸ್ತುಗಳ ತಯಾರಕರಿಗೆ ಮಾರಾಟದ ಲಾಭ ವಂಚಿಸಿರುವುದರಿಂದ ಅವು ಕಡಿಮೆ ಬೆಲೆಗೆ ಸಿಗುತ್ತಿವೆ. ಮಣ್ಣಿನ ಮಡಕೆ ಮಾಡಲು ಕುಂಬಾರರಿಗೆ ವರುಷ ಬೇಕು, ಪ್ಲಾಸ್ಟಿಕ್ ಫ್ಯಾಕ್ಟರಿಗೆ ನಿಮಿಷ ಸಾಕು! ಹೆಚ್ಚಿದ ಜನಸಂಖ್ಯೆ, ಹೆಚ್ಚಿದ ಬೇಡಿಕೆ, ಅದಕ್ಕೆ ಪೂರಕವಾದ ಕೈಗಾರಿಕಾ ಕ್ರಾಂತಿ, ತಂತ್ರಜ್ಞಾನ - ಇವೆಲ್ಲವೂ ತಕ್ಷಣ, ರಾಶಿ ರಾಶಿ ವಸ್ತುಗಳನ್ನು ತಯಾರಿಸಿ ಕೈಕೆಲಸದಿಂದ ಮನುಷ್ಯ ದೂರ ಸರಿಯುವಂತೆ ಮಾಡಿವೆ. ಯಂತ್ರಗಳಿಂದಾಗಿ ಮನುಷ್ಯ ತನ್ನ ನಿರುದ್ಯೋಗ ತಾನೇ ಸೃಷ್ಟಿಸಿಕೊಳ್ಳುವಂತೆ, ತನ್ನ ಕೈ ತಾನೇ ಕಡಿದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅತಿಶ್ರಮದ ಇನ್ನೊಂದು ನೆಲೆ ಮಹಿಳೆ. ಶ್ರಮಿಕರಿಗೆ ಜನ್ಮಕೊಟ್ಟು, ಪಾಲಿಸಿ, ಪೋಷಿಸಿ, ದಿನನಿತ್ಯ ಪೊರೆಯುವ ಅವಳ ಶ್ರಮ ಶ್ರಮವೆಂದೇ ಕರೆಸಿಕೊಳ್ಳಲಿಲ್ಲ. ರೊಟ್ಟಿ, ಹೋಳಿಗೆ, ಹಪ್ಪಳಗಳ ಹಿಂದೆ ಸುರಿದ ಅವಳ ರಕ್ತ, ಕಣ್ಣೀರು, ಬೆವರು ಯಾರ ಗಮನಕ್ಕೂ ಬರಲಿಲ್ಲ. ಈ ಕಾಲದಲ್ಲೂ ಹೆಣ್ಣುಮಕ್ಕಳ ಶ್ರಮ ಗೌರವ ಪಡೆದಿಲ್ಲ, ಗುರುತಿಸಲ್ಪಟ್ಟಿಲ್ಲ. ನಮ್ಮ ಅಜ್ಜಿ ಮುತ್ತಜ್ಜಿಯರು ಕುಟ್ಟಿ, ಜಜ್ಜಿ, ರುಬ್ಬಿ, ಬಡಿಯಬೇಕಿತ್ತು, ಅದಕ್ಕೆ ಕೂಡು ಕುಟುಂಬದ ಹಲವರಿರುತ್ತಿದ್ದರು. ಈಗ ಹೊರಗೆ ದುಡಿಯುವುದಲ್ಲದೇ ಪುಟ್ಟ ಕುಟುಂಬದ ಸಕಲೆಂಟು ಜವಾಬ್ದಾರಿಗಳನ್ನೂ ಅವಳೊಬ್ಬಳೇ ನಿಭಾಯಿಸಬೇಕಾಗಿದೆ. ಅಮ್ಮ ಇಲ್ಲವಾದಾಗ ಮಾತ್ರ ಅವಳ ಅದೃಶ್ಯ ದುಡಿಮೆ ಅರಿವಿಗೆ ಬರುತ್ತದೆ.

ಅದಕ್ಕೇ ಇವತ್ತು ಮಹಿಳೆಯರಿಗೂ ದೈಹಿಕ ಶ್ರಮ ಕಡಿಮೆಯಾಗುವುದು ಮೇಲ್ಚಲನೆಯ ಅನುಭವ ನೀಡುತ್ತಿದೆ. ಮನೆಯ ಕೆಲಸ ನಾವೇ ಮಾಡಿದರೆ ಸೋಲಿನನುಭವವಾಗುತ್ತದೆ. ಯಾರೋ ಮಾಡಿ ನಾವು ಸುಮ್ಮನೆ ಕೂರುವುದಾದರೆ, ಅಥವಾ ಯಂತ್ರಗಳು ಮಾಡಿದರೆ ವಿಜಯದ ಹುಮ್ಮಸ್ಸು ತುಂಬಿಕೊಳ್ಳುತ್ತದೆ!

ಶ್ರಮ ಸ್ವಾಯತ್ತೆ: ಏನು ಮಾಡೋಣ?

ಸಾಧ್ಯವಾದಷ್ಟು ನಮ್ಮ ಕೆಲಸ ನಾವೇ ಮಾಡಿಕೊಳ್ಳೋಣ. ಮನೆಕೆಲಸವನ್ನು ಕುಟುಂಬದ ಸ್ತ್ರೀ ಪುರುಷರು ಹಂಚಿಕೊಳ್ಳೋಣ. ಸಮಾಜ ಕೀಳೆಂದು ಪರಿಗಣಿಸುವ (ಉದಾಹರಣೆಗೆ ಬೀದಿ ಕಸ ಗುಡಿಸುವುದು) ಕೆಲಸ ಮಾಡುವವರ ಜೊತೆಗೆ ನಾವೂ ಕೈಜೋಡಿಸುವ ಮೂಲಕ ಅವರ ಶ್ರಮವನ್ನು ಗೌರವಿಸೋಣ. ನಮಗಾಗಿ ದುಡಿಯುವವರ ಕೆಲಸ ಮಾಡಿಕೊಡುವ ಮೂಲಕ ಅವರ ಶ್ರಮಕ್ಕೆ ಘನತೆ ತರೋಣ. ಗ್ರಾಮೀಣವಾದ, ಸ್ಥಳೀಯವಾದ, ನಮ್ಮ ಅಗತ್ಯಗಳಿಗೆ ಅವಶ್ಯವಾದ, ಕೈಕೆಲಸದಿಂದ ತಯಾರಾದ ವಸ್ತುಗಳನ್ನು ಆದ್ಯತೆಯ ಮೇಲೆ ಬಳಸೋಣ. ಎಷ್ಟು ಕಡಿಮೆ ಸಾಕೋ ಅಷ್ಟು ಕಡಿಮೆಯಲ್ಲಿ ಬದುಕಲು ಅನಿವಾರ್ಯವಲ್ಲದ ವಸ್ತುಗಳ ಬಿಟ್ಟುಬಿಡೋಣ. ವಸ್ತುಮೋಹ ಕಡಿಮೆ ಮಾಡಿಕೊಳ್ಳೋಣ.

ಮಾರ್ಕ್ಸ್, ಬಸವಣ್ಣ, ಬುದ್ಧ, ಅಂಬೇಡ್ಕರ್, ಗಾಂಧಿ, ಕಾರ್ಮಿಕರು, ಹೆಣ್ಣುಜೀವಗಳು ಈ ಇವರಿಗೆಲ್ಲ ನಾವು ಕೊಡಬಹುದಾದ ‘ಮೇ ಕಾಣಿಕೆ ಇದಕ್ಕಿಂತ ಬೇರೇನಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.