‘ಭಾರತೀಯ ಆಹಾರ ನಿಗಮದಲ್ಲಿ ಬಫರ್ ಸ್ಟಾಕ್‍ಗಿಂತ ಒಂದೂವರೆ ಕೋಟಿ ಟನ್ನಿನಷ್ಟು ಹೆಚ್ಚುವರಿ ಅಕ್ಕಿ ಮತ್ತು ಗೋಧಿ ದಾಸ್ತಾನಿದೆ. ಇನ್ನೂ 1.9 ಕೋಟಿ ಟನ್‍ಗಳಷ್ಟು ಭತ್ತವು ಆಹಾರ ನಿಗಮದ ಹೆಸರಿನಲ್ಲಿ ಮಿಲ್‍ಗಳಲ್ಲಿ ದಾಸ್ತಾನಿದೆ. ಈ ಹೆಚ್ಚುವರಿ ಅಕ್ಕಿಯ ಸ್ವಲ್ಪ ಭಾಗವನ್ನು ಇಥೆನಾಲ್ ಆಗಿ ಪರಿವರ್ತಿಸಿ, ಅದನ್ನು ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಲು ಉಪಯೋಗಿಸಲಾಗುತ್ತದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೊರೊನಾ ಸೋಂಕಿನ ಆತಂಕಕ್ಕೆ ಸಿಲುಕಿರುವ ಲಕ್ಷಾಂತರ ವಲಸೆ ಕಾರ್ಮಿಕರು, ಕೂಲಿಕಾರರು ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಸಂದರ್ಭದಲ್ಲಿ, ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ನಾಗರಿಕ ಸಮಾಜ ಬೆಚ್ಚಿಬಿದ್ದಿದೆ. ಎಲ್ಲರಿಗೂ ಮುಂದಿನ ಆರು ತಿಂಗಳಿಗೆ ಕೊಡಲು ಬೇಕಾದಷ್ಟು ಧಾನ್ಯವು ಸರ್ಕಾರದ ಬಳಿ ಇದ್ದು, ಈಗಾಗಲೇ ಎರಡು ತಿಂಗಳ ಪಡಿತರವನ್ನು ಪೂರೈಸಿಯಾಗಿದೆ ಎಂದು ಸರ್ಕಾರ ಹೇಳಿದ್ದರೂ ವಾಸ್ತವದ ಚಿತ್ರಣ ಬೇರೆಯದೇ ಇದೆ.

ವಿವಿಧ ರಾಜ್ಯಗಳ ಲಕ್ಷಾಂತರ ವಲಸೆ ಕಾರ್ಮಿಕರು ಈಗ ನಗರ, ಪಟ್ಟಣಗಳಲ್ಲಿ ಸಿಲುಕಿಕೊಂಡಿದ್ದು, ಬೆಂಗಳೂರೊಂದರಲ್ಲೇ 80 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬಂದಿಯಾಗಿವೆ. ಇವರಿಗೆ ಆಹಾರ ಪೂರೈಸಲು ಶ್ರಮಿಸುತ್ತಿರುವ ಸಂಘಟನೆಗಳು, ಇವರನ್ನೆಲ್ಲ ಸುರಕ್ಷಿತವಾಗಿ ಅವರವರ ಊರುಗಳಿಗೆ ತಲುಪಿಸಿ, ಆಹಾರ ಮತ್ತು ವೇತನ ಒದಗಿಸಿ ಎಂದು ಕೇಳುತ್ತಿವೆ. ಆದರೆ ಕೇಂದ್ರ ಸರ್ಕಾರ ಮಾತ್ರ, ಯಾವ ರಾಜ್ಯಗಳಲ್ಲಿ ಜನ ಸಿಲುಕಿಕೊಂಡಿದ್ದಾರೋ ಅಲ್ಲಿನ ರಾಜ್ಯ ಸರ್ಕಾರಗಳೇ ಪರಿಸ್ಥಿತಿಯನ್ನು ನಿಭಾಯಿಸಬೇಕು, ಭಾರತೀಯ ಆಹಾರ ನಿಗಮದಿಂದ ₹ 22.50ಕ್ಕೆ ಕೆ.ಜಿ. ಅಕ್ಕಿ ಮತ್ತು ₹ 21.50ಕ್ಕೆ ಗೋಧಿಯನ್ನು ಖರೀದಿಸಿ ತಮ್ಮ ರಾಜ್ಯಗಳಲ್ಲಿ ಹಂಚಬೇಕು, ವಲಸಿಗರಿಗಾಗಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳೂ ಇದೇ ಬೆಲೆಗೆ ಖರೀದಿಸಿ ಹಂಚಲಿ ಎಂದು ಹೇಳಿದೆ. ಜವಾಬ್ದಾರಿಯಿಂದ ಕೈಕೊಡವಿಕೊಳ್ಳುವುದಕ್ಕೆ ನಿದರ್ಶನದಂತೆ ಇದು ಕಾಣುತ್ತಿದೆ.

ರಾಜ್ಯ ಸರ್ಕಾರಗಳು ಪಡಿತರ ಹಂಚಲು ತಯಾರಾದವು. ಆದರೆ ಮುಂಬೈ, ಕೊಯಮತ್ತೂರಿನಿಂದ ಜಾರ್ಖಂಡ್, ಬಿಹಾರಕ್ಕೆ ಹೊರಟುಬಿಟ್ಟಿರುವ ವಲಸೆ ಕಾರ್ಮಿಕರ ಬ್ಯಾಗುಗಳಲ್ಲಿ ರೇಶನ್‍ಕಾರ್ಡು, ಆಧಾರ್ ಕಾರ್ಡುಗಳಿವೆಯೇ? ಸಂಕಟದ ಈ ಸಮಯದಲ್ಲಿ ಪಡಿತರ ಹಂಚಿಕೆಯನ್ನು ಸಾರ್ವತ್ರೀಕರಣಗೊಳಿಸಿ, ಸಮಸ್ತ ದೇಶವಾಸಿಗಳಿಗೂ ಆಹಾರವನ್ನು ಹಂಚಿ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ, ಆರ್ಥಿಕ ತಜ್ಞ ಜಾನ್‍ಡ್ರೀಝ್, ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಮತ್ತು ಹಲವು ನಾಗರಿಕ ಸಂಘಟನೆಗಳು ಸರ್ಕಾರಕ್ಕೆ ಮೊರೆ ಇಡುತ್ತಲೇ ಇದ್ದರೂ ಏನೂ ಪ್ರಯೋಜನವಾಗಿಲ್ಲ.

ಆಹಾರ ಭದ್ರತಾ ಕಾಯ್ದೆಯಡಿ ಅಂತ್ಯೋದಯ, ಆದ್ಯತಾ ಕುಟುಂಬದ ಕಾರ್ಡ್ ಹೊಂದಿರುವ 80 ಕೋಟಿ ಜನರಿಗೆ ಮೂರು ತಿಂಗಳ ಕಾಲ ಉಚಿತವಾಗಿ ಪಡಿತರವನ್ನು ಕೊಡಲು ತಾನು ಬದ್ಧ ಎನ್ನುತ್ತದೆ ಸರ್ಕಾರ. ಈ ಸಂಖ್ಯೆ 2011ರ ಜನಗಣತಿಯನ್ನು ಆಧರಿಸಿದ್ದು. ಈ 9 ವರ್ಷಗಳಲ್ಲಿ ಈ ವರ್ಗಕ್ಕೆ ಇನ್ನೂ 10.8 ಕೋಟಿ ಜನ ಸೇರ್ಪಡೆಯಾಗಿದ್ದಾರೆ ಮತ್ತು ಅವರೆಲ್ಲಾ ಪಡಿತರ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ.

ಹಳೆಯ ಜನಗಣತಿಯ 80 ಕೋಟಿ ಸಂಖ್ಯೆಯನ್ನೇ ಉಳಿಸಿಕೊಳ್ಳಲು ಸರ್ಕಾರವು ಮೊಬೈಲ್ ಫೋನ್, ಆಧಾರ್ ಕಾರ್ಡ್ ಜೋಡಣೆ ಮುಂತಾದ ಷರತ್ತುಗಳನ್ನು ಹಾಕುತ್ತಾ ಅಂತ್ಯೋದಯ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಒಂದೆಡೆ ಸ್ಥಿರವಾಗಿ ನಿಂತಿರುವವರಿಗೂ ಈ ಎಲ್ಲ ದಾಖಲೆಗಳನ್ನು ಒದಗಿಸುವುದು ಕಷ್ಟವಾಗಿರುವಾಗ, ಕೆಲಸ ಹುಡುಕಿ ಬಲುದೂರ ಹೊರಟು ಹೋಗಿರುವವರಿಗೆ, ಅನಧಿಕೃತ ಜೋಪಡಿಗಳಲ್ಲಿ ವಾಸವಾಗಿರುವವರಿಗೆ ದಾಖಲೆಗಳು ಸಿಗುತ್ತವೆಯೇ? ಎಲ್ಲ ದಾಖಲೆಗಳಿಗೂ ಮೂಲವಾದ ರಹವಾಸಿ ದಾಖಲೆಯು ಬಾಡಿಗೆಗೆ ಇರುವವರಿಗೆ ಸಿಗುತ್ತಲೇ ಇಲ್ಲ. ಈ ಎಲ್ಲ ಕಾರಣಗಳಿಗಾಗಿ, ಬಿಟ್ಟುಹೋಗಿರುವ ಶೇ 33ರಷ್ಟು ಪ್ರಮಾಣವು ಈಗ ಶೇ 40ಕ್ಕೆ ಏರಿದೆ.

ಬಿಟ್ಟುಹೋಗಿರುವ 10.8 ಕೋಟಿ ಜನರಲ್ಲಿ ತಿಂಗಳಿಗೆ ₹5,000ದಷ್ಟು ಗಳಿಸುವ, ಊರು ಬಿಟ್ಟು ದೂರ ಹೋದ, ಬಾಡಿಗೆ ಮನೆಗಳಲ್ಲಿ ವಾಸವಿರುವ, ಈಗ ಲಾಕ್‍ಡೌನ್ ಕಾರಣಕ್ಕಾಗಿ ತಮ್ಮ ಊರುಗಳತ್ತ ಮುಖ ಮಾಡಿ ಹಾದಿ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಜನರ ಸಂಖ್ಯೆಯೇ ಹೆಚ್ಚಿದೆ. ಈಗ ಸದ್ಯ ಸರ್ಕಾರದ ಪಡಿತರ ಸಿಗುತ್ತಿರುವುದು ಶೇ 60ರಷ್ಟು ಜನರಿಗೆ ಮಾತ್ರ. 110 ಕೋಟಿ ಜನಸಂಖ್ಯೆಗೆ ತಿಂಗಳಿಗೆ 10 ಕೆ.ಜಿ.ಯಂತೆ 6 ತಿಂಗಳು ಕೊಡಲು 6.6 ಕೋಟಿ ಟನ್ ಆಹಾರಧಾನ್ಯ ಬೇಕಾಗುತ್ತದೆ. ಹೀಗಿರುವಾಗ, ನಿಗಮದಲ್ಲಿರುವ ಹೆಚ್ಚುವರಿ ಅಕ್ಕಿಯನ್ನು ಇಥೆನಾಲ್ ಆಗಿ ಪರಿವರ್ತಿಸುವ ಪ್ರಶ್ನೆ ಎಲ್ಲಿಂದ ಬಂತು?

ವಾಸ್ತವ ಏನೆಂದರೆ, ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಪ್ರತೀ ವರ್ಷ ಅಗಾಧ ಪ್ರಮಾಣದ ಅಕ್ಕಿ ಮುಗ್ಗಲು ಹಿಡಿದು ಹಾಳಾಗುತ್ತದೆ. ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್ ಡಾ. ಬಿ.ಎನ್.ಹುಂಬರವಾಡಿ ಅವರ ಪ್ರಕಾರ, ‘ಇವರು ಹೇಳುತ್ತಿರುವ ಈ ಹೆಚ್ಚುವರಿ ಪ್ರಮಾಣದ ಅಕ್ಕಿ ಸಂಪೂರ್ಣ ಮುಗ್ಗಲು ಹಿಡಿದ ಅಕ್ಕಿಯೇ ಆಗಿದೆ. ಆಹಾರ ನಿಗಮದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಗಿರುವ ಈ ಅಚಾತುರ್ಯವನ್ನು ಮುಚ್ಚಿಕೊಳ್ಳಲು ಹ್ಯಾಂಡ್ ಸ್ಯಾನಿಟೈಸರ್ ಕತೆಯನ್ನು ಮುಂದಿಡುತ್ತಿದ್ದಾರೆ ಅಷ್ಟೆ’.

ಹಾಗಾದರೆ ಅಷ್ಟು ಪ್ರಮಾಣದ ಅಕ್ಕಿ ದಾಸ್ತಾನಾದದ್ದಾದರೂ ಹೇಗೆ? ಅರವತ್ತರ ದಶಕದ ‘ಹಸಿರು ಕ್ರಾಂತಿ’ಯ ಸಮಯದಲ್ಲಿ ಇಡೀ ದೇಶಕ್ಕೆ ಅಕ್ಕಿ ಮತ್ತು ಗೋಧಿಯನ್ನು ಬೆಳೆದು ಒದಗಿಸುವ ಜವಾಬ್ದಾರಿಯನ್ನು ಪಂಜಾಬ್, ಹರಿಯಾಣದ ರೈತರ ಮೇಲೆ ಹೊರಿಸಲಾಯಿತು. ಅಂದಿನಿಂದ ಇಂದಿನವರೆಗೂ ಈ ಎರಡೂ ರಾಜ್ಯಗಳಲ್ಲಿ ಬೆಳೆಯುವ ಅಗಾಧ ಪ್ರಮಾಣದ ಭತ್ತ ಮತ್ತು ಗೋಧಿಯನ್ನು ಭಾರತೀಯ ಆಹಾರ ನಿಗಮವೇ ಬೆಂಬಲ ಬೆಲೆಯಲ್ಲಿ ಸಂಪೂರ್ಣವಾಗಿ ಕೊಂಡುಕೊಳ್ಳುತ್ತದೆ. ಬೆಂಬಲ ಬೆಲೆಯು ರೈತರಿಗೆ ಒಂದಿಷ್ಟು ಲಾಭದಾಯಕವಾಗಿಯೇ ಇರುವುದರಿಂದ ಶೇ 90ಕ್ಕೂ ಹೆಚ್ಚು ರೈತರು ಅದನ್ನು ಸರ್ಕಾರಕ್ಕೇ ಕೊಡುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡಿ ಎಂದರೆ, ಅಲ್ಲಿನ ರೈತರ ಪ್ರಬಲ ಲಾಬಿ ಸುತರಾಂ ಒಪ್ಪುವುದಿಲ್ಲ. ಇದರಿಂದ ಇತರ ರಾಜ್ಯಗಳ ರೈತರಿಗೆ ತಮ್ಮ ಭತ್ತವನ್ನು ಬೆಂಬಲ ಬೆಲೆಯಲ್ಲಿ ಸರ್ಕಾರಕ್ಕೆ ಕೊಡುವ ಅವಕಾಶವೂ ನಶಿಸಿದೆ.

ಇನ್ನು, ಸಂಕಷ್ಟದ ಸನ್ನಿವೇಶಗಳಿಗೆಂದು ಆಹಾರ ನಿಗಮವು ಎರಡು ವರ್ಷಗಳಿಗೆ ಆಗುವಷ್ಟು ಬಫರ್ ಸ್ಟಾಕ್ ಅನ್ನು ಯಾವಾಗಲೂ ಇಟ್ಟುಕೊಂಡಿರುತ್ತದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಇದು ವರ್ಷವರ್ಷಕ್ಕೂ ಹೆಚ್ಚಾಗುತ್ತಾ, ಈಗ ಐದಾರು ವರ್ಷ ಹಳೆಯ ಅಕ್ಕಿಯು ನಿಗಮದಲ್ಲಿ ಮುಗ್ಗುತ್ತಿದ್ದರೆ ಆಶ್ಚರ್ಯವೇನಿಲ್ಲ. ಅಕ್ಕಿಯ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆ ಬಹಳ ಕಡಿಮೆಯಿರುವುದರಿಂದ ಅಕ್ಕಿಯನ್ನು (ಬಾಸ್ಮತಿಯೊಂದನ್ನು ಹೊರತುಪಡಿಸಿ) ರಫ್ತು ಮಾಡುವ ಅವಕಾಶ ಕೂಡ ಭಾರತಕ್ಕಿಲ್ಲ. ಭಾರತ ತನ್ನ ರೈತರಿಗೆ ಕೊಡುತ್ತಿರುವ ಬೆಂಬಲ ಬೆಲೆ ಅತಿಯಾಯಿತು ಎಂದು ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ) ತಕರಾರು ಮಾಡುತ್ತಲೇ ಇದೆ. ಹೀಗೆ ಈ ದೇಶದ ಜನರ ಹಸಿವನ್ನು ನೀಗಿಸಲು ಸ್ಥಾಪನೆಗೊಂಡ ಭಾರತೀಯ ಆಹಾರ ನಿಗಮವನ್ನು 60 ವರ್ಷಗಳಿಂದ ಸತತವಾಗಿ ಅವ್ಯವಸ್ಥೆಯ, ಅದಕ್ಷತೆಯ ಗೂಡಾಗಿಸಿರುವ ಆಡಳಿತಗಾರರು, ಈಗ ಅಕ್ಕಿಯನ್ನು ಮುಗ್ಗಿಸಿ, ಆಲ್ಕೊಹಾಲ್ ತೆಗೆದು ಇಂಧನಕ್ಕೆ ಬಳಸುತ್ತೇವೆ ಎನ್ನುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.