ರಾಜಕಾರಣಿಗಳ ಅತಿಗಳು: ಚುನಾವಣೆ ಗೆಲ್ಲುವುದಷ್ಟೇ ರಾಜಕಾರಣಿಗಳ ಗುರಿ. ಹೀಗಾಗಿ, ಪಶ್ಚಿಮಘಟ್ಟ ಹಾಳಾದರೆ ತಮಗೇನು; ಕ್ಷೇತ್ರದಲ್ಲಿ ಬೆಂಬಲ ಸಿಕ್ಕಿದರೆ ಸಾಕು ಎಂಬುದು ಶಾಸಕರ ಲೆಕ್ಕಾಚಾರ. ಹೀಗಾಗಿ, ಹಸಿರಿನಿಂದ ಕಂಗೊಳಿಸುತ್ತಿದ್ದ ಪಶ್ಚಿಮಘಟ್ಟಗಳು ಕಜ್ಜಿ ಹಿಡಿದ ಗುಡ್ಡಗಳಂತಾಗಿವೆ.

ಹೀಗಾಗಿಯೇ ‘ಕಾಡು ಕಡಿದು ತೋಟ ಮಾಡ್ರೋ ನಾನಿದ್ದೇನೆ’ ಎಂದು ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಹೇಳಿದ್ದರು. ‘ಅರಣ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿ ಓಡಿಸ್ರೋ’ ಎಂದು ಹೇಳುವ ಶಾಸಕರೂ ನಮ್ಮ ಮಧ್ಯೆ ಇದ್ದಾರೆ.

ಇವರು ಹೇಳುವುದರಲ್ಲಿ ಒಂದಿಷ್ಟು ಅಂಶ ಸರಿ ಇದೆ. ಏಕೆಂದರೆ ತಮ್ಮ ಹೊಟ್ಟೆಪಾಡಿಗಾಗಿ ಒಂದೆರಡು ಎಕರೆ ಒತ್ತುವರಿ ಮಾಡಿ ತೋಟ ಮಾಡಿದವರನ್ನು, ಹಾರೆ (ಗುದ್ದಲಿ)– ಪಿಕಾಸಿಗೆ, ಕತ್ತಿ ಹಿಡಿ–ಕೊಡಲಿ ಕಾವಿಗಾಗಿ ಕಾಡಿಗೆ ಹೋಗುವ ರೈತರನ್ನು ಹಿಡಿದು ಕೇಸು ಹಾಕುವುದಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳ ಕೆಲಸ. ಹತ್ತಾರು ಎಕರೆ ಅಡಿಕೆ, ಕಾಫಿ ತೋಟ ಮಾಡಿದವರು, ಗುಡ್ಡ ಅಗೆದು ರೆಸಾರ್ಟ್ ಮಾಡಿದವರ ಗೋಜಿಗೆ ಈ ಅಧಿಕಾರಿಗಳು ಹೋಗುವುದೇ ಇಲ್ಲ. ಅವರಿಗೆ ಕಾಡುತ್ಪತ್ತಿ ಸಂಗ್ರಹಿಸುವ ಬಡವರಷ್ಟೇ ಗುರಿ.

ಇವನ್ನೂ ಓದಿ:
ಪಶ್ಚಿಮ ಘಟ್ಟ | ಪರಿಸರ ಸೂಕ್ಷ್ಮ ಪ್ರದೇಶ: ಕರಡು ಅಧಿಸೂಚನೆಯಲ್ಲಿ ಏನಿದೆ?
ಅನುಭವ ಮಂಟಪ | ಪಶ್ಚಿಮ ಘಟ್ಟ: ರಾಜ್ಯಗಳ ಸ್ಥಿತಿಗತಿ ಏನು?

ಇನ್ನು ಮಾಧವ ಗಾಡ್ಗೀಳ್, ಕಸ್ತೂರಿರಂಗನ್ ಹಾಗೂ ಈಗಿನ ಪಶ್ಚಿಮ ಘಟ್ಟ ಸೂಕ್ಷ್ಮ ವಲಯದ ವರದಿಗಳ ವಿಷಯದಲ್ಲಿ ಕೂಡ ರಾಜಕಾರಣಿಗಳದ್ದು ಹಸಿ ಸುಳ್ಳಿನ ವಾದ. ಈ ವರದಿಗಳಲ್ಲಿ ಏನಿದೆ? ಅದನ್ನು ಅಧ್ಯಯನ ಮಾಡುವ ವ್ಯವಧಾನವೇ ಇವರಿಗಿಲ್ಲ. ಯಾರೋ ಹೇಳಿದ ಸುಳ್ಳನ್ನು ತಮ್ಮ ವರ್ಣರಂಜಿತ ಮಾತು ಬೆರೆಸಿ ಜನರನ್ನು ‘ಮಂಗ’ ಮಾಡುವುದೇ ರಾಜಕಾರಣಿಗಳ ಕಾಯಕ. ಯಾರೋ ಒಬ್ಬಿಬ್ಬರು ಶಾಸಕರನ್ನು ಬಿಟ್ಟರೆ ಉಳಿದವರಿಗೆ ಈ ವರದಿಗಳ ತಿರುಳಾದರೂ ಏನು ಎಂಬುದೂ ಗೊತ್ತಿಲ್ಲ. ಪಶ್ಚಿಮ ಘಟ್ಟವನ್ನೇ ಪ್ರತಿನಿಧಿಸುವ ಲೋಕಸಭಾ ಸದಸ್ಯರಿಗೂ ಇದರ ಬಗ್ಗೆ ಅರಿವಿಲ್ಲ. ಒಂದುವೇಳೆ ನಿಜವಾಗಿಯೂ ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದಿದ್ದರೆ ಈ ಕರಡು ಅಧಿಸೂಚನೆಯನ್ನು ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿ, ಜನರಿಗೆ ಹಂಚುವ ಕೆಲಸವನ್ನಾದರೂ ಮಾಡಬೇಕಾಗಿತ್ತು. ಈವರೆಗೂ ಅದನ್ನು ಮಾಡಿಯೇ ಇಲ್ಲ.

ಘಟ್ಟದ ತಪ್ಪಲಿನಿಂದ ಆಯ್ಕೆಯಾಗುವ ಶಾಸಕರ ಪೈಕಿ ಹೆಚ್ಚಿನವರು ದೊಡ್ಡ ದೊಡ್ಡ ಕಾಫಿ ತೋಟಗಳ ಒಡೆಯರು. ದಟ್ಟ ಕಾನನದ ಮಧ್ಯೆ ವೈಭವವೋಪೇತ ರೆಸಾರ್ಟ್ಗಳ ಮಾಲೀಕರು. ಇವರ ಪೈಕಿ ಕೆಲವರು ಹೆದ್ದಾರಿಗಳು, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಕಾಮಗಾರಿಗಳ ಕಾಸು ಗಿಂಜುವ ಅಭ್ಯಾಸವನ್ನೂ ಇಟ್ಟುಕೊಂಡವರು. ಭದ್ರಾವತಿಯ ಎಂಪಿಎಂ ಕಾರ್ಖಾನೆ ಮುಚ್ಚಿ ಹೋಗಿ ಹಲವು ಕಾಲವಾಗಿದೆ. ಆದರೆ, ಶಿವಮೊಗ್ಗ ಜಿಲ್ಲೆಯ ಈಗಿನ–ಹಿಂದಿನ ಜನಪ್ರತಿನಿಧಿಗಳು ಈಗಲೂ ಸಾವಿರಾರು ಎಕರೆ ಭೂಮಿಯನ್ನು ಅಕೇಶಿಯಾ ಬೆಳೆಸಲು ಎಂಪಿಎಂಗೆ ಕೊಡಿ ಎಂದು ವಕಾಲತ್ತು ಹಾಕುತ್ತಲೇ ಇದ್ದಾರೆ. ಪಶ್ಚಿಮಘಟ್ಟ ಸೂಕ್ಷ್ಮವಲಯ ಘೋಷಣೆ ವಿರೋಧಿಸಿ ಸಭೆ ನಡೆಸುವ ಶಾಸಕರಲ್ಲಿ ಒಬ್ಬರೂ ಈವರೆಗೂ ರೆಸಾರ್ಟ್, ವಸತಿ ಬಡಾವಣೆಗಳನ್ನು ವಿರೋಧಿಸಿದ ನಿದರ್ಶನವಿಲ್ಲ.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಎಂಬ ಬಿಳಿಯಾನೆಯೊಂದನ್ನು ಸರ್ಕಾರ ಸಾಕುತ್ತಲೇ ಇದೆ. 13 ಜಿಲ್ಲೆಗಳ 74 ತಾಲ್ಲೂಕುಗಳು ಇದರ ವ್ಯಾಪ್ತಿಯಲ್ಲಿವೆ. 12 ಸಂಸದರು, 65 ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ತಿನ 21 ಸದಸ್ಯರು ಇದರ ವ್ಯಾಪ್ತಿಯಲ್ಲಿದ್ದಾರೆ. ರಸ್ತೆ, ಸಮುದಾಯ ಭವನ, ಸೇತುವೆ ಹೀಗೆ ನೀಡುವ ಅನುದಾನದ ಮೇಲಷ್ಟೇ ಅಭಿವೃದ್ಧಿ ಮಂಡಳಿಗೆ ಕಣ್ಣು. 86 ಶಾಸಕರಿದ್ದರೂ ಪಶ್ಚಿಮಘಟ್ಟವನ್ನು ಉಳಿಸುವ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಒಂದು ದಿನವೂ ಚರ್ಚೆ ನಡೆಸಿದ ನಿದರ್ಶನ ಇಲ್ಲ. ಚರ್ಚೆ ಏನಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ, ಮಾನವ–ಪ್ರಾಣಿ ಸಂಘರ್ಷ, ಡೀಮ್ಡ್ ಅರಣ್ಯದಿಂದಾಗುವ ತೊಂದರೆ, ಭೂ ಕುಸಿತದಿಂದಾಗಿರುವ ಹಾನಿ ಬಗ್ಗೆ ಮಾತ್ರ.

ಪರಿಸರವಾದಿಗಳ ಮಿತಿಗಳು:

ಪರಿಸರವಾದಿಗಳಲ್ಲಿ ಹಲವು ವಿಧದವರಿದ್ದಾರೆ. ಗಾಡ್ಗೀಳ್, ಕಸ್ತೂರಿರಂಗನ್ ವರದಿ ಜಾರಿಯಾಗಲೇಬೇಕು; ಹುಲಿ ಸಂರಕ್ಷಿತ ಅರಣ್ಯ, ಅಭಯಾರಣ್ಯ, ವನ್ಯಜೀವಿಧಾಮಗಳು ಇನ್ನೂ ಹೆಚ್ಚಬೇಕು; ಕಾಡಿನೊಳಗೆ ಇರುವವರನ್ನು ಒಕ್ಕಲೆಬ್ಬಿಸಲೇಕು ಎಂದು ವಾದ ಮಾಡುವವರದ್ದೇ ಹೆಚ್ಚು ಸದ್ದು. ಹವಾನಿಯಂತ್ರಿತ ವ್ಯವಸ್ಥೆಯೊಳಗೆ ಕುಳಿತ ಮಂದಿ ನೀಡುವ ವರದಿಗಳೇ ಸಂಶೋಧನಾ ವರದಿಗಳಾಗುತ್ತವೆ. ಅವನ್ನೇ ಜಾರಿ ಮಾಡಬೇಕು ಎಂಬ ವಾದವೇ ಬಲವಾಗುತ್ತಾ ಹೋಗುತ್ತಿದೆ.

ಅಮೆರಿಕದಲ್ಲಿ ಓದಿಕೊಂಡು ಬಂದ ಮಾಧವ ಗಾಡ್ಗೀಳ್ ಅವರು 90ರ ದಶಕದಲ್ಲೇ ಕರ್ನಾಟಕದ ಮಲೆನಾಡಿನಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿದ್ದರು. 2010–11ರಲ್ಲಿ ಕೇಂದ್ರ ನೇಮಿಸಿದ ಸಮಿತಿಯ ಮುಖ್ಯಸ್ಥರಾಗಿ 18 ತಿಂಗಳಲ್ಲಿ ಸಂಶೋಧನೆ ಮಾಡಿ ವರದಿಯನ್ನು ಕೊಟ್ಟರು. ಬಳಿಕ ಕಸ್ತೂರಿರಂಗನ್ ಸಮಿತಿಯನ್ನು ಸರ್ಕಾರ ನೇಮಿಸಿತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಕಸ್ತೂರಿರಂಗನ್, ಪಶ್ಚಿಮಘಟ್ಟದ ಬಗ್ಗೆ ಆಳವಾದ ತಿಳಿವಳಿಕೆ ಇದ್ದವರಲ್ಲ. ತಮ್ಮ ವಿವೇಚನಾ ಜ್ಞಾನ–ಗೂಗಲ್ ಕೊಟ್ಟ ಮಾಹಿತಿ ಆಧರಿಸಿ ಅವರು ವರದಿಯನ್ನು ಕೊಟ್ಟರು. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬದುಕುತ್ತಿರುವವರು ಉಳಿಸಿರುವ ಕಾಡುಗಳೆಷ್ಟು?

ನಾಗಬನ–ಚೌಡಿಗಳಂತಹ ದೇವಬನಗಳ ಕೊಡುಗೆಯೇನು? ತೋಟ ಮಾಡುವವರಿಗೆ ಕಾಡಿನ ಅನಿವಾರ್ಯ ಎಷ್ಟೆಂಬ ಮಾಹಿತಿ ಪಡೆಯುವ ಔದಾರ್ಯವನ್ನೂ ತೋರಲಿಲ್ಲ; ರಸ್ತೆ–ಪ್ರವಾಸೋದ್ಯಮಗಳಿಂದಾಗುವ ಹಾನಿಯನ್ನೂ ಪರೀಕ್ಷೆಗೆ ಗುರಿಪಡಿಸಲಿಲ್ಲ. ಹೀಗಿರುವಾಗಿ, ಕಸ್ತೂರಿರಂಗನ್ ವರದಿಯಿಂದ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಉಳಿಸಬಹುದು ಎಂದು ಪ್ರತಿಪಾದಿಸುತ್ತಿದ್ದಾರೆ. ವಿದೇಶದ ಅನುದಾನದತ್ತ ಕಣ್ಣು ನೆಟ್ಟಿರುವ ಕೆಲವು ಪರಿಸರವಾದಿಗಳು ಪಶ್ಚಿಮಘಟ್ಟದ ಮೇಲೆ ತಮ್ಮದೇ ಹುಯಿಲೆಬ್ಬಿಸುವುದು ನಿಲ್ಲಿಸಿದರೆ ಪರಿಸರ ಉಳಿದೀತು.

ಆಗಬೇಕಾದುದೇನು?:

ಕಾಡಿನ ಮಧ್ಯೆಯೇ ಬದುಕಿ, ಅಲ್ಲಿನ ಸೌಂದರ್ಯ–ಕ್ರೌರ್ಯವನ್ನೂ ಕಂಡ ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ಹೇಳಿದ್ದರು. ‘ಎಲ್ಲ ನಾಶವಾಗಿ ಹೋದರೂ ಕೆಲವು ವರ್ಷಗಳಾದ ಮೇಲೆ ಆ ಬೂದಿಯಿಂದಲೇ ಒಂದು ಬೀಜ ಚಿಗುರೊಡೆದು ಗಿಡವಾಗಿ, ಮರವಾಗಿ ಅದು ದೊಡ್ಡ ಕಾಡಾಗಿ ಒಂದಲ್ಲ ಒಂದು ದಿನ ಬೆಳೆಯುತ್ತೆ ಕಣಯ್ಯಾ! ಅದು ನಿಸರ್ಗದ ನಿಯಮ; ಉಳಿದೆಲ್ಲ ಕತೆ ಬಿಡ್ರಯ್ಯಾ’ ಎಂದು. ಹಾಗಂತ, ನಾಶವಾದ ಮೇಲೆ ಬೆಳೆಯುತ್ತದೆ ಎಂದು ಕಾಯಲು ನಮಗೆಲ್ಲ ಇರುವುದು ಒಂದೇ ಭೂಮಿ. ಕಾಡನ್ನು ಕಾಡಿನ ಪಾಡಿಗೆ, ಅಲ್ಲಿ ಕಾಡು ಸಲಹುತ್ತಲೇ ತಾವು ಬದುಕುವ ಕಾಡುವಾಸಿಗಳನ್ನು ಹಾಗೆಯೇ ಬಿಟ್ಟರೆ ಪಶ್ಚಿಮಘಟ್ಟ ಉಳಿಯುತ್ತದೆ. ರಾಜಕಾರಣಿಗಳು–ತಥಾಕಥಿತ ಪರಿಸರವಾದಿಗಳ ಮತ ಕುಯಿಲು–ಹುಸಿ ಹುಯಿಲು ನಿಲ್ಲಬೇಕಿದೆ.

ಅಭಿಪ್ರಾಯಗಳು:

‘ಮೊಸರಲ್ಲಿ ಕಲ್ಲು ಹುಡುಕುವುದು ಬೇಡ’

ಪಶ್ಚಿಮಘಟ್ಟ ಪ್ರದೇಶವನ್ನು ಜಾಗತಿಕ ಸೂಕ್ಷ್ಮವಲಯ ಎಂದು ಘೋಷಿಸಿದ್ದನ್ನು ನಮ್ಮ ದೇಶ, ರಾಜ್ಯ ಒಪ್ಪಿಕೊಂಡಿದೆ. ಅಂಥ ಪ್ರದೇಶದಲ್ಲಿ ಅರಣ್ಯ ಕಟಾವು ಮಾಡಿ ಅಲ್ಲಿ ಬಹುಮಹಡಿ ಕಟ್ಟಡ, ರಸ್ತೆ ನಿರ್ಮಿಸುವುದು ಅಭಿವೃದ್ಧಿ ಕಾರ್ಯವಾಗದು. ಪಶ್ಚಿಮ ಘಟ್ಟವನ್ನು ಇರುವ ಸ್ವರೂಪದಲ್ಲೇ ಮುಂದುವರಿಸಿಕೊಂಡು ಹೋಗುವುದೇ ದೊಡ್ಡ ಅಭಿವೃದ್ಧಿಯಾಗಿದೆ.

ಅದನ್ನು ಮತ್ತಷ್ಟು ಬೆಳೆಸಬೇಕು. ಎಲ್ಲೆಲ್ಲಿ ಮರಗಳನ್ನು ಕಡಿದು ನಾಶ ಮಾಡಲಾಗಿದೆಯೋ ಅಲ್ಲೆಲ್ಲ ಮರಗಳನ್ನು ಬೆಳೆಸಬೇಕು. ಆ ಪ್ರದೇಶಗಳಲ್ಲಿ ತಲೆ ತಲಾಂತರಗಳಿಂದ ಬದುಕಿ ಬಂದಿರುವ ಬುಡಕಟ್ಟು ಜನರು, ಮೂಲ ನಿವಾಸಿಗಳಿಗೆ ಮಾತ್ರ ಹೋಗಲು ಅವಕಾಶ ಇರಬೇಕು. ಕಟ್ಟುನಿಟ್ಟಿನ ಅರಣ್ಯ ಕಾಯ್ದೆ ಇದ್ದರೂ ಇತರರು ಅಲ್ಲಿಗೆ ಹೋಗುತ್ತಾರೆ ಎಂಬುದೇ ಸೋಜಿಗ. ಕಾಡಿನ ನಡುವೆ ಎಕರೆಗಟ್ಟಲೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ರೆಸಾರ್ಟ್ಗಳೇ ಇದಕ್ಕೆ ಉದಾಹರಣೆಗಳಾಗಿವೆ. ಕಸ್ತೂರಿರಂಗನ್ ವರದಿಯಲ್ಲ, ಗಾಡ್ಗೀಳ್ ಸಮಿತಿಯ ಶಿಫಾರಸುಗಳನ್ನೇ ಜಾರಿ ಮಾಡಬೇಕು.

ಪಶ್ಚಿಮ ಘಟ್ಟದಂಥ ಕಾಡನ್ನು ಮತ್ತೊಮ್ಮೆ ಸೃಷ್ಟಿಸಲು ಸಾಧ್ಯವೇ ಇಲ್ಲ. ಮನುಷ್ಯರ ರೀತಿಯಲ್ಲೇ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿಲ್ಲವೇ?

ಕಸ್ತೂರಿರಂಗನ್ ವರದಿಯಲ್ಲಿ ಪಶ್ಚಿಮಘಟ್ಟದ ಮೂಲ ನಿವಾಸಿಗಳನ್ನು ತೆರವು ಮಾಡಲು ಹೇಳಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಹೊಸದಾಗಿ ಬಹುಮಹಡಿ ಕಟ್ಟಡಗಳ ನಿರ್ಮಾಣ, ಗಣಿಗಾರಿಕೆ, ಕಾಡು ಕಡಿದು ರಸ್ತೆ ನಿರ್ಮಾಣದಂಥ ಕಾರ್ಯಗಳಿಗೆ ಕಡಿವಾಣ ಹಾಕಲು ಶಿಫಾರಸುಗಳಿವೆ. ವಿರೋಧಿಸುವ ಹಲವರಿಗೆ ವರದಿಯಲ್ಲಿರುವ ಅಂಶಗಳ ಮಾಹಿತಿಯೇ ಇಲ್ಲ.

ಕಸ್ತೂರಿರಂಗನ್ ವರದಿಯನ್ನು ವಿರೋಧಿಸುವವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಮುಂದಿನ ಪೀಳಿಗೆಗೆ, ಜೀವವೈವಿಧ್ಯ ಮತ್ತು ಅರಣ್ಯದ ಉಳಿವಿಗಾಗಿ ಕಸ್ತೂರಿರಂಗನ್ ವರದಿಯನ್ನು ಪರಿಣಾಮಕಾರಿಯಾಗಿ ಹೇಗೆ ಜಾರಿ ಮಾಡಲು ಸಾಧ್ಯ ಎಂದು ಯೋಚಿಸುವುದು ಸೂಕ್ತ.

-ಡಾ.ಜಿ.ವಿ.ಹೆಗಡೆ,ಹಿರಿಯ ಭೂ ವಿಜ್ಞಾನಿ

‘ಭೌತಿಕ ಸಮೀಕ್ಷೆ ನಡೆಸಿ’

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ ಪಟ್ಟಿಯಲ್ಲಿರುವ ಕರ್ನಾಟಕದ ಜಿಲ್ಲೆಗಳ ಪ್ರದೇಶಗಳ ಭೌತಿಕ ಸಮೀಕ್ಷೆ ನಡೆಸಬೇಕು. ಈ ಭಾಗಗಳ ಜನರಿಗೆ ಅಧಿಸೂಚನೆ ಕುರಿತು ಸಮಗ್ರ ಮಾಹಿತಿ ನೀಡಬೇಕು. ಸಮಸ್ಯೆಗಳು, ಆಕ್ಷೇಪಣೆಗಳನ್ನು ಪರಿಶೀಲಿಸಿ, ಪರಿಹರಿಸಬೇಕು. ಈ ದಿಸೆಯಲ್ಲಿ ರಚಿಸಿರುವ ಸಮಿತಿ ತಕ್ಷಣ ಕಾರ್ಯ ಶುರು ಮಾಡಬೇಕು.

ಪಶ್ಚಿಮ ಘಟ್ಟಗಳಿಗಾಗಿ ನಿರ್ಧಾರ, ಬೆಂಬಲ ಮತ್ತು ನಿಗಾ ಕೇಂದ್ರ ಸ್ಥಾಪನೆಯ ಅಂಶ ಮಾತ್ರ ಕರಡುವಿನಲ್ಲಿ ಉಲ್ಲೇಖವಾಗಿದೆ. ಕೇಂದ್ರದಲ್ಲಿ ಯಾರು ಇರುತ್ತಾರೆ, ನಿರ್ವಹಣೆ, ಅದರ ಪಾತ್ರ ಏನು ಎಂಬುದನ್ನು ವಿವರಿಸುವುದು ಒಳಿತು. ಬೆಳೆಗಾರರನ್ನೂ ಸದಸ್ಯರಾಗಿಸಬೇಕು. ಇದೆಲ್ಲವನ್ನು ವ್ಯವಸ್ಥಿತವಾಗಿ ಮಾಡಿ ಅಧಿಸೂಚನೆ ಅನುಷ್ಠಾನಗೊಳಿಸಿದರೆ ಅಭ್ಯಂತರ ಇಲ್ಲ.

ಡಾ.ಎಚ್.ಟಿ. ಮೋಹನಕುಮಾರ್,ಅಧ್ಯಕ್ಷ, ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್)

‘ಘೋಷಣೆ ಮಾಡಲೇಬೇಕು’

ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲೇಬೇಕು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಸ್ತೂರಿರಂಗನ್ ವರದಿಗಿಂತಲೂ ಗಾಡ್ಗೀಳ್ ವರದಿ ಜಾರಿಗೆ ನನ್ನ ಬೆಂಬಲ. ಕಸ್ತೂರಿರಂಗನ್ ವರದಿ ಉಪಗ್ರಹ ಸಮೀಕ್ಷೆಯ ಮೂಲಕ ಮಾಡಿದ ಅವೈಜ್ಞಾನಿಕ ವರದಿ. ಆದರೆ ಗಾಡ್ಗೀಳ್ ವರದಿ ತಯಾರು ಮಾಡುವುದಕ್ಕೂ ಮೊದಲು, ಪಶ್ಚಿಮಘಟ್ಟ ವ್ಯಾಪ್ತಿಯ ಪ್ರತಿ ಕಾಡು, ಬೆಟ್ಟ, ಗ್ರಾಮಗಳಿಗೆ ಭೇಟಿ ನೀಡಲಾಗಿತ್ತು. ಆ ವರದಿಯಲ್ಲಿ ಪರಿಸರ ಸಂರಕ್ಷಣೆಯ ಎಲ್ಲ ಅಂಶಗಳೂ ಇವೆ. ಆದರೆ ಕಸ್ತೂರಿರಂಗನ್ ವರದಿಯಲ್ಲಿ ಬಯಲು ಸೀಮೆಯ ಆಲೂರು ತಾಲ್ಲೂಕಿನ ಯಾವುದೋ ಒಂದು ಗ್ರಾಮವನ್ನು ಸೇರ್ಪಡೆ ಮಾಡಲಾಗಿದೆ. ಅದನ್ನು ಸಾರಾಸಗಟಾಗಿ ತಿರಸ್ಕರಿಸುವ ಮನಸ್ಥಿತಿ ಬದಲಾಗದಿದ್ದರೆ, ಯಾರಿಗೂ ಉಳಿಗಾಲವಿಲ್ಲ. ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಆಗದೆ ಹೋದರೆ ಮುಂದಿನ ಪೀಳಿಗೆಗೆ ಉಸಿರಾಟಕ್ಕೂ ಆಮ್ಲಜನಕ ದೊರೆಯದು. ಅವರು ನಮ್ಮನ್ನು ಕ್ಷಮಿಸಲಾರರು.

-ಪ್ರಸಾದ್ ರಕ್ಷಿದಿ,ರಂಗಕರ್ಮಿ

‘ಗ್ರಾಮಸ್ಥರನ್ನು ಒಕ್ಕಲೆಬ್ಬಿಸಬೇಡಿ’

ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪಶ್ಚಿಮ ಘಟ್ಟದ ಅಂಚಿನಲ್ಲಿ ಹಲವು ದಶಕಗಳಿಂದ ಕಂದಾಯ ದಾಖಲೆ ಹೊಂದಿ, ಮನೆ ಕಟ್ಟಿಕೊಂಡು, ಕೃಷಿ ಮಾಡುತ್ತಿರುವ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಂದಾಯ, ಅರಣ್ಯ ಭೂಮಿಯಲ್ಲಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ, ಅರಣ್ಯ ವಿಸ್ತರಣೆ ಮಾಡುವುದಕ್ಕೆ ಬೆಂಬಲವಿದೆ. ನಮ್ಮ ಪೂರ್ವಿಕರು ಕಾಡನ್ನೆಲ್ಲಾ ನಾಶ ಮಾಡಿದ್ದರೆ, ನಮಗೆ ಮಲೆನಾಡಿನಲ್ಲಿ ಹಸಿರು, ವನ್ಯಜೀವಿ, ಜಲಪಾತಗಳನ್ನು ಕಾಣುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

-ಲೋಕೇಶ್ ಮಸ್ತಾರೆ,ಕಾಫಿ ಬೆಳೆಗಾರ, ಸಕಲೇಶಪುರ

‘ಬೀಜ ಎಸೆದು, ಮಾವಿನಹಣ್ಣು ತಿನ್ನಿ’

ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು ಏಕೆ ವಿರೋಧ ಮಾಡಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಕನಿಷ್ಠ ಆ ಅಧಿಸೂಚನೆಯಲ್ಲಿರುವ ಯಾವ ಅಂಶಗಳಿಂದ ತೊಂದರೆ ಆಗುತ್ತದೆ ಎನ್ನುವುದನ್ನಾದರೂ ಹೇಳಬೇಕು. ಏನೂ ಹೇಳದೇ, ಅಧಿಸೂಚನೆಯನ್ನು ಸಾರಾಸಗಟಾಗಿ ವಿರೋಧಿಸುವುದು ಸರಿಯಲ್ಲ.

ಮಾವಿನ ಹಣ್ಣಿನ ಒಳಗೆ ಇರುವ ಬೀಜವನ್ನು ಎಸೆದು ಹಣ್ಣನ್ನು ತಿನ್ನಬೇಕು. ಹಾಗೆಯೇ, ಈ ಅಧಿಸೂಚನೆಯಲ್ಲಿರುವ ನಕಾರಾತ್ಮಕ ಅಂಶ ಕೈಬಿಟ್ಟು ಸಕಾರಾತ್ಮಕ ಅಂಶಗಳನ್ನು ಜಾರಿಗೆ ತರಬಹುದು ಎನ್ನುವ ದಿಸೆಯಲ್ಲಿ ಯಾರೊಬ್ಬರ ಯೋಚನೆಯೂ ಇಲ್ಲ.

ಪಶ್ಚಿಮ ಘಟ್ಟಗಳಲ್ಲಿ ವಾಸ ಮಾಡುವವರಿಗೆ ಆರ್ಥಿಕ ಸಹಾಯನಿಧಿ ನೀಡುವಂತೆ ಕಸ್ತೂರಿರಂಗನ್ ವರದಿ ಹೇಳಿದೆ. ಈ ಅಂಶವನ್ನು ಅಧಿಸೂಚನೆಯಲ್ಲಿ ಸೇರಿಸಿಲ್ಲ.

ಗಣಿಗಾರಿಕೆಯಂತಹ ಚಟುವಟಿಕೆಗಳನ್ನು ಪಶ್ಚಿಮ ಘಟ್ಟಗಳಲ್ಲಿ ನಿಷೇಧಿಸಬೇಕು ಎಂಬ ಅಂಶ ಅಧಿಸೂಚನೆಯಲ್ಲಿ ಇದೆ. ಇದು ಸ್ವಾಗತಾರ್ಹ ಅಲ್ಲವೇ?

ಕರ್ನಲ್ ಸಿ.ಪಿ.ಮುತ್ತಣ್ಣ,ಕಾರ್ಯದರ್ಶಿ, ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ, ಮಡಿಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.