‘ನನ್ನಿಂದ ಸಂಪತ್ತನ್ನೂ, ಪ್ರಸಿದ್ಧಿಯನ್ನೂ, ಬೇಕಿದ್ದರೆ ಯೌವನವನ್ನೂ ಸೆಳೆದುಕೋ. ಆದರೆ ನನ್ನ ಬಾಲ್ಯದ ಮಳೆಗಾಲವನ್ನೂ, ಅದರಲ್ಲಿ ಕಾಗದದ ದೋಣಿ ಬಿಡುವ ಸುಖವನ್ನೂ ವಾಪಸ್ ತಂದುಕೊಡು’ ಎಂಬ ಗಜಲ್ ಅನ್ನು ಕೇಳಿಸಿಕೊಂಡಾಗ, ಇಂದಿನ ವಿಪ್ಲವದಿಂದ ಓಡಿ ಬಾಲ್ಯದ ಮುಗ್ಧತೆಯಲ್ಲಿ ಅಡಗಿಕೊಳ್ಳುವ ಬಯಕೆಯಾಗುತ್ತದೆ. ಭಯಾನಕ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿದ್ದರೂ, ಏನೂ ಆಗಿಲ್ಲವೆಂಬ ನಿರುಮ್ಮಳತೆಯನ್ನು ಅಭಿನಯಿಸುತ್ತಿರುವ ಈ ಲೋಕದ ಮನುಷ್ಯ ಸಂತತಿ ಏನಾದರೂ ನಾಶದ ಅಂಚಿನಲ್ಲಿ ಬಂದು ನಿಂತಿದೆಯೇ?

ಒಂದೆಡೆ, ಕರ್ನಾಟಕದಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಎರಡು ಆಘಾತಗಳನ್ನು ನೀಡಿದೆ. ಒಂದು, ಅಪರಾಧಿಯನ್ನು ಹಿಡಿಯಲಾಗಿಲ್ಲ. ಇನ್ನೊಂದು, ನಿರಪರಾಧಿಯೊಬ್ಬನನ್ನು ಈ ಪ್ರಕರಣದಲ್ಲಿ ಸಿಲುಕಿಸಿ, ಆತನನ್ನು ಆರು ವರ್ಷ ಜೈಲುವಾಸಕ್ಕೆ ತಳ್ಳಲಾಗಿತ್ತು. ಆತನೀಗ ನಿರಪರಾಧಿ ಎಂದು ಸಾಬೀತಾಗಿದೆ. ನಿರಪರಾಧಿಯನ್ನು ಆರು ವರ್ಷ ಜೈಲಲ್ಲಿಟ್ಟಿದ್ದು ಕೂಡಾ ಇಡೀ ದೇಶ ತಲೆತಗ್ಗಿಸುವ ಸಂಗತಿ ಅಲ್ಲವೇ? ಸುಮಾರು ಮೂವತ್ತೈದು ವರ್ಷಗಳ ಹಿಂದೆ, ಅದೇ ಪ್ರದೇಶದಲ್ಲಿ ಪದ್ಮಲತಾ ಎಂಬ ಹುಡುಗಿಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಅಂದು ಆ ಅಪರಾಧ ಎಸಗಿದವರನ್ನು ಮಟ್ಟ ಹಾಕಬೇಕಾಗಿತ್ತು. ಆದರೆ ಹಾಗೆ ಆಗಲಿಲ್ಲ. ಯಾಕೆ, ಆಳುವವರನ್ನೂ ಸೇರಿಸಿಕೊಂಡು ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ಅಪರಾಧಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಬಡವರು, ಅಸಹಾಯಕರ ಹತ್ಯೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಇಷ್ಟು ಸಲೀಸಾಗಿದ್ದು ಹೇಗೆ?

ಇಂದು ಮಣಿಪುರದ ವಿದ್ಯಮಾನ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಅಲ್ಲಿನ ಮುಖ್ಯಮಂತ್ರಿಯವರೇ ‘ಇಂತಹ ನೂರಾರು ಘಟನೆಗಳು ನಡೆಯುತ್ತವೆ’ ಎಂದು ನಿರ್ಭಾವುಕವಾಗಿ, ಎರಡು ತಿಂಗಳಿನಿಂದ ನಿಷ್ಕ್ರಿಯವಾಗಿದ್ದರ ಬಗ್ಗೆ ಯಾವ ಪಶ್ಚಾತ್ತಾಪವಾಗಲೀ ಮುಜುಗರವಾಗಲೀ ಇಲ್ಲದೆ ಹೇಳಿಕೆ ನೀಡುತ್ತಾರೆ. ಅಂದರೆ, ನೂರಾರು ಸಂಖ್ಯೆಯ ಪುರುಷರು ಅನ್ಯ ಕೋಮಿನ ಯುವತಿಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡುತ್ತಾ, ತೀರಾ ಭೀಕರವೆನಿಸುವಂತೆ ಅಸಭ್ಯ ವರ್ತನೆ ತೋರುತ್ತಾ, ಅವರ ತಂದೆ, ತಮ್ಮಂದಿರನ್ನು ಕಣ್ಣೆದುರೇ ಕೊಂದು ಹಾಕುತ್ತಾ ಕೇಕೆ ಹಾಕಿ ಅಟ್ಟಹಾಸ ಮೆರೆದು ಅತ್ಯಾಚಾರ ಎಸಗುವುದು ಇವರಿಗೆ ಅತ್ಯಂತ ಸಾಮಾನ್ಯ ಸಂಗತಿ! ಇದೇನು ಮನರಂಜನೆಯ ಬಯಲಾಟವೇ? ಅದೇ ರಾಜ್ಯದ ಆ ಯುವತಿಯರು ಅನ್ಯ ಕೋಮಿನ ಬುಡಕಟ್ಟು ಜನಾಂಗದವರಾಗಿರುವುದು ಅಪರಾಧವೇ?

ಅಧಿಕಾರದ ಬಲ ಇರುವ ವ್ಯಕ್ತಿಗಳು ಮತ್ತು ಸಮುದಾಯದವರು ತಮ್ಮ ಬಲ ಹೆಚ್ಚಿಸಿಕೊಳ್ಳಲು ತುಳಿಯುವ ದಾರಿಯಿದು. ಜೀವ ಭಾವವಿಲ್ಲದ ಹೊನ್ನು ಮತ್ತು ಮಣ್ಣಿನ ಮೇಲೆ ಸ್ವಾಮ್ಯ ಸಾಧಿಸಲು ಜೀವ ಭಾವವಿರುವ ಹೆಣ್ಣಿನ ಮೇಲೆ ಅತಿಕ್ರಮಣ ಮಾಡುವುದನ್ನು ರಣನೀತಿಯನ್ನಾಗಿಸಿಕೊಂಡಿರುವುದೇ ಇದರ ಹಿಂದಿರುವ ಕುನೀತಿ. ಈ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಪೋಷಿಸುವ ಕೆಲಸವನ್ನು ಆಳುವ ಸೂತ್ರ ಹಿಡಿದಿರುವವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಯಾಕೆಂದರೆ, ಅದು ಆಡಳಿತವನ್ನು ಕೈವಶ ಮಾಡಿಕೊಳ್ಳುವ ಏಣಿ. ಎಲ್ಲೋ ಕೆಲವು ಪ್ರಾಮಾಣಿಕ, ಧೀಮಂತ ಅಧಿಕಾರಿಗಳು, ಮಾಧ್ಯಮಗಳವರು ಇದರ ವಿರುದ್ಧ ಸಾಂವಿಧಾನಿಕವಾಗಿ ಕ್ರಮ ಕೈಗೊಳ್ಳಲು ಪ್ರಯತ್ನಿಸಿ– ಆಗ್ರಹಿಸಿ, ಸಾಮಾನ್ಯರ ಬದುಕು ಅಷ್ಟಿಷ್ಟು ಸಹ್ಯವಾಗುವಂತೆ ಮಾಡುತ್ತಾರೆ.

ಮಣಿಪುರದ ವಿಷಯವನ್ನೇ ನೋಡಿ. 2000ದಿಂದ 2016ರ ತನಕ ಹದಿನಾರು ವರ್ಷಗಳ ಕಾಲ ಅನ್ನ ನೀರಿಲ್ಲದೆ ಇರೋಮ್ ಶರ್ಮಿಳಾ ಉಪವಾಸ ಮಾಡಿದ್ದು ಕೂಡಾ ಮಹಿಳೆಯರ ಮೇಲೆ ವಿಶೇಷ ಸಶಸ್ತ್ರ ಪಡೆಗಳು ನಡೆಸುತ್ತಿದ್ದ ದೌರ್ಜನ್ಯವನ್ನು ವಿರೋಧಿಸಲೆಂದು. ಎಲ್ಲ ಮಹಿಳೆಯರನ್ನೂ ಪ್ರತಿನಿಧಿಸಿದ್ದ ಅವಳನ್ನು ಇಂದು ಎಲ್ಲರೂ ಮರೆತುಬಿಟ್ಟಿದ್ದಾರೆ. ಈ ನಡುವೆ ಮೈತೇಯಿ ಮತ್ತು ಕುಕಿ ಬುಡಕಟ್ಟು ಜನ ಅಲ್ಲಿನ ಬೆಟ್ಟ ಕಣಿವೆಯಂತೆ ಜೊತೆಗಿದ್ದವರು ರಾಜಕೀಯ ಕಾರಣಗಳಿಗಾಗಿ ಬಣಗಳಾಗಿದ್ದಾರೆ. ಈಗ ಕೆಲವು ಮೈತೇಯಿ ಮಹಿಳೆಯರು ತಮ್ಮ ಪುರುಷರನ್ನು ಬೆಂಬಲಿಸಲು ಸೈನ್ಯ ಮತ್ತು ಪೊಲೀಸ್ ಪಡೆಗಳನ್ನು ತಡೆಯುತ್ತಾರೆ.

ಕೋಮುವಾದ ಎಂಬುದು ಎಂತಹ ಭಯಾನಕ ವಿಷವೆಂದರೆ, ಈ ನಂಜೇರಿಸಿಕೊಂಡ ಹೆಂಗಸರೂ ವಿವೇಚನೆ, ಮನುಷ್ಯತ್ವ, ಹೃದಯವನ್ನೇ ಕಳೆದುಕೊಳ್ಳುತ್ತಾರೆ. ಇವರಿಗೆ ಅವರು ಕೇವಲ ‘ಕುಕಿ’ಗಳು! ಆ ಹೆಂಗಸರಿಗಾದ ಅವಮಾನ, ನೋವು, ವೇದನೆ ಇವರ ಕಣ್ತೆರೆಸುವುದಿಲ್ಲವೇ? (ಈ ನಡುವೆ ಎಲ್ಲಾ ಬಣಗಳ ಪ್ರಜ್ಞಾವಂತ ಹೆಂಗಸರ ಪ್ರತಿನಿಧಿಗಳು ಒಂದಾಗಿ ವಿಭಜನೆಯ ರಾಜಕಾರಣವನ್ನು ವಿರೋಧಿಸುವುದಕ್ಕಾಗಿ ಅಸ್ಸಾಂನಲ್ಲಿ ಸೇರಿದ್ದರು. ಪ್ರೊ. ಬೀನಾಲಕ್ಷ್ಮಿ ಅವರು ಹೇಳುವಂತೆ, ಯಾವ ಶಾಂತಿ ಸಭೆಗೂ ಹೆಂಗಸರನ್ನು ಇದುವರೆಗೆ ಕರೆದೇ ಇಲ್ಲ). ಅಲ್ಲಿನ ಪ್ರಸಿದ್ಧ ಮೈತೇಯಿ ಗಾಯಕನೊಬ್ಬ, ‘ಕೊಟ್ಟಕೊನೆಯ ಕುಕಿ ಇರುವತನಕ ಮಣಿಪುರದಲ್ಲಿ ಶಾಂತಿ ನೆಲೆಸದು’ ಎಂದು ಹಾಡು ಕಟ್ಟುತ್ತಾನಂತೆ! ಇದನ್ನು ಕೇಳಿಸಿಕೊಂಡೂ ಅಲ್ಲಿನ ಸರ್ಕಾರ ಮೌನ ವಹಿಸುತ್ತದಂತೆ!

ಕರಣ್ ಥಾಪರ್ ಅವರು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ, ಮೈತೇಯಿ ಪ್ರೊ. ಥೋಮನ್ ತಂಗ್ಝಾಮ್ ಅದನ್ನು ಸಮರ್ಥಿಸದೇ ಕೊಟ್ಟ ಉತ್ತರವೇನೆಂದರೆ, ಮಣಿಪುರಿಗಳು ಮಿಲಿಟರೀಕರಣಕ್ಕೆ ಒಳಗಾದ ಪರಿಣಾಮವಾಗಿ ಅಲ್ಲಿನ ಭಾಷೆಯೇ ಮಿಲಿಟೆಂಟ್ ಆಗಿದೆ. ಇದೂ ಅಂತಹದೇ ಹಾಡು ಅಷ್ಟೇ! ಆಧುನಿಕತೆ ಮತ್ತು ಲೌಕಿಕ ವಸ್ತುಗಳ ವ್ಯಾಮೋಹಕ್ಕೆ ಒಳಗಾದ ಮಣಿಪುರ ಯುವಕರು, ಅದರಲ್ಲೂ ಆರ್ಥಿಕವಾಗಿ ಮುನ್ನೆಲೆಯಲ್ಲಿದ್ದ ಮೈತೇಯಿಗಳು ಕಾಲಾಂತರದಲ್ಲಿ ತಮ್ಮ ಅನನ್ಯತೆಗಾಗಿ ಪರಂಪರೆಯ ಕಡೆ ಮುಖ ಮಾಡಿದರು. ಇದರಿಂದಾಗಿ ಅವರು ತಮ್ಮ ಅಸ್ಮಿತೆಯನ್ನು ತಮ್ಮ ಜನಾಂಗದ ಮೋಹದಲ್ಲಿ ಗುರುತಿಸಿಕೊಳ್ಳುತ್ತಾ, ತಮ್ಮ ಎದುರಿಗೆ ಒಬ್ಬ ಶತ್ರುವನ್ನು ಸೃಷ್ಟಿಸಿಕೊಳ್ಳತೊಡಗಿದರು. ಅದರ ಪರಿಣಾಮವೇ ಕುಕಿಗಳ ಮೇಲಿನ ಹಗೆ ಎನ್ನುತ್ತಾರವರು.

ಇದು ಇಷ್ಟೇ ಅಲ್ಲ. ಒಂದು ಕಾಲಕ್ಕೆ ಹಂತಕರಾಗಿದ್ದ ಕಾಡುಜನ ಕುಕಿಗಳು ಕ್ರೈಸ್ತ ಮಿಷನರಿಗಳ ಪ್ರಭಾವದಿಂದ ನಾಗರಿಕರಾಗಿ ಮತಾಂತರವೂ ಆದರು. ಬುಡಕಟ್ಟು ಮಾನ್ಯತೆ ಪಡೆದಿರುವ ಕುಕಿಗಳು ಮಾತ್ರ ಆ ಪ್ರದೇಶದಲ್ಲಿ ಭೂಮಿ ಖರೀದಿಸುವ ಸೌಲಭ್ಯ ಹೊಂದಿದ್ದಾರೆ. ಬಹುಸಂಖ್ಯಾತರೂ, ಅಲ್ಲಿನ ಹಲವು ಜನಾಂಗಗಳಿಗಿಂತ ಬಲಾಢ್ಯರೂ ಆಗಿರುವ ಮೈತೇಯಿಗಳೀಗ ತಮ್ಮ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ತಾವೂ ಬುಡಕಟ್ಟು ಮಾನ್ಯತೆ ಪಡೆದುಕೊಳ್ಳಬೇಕೆಂಬ ಲೋಭಕ್ಕೆ ಬಿದ್ದಿದ್ದಾರೆ. ಇದಕ್ಕೂ ಹೆಂಗಸರ ಮೇಲಿನ ಅಮಾನುಷ ಆಕ್ರಮಣಕ್ಕೂ ಏನು ಸಂಬಂಧ? ಶತ್ರುಪಾಳಯದ ಹೆಂಗಸರ ಮೇಲೆ ಆಕ್ರಮಣ ಮಾಡುವುದು ಇಂದು ನಿನ್ನೆಯದೇ? ಅದನ್ನೇ ಪೌರುಷ ಎಂದುಕೊಂಡಿರುವ ಹೇಡಿತನ ಇಂದು ನಿನ್ನೆಯದೇ? ಅದಕ್ಕೆ ಮೌನ ಸಮ್ಮತಿ ಕೊಡುವ ‘ರಾಜ’ರಿರುವುದು ಗುಟ್ಟಿನ ಸಂಗತಿಯೇ?

ಬಿಲ್ಕಿಸ್‍ಬಾನು, ಕಾಶ್ಮೀರದ ಬಾಲಕಿ, ಉನ್ನಾವ್‌ನ ಸಂತ್ರಸ್ತೆಯರು, ದಾನಮ್ಮ, ಸೌಜನ್ಯಾಳಂತಹ ಸಹಸ್ರ ಪ್ರಕರಣಗಳಲ್ಲಿ ವಹಿಸಿರುವುದು ಮೌನವೇ ಅಲ್ಲವೆ? ಇದು ಅವೆಲ್ಲದರ ಮುಂದುವರಿದ ಸರಣಿ. ಜಗತ್ತಿನಾದ್ಯಂತ ಯುದ್ಧಗಳಲ್ಲಿ, ಸಂಘರ್ಷಗಳಲ್ಲಿ ಇದೇ ವರ್ತನೆ ಇದೆ. ಪೈಶಾಚಿಕ ಕೃತ್ಯ ಮಾಡುವವರು, ಅದನ್ನು ಸಮರ್ಥಿಸುವವರು, ಪೋಷಿಸುವವರು ಪಿಶಾಚಿಗಳೇ ನಿಜ. ಅವರ ನಡುವೆ ಮನುಷ್ಯರು ಬದುಕುವುದು ಹೇಗೆ ಎಂಬುದೇ ಆತಂಕದ ವಿಷಯ.

ಸುದ್ದಿಗಳು ಜಗತ್ತಿನ ಮೂಲೆ ಮೂಲೆಗೆ ತಲುಪುವ ಈ ಕಾಲದಲ್ಲಿ, ಉಳ್ಳವರು ತಮ್ಮ ಸುದ್ದಿ ತಲುಪದಂತೆ ಮಾಡುತ್ತಾರೆ. ಸರ್ಕಾರಗಳು ಇಂಟರ್‌ನೆಟ್ ಸ್ಥಗಿತಗೊಳಿಸಿ, ಮಾಧ್ಯಮಗಳಿಗೆ, ವಿರೋಧ ಪಕ್ಷಗಳಿಗೆ ನಿರ್ಬಂಧ ವಿಧಿಸಿ, ತಮ್ಮ ಪರ ಇರುವ ಗಿಣಿಗಳನ್ನು ಮಾತ್ರ ಬಳಸಿಕೊಂಡು ಸತ್ಯಗಳನ್ನು ಅಡಗಿಸಿಡುತ್ತಾರೆ. ಕಾಶ್ಮೀರದಲ್ಲಾಗಲೀ ಮಣಿಪುರದಲ್ಲಾಗಲೀ ಏನಾಗುತ್ತಿದೆಯೆಂದು ಹೀಗೆ ಅಕಸ್ಮಾತ್ತಾಗಿ ಮಾತ್ರ ಗೊತ್ತಾಗಬೇಕು. ಗೊತ್ತಾಗದಿದ್ದರೆ ಗೋಸುಂಬೆಗಳ ಬಣ್ಣ ತಿಳಿಯುವುದೇ ಇಲ್ಲ. ಸೆಕ್ಸ್ ವಿಡಿಯೊಗಳು, ಡ್ರಗ್ಸ್ ಚಿಕ್ಕವರಿಗೆ ಸಲೀಸಾಗಿ ಸಿಗಲು ಸ್ಮಾರ್ಟ್‍ಫೋನ್‍ಗಳು ಸಾಧನವಾಗಿವೆ. ಮೊಬೈಲನ್ನು ಶಿಕ್ಷಣ ಸಾಧನವಾಗಿ ಅಧಿಕೃತಗೊಳಿಸಲಾಗಿದೆ. ಪರಿಣಾಮದ ಬಗ್ಗೆ ಯೋಚನೆಯಾಗಲೀ ಯೋಜನೆಯಾಗಲೀ ಇಲ್ಲ.

ಈಗೀಗ ಬಾಲ ಅತ್ಯಾಚಾರಿಗಳು ಹೆಚ್ಚುತ್ತಿದ್ದಾರೆ. ಆಡಳಿತದ ಅನರ್ಥಗಳು ಕಾಣುತ್ತಿವೆ. ಹಾಗಿದ್ದಲ್ಲಿ ಆಡಳಿತದ ಅರ್ಥವೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.