ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ ಹಾಗೂ ಈ ವೈರಾಣುವಿಗೆ ಬಲಿಯಾದವರ ಸಂಖ್ಯೆಯಲ್ಲಿ ಕಳವಳ ಮೂಡಿಸುವಷ್ಟು ಹೆಚ್ಚಳ ಆಗಿದೆ. ಅದರಲ್ಲೂ ವಿಶೇಷವಾಗಿ, ಬೆಂಗಳೂರಿನಲ್ಲಿ ಈ ಹೆಚ್ಚಳ ಕಂಡುಬಂದಿದೆ. ಕೋವಿಡ್–19 ಸಾಂಕ್ರಾಮಿಕದಿಂದ ಅತಿಹೆಚ್ಚಿನ ತೊಂದರೆಗೆ ಒಳಗಾದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವು ಈಗ ನಾಲ್ಕನೆಯ ಸ್ಥಾನದಲ್ಲಿ ಇದೆ. ಇದರ ಅರ್ಥ, ನಮ್ಮಲ್ಲಿ ಕೊರೊನಾ ಸೋಂಕು ಪರೀಕ್ಷೆಯ ಪ್ರಮಾಣ ಹೆಚ್ಚಾಗಬೇಕು, ಗಂಭೀರವಲ್ಲದ ಲಕ್ಷಣಗಳನ್ನು ಹೊಂದಿದವರಿಗೆ ಕ್ವಾರಂಟೈನ್ ಸೌಲಭ್ಯ ಹೆಚ್ಚಬೇಕು, ಗಂಭೀರ ಸ್ವರೂಪದ ಲಕ್ಷಣಗಳನ್ನು ಹೊಂದಿರುವವರಿಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಸಿಗೆಗಳು ಹಾಗೂ ವೆಂಟಿಲೇಟರ್ಗಳು ಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ನಮಗೆ ಬೇಕು.

ಬೇರೆ ಹಲವು ರಾಜ್ಯಗಳಲ್ಲಿನ ಆರೋಗ್ಯವ್ಯವಸ್ಥೆಗಿಂತಲೂ ಕರ್ನಾಟಕದ ವ್ಯವಸ್ಥೆ ಹೆಚ್ಚು ಬಲಿಷ್ಠವಾಗಿದೆ. ಹಾಗಾಗಿಯೇ, ಈ ಸಾಂಕ್ರಾಮಿಕ ಹರಡಲು ಆರಂಭವಾದಾಗ ರಾಜ್ಯವು ಅದನ್ನು ಚೆನ್ನಾಗಿ ನಿಭಾಯಿಸಿತ್ತು. ಆದರೆ, ವ್ಯವಸ್ಥೆಯಲ್ಲಿನ ಬಿರುಕುಗಳು ಕಾಣುವುದು ಈಗ ಶುರುವಾಗಿದೆ. ಈ ಸಂದರ್ಭದಲ್ಲಿ, ತಮಗೆ ವೇತನ ಸಿಕ್ಕಿಲ್ಲ ಎಂದು ಹಲವು ವೈದ್ಯರು ಮುಷ್ಕರ ನಡೆಸಿದ್ದಿದೆ. ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಪ್ರಯೋಗಾಲಯದ ಸಾಮರ್ಥ್ಯ ಚೆನ್ನಾಗಿಲ್ಲದ ಕಾರಣ ಪರೀಕ್ಷೆಯ ಫಲಿತಾಂಶ ಒಂದು ವಾರ ಅಥವಾ ಅದಕ್ಕಿಂತಲೂ ಹೆಚ್ಚಾಗಿದ್ದಿದೆ.

ಕೆಲವೇ ವಾರಗಳ ಹಿಂದೆ ನಾವು ಹೆಚ್ಚು ಸುರಕ್ಷಿತ ಎಂದು ಅನಿಸುತ್ತಿತ್ತು. ಕರ್ನಾಟಕವು ಕೋವಿಡ್–19 ಸಾಂಕ್ರಾಮಿಕವನ್ನು ಇತರ ಹಲವು ರಾಜ್ಯಗಳಿಗಿಂತ ಚೆನ್ನಾಗಿ ನಿಭಾಯಿಸುತ್ತಿತ್ತು. ಇತರರು ಅನುಕರಿಸಬೇಕಾದ ಮಾದರಿ ಕರ್ನಾಟಕದ್ದು ಎಂದೂ ಹೇಳಲಾಗಿತ್ತು. ಮಾಹಿತಿ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ರಾಜ್ಯವು ಹೊಸ ಪ್ರಕರಣಗಳ ಪರೀಕ್ಷೆ, ಅದರ ಮೂಲದ ಪತ್ತೆಯ ಕೆಲಸ ಮಾಡುತ್ತಿತ್ತು. ಮನೆ ಮನೆ ಸಮೀಕ್ಷೆ ನಡೆಸಿ, ಹೆಚ್ಚು ಅಪಾಯಕ್ಕೆ ಸಿಲುಕಬಲ್ಲವರನ್ನು ಗುರುತಿಸಿತ್ತು. ‘ವಾರ್ ರೂಮ್’ ಸ್ಥಾಪಿಸಿತ್ತು, ಅದು ಹೊಸ ಪ್ರಕರಣಗಳ ದತ್ತಾಂಶ ವಿಶ್ಲೇಷಣೆ ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತಿತ್ತು.

ಆದರೆ, ಈಗ ನಾವು ಎದುರಿಸುತ್ತಿರುವ ಸಮಸ್ಯೆಯು ಆಶ್ಚರ್ಯ ಮೂಡಿಸಬೇಕಿಲ್ಲ. ಇವು ವ್ಯವಸ್ಥಿತ ನಿರ್ಲಕ್ಷ್ಯ ಹಾಗೂ ಆರೋಗ್ಯ ವ್ಯವಸ್ಥೆಗೆ ಅಗತ್ಯ ಸಂಪನ್ಮೂಲವನ್ನು ನೀಡದಿದ್ದುದರ ಪರಿಣಾಮ. ಈ ಸಾಂಕ್ರಾಮಿಕವು ನಮಗೆ ಕೆಲವು ಮುಖ್ಯ ಪಾಠಗಳನ್ನು ಹೇಳಿದೆ. ಮೊದಲನೆಯದು, ಬಲಿಷ್ಠವಾದ ಪ್ರಾಥಮಿಕ ಆರೋಗ್ಯ ವ್ಯವಸ್ಥೆಗೆ ಪರ್ಯಾಯವಾಗಿರುವುದು ಯಾವುದೂ ಇಲ್ಲ ಎಂಬುದನ್ನು ನಾವು ಗುರುತಿಸಬೇಕು. ಇದರ ಅರ್ಥ ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಸಂಪನ್ಮೂಲ ಒದಗಿಸಿ, ಅವರು ತಳಮಟ್ಟದಲ್ಲಿ ನಮ್ಮ ಕಣ್ಣು ಮತ್ತು ಕಿವಿಗಳಾಗಿ ಇರುವಂತೆ ಮಾಡಬೇಕು. ಸಾಂಕ್ರಾಮಿಕ ಹರಡುವುದನ್ನು ತಡೆಯಲು ಇರುವ ಮೂಲ ಕೆಲಸಗಳಾದ ನಿಗಾ, ಪರೀಕ್ಷೆ ಮಾಡುವುದು ಮತ್ತು ಸಂಪರ್ಕಿತರನ್ನು ಪತ್ತೆ ಮಾಡುವುದನ್ನು ಮಾಡಬೇಕು. ಪಂಚಾಯತ್ ಮತ್ತು ಗ್ರಾಮ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಟಿಕಾಂಶ ಸಮಿತಿಗಳು (ವಿಎಚ್ಎಸ್ಎನ್ಸಿ) ತಮ್ಮ ಸಮುದಾಯ ಚೆನ್ನಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿವೆ. ಸಂದರ್ಭಕ್ಕೆ ಸೂಕ್ತವಾಗಿ, ತ್ವರಿತವಾಗಿ ಪ್ರತಿಕ್ರಿಯಿಸಲು, ಸ್ಥಳೀಯ ಮಟ್ಟದಲ್ಲಿ ಕ್ರಿಯಾಶೀಲರಾಗಲು ಅಗತ್ಯವಿರುವ ಸಂಪನ್ಮೂಲವನ್ನು ಅವರಿಗೆ ನೀಡಬೇಕು. ಇದನ್ನು ಕೇರಳದಲ್ಲಿ ಮಾಡಲಾಗಿದೆ. ಸಾಂಕ್ರಾಮಿಕವು ಆರಂಭಿಕ ಹಂತದಲ್ಲಿ ಇದ್ದಾಗ, ಕರ್ನಾಟಕದಲ್ಲಿಯೂ ಇದನ್ನು ಮಾಡಿ ಒಳ್ಳೆಯ ಫಲಿತಾಂಶ ಪಡೆಯಲಾಗಿತ್ತು.

ಎರಡನೆಯದು, ವಿಜ್ಞಾನವನ್ನು ಅನ್ವಯಿಸಲು ಸಾಧ್ಯವಾಗುವಂತೆ ಆರೋಗ್ಯ ವ್ಯವಸ್ಥೆಯನ್ನುಸಿದ್ಧಗೊಳಿಸಬೇಕು. ಈಗ ಕರ್ನಾಟಕದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 15 ಸಾವಿರ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು. ಪ್ರಕರಣಗಳನ್ನು ಪತ್ತೆ ಮಾಡುವುದು, ಸೋಂಕಿತರನ್ನು ಇತರರಿಂದ ಕಡ್ಡಾಯವಾಗಿ ಬೇರೆ ಮಾಡುವುದು, ಅಗತ್ಯ ಇರುವವರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವುದರ ಮೂಲಕ ಮಾತ್ರ ನಾವು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ ಹಾಗೂ ಈ ಕಾಯಿಲೆ ಇನ್ನಷ್ಟು ಹರಡುವುದನ್ನು ತಡೆಯಲು ಸಾಧ್ಯ. ಇದರ ಅರ್ಥ, ನಾವು ಹೆಚ್ಚಿನ ಸಂಪನ್ಮೂಲ ಒದಗಿಸಬೇಕು. ಅಂದರೆ, ಹಣ, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ, ಹಾಸಿಗೆಗಳು, ವೆಂಟಿಲೇಟರ್ಗಳು, ಪ್ರಯೋಗಾಲಯಗಳನ್ನು ನಮ್ಮ ಆಸ್ಪತ್ರೆಗಳಿಗೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕು. ಹಾಗೆಯೇ, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಂದರ್ಭದಲ್ಲಿ ಖಾಸಗಿ ವಲಯವು ಸರ್ಕಾರದ ನೆರವಿಗೆ ಬರುವಂತೆ ಮಾಡಲು ಕಾನೂನಿನ ಚೌಕಟ್ಟನ್ನು ಕೂಡ ಸಿದ್ಧಪಡಿಸಬೇಕು.

ಮೂರನೆಯದು, ಮಾಹಿತಿಯನ್ನು ಪಾರದರ್ಶಕವಾಗಿಹರಡಬೇಕು. ಆಗ, ಯಾವಾಗ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬೇಕು, ಅದನ್ನು ಪಡೆಯಲು ಯಾರನ್ನು ಸಂಪರ್ಕಿಸಬೇಕು, ಅದಕ್ಕೆ ಎಲ್ಲಿಗೆ ಹೋಗಬೇಕು, ಅಲ್ಲಿ ಏನು ನಿರೀಕ್ಷಿಸಬಹುದು ಎಂಬ ವಿವರಗಳು ನಾಗರಿಕರಿಗೆ ಲಭ್ಯವಾಗುತ್ತವೆ. ಈಗಿನ ವ್ಯವಸ್ಥೆಯಲ್ಲಿ ಇರುವ ಅತಿದೊಡ್ಡ ದೌರ್ಬಲ್ಯಗಳಲ್ಲಿ ಇದೂ ಒಂದು. ಕೋವಿಡ್–19 ಪರೀಕ್ಷೆಯನ್ನು ಎಲ್ಲಿ ಮಾಡಿಸಿಕೊಳ್ಳಬೇಕು, ಅದಕ್ಕೆ ಎಷ್ಟು ಹಣ ಖರ್ಚಾಗುತ್ತದೆ, ಕ್ವಾರಂಟೈನ್ ಆಗಬೇಕಿದ್ದರೆ ಅದು ಎಲ್ಲಿ, ಹಾಸಿಗೆಗಳು ಲಭ್ಯ ಇವೆಯೋ ಇಲ್ಲವೋ... ಇಂತಹ ಮಾಹಿತಿಗಳು ಸಿಗುತ್ತಿಲ್ಲ.

ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸುವ ವಿಚಾರದಲ್ಲಿ ಸರ್ಕಾರ ಬಹಳ ವೇಗವಾಗಿ ಕೆಲಸ ಮಾಡಿತು! ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಅಲ್ಲ. ಇದು ಸಾರ್ವಜನಿಕ ಆರೋಗ್ಯ ಸಮಸ್ಯೆ ಮತ್ತು ಮನುಕುಲ ಎದುರಿಸುತ್ತಿರುವ ವಿನಾಶಕಾರಿ ಸಂದರ್ಭ. ಇಂತಹ ಸಂದರ್ಭದಲ್ಲಿ ಮಾನವೀಯ ಸ್ಪಂದನ ಇರಬೇಕು, ಭರವಸೆ ನೀಡುವಂತಹ ಪ್ರತಿಕ್ರಿಯೆ ಇರಬೇಕು.

ಆರೋಗ್ಯ ಸೇವೆಗಳು ಅಗತ್ಯವಿರುವವರಿಗೆ ಅದನ್ನು ನೀಡುವಲ್ಲಿ ನಮ್ಮ ದುರ್ಬಲ ಹಾಗೂ ಕುಸಿಯುತ್ತಿರುವ ಆರೋಗ್ಯ ವ್ಯವಸ್ಥೆ ಸೋಲುತ್ತಿದೆ. ಅಷ್ಟೇ ಅಲ್ಲ, ಮಾಮೂಲಿ ಆರೋಗ್ಯ ಸೇವೆಗಳು ಕೂಡ ಕುಸಿದುಬಿದ್ದಿವೆ. ಫೆಬ್ರುವರಿ ಮತ್ತು ಮಾರ್ಚ್ ನಡುವಿನ ಅವಧಿಯಲ್ಲಿ 1 ಲಕ್ಷದಿಂದ 2 ಲಕ್ಷದಷ್ಟು ಮಕ್ಕಳು ಲಸಿಕೆಗಳಿಂದ ವಂಚಿತರಾದರು ಎಂದು ಬ್ರೂಕಿಂಗ್ಸ್ ಸಂಸ್ಥೆ ಅಂದಾಜು ಮಾಡಿದೆ. ಟಿ.ಬಿ. ರೋಗಿಗಳು ಚಿಕಿತ್ಸೆ ಪಡೆದಿಲ್ಲ. ಇದರ ಪರಿಣಾಮವಾಗಿ ಸಾಯುವ ಪ್ರಮಾಣವು ಹೆಚ್ಚುವ ಅಪಾಯವಿದೆ. ಮಾಮೂಲಿ ಸೇವೆಯಾದ, ಪ್ರಸವಪೂರ್ವ ಆರೈಕೆ ಹಾಗೂ ಹೆರಿಗೆ ಸಂದರ್ಭದ ಆರೈಕೆಗಳ ಮೇಲೆಯೂ ಇದು ಪರಿಣಾಮ ಬೀರಿದೆ. ಇದರ ದೂರಗಾಮಿ ಪರಿಣಾಮಗಳು ಆಘಾತಕಾರಿ ಆಗಿರಲಿವೆ. ಕಾಲಕ್ರಮೇಣ ಇದರಿಂದ ಸಂಭವಿಸುವ ಸಾವುಗಳು ಕೋವಿಡ್–19ರ ಕಾರಣದಿಂದಾಗಿ ಆಗುವ ಸಾವುಗಳಿಗಿಂತಲೂ ಹೆಚ್ಚಬಹುದು.

ಆರೋಗ್ಯ ವ್ಯವಸ್ಥೆಯನ್ನು ತುರ್ತಾಗಿ ಬಲಪಡಿಸಬೇಕಿದೆ. ಇದು ನಿರಂತರವಾಗಿ ನಡೆಯಬೇಕಿರುವ ಆದ್ಯತಾ ಕೆಲಸ. ಈಗ ಎದುರಾಗಿರುವಂತಹ ಸಾಂಕ್ರಾಮಿಕ ಎದುರಾದಾಗ, ಲೋಪಗಳನ್ನು ಸರಿಪಡಿಸಲು ಹೆಣಗಾಟ ನಡೆಸುವುದಲ್ಲ. ಹೀಗೆ ಬಲಪಡಿಸದಿದ್ದರೆ, ಮುಂಬೈ ಮತ್ತು ದೆಹಲಿಯಲ್ಲಿ ಈಗಾಗಲೇ ಆಗಿರುವಂತೆ, ಬೆಂಗಳೂರಿನಲ್ಲಿ ಆಗುತ್ತಿರುವಂತೆ ವ್ಯವಸ್ಥೆ ಕುಸಿಯುತ್ತದೆ. ಬಲಿಷ್ಠ ಆರೋಗ್ಯ ಸೇವಾ ವ್ಯವಸ್ಥೆಯನ್ನು ಹೊಂದುವುದು ಒಂದು ಆಯ್ಕೆಯಲ್ಲ; ಅದು ನಮ್ಮ ಭೌತಿಕ, ಮಾನಸಿಕ ಹಾಗೂ ಆರ್ಥಿಕ ಒಳಿತಿಗೆ ತೀರಾ ಅನಿವಾರ್ಯ. ಇದು ಕೊರೊನಾ ವೈರಾಣು ನಮಗೆ ಕಲಿಸಿದ ಪಾಠ. ಭವಿಷ್ಯದಲ್ಲಿ ಆರ್ಥಿಕ, ಸಾಮಾಜಿಕ ವಿಪತ್ತುಗಳು ಎದುರಾಗದಂತೆ ನೋಡಿಕೊಳ್ಳಲು ನಾವು ಇಂದು ಆರೋಗ್ಯ ಸೇವಾ ಕ್ಷೇತ್ರದ ಮೇಲೆ ಹೂಡಿಕೆ ಮಾಡಬೇಕು!

ಲೇಖಕಿ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಪ್ರಾಧ್ಯಾಪಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.