ಜುಲೈ 1, ಕಂದಾಯ ದಿನ. ಆಧುನಿಕ ರಾಷ್ಟ್ರಗಳು ಏಪ್ರಿಲ್ನಿಂದ ಮಾರ್ಚ್ವರೆಗೆ ಆರ್ಥಿಕ ವರ್ಷವೆಂದು ವಿಭಾಗಿಸಿಕೊಂಡಿವೆ. ಕೃಷಿಯನ್ನು ಆಧರಿಸಿದ ಅರ್ಥವ್ಯವಸ್ಥೆ ಇದ್ದ ನಮ್ಮಲ್ಲಿ ಋತುಮಾನಗಳನ್ನು ಆಧರಿಸಿದ ತೆರಿಗೆ ವ್ಯವಸ್ಥೆ ಇತ್ತು. ಜುಲೈನಿಂದ ಜೂನ್ವರೆಗೆ ಕಂದಾಯ ವರ್ಷವೆಂದು ವಿಭಾಗಿಸಲಾಗಿತ್ತು. ಜುಲೈ 1 ಅನ್ನು ಕಂದಾಯ ಇಲಾಖೆಯು ಈಗ ನೆನಪೆಂಬಂತೆ ಆಚರಿಸುತ್ತಿದೆ.

ಬ್ರಿಟಿಷ್ ಪ್ರಭುತ್ವದಲ್ಲಿ ಕಲೆಕ್ಟರ್ಗಳು ಭೂ ಕಂದಾಯವನ್ನು ನಿಗದಿಪಡಿಸಿ ಸಂಗ್ರಹಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ತೆರಿಗೆಯನ್ನು ವಸೂಲಿ ಮಾಡುವ ಅಧಿಕಾರವಿರುವಾತನೇ ಕಾನೂನು ಸುವ್ಯವಸ್ಥೆಯನ್ನೂ ನೋಡಿಕೊಳ್ಳಬೇಕಾಗಿತ್ತು. ಹಿಂದಿನ ಆಡಳಿತ ವ್ಯವಸ್ಥೆಯಲ್ಲಿ ಭೂ ಕಂದಾಯವೇ ಆದಾಯದ ಮುಖ್ಯ ಮೂಲವಾಗಿತ್ತು. ಕಂದಾಯವನ್ನು ಕಡಿಮೆ ವಿಧಿಸಿದ ರಾಜ ಜನಾನುರಾಗಿಯಾಗುತ್ತಿದ್ದ. ಚರಿತ್ರೆಯ ಪುಟಗಳಲ್ಲಿ ಅಕ್ಬರನನ್ನು ಕಂದಾಯ ವ್ಯವಸ್ಥೆಯನ್ನು ಸರಳಗೊಳಿಸಿದಾತ ಎಂದು ಗೌರವಿಸಲಾಗುತ್ತದೆ. ಬ್ರಿಟಿಷ್ ಆಡಳಿತಕ್ಕೂ ಮೊದಲು ರೈತನ ಉತ್ಪನ್ನಗಳ ಪ್ರಮಾಣ ಆಧರಿಸಿ ಕಂದಾಯ ನಿಗದಿ ಮಾಡಲಾಗುತ್ತಿತ್ತು.

ಬ್ರಿಟಿಷರು ಭೂಮಿಯ ವಿಸ್ತೀರ್ಣ, ನೆಲದ ಫಲವತ್ತತೆ, ತೋಟ, ಗದ್ದೆ, ಮಳೆಯಾಶ್ರಿತ ಜಮೀನಿನ ಆಧಾರದ ಮೇಲೆ ಕಂದಾಯ ನಿಗದಿಪಡಿಸಿದರು. ಬ್ರಿಟಿಷರ ಭೂ ಮಾಪನದ ವಿಧಾನ ನಿಖರವಾಗಿತ್ತು. ನಾಲ್ಕೈದು ಮೊಳೆಗಳು, ಒಂದು ಸರಪಳಿಯನ್ನು ಇಟ್ಟುಕೊಂಡು ಖಂಡಾಂತರಗಳ ಭೂಮಿಯನ್ನು ಅಳೆದರು. ಮಣ್ಣಿನ ಫಲವತ್ತತೆಯನ್ನು ನಿರ್ಧರಿಸಲು ಕ್ರೋ ಬಾರ್ ಎಂಬ ಕಾಗೆ ಕೊಕ್ಕಿನಂತಹ 5 ಅಡಿ ಉದ್ದದ ಸಲಾಕೆಯೊಂದನ್ನು ಬಳಸುತ್ತಿದ್ದರು. ಅದನ್ನು ನೆಲದಾಳಕ್ಕೆ ಹೊಡೆದು, ಅಡಿಗೊಂದರಂತೆ ಇದ್ದ ಕಂಟುಗಳಲ್ಲಿ ಕೂರುವ ಮಣ್ಣನ್ನು ಪರಿಶೀಲಿಸಿ ಫಲವತ್ತತೆಯನ್ನು ನಿರ್ಧರಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಮಣ್ಣಿನ ರುಚಿ ನೋಡಿ ಫಲವತ್ತತೆಯನ್ನು ನಿರ್ಧರಿಸುತ್ತಿದ್ದ ಕತೆಗಳು ಇಲಾಖೆಯಲ್ಲಿವೆ. ಭೂ ಮಾಪನ ವ್ಯವಸ್ಥೆ, ಸಿವಿಲ್ ಕೋರ್ಟುಗಳ ಸ್ಥಾಪನೆ, ಕಂದಾಯ ದಾಖಲೆಗಳ ನಿರ್ವಹಣೆ ಮತ್ತು ವೈಜ್ಞಾನಿಕ ಕಂದಾಯ ಸಂಗ್ರಹ ಇವು ಬ್ರಿಟಿಷರ ಸಾಧನೆಗಳು. ಸರಪಳಿ ಹಿಡಿದು ದೊಡ್ಡ ದೊಡ್ಡ ಬೆಟ್ಟ, ಕಣಿವೆಗಳನ್ನು ಅಳೆದಿದ್ದಾರೆ. ಕಸುಬುದಾರ ಭೂ ಮಾಪಕನೊಬ್ಬ ನೆಲವನ್ನು ಹಳೆಯ ವಿಧಾನದಲ್ಲಿ ಅಳೆದರೆ ಇಂಚುಗಳಷ್ಟೂ ವ್ಯತ್ಯಾಸ ಬರುವುದಿಲ್ಲ.

ಬ್ರಿಟಿಷರು ಏನೆಲ್ಲ ಸುಧಾರಣೆಗಳನ್ನು ತಂದಿದ್ದರೂ ಋತುಮಾನಕ್ಕೆ ಅನುಗುಣವಾಗಿ ನಾಲ್ಕು ಕಂತುಗಳಲ್ಲಿ ವಸೂಲಿ ಮಾಡುವ ಮೊಘಲರ ಕಂದಾಯ ವಿಧಾನವನ್ನು ಅವರೂ ಮುಂದುವರಿಸಿದ್ದರು. ಈಗಲೂ ಅದು ಚಾಲ್ತಿ ಯಲ್ಲಿದೆ. ಕಂದಾಯ ನಿಗದಿ ಮಾಡುವ ಮತ್ತು ಲೆಕ್ಕ ಪುಸ್ತಕ ಗಳನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಜಮಾಬಂದಿ ಎನ್ನುತ್ತಾರೆ. ಇದನ್ನು ದಿಟ್ಟಂ ಮತ್ತು ಹುಜೂರ್ ಎಂದು ಎರಡು ರೀತಿಯ ಜಮಾಬಂದಿಗಳಾಗಿ ವಿಭಾಗಿಸಿದ್ದಾರೆ. ತಹಶೀಲ್ದಾರ್ ಮಟ್ಟದ ಅಧಿಕಾರಿ ನಡೆಸುವ ಪರಿಶೀಲನೆಯನ್ನು ದಿಟ್ಟಂ ಎಂದರೆ, ಉಪವಿಭಾಗಾಧಿಕಾರಿ ಮಟ್ಟದ ಅಧಿಕಾರಿಗಳು ನಡೆಸುವ ಪರಿಶೀಲನೆಯನ್ನು ಹುಜೂರ್ ಜಮಾಬಂದಿ ಎನ್ನಲಾಗುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಜಮಾಬಂದಿ ಪ್ರಕ್ರಿಯೆಯನ್ನು ಸಂಭ್ರಮದಿಂದ ಬರೆದುಕೊಂಡಿದ್ದಾರೆ. ಜನರ ಬದುಕನ್ನು ನಿರ್ಧರಿಸುವ ಈ ಪ್ರಕ್ರಿಯೆಯಲ್ಲಿ ಊರಿಗೆ ಊರೇ ಭಾಗವಹಿಸುತ್ತಿದ್ದ ಉದಾಹರಣೆಗಳನ್ನು ದಾಖಲಿಸಿದ್ದಾರೆ.

ರಾಷ್ಟ್ರಗಳಿಗೆ ತೆರಿಗೆಯ ಹೊಸ ವಿಧಾನಗಳು ಸಿಕ್ಕಂತೆಲ್ಲ ಭೂ ಕಂದಾಯವು ನಗಣ್ಯವಾಗುತ್ತಾ ಹೋಯಿತು. ಕಲ್ಯಾಣ ರಾಷ್ಟ್ರಗಳ ಪ್ರಕ್ರಿಯೆ ಆರಂಭವಾದ ಮೇಲೆ ಭೂ ಕಂದಾಯವು ಅವಗಣನೆಗೆ ಒಳಗಾಯಿತು. ಆದರೆ ಈಗಲೂ ಜಮಾಬಂದಿಗಳು ನಡೆಯುತ್ತವೆ. ಜುಲೈ ಒಂದರಿಂದ ಹೊಸ ಲೆಕ್ಕ ಬರೆಯುವ ಪದ್ಧತಿ ಆರಂಭವಾಗುತ್ತದೆ. ದಂಡ ಅಥವಾ ಇತರೆ ಬಾಕಿಗಳಿದ್ದರೆ ಅದನ್ನು ಕಂದಾಯ ಬಾಕಿ ಎಂದು ವಸೂಲಿ ಮಾಡಬೇಕೆಂದು ಸರ್ಕಾರಗಳು, ಕೋರ್ಟುಗಳು ಆದೇಶ ಮಾಡುತ್ತವೆ.

ಕೇಂದ್ರ ಸರ್ಕಾರ ಇತ್ತೀಚೆಗೆ ತಂದ ರೈತರೊಂದಿಗಿನ ಒಪ್ಪಂದದ ಕೃಷಿ ಮತ್ತು ಬೆಲೆ ಕುರಿತಾದ ಸುಗ್ರೀವಾಜ್ಞೆಯಲ್ಲಿ, ಒಪ್ಪಂದ ಮುರಿದವನಿಂದ ಕಂದಾಯ ಬಾಕಿ ಎಂದು ಪರಿಗಣಿಸಿ ತೆರಿಗೆ ವಸೂಲಿ ಮಾಡಲು ಉಪವಿಭಾಗಾಧಿಕಾರಿಗೆ ಸಿವಿಲ್ ಕೋರ್ಟಿನ ಅಧಿಕಾರಗಳನ್ನು ನೀಡಲಾಗಿದೆ. ಈ ಆದೇಶದ ವ್ಯಾಪ್ತಿಯು ರಾಜ್ಯದ ಗಡಿಗಳಾಚೆಗೂ ಅನ್ವಯವಾಗುತ್ತದೆ.

ಸೇವೆ, ವಸ್ತು, ಪೆಟ್ರೋಲ್, ಡೀಸೆಲ್, ಆದಾಯ ತೆರಿಗೆ ಮುಂತಾದವು ಹೀಗೆ ಏರಿಕೆಯಾದರೆ ಬದುಕುವುದು ಹೇಗೆ ಎಂದು ಜನ ಕೇಳುತ್ತಿರುತ್ತಾರೆ. ಹಾಗಿದ್ದರೆ ತೆರಿಗೆ ಯಾವ ಮಟ್ಟದಲ್ಲಿರಬೇಕು? ಇದಕ್ಕೆ ಚರಿತ್ರೆ, ಪುರಾಣಗಳು ಏನು ಹೇಳುತ್ತವೆ ಎಂದು ಪರಿಶೀಲಿಸಿದರೆ, ಕುತೂಹಲ ಕರವಾದ ಸಂಗತಿಗಳು ದೊರೆಯುತ್ತವೆ. ವೇದಗಳಲ್ಲಿ ತೆರಿಗೆಯನ್ನು ಬಲಿ ಎಂದು ಕರೆಯುತ್ತಿದ್ದರು. ರಾಜನಿಗೆ ಪ್ರಜೆಗಳು ಬಲಿಯನ್ನು ಕಾಲಕಾಲಕ್ಕೆ ತುಂಬುವಂತೆ ಮಾಡು ಎಂದು ಇಂದ್ರನನ್ನು ಪ್ರಾರ್ಥಿಸುವ ಸೂಕ್ತಗಳಿವೆ.

ವಸಿಷ್ಠ, ಗೌತಮ, ಬೋಧಾಯನರೆಂಬ ಋಷಿ ಗುರುಗಳು, ತೆರಿಗೆ ವಿಧಿಸುವುದು ರಾಜನ ಕರ್ತವ್ಯ ಎಂದು ಕಂದಾಯ ವ್ಯವಸ್ಥೆಯನ್ನು ವಿಧಿಬದ್ಧಗೊಳಿಸಿದ್ದಾರೆ. ಇವರು, ಭೂಮಿಯ ಉತ್ಪತ್ತಿಯ ಆರನೇ ಒಂದು ಭಾಗವನ್ನು ವಸೂಲಿ ಮಾಡಬೇಕು ಎನ್ನುತ್ತಾರೆ. ಇದು ಪ್ರಜೆಗಳನ್ನು ರಕ್ಷಿಸುವ, ನೆಮ್ಮದಿಯಿಂದ ಜೀವನೋಪಾಯ ಮಾಡಲು ರಾಜನು ಕೈಗೊಳ್ಳಬೇಕಾದ ಕ್ರಮ. ರಾಜನ ಜನಪ್ರಿಯತೆ ನಿರ್ಧಾರವಾಗುತ್ತಿದ್ದುದು ಇದಕ್ಕಿಂತ ಕಡಿಮೆ ಕಂದಾಯ ವಿಧಿಸಿದಾಗ ಮಾತ್ರ. ಕೆಲವೊಮ್ಮೆ 50 ಮೂಟೆ ಬೆಳೆದರೆ ಒಂದು ಮೂಟೆ ವಸೂಲಿ ಮಾಡಿದ ಉದಾರವಾದ ಉದಾಹರಣೆಗಳಿವೆ.

ಮಹಾಭಾರತದಲ್ಲಿ ಧರ್ಮರಾಯನಿಗೆ ಭೀಷ್ಮನು ಬೋಧಿಸುವ ತೆರಿಗೆ ನೀತಿಯು ಇವತ್ತಿನ ಆಳುವವರಿಗೂ ಮಾರ್ಗದರ್ಶಿ ರೂಪದಲ್ಲಿದೆ. ರಾಜನು ತೋಟವನ್ನು ಕಾಯುವ ಮಾಲಿಯಂತಿರಬೇಕೇ ವಿನಾ ಇದ್ದಿಲನ್ನು ಮಾರುವವನಂತೆ ಆಗಬಾರದು. ಹಣ್ಣಿನ ಮರಗಳನ್ನು ಕಡಿದು ಇದ್ದಿಲು ಮಾರುವಂಥ ರಾಜನು ಜನಪೀಡಕ ಎನ್ನಿಸಿಕೊಳ್ಳುತ್ತಾನೆ. ಆಕಳನ್ನು ಪ್ರೀತಿಯಿಂದ ಸಾಕುವ ಗೋವಳಿಗನು ನವಿರಾಗಿ ಹಾಲು ಕರೆದುಕೊಳ್ಳುವಂತೆ ತೆರಿಗೆ ಇರಬೇಕು. ಕೊನೆ ಹನಿಯನ್ನೂ ಹೀರಿಕೊಂಡರೆ ಹಸು ಮತ್ತು ಕರುಗಳೆರಡೂ ದುರ್ಬಲವಾಗು
ತ್ತವೆ. ಕರುವಿಗೂ ಹಾಲು ಸಿಗುವಂತಾದರೆ ಮುಂದೆ ಎತ್ತಾಗಿ, ಹಸುವಾಗಿ ರಾಜ್ಯದ ಸಂಪತ್ತನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ತೆರಿಗೆ ಮೂಲಗಳೆಲ್ಲ ಬತ್ತಿಹೋಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ತೆರಿಗೆಯು, ದುಂಬಿಯು ಹೂವಿನಿಂದ ಮಕರಂದವನ್ನು ಹೀರುವ ರೀತಿಯಲ್ಲಿರ ಬೇಕು. ಇದರಿಂದ ಹೂವು ಫಲ ಕಟ್ಟುತ್ತದೆ, ಜೇನು ಸಂತತಿಯನ್ನೂ ಹೆಚ್ಚಿಸಿಕೊಳ್ಳುತ್ತದೆ ಎನ್ನುತ್ತಾನೆ.

ಕವಿ ಕುಮಾರವ್ಯಾಸನುಭೀಷ್ಮರ ಮಾತುಗಳನ್ನು ಸಭಾಪರ್ವದಲ್ಲಿ ಪುನರುಚ್ಚರಿಸುತ್ತಾ, ನಾರದರ ಮೂಲಕ ಧರ್ಮರಾಯನಿಗೆ ಹೀಗೆ ಹೇಳಿಸುತ್ತಾನೆ: ಫಲವಹುದು ಕೆಡಲೀಯದೆ ಅಳಿ (ದುಂಬಿ) ಪರಿಮಳವ ಕೊಂಬಂದದಲೆ ನೀನು ಆಳು ಇಳೆಯ, ಕರವನು ತೆಗೆ ಪ್ರಜೆಯ ನೋಯಿಸದೆ (ದುಂಬಿಯೊಂದು ಮಕರಂದವನ್ನು ಹೀರಿದ ಹಾಗೆ, ರಾಜನ ತೆರಿಗೆ ವ್ಯವಸ್ಥೆ ಇರಬೇಕು ಎಂಬರ್ಥ). ಕೌಟಿಲ್ಯನು ಅರ್ಥಶಾಸ್ತ್ರ ಕೃತಿಯಲ್ಲಿ ಇದೇ ಅರ್ಥದ ಮಾತುಗಳನ್ನು ದಾಖಲಿಸಿದ್ದಾನೆ.

ಹೀಗಾಗದಿದ್ದರೆ ಏನಾಗುತ್ತದೆ ಎಂಬುದನ್ನು ಹೊಸ ಕಾಲದ ಆಡಳಿತಗಾರರು ಕೃಷ್ಣ, ಇಂದ್ರನ ಉದಾಹರಣೆ ಗಳಿಂದ ಕಲಿಯಬೇಕು. ಋಗ್ವೇದದ ಬಲಿ ಪದ್ಧತಿಯು ನಂತರದ ದಿನಗಳಲ್ಲಿ ಎಡೆ ಹಾಕುವ ಪದ್ಧತಿಯಾಗುತ್ತದೆ. ಕೃಷ್ಣನ ತಾಯಿಯೂ ಇಂದ್ರನಿಗೆ ಎಡೆಹಾಕಿ ಕರ ಪಾವತಿಸುತ್ತಾಳೆ. ಸಿಟ್ಟಿಗೆದ್ದ ಕೃಷ್ಣನು ಇಂದ್ರ ವಾಸನೆ ನೋಡುವ ದೇವರು, ಹೊಟ್ಟೆ ತುಂಬಿದವನು, ಅವನಿಗೆ ಎಡೆಯ ಅಗತ್ಯವಿಲ್ಲವೆಂದು ತಾನೇ ತಿಂದು ಸವಾಲೆಸೆ ಯುತ್ತಾನೆ. ಇಂದ್ರನಿಗೆ ಸಿಟ್ಟು ಬರುತ್ತದೆ. ಭೀಕರ ಮಳೆ ಸುರಿಸುತ್ತಾನೆ. ಕೃಷ್ಣನು ಗೋವರ್ಧನ ಗಿರಿಯನ್ನು ಕಿರು ಬೆರಳಲ್ಲಿ ಎತ್ತಿ ಹಿಡಿದು ಯಾದವರನ್ನು, ಹಸುಗಳನ್ನು ರಕ್ಷಿಸುತ್ತಾನೆ. ಇಂದ್ರ ಸೋತು ಹೋಗುತ್ತಾನೆ. ಅಂದಿನಿಂದ ಭರತಖಂಡ ಕೃಷ್ಣನಲ್ಲಿ ಹೊಸ ದೇವರನ್ನು ಕಂಡುಕೊಳ್ಳುತ್ತದೆ. ಅಹಂಕಾರ, ಅತ್ಯಾಚಾರ, ಸರ್ವಾಧಿಕಾರಿ ಧೋರಣೆ, ಕೊಲೆಗಡುಕತನ, ಒಡೆದಾಳುವ ನೀತಿಗಳಿಂದಾಗಿ ಇಂದ್ರನ ಅವಸಾನವಾಗುತ್ತದೆ. ಭರತಖಂಡದಲ್ಲಿ ಅವನು ಪೂಜೆಯ ಅರ್ಹತೆಯನ್ನೂ ಕಳೆದುಕೊಳ್ಳುತ್ತಾನೆ. ಇದನ್ನು ಲೋಹಿಯಾ ಮನಮುಟ್ಟುವಂತೆ ಬರೆದಿದ್ದಾರೆ.

ಕಂದಾಯ ದಿನದ ನೆನಪಿನಲ್ಲಿ ರಾಷ್ಟ್ರಪ್ರಭುತ್ವಗಳ ಕಾಲದಲ್ಲಿ ಬದುಕುತ್ತಿರುವ ನಾವು ಮತ್ತು ಆಡಳಿತವನ್ನು ಮುನ್ನಡೆಸುತ್ತಿರುವವರು ಇವುಗಳೆಲ್ಲದರಿಂದ ಕಲಿಯುವುದು ಬಹಳ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.